ಬಿಳಿ ಧೋತರ, ರಾಯಲ್ ಎನ್ಫೀಲ್ಡ್ ಮೋಟರ್ ಸೈಕಲ್ ಹಾಗೂ ಒಂದು ಕಬಡ್ಡಿ ಪಾರಿತೋಷಕ… ಈ ಮೂರು ಸಂಗತಿಗಳು ಇತ್ತೀಚೆಗೆ ನೆರೆಯ ತಮಿಳುನಾಡಿನಲ್ಲಿ ಮೂವರು ಯುವಕರ ಪ್ರಾಣಕ್ಕೇ ಸಂಚಕಾರ ಒಡ್ಡುವುದು ಸಾಧ್ಯವೇ? ಈ ಯುವಕರು ದಲಿತರಾಗಿದ್ದರೆ ಅಸಾಧ್ಯವೇನೂ ಅಲ್ಲ.
ಆದಿಶೇಷನ್, ಅಯ್ಯಸಾಮಿ ಹಾಗೂ ದೇವೇಂದ್ರನ್ ರಾಜ್ ಪರಸ್ಪರ ಪರಿಚಿತರೇನೂ ಅಲ್ಲ. ಹೆಚ್ಚು ಕಡಿಮೆ ಒಂದೇ ಪ್ರಾಯದವರು. ಮೂವರೂ ದಕ್ಷಿಣ ತಮಿಳುನಾಡಿನವರು ಮತ್ತು ದಲಿತರು.
ಜನವರಿಯ ಪೊಂಗಲ್ ಹಬ್ಬದ ಹೊತ್ತಿನಲ್ಲಿ ಆದಿಶೇಷನ್ ನನ್ನು ಕ್ರೂರವಾಗಿ ಥಳಿಸಿ, ಕಲ್ಲೊಂದರಿಂದ ಬಡಿಯಲಾಯಿತು. ತಲೆಯ ಮೇಲೆ ಆಳದ ಗಾಯಗಳಾದವು. ಫೆಬ್ರವರಿಯಲ್ಲಿ ಬೈಕ್ ಮೇಲೆ ಮನೆಗೆ ಮರಳುತ್ತಿದ್ದ ಅಯ್ಯಸಾಮಿಯನ್ನು ಕುಡುಗೋಲಿನಿಂದ ಹಲ್ಲೆ ಮಾಡಲಾಯಿತು. ಮಾರ್ಚ್ ತಿಂಗಳಲ್ಲಿ ಶಾಲಾ ಪರೀಕ್ಷೆ ಬರೆಯಲು ತೆರಳುತ್ತಿದ್ದ ದೇವೇಂದ್ರನ್ ನನ್ನು ಬಲವಂತವಾಗಿ ಬಸ್ಸಿನಿಂದಿಳಿಸಿ ತಲೆಯ ಮೇಲೆ ಕೈಗಳ ಮೇಲೆ ಕತ್ತಿ ಬೀಸಲಾಯಿತು. ಆತನ ಮೂರು ಕೈ ಬೆರಳುಗಳು ತುಂಡಾದವು.
ಮೂರು ಪ್ರಕರಣಗಳಲ್ಲಿ ದಾಳಿ ನಡೆಸಿದವರು ಬಲಿಷ್ಠ ಜಾತಿಗಳ ಹುಡುಗರು. ಮೂರೂ ಪ್ರಕರಣಗಳ ಕುರಿತ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಯಿತು. ಸಾರ್ವಜನಿಕರ ಅರಿವಿನಿಂದ ಕ್ರಮೇಣ ಮಸಕಾಗಿ ಮರೆಯಾಯಿತು. ಆದರೆ ಹುಡುಗರು ಈಗಲೂ ನೋವು-ಆಘಾತದಿಂದ ಚೇತರಿಸಿಕೊಂಡಿಲ್ಲ.
ಮಧುರೈ ಜಿಲ್ಲೆಯ ಉಸಿಲಂಪಟ್ಟಿ ಟೌನಿನ ಬಳಿಯ ಹಳ್ಳಿ ಸಂಕಂಪಟ್ಟಿ. 2016ರಲ್ಲಿ ದಲಿತ ಯುವಕ ಶಂಕರ್ ನ ಭಯಾನಕ ಮರ್ಯಾದೆಗೇಡು ಹತ್ಯೆಗೆ ಸಾಕ್ಷಿಯಾಗಿದ್ದ ಟೌನು ಉಸಿಲಂಪಟ್ಟಿ. ಹಾಡಹಗಲು ಜನನಿಬಿಡ ನಡುರಸ್ತೆಯಲ್ಲೇ ಆತನನ್ನು ಕೊಚ್ಚಿ ಹಾಕಿದ್ದ ಸಿಸಿ ಟಿವಿ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿಯಾಗಿ ಹಬ್ಬಿತ್ತು.
ಆದಿಶೇಷನ್ ತನ್ನ ಕುಟುಂಬದ ಕಷ್ಟಕ್ಕೆ ಆಗಲು ಒಂಬತ್ತನೆಯ ತರಗತಿಯಲ್ಲೇ ಶಾಲೆ ಬಿಟ್ಟು ದುಡಿಮೆಗೆ ಇಳಿಯುತ್ತಾನೆ. ತಮಟೆ ಬಡಿದು 500 ರುಪಾಯಿಯ ದಿನಗೂಲಿ ಸಂಪಾದಿಸುತ್ತಾನೆ. ಒಮ್ಮೆ ದೇಗುಲದ ಉತ್ಸವದ ಹೊತ್ತಿನಲ್ಲಿ ತಮಟೆ ಬಡಿಯುತ್ತಿದ್ದಾಗ ಬಲಿಷ್ಠ ಕಳ್ಳರ್ ಜಾತಿಯ ವ್ಯಕ್ತಿಗೆ ಈತನ ಕೈ ತಗುಲುತ್ತದೆ. ಬೈಗುಳವನ್ನು ಪ್ರತಿಭಟಿಸಿ ಜಗಳಕ್ಕೆ ಇಳಿದ ಆದಿಶೇಷನನ್ನು ಬಡಿಯಲಾಗುತ್ತದೆ. ಮನೆಯವರೆಗೆ ಹುಡುಕಿಕೊಂಡು ಬಂದು ಕದಗಳನ್ನು ಮುರಿಯಲಾಗುತ್ತದೆ. ತಲೆಮರೆಸಿಕೊಂಡು ಕೇರಳಕ್ಕೆ ತೆರಳಿ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಾನೆ ಹುಡುಗ. ಪೊಂಗಲ್ ಗೆ ಹಳ್ಳಿಗೆ ಮರಳಿ ಹೊಸ ಅಂಗಿ ಧೋತರ ಧರಿಸಿ, ಮೊಣಕಾಲ ಮೇಲೆ ಎತ್ತಿ ಕಟ್ಟಿಕೊಳ್ಳುತ್ತಾನೆ. ದಲಿತರು ಧೋತರವನ್ನು ಮೊಣಕಾಲ ಮೇಲೆ ಎತ್ತಿಕಟ್ಟುವುದು ಅಘೋಷಿತ ನಿಷೇಧ. ಗುಂಪೊಂದು ಬಂದು ಮುತ್ತಿ ಧೋತರವನ್ನು ಕೆಳಗಿಳಿಸುವಂತೆ ದಬಾಯಿಸುತ್ತದೆ. ಜಾತಿ ನಿಂದನೆಯ ಬೈಗುಳಗಳ ಜೊತೆಗೆ ಥಳಿಸುತ್ತದೆ. ಅವನ ಜಾತಿಯನ್ನು ಅವನೇ ಹೆಸರಿಸಿ, ನಿಂದಿಸುವಂತೆ ಬಲವಂತ ಮಾಡಲಾಯಿತು. ಅವನ ಮೇಲೆ ಮೂತ್ರ ವಿಸರ್ಜಿಸಲಾಗುತ್ತದೆ. ಮೂರು ದಿನ ಆಸ್ಪತ್ರೆಯಲ್ಲಿರುತ್ತಾನೆ. ಆರೋಪಿಗಳನ್ನು ಬಂಧಿಸಲಾಗುತ್ತದೆ. ಆದರೆ ಅವನ ಕುಟುಂಬದ ಮೇಲೆ ಸಾಮಾಜಿಕ ಬಹಿಷ್ಕಾರ ಹಾಕಲಾಗುತ್ತದೆ. ಅಂಗಡಿಗಳಿಂದ ದಿನಸಿ,ನಿತ್ಯವಸ್ತುಗಳನ್ನೂ ಮಾರಲು ನಿರಾಕರಿಸಲಾಗುತ್ತದೆ. ಮುಂದೆ ಬದುಕಿಡೀ ಧೋತರ ಉಡುವುದಿಲ್ಲ ಎನ್ನುತ್ತಾನೆ ಆದಿಶೇಷನ್.
ಸಂಕಂಪಟ್ಟಿಯಿಂದ 70 ಕಿ.ಮೀ. ದೂರದ ಹಳ್ಳಿ ಮೇಲಪಿಡಿವೂರ್. ಅತ್ಯಂತ ಹಿಂದುಳಿದ ವರ್ಗವೆಂದು ಘೋಷಿಸಲಾಗಿರುವ ತೇವರ್ ಜಾತಿಯವರು ಇಲ್ಲಿನ ಬಲಾಢ್ಯರು. ಅಯ್ಯಸಾಮಿ ಇಲ್ಲಿನ ಪರಯರ್ ಜಾತಿಗೆ ಸೇರಿದ ದಲಿತ. ಮಗ ಕಾಲೇಜಿಗೆ ದೂರದ ಕಾಲೇಜಿಗೆ ಹೋಗಲೆಂದು ಕೂಡಿಟ್ಟಿದ್ದ ಹಣ ತೆತ್ತು ರಾಯಲ್ ಎನ್ಫೀಲ್ಡ್ ಮೋಟರ್ ಸೈಕಲ್ ಕೊಡಿಸಿದ್ದಳು ತಾಯಿ. ಈ ತಾಯಿಯ ಹೆತ್ತವರು ಈಕೆಗಾಗಿ ಪಕ್ಕಾ ಮನೆಯನ್ನು ಕಟ್ಟಿಸಿಕೊಟ್ಟದ್ದೇ ತೇವರ್ ಗಳ ಕಣ್ಣು ಕೆಂಪಾಗಿಸಿತ್ತು. ಮನೆಯಲ್ಲಿಲ್ಲದಾಗ ಕಿಟಕಿ ಒಡೆದಿದ್ದರು. ಅಡುಗೆ ಮನೆಗೆ ನುಗ್ಗಿ ದಾಂಧಲೆ ಮಾಡಿದ್ದರು. ಪೊಲೀಸರ ಮುಂದೆ ತಪ್ಪನ್ನು ಒಪ್ಪಿಕೊಂಡು ಕೇಸಿನಿಂದ ಪಾರಾಗಿದ್ದರು. ಅಸ್ಪೃಶ್ಯ ಕುಟುಂಬ ಬುಲೆಟ್ ಮೋಟರ್ ಸೈಕಲ್ ಖರೀದಿಸಿದ್ದು ಅವರನ್ನು ಇನ್ನಷ್ಟು ಕೆರಳಿಸಿತ್ತು. ಒಂದು ದಿನ ಮೋಟರ್ ಸೈಕಲ್ ಅಡ್ಡಗಟ್ಟಿ ನಿಲ್ಲಿಸಿ ಬೈದು ಅಯ್ಯಸಾಮಿಯ ಕುತ್ತಿಗೆ ಸೀಳಲು ಯತ್ನಿಸಿದರು. ಅಡ್ಡ ಒಡ್ಡಿದ ಅಯ್ಯಸಾಮಿಯ ಕೈ ಬೆರಳುಗಳ ಮೇಲೆ ಮಚ್ಚು ಬೀಸಿದರು. ತೀವ್ರವಾಗಿ ಗಾಯಗೊಂಡ ಬೆರಳುಗಳು ಈಗಲೂ ಮೊದಲಿನಂತಾಗಿಲ್ಲ.
ತೂತ್ತುಕುಡಿ ಜಿಲ್ಲೆಯ ಅರಿಯನಾಯಗಿಪುರಂನ ತಂಗಣೇಶ್ ಮತ್ತು ಮಾಲತಿ ದಂಪತಿ ಇಟ್ಟಿಗೆ ಭಟ್ಟಿಯಲ್ಲಿ ದಿನಗೂಲಿಗಳು. ಮಗ ದೇವೇಂದ್ರನನ್ನು ಇಂಗ್ಲಿಷ್ ಶಾಲೆಯಲ್ಲಿ ಓದಿಸುತ್ತಿರುವ ಹೆಮ್ಮೆ ಅವರಿಗೆ. ದೇವೇಂದ್ರ ಓದಿನಲ್ಲಿ ಮುಂದು ಮತ್ತು ಕಬಡ್ಡಿ ಆಟದಲ್ಲೂ ಚುರುಕು. ಹನ್ನೊಂದನೆಯ ತರಗತಿಯಲ್ಲಿರುವ ಅವನು ಇದೇ ಮೇ ತಿಂಗಳಲ್ಲಿ ಅಂತಿಮ ಪರೀಕ್ಷೆ ಬರೆಯಲು ಶಾಲೆಗೆ ತೆರಳುತ್ತಿದ್ದಾಗ ಮೂವರು ಬಸ್ಸಿನಿಂದ ಇಳಿಸಿ ಹಲ್ಲೆ ನಡೆಸಿದರು. ಬಲಿಷ್ಠ ಕಳ್ಳರ್ ಸಮುದಾಯದವರು ದೇವೇಂದ್ರನ ತಂಡ ಕಬಡ್ಡಿ ಪಂದ್ಯದಲ್ಲಿ ಟ್ರೋಫಿ ಗೆದ್ದ ಬಗ್ಗೆ ಕುದ್ದು ಹೋಗಿದ್ದರು. ಯಾಕೆಂದರೆ ಸೋತ ತಂಡದಲ್ಲಿ ಕಳ್ಳರ್ ಸಮುದಾಯದ ಹುಡುಗರಿದ್ದರು. ಪಂದ್ಯದ ಕೊನೆಯಲ್ಲಿ ‘ಅಸ್ಪೃಶ್ಯ’ ದೇವೇಂದ್ರನ್ ಪಾರಿತೋಷಕವನ್ನು ಎತ್ತಿ ಹಿಡಿದು ಸಂಭ್ರಮಿಸಿದ್ದನ್ನು ಸಹಿಸಲಾರದಾಗಿದ್ದರು. ಹಲ್ಲೆಯಲ್ಲಿ ದೇವೇಂದ್ರನ ಮೂರು ಬೆಳಳುಗಳನ್ನು ಕೊಚ್ಚಲಾಗಿತ್ತು. ತಲೆಗೆ ಗಾಯವಾಗಿತ್ತು. ರಕ್ತ ಮಡುವಿನಲ್ಲಿ ಬಿದ್ದಿದ್ದ ಮಗನನ್ನು ಎತ್ತಿಕೊಂಡು ಆಸ್ಪತ್ರೆಗೆ ಸೇರಿಸಿದ್ದ ತಂಗಣೇಶ್. ಮೂರು ತಿಂಗಳಾದರೂ ಆಸ್ಪತ್ರೆಯಿಂದ ಹೊರಬಿದ್ದಿಲ್ಲ. ಬೆರಳುಗಳಿಗೆ ಇನ್ನೂ ಶಸ್ತ್ರಚಿಕಿತ್ಸೆಗಳನ್ನು ಮಾಡಬೇಕಿದೆ ಎನ್ನುತ್ತಾರೆ ವೈದ್ಯರು. ಕತ್ತರಿಸಿ ಹೋದ ಮತ್ತೊಂದು ಬೆರಳಿನ ತುಂಡು ಹುಡುಕಿದರೂ ಸಿಕ್ಕಿರಲಿಲ್ಲ. ಹೀಗಾಗಿ ಜೋಡಿಸಲಾಗಿಲ್ಲ. ಘಟನೆಯಿಂದ ತೀವ್ರ ಮಾನಸಿಕ ಒತ್ತಡಕ್ಕೆ ಗುರಿಯಾಗಿದ್ದಾನೆ ದೇವೇಂದ್ರನ್. ಪರೀಕ್ಷೆ ಬರೆಯಲಾಗಿಲ್ಲ. ಆದರೂ ಎಲ್ಲ ವಿಷಯಗಳಲ್ಲಿ ಪಾಸು ಮಾಡುವಷ್ಟು ಔದಾರ್ಯ ತೋರಿದೆ ದೇವೇಂದ್ರನ್ ಶಾಲೆ. ಸರ್ಕಾರದಿಂದ ಆರ್ಥಿಕ ನೆರವಿನ ಭರವಸೆಯಿದೆ. ಒಂದು ಕಂತಿನ ಪಾವತಿಯೂ ಆಗಿದೆ. ದೇವೇಂದ್ರನ ಮುಂದಿನ ಓದಿಗೆ ನೆರವಾಗುವ ಆಶ್ವಾಸನೆಯೂ ಉಂಟು. ಎಷ್ಟು ಈಡೇರುತ್ತದೋ ಗೊತ್ತಿಲ್ಲ ಎನ್ನುತ್ತಾನೆ ತಂಗಣೇಶ್.
ಜಾತಿವಾದಿ ನಡವಳಿಕೆ ನಿಲ್ಲದೆ ಮುಂದುವರೆದಿದೆ. ತಂಗಣೇಶ್ ಕುಟುಂಬಕ್ಕೆ ನೀಡಲಾಗಿರುವ ಸರ್ಕಾರದ ಆರ್ಥಿಕ ನೆರವನ್ನೂ ಹಂಗಿಸಿ ಆಡಿಕೊಳ್ಳಲಾಗುತ್ತಿದೆ.
ಸೌಜನ್ಯ- ದಿ ಸ್ಕ್ರೋಲ್ (ಅನುವಾದ ಡಿ.ಉಮಾಪತಿ)