ಚಿಕನ್ ಬಿರಿಯಾನಿಯನ್ನು ಆರ್ಡರ್ ಮಾಡಿದ್ದಕ್ಕಾಗಿ ಗ್ರಾಹಕರನ್ನು ಆಹಾರ ವಿತರಣಾ (ಡೆಲಿವೆರಿ) ಏಜೆಂಟ್ ನಿಂದಿಸಿ, ಬೆದರಿಕೆ ಹಾಕಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ದೀಪಾವಳಿ ಹಬ್ಬದ ಸಮಯದಲ್ಲಿ ಬಿರಿಯಾನಿ ತಿನ್ನುವೆಯಾ ಎಂದು ಡೆಲಿವೆರಿ ಏಜೆಂಟ್ ಗದ್ದಲ ಮಾಡಿದ್ದಾನೆಂದು ಆರೋಪಿಸಲಾಗಿದೆ.
ದೆಹಲಿಯ ನಿವಾಸಿಯೊಬ್ಬರು ಇತ್ತೀಚೆಗೆ ಚಿಕನ್ ಬಿರಿಯಾನಿ ಆರ್ಡರ್ ಮಾಡಿದ್ದಕ್ಕಾಗಿ ತಾವು ಡೆಲಿವೆರಿ ಏಜೆಂಟ್‌ನಿಂದ ನಿಂದನೆಗೆ ಒಳಗಾಗಿರುವುದಾಗಿ ‘ರೆಡ್ಡಿಟ್’ನಲ್ಲಿ ಪೋಸ್ಟ್ ಮಾಡಿದ್ದಾರೆ. “ಡೆಲಿವೆರಿ ಏಜೆಂಟ್ ನಾನು ಆರ್ಡರ್ ಮಾಡಿದ್ದ ಆಹಾರವನ್ನು ತಲುಪಿಸಿ ಹೋಗುವ ಬದಲು, ದೀಪಾವಳಿಯ ಸಮಯದಲ್ಲಿ ಮಾಂಸಾಹಾರಿ ಆಹಾರ ತಿನ್ನುವೆಯಾ? ನೀನು ಸಂಸ್ಕೃತಿಯನ್ನು ಪಾಲಿಸುತ್ತಿಲ್ಲ. ದೀಪಾವಳಿಯ ವರೆಗೆ ಏನಾದರು ಸ್ವಚ್ಛ ಆಹಾರ ತಿನ್ನಿ, ಹಬ್ಬದ ಬಳಿಕ ಎಲ್ಲ ಚಿಕನ್ ಮತ್ತು ಮಟನ್ ತಿನ್ನಿರಿ” ಎಂದಿದ್ದಾನೆ. ಆತನ ವರ್ತನೆಯಿಂದ ಗ್ರಾಹಕ ದಿಗ್ಭ್ರಾಂತರಾಗಿದ್ದಾರೆ.
“ಡೆಲಿವರಿ ಏಜೆಂಟ್ ಆಹಾರವನ್ನು ತಲುಪಿಸಬೇಕೇ ಹೊರತು, ಗ್ರಾಹಕರು ಯಾವ ಆಹಾರ ಆಯ್ಕೆ ಮಾಡಬೇಕು ಎಂಬ ವಿಚಾರದಲ್ಲಿ ಮೂಗು ತೂರಿಸಬಾರದು. ಆತನ ವಿರುದ್ಧ ಡೆಲಿವೆರಿ ಕಸ್ಟಮರ್ ಕೇರ್‌ಗೆ ದೂರು ನೀಡಲು ಯೋಜಿಸಿದ್ದೆ. ಆದರೆ, ಯಾವ ಕ್ರಮ ಕೈಗೊಳ್ಳಬಹುದು ಎಂಬ ಗೊಂದಲದಲ್ಲಿ ಸುಮ್ಮನಾದೆ. ಆದರೂ, ಆ ಘಟನೆ ನನ್ನ ಇಡೀ ದಿನವನ್ನೇ ಹಾಳು ಮಾಡಿತು. ಅಲ್ಲದೆ, ಆತ ಬಿರಿಯಾನಿಯಲ್ಲಿ ಏನನ್ನಾದರೂ ಬೆರೆಸಿರಬಹುದೇ ಎಂಬ ಭಯದಲ್ಲಿ ಬಿರಿಯಾನಿಯನ್ನೂ ತಿನ್ನಲಾಗಲಿಲ್ಲ” ಎಂದು ಗ್ರಾಹಕ ಹೇಳಿಕೊಂಡಿದ್ದಾರೆ.
“ಇದು ಭಯ ಬಿತ್ತುವ ವರ್ತನೆಗಳಲ್ಲಿ ಒಂದಾಗಿ. ಈ ರೀತಿಯ ಅನೈತಿಕ ಪೊಲೀಸ್‌ಗಿರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೋರ್ವ ವ್ಯಕ್ತಿ, “ನಾನೂ ಸಹ ಸಸ್ಯಾಹಾರಿ. ಆದರೆ ಯಾರಾದರೂ ತಮ್ಮ ಆಹಾರದ ಆದ್ಯತೆಗಳನ್ನು ಇತರರ ಮೇಲೆ ಹೇರಲು ಮುಂದಾದರೆ ನಾನು ಅದನ್ನು ವಿರೋಧಿಸುತ್ತೇನೆ” ಎಂದಿದ್ದಾರೆ.