ಟೊಮೆಟೊ ಬೆಲೆ ನೂರರ ಗಡಿ ದಾಟಿ ತಿಂಗಳು ಕಳೆಯುತ್ತಾ ಬಂದಿದೆ. ಮಾರುಕಟ್ಟೆಯಲ್ಲಿ ಒಂದು ಕೆಜಿ ಸಾಧಾರಣ ಗುಣಮಟ್ಟದ ಟೊಮೆಟೊವನ್ನು 120 ರಿಂದ 150 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಬೆಲೆ ಏರಿಕೆಗೆ ಸಂಬಂಧಿಸಿ ದೆಹಲಿಯ ಗಲ್ಲಿಗಳಲ್ಲಿ ತರಕಾರಿ ಮಾರುವ ಚಿಲ್ಲರೆ ವ್ಯಾಪಾರಿಯೊಬ್ಬರು ಕಣ್ಣೀರಿಡುತ್ತಾ ಮಾತನಾಡಿರುವ ಮನಕಲಕುವ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಖ್ಯಾತ ನಟ ವಿಜಯ್ ವರ್ಮಾ ಸೇರಿದಂತೆ ಹಲವರು ಈ ವಿಡಿಯೋ ತುಣುಕನ್ನು ಹಂಚಿಕೊಂಡು ವಿಷಾದ ವ್ಯಕ್ತಪಡಿಸಿದ್ದಾರೆ.
ಜುಲೈ 20ರ ಬೆಳಗ್ಗೆ ತರಕಾರಿ ವ್ಯಾಪಾರಿ ರಾಮೇಶ್ವರ್ ಎಂಬುವವರು ದೆಹಲಿಯ ಆಜಾದ್ಪುರ್ ಮಂಡಿಯಲ್ಲಿ ಟೊಮೆಟೊ ಖರೀದಿಸಲು ಬಂದಿದ್ದಾರೆ. ಆದರೆ, ದುಬಾರಿ ಬೆಲೆಯ ಕಾರಣಕ್ಕೆ ಯಾವುದೇ ತರಕಾರಿಯನ್ನು ಖರೀದಿಸಲಾಗದೆ ಖಾಲಿ ಕೈಯಲ್ಲಿ ಮನೆಗೆ ಹಿಂತಿರುಗಿದ್ದಾರೆ. ಇದನ್ನು ಗಮನಿಸಿದ ʼಲಲ್ಲನ್ಟಾಪ್ʼ ಯುಟ್ಯೂಬ್ ಮಾಧ್ಯಮದ ಪ್ರತಿನಿಧಿ ಭಾನು ಕುಮಾರ್ ಝಾ ರಾಮೇಶ್ವರ್ ಅವರನ್ನು ಮಾತನಾಡಿಸಿ ವ್ಯಾಪಾರ-ವಹಿವಾಟಿನ ಬಗ್ಗೆ ವಿಚಾರಿಸುತ್ತಲೇ ರಾಮೇಶ್ವರ್ ಕಣ್ಣೀರಾಗಿದ್ದಾರೆ.
ಟೊಮೆಟೊ ಖರೀದಿಸಲು ಬಂದಿದ್ದಿರೇ ಎಂಬ ಪ್ರಶ್ನೆಗೆ ಉತ್ತರಿಸಿರುವ ರಾಮೇಶ್ವರ್, “ಹೌದು, ನಾನು ಟೊಮೆಟೊ ಖರೀದಿಸುವ ಸಲುವಾಗಿ ಬೆಳಗ್ಗೆ ಬೇಗ ನಾಲ್ಕುವರೆಗೆ ಎದ್ದು ಬಂದೆ. ಆದರೆ, ಟೊಮೆಟೊ ಬೆಲೆ ತುಂಬಾ ದುಬಾರಿಯಾಗಿದೆ. ಎಪಿಎಂಸಿ ಮಂಡಿಯಲ್ಲೇ ಒಂದು ಕೆಜಿ ಟೊಮೆಟೊವನ್ನು 120 ರಿಂದ 140 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ನಾವು ಇಷ್ಟು ದುಬಾರಿ ಮೊತ್ತಕ್ಕೆ ಖರೀದಿ ಮಾಡಿ, ನಮ್ಮ ಗಲ್ಲಿಗಳಲ್ಲಿ ಅಲ್ಪ ಲಾಭಕ್ಕೆ ಮಾರಾಟ ಮಾಡಲು ಹೋದಾಗ ಖರೀದಿಸಲು ಜನ ಮುಂದೆ ಬರದಿದ್ದರೆ ಬಹಳ ನಷ್ಟ ಅನುಭವಿಸಬೇಕಾಗುತ್ತದೆ. ಹೀಗಾಗಿ ಟೊಮೆಟೊ ಖರೀದಿ ಮಾಡಲು ನನಗೆ ಧೈರ್ಯ ಸಾಲಲಿಲ್ಲ” ಎಂದಿದ್ದಾರೆ.
ಹಾಗಿದ್ದರೆ ಏನನ್ನೂ ಖರೀದಿಸದೆ ಖಾಲಿ ಕೈಯಲ್ಲೇ ಮನೆಗೆ ಹೋಗುತ್ತೀರಾ? ಟೊಮೆಟೊ ದುಬಾರಿಯಾದರೆ ಏನಾಯ್ತು ಬೇರೆ ತರಕಾರಿಯನ್ನಾದರೂ ತೆಗೆದುಕೊಂಡು ಹೋಗಿ ವ್ಯಾಪಾರ ಮಾಡಬಹುದಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಬಡಪಾಯಿ, “ನನ್ನ ಬಳಿ ಅಷ್ಟೊಂದು ಹಣವಿಲ್ಲ, ನಮಗೆ ಬದುಕು ನಡೆಸುವುದು ಕಷ್ಟವಾಗುತ್ತಿದೆ” ಎಂದು ಕಣ್ಣೀರಿಟ್ಟಿದ್ದಾರೆ.
ದೆಹಲಿಯ ಜಾಹಂಗೀರ್ಪುರಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ರಾಮೇಶ್ವರ್ ಕಳೆದ 15 ವರ್ಷಗಳಿಂದ ತರಕಾರಿ ವ್ಯಾಪಾರ ಮಾಡುತ್ತಿದ್ದಾರೆ. ಮನೆ ಬಾಡಿಗೆ ನಾಲ್ಕು ಸಾವಿರ ಇದೆ. ಆದರೆ, ಬಾಡಿಗೆ ಕಟ್ಟುವಷ್ಟು ಕೂಡ ದುಡಿಯಲು ಸಾಧ್ಯವಾಗುತ್ತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ದಿನಕ್ಕೆ ನೂರು ಅಥವಾ ಎರಡುನೂರು ರೂಪಾಯಿಗಳನ್ನು ಗಳಿಸಿದರೆ ಅದೇ ಹೆಚ್ಚು ಎನ್ನುತ್ತಾರೆ.
ಸಾವಿರ ರೂಪಾಯಿ ಇಟ್ಟುಕೊಂಡು ಒಂದಿಷ್ಟು ತರಕಾರಿಗಳನ್ನು ಖರೀದಿಸಿ ಗಲ್ಲಿಗಳಲ್ಲಿ ಮಾರಾಟ ಮಾಡಿದರಾಯಿತು ಎಂದುಕೊಂಡು ಎಪಿಎಂಸಿ ಮಂಡಿಗೆ ಬಂದಿದ್ದರು. ಆದರೆ, ಬೆಲೆ ಏರಿಕೆಯಿಂದ ಬೇಸತ್ತು ಕಣ್ಣೀರುಡುತ್ತಾ, ಖಾಲಿ ಕೈಯಲ್ಲಿ ಮನೆಗೆ ಹಿಂತಿರುಗಿದ್ದಾರೆ. ಅವರು ಕಣ್ಣೀರುಡುತ್ತಾ ಸೈಕಲ್ ಹಿಡಿದು ನಡೆದ ದೃಶ್ಯ ಈ ದೇಶದ ಸಾಮಾನ್ಯ ವರ್ಗದ ಆರ್ಥಿಕ ಸ್ಥಿತಿಗತಿಗೆ ಹಿಡಿದ ಕೈಗನ್ನಡಿ ಎಂಬುದರಲ್ಲಿ ಎರಡು ಮಾತಿಲ್ಲ.
ರಾಮೇಶ್ವರ್ ಅವರ ನೋವಿನ ಮಾತುಗಳನ್ನು ಕೇಳಿಸಿಕೊಂಡು ಹಿಂದಿಯ ನಟ ವಿಜಯ್ ವರ್ಮಾ ನೆರವು ನೀಡಲು ಮುಂದಾಗಿದ್ದಾರೆ.
ರಾಹುಲ್ ಗಾಂಧಿ ಕೂಡ ಈ ಬಡಪಾಯಿಯ ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡು, “ದೇಶವನ್ನು ಎರಡು ವರ್ಗಗಳಲ್ಲಿ ಇಬ್ಭಾಗ ಮಾಡಲಾಗುತ್ತಿದೆ. ಸನ್ನೆಯಲ್ಲೇ ನೀತಿಗಳನ್ನು ರೂಪಿಸುವ ಅಧಿಕಾರಿಶಾಹಿಗಳು ಒಂದು ಕಡೆಯಾದರೆ, ತರಕಾರಿಯನ್ನೂ ಖರೀದಿ ಮಾಡಲಾಗದ ಸಾಮಾನ್ಯ ಭಾರತೀಯರು ಮತ್ತೊಂದೆಡೆ ಇದ್ದಾರೆ. ಬಡವರು-ಶ್ರೀಮಂತರ ನಡುವಿನ ಈ ಅಂತರವನ್ನು ತೊಡೆದುಹಾಕಿ, ಈ ಕಣ್ಣೀರನ್ನು ಒರೆಸಬೇಕಿದೆ” ಎಂದಿದ್ದಾರೆ.