ಇಂದು ಬೆಳಗ್ಗೆ ದೆಹಲಿ ಹಾಗೂ ಉತ್ತರ ಭಾರತದಲ್ಲಿ ದಟ್ಟವಾದ ಮಂಜು ಆವರಿಸಿದ ಪರಿಣಾಮ ದೆಹಲಿಯಲ್ಲಿ 150 ಕ್ಕೂ ಹೆಚ್ಚು ವಿಮಾನಗಳು ಮತ್ತು ಸುಮಾರು 26 ರೈಲುಗಳ ಸಂಚಾರದಲ್ಲಿ ವಿಳಂಬವಾಗಿದೆ. ವಿಮಾನದ ವಿಳಂಬಗಳು ಸರಾಸರಿ 41 ನಿಮಿಷಗಳು ತಡವಾಗಿದೆ ಎಂದು ವಿಮಾನಯಾನ ವೆಬ್‌ಸೈಟ್ ಫ್ಲೈಟ್ ರಾಡಾರ್ 24 ಹೇಳಿದೆ.
ಭಾರತೀಯ ಹವಾಮಾನ ಇಲಾಖೆಯು ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನ ಸೇರಿದಂತೆ ಉತ್ತರ ಭಾರತದ ಹಲವು ಭಾಗಗಳಲ್ಲಿ ದಟ್ಟವಾದ ಮಂಜು ಉಂಟಾಗಬಹುದು ಎಂಬ ಎಚ್ಚರಿಕೆಯನ್ನು ನೀಡಿದೆ.
ಉತ್ತರ ಭಾರತದಲ್ಲಿ ಕಳೆದ ಕೆಲವು ವಾರಗಳಲ್ಲಿ ದಟ್ಟ ಮಂಜಿನಿಂದಾಗಿ ನೂರಾರು ವಿಮಾನಗಳು ಮತ್ತು ರೈಲುಗಳು ರದ್ದುಗೊಂಡಿವೆ ಅಥವಾ ವಿಳಂಬವಾಗಿವೆ ಎಂದು ವರದಿಗಳು ತಿಳಿಸಿವೆ.
ದೆಹಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕವು(ಎಕ್ಯೂಐ) ಬೆಳಿಗ್ಗೆ 6 ಗಂಟೆ ಸುಮಾರಿಗೆ 408 ಕ್ಕೆ ದಾಖಲಾಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವೆಬ್‌ಸೈಟ್‌ನಲ್ಲಿನ ಮಾಹಿತಿಯ ಪ್ರಕಾರ, ‘ಅತ್ಯಂತ ಕಳಪೆ’ ಯಿಂದ ಅತ್ಯಂತ ಹೆಚ್ಚು ಕಳಪೆ ವರ್ಗಕ್ಕೆ ಇಳಿದಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಧಿಕಾರದ ಹಗ್ಗ ಜಗ್ಗಾಟ, ಹಳಿ ತಪ್ಪುತ್ತಿರುವ ಆಡಳಿತ, ಭ್ರಮನಿರಸನಗೊಂಡ ಜನ
ಶೂನ್ಯ ಮತ್ತು 50 ರ ನಡುವಿನ ಎಕ್ಯೂಐ ಅನ್ನು ‘ಉತ್ತಮ’, 51 ರಿಂದ 100 ‘ತೃಪ್ತಿದಾಯಕ’, 101 ರಿಂದ 200 ‘ಮಧ್ಯಮ’, 201 ರಿಂದ 300 ‘ಕಳಪೆ’, 301 ರಿಂದ 400 ‘ಅತ್ಯಂತ ಕಳಪೆ’ ಮತ್ತು 401 ರಿಂದ 500 ಅನ್ನು ‘ತೀವ್ರ ಕಳಪೆ’ ಎಂದು ಪರಿಗಣಿಸಲಾಗುತ್ತದೆ.
ಹವಾಮಾನ ಇಲಾಖೆ ಪ್ರಕಾರ, ದೆಹಲಿಯ ಕನಿಷ್ಠ ತಾಪಮಾನ 9.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಶುಕ್ರವಾರ ರಾಜಧಾನಿಯ ಗರಿಷ್ಠ ಮತ್ತು ಕನಿಷ್ಠ ತಾಪಮಾನವು 6 ರಿಂದ 20 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ ಎಂದು ಹವಾಮಾನ ಸಂಸ್ಥೆ ತಿಳಿಸಿದೆ.
ಮುಂದಿನ ಎರಡು ವಾರಗಳಲ್ಲಿ ಭಾರತದಲ್ಲಿ ಹವಾಮಾನವು ಗಮನಾರ್ಹವಾಗಿ ಬದಲಾಗುವ ನಿರೀಕ್ಷೆಯಿರುವುದರಿಂದ ದೆಹಲಿ-ಎನ್‌ಸಿಆರ್ ಸೇರಿದಂತೆ ಉತ್ತರ ಭಾರತದ ಹಲವು ಭಾಗಗಳಲ್ಲಿ ಮಳೆಯಾಗುವುದಾಗಿ ಐಎಂಡಿ ಮುನ್ಸೂಚನೆ ನೀಡಿದೆ. ಹಲವು ಪ್ರದೇಶಗಳಲ್ಲಿ ಗುಡುಗುಸಹಿತ ಬಿರುಗಾಳಿ ಮತ್ತು ಆಲಿಕಲ್ಲು ಮಳೆಯ ಮುನ್ಸೂಚನೆ ನೀಡಲಾಗಿದೆ.
ರಾತ್ರಿಯ ಉಷ್ಣತೆಯು ಗಣನೀಯವಾಗಿ ಕಡಿಮೆಯಾದ ಕಾರಣ ಉತ್ತರ ಭಾರತದ ಬಹುತೇಕ ಭಾಗಗಳಲ್ಲಿ ಚಳಿಯು ತೀವ್ರಗೊಂಡಿದೆ. ಕಾಶ್ಮೀರದಲ್ಲಿ ತಾಪಮಾನವು ಶೂನ್ಯ ಡಿಗ್ರಿಗಿಂತ ಕಡಿಮೆಯಾಗಿದೆ. ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಶೂನ್ಯ ಡಿಗ್ರಿ ದಾಖಲಾಗಿದೆ.
ಹಿಮಾಚಲ ಪ್ರದೇಶ, ಪಂಜಾಬ್, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಶೀತ ಗಾಳಿ ಬೀಸುವ ಬಗ್ಗೆ ಐಎಂಡಿ ಮುನ್ಸೂಚನೆ ನೀಡಿದೆ.
