ಮಣಿಪುರ ಹಿಂಸಾಚಾರಕ್ಕೆ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಕುಮ್ಮಕ್ಕು ನೀಡಿದರು ಎಂದು ಕುಕಿ ಬುಡಕಟ್ಟು ಸಮುದಾಯಗಳು ಆರೋಪಿಸಿ ಸಲ್ಲಿಸಿರುವ ಅರ್ಜಿಯ ಸಂಬಂಧ ಸೋರಿಕೆಯಾಗಿರುವ ಆಡಿಯೊ ತುಣುಕಿನ ಸತ್ಯಾಸತ್ಯತೆಯ ಕುರಿತು ಸರಕಾರಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಸೋಮವಾರ ಅರ್ಜಿಯ ವಿಚಾರಣೆ ಪ್ರಾರಂಭವಾದಾಗ, ನಾನು ಸುಪ್ರೀಂ ಕೋರ್ಟ್ ನ್ಯಾಯಾಧೀಶನಾಗಿ ಪದೋನ್ನತಿ ಹೊಂದಿದಾಗ ಮಣಿಪುರ ಮುಖ್ಯಮಂತ್ರಿ ಆಯೋಜಿಸಿದ್ದ ಔತಣ ಕೂಟದಲ್ಲಿ ಭಾಗವಹಿಸಿದ್ದರಿಂದ, ಈ ಅರ್ಜಿಯ ವಿಚಾರಣೆಯಿಂದ ಹಿಂದೆ ಸರಿಯಲೆ? ಎಂದು ನ್ಯಾ. ಪಿ.ವಿ.ಸಂಜಯ್ ಕುಮಾರ್ ಅರ್ಜಿದಾರರನ್ನು ಪ್ರಶ್ನಿಸಿದರು. ಅದಕ್ಕೆ ಪ್ರತಿಯಾಗಿ, ನ್ಯಾ. ಸಂಜಯ್ ಕುಮಾರ್ ಅವರು ತಾವಾಗಿ ವಿಚಾರಣೆಯಿಂದ ಹಿಂದೆ ಸರಿಯಬಾರದು ಎಂದು ಅರ್ಜಿದಾರರ ಪರ ವಕೀಲ ಪ್ರಶಾಂತ್ ಭೂಷಣ್ ಮನವಿ ಮಾಡಿದರು.
ಕುಕಿ ಆರ್ಗನೈಸೇಷನ್ ಫಾರ್ ಹ್ಯೂಮನ್ ರೈಟ್ಸ್ ಟ್ರಸ್ಟ್ ಪರ ಹಾಜರಿದ್ದ ವಕೀಲ ಪ್ರಶಾಂತ್ ಭೂಷಣ್, ಶೇ. 93ರಷ್ಟು ಧ್ವನಿಮುದ್ರಿಕೆಯು ಎನ್ ಬಿರೇನ್ ಸಿಂಗ್ ಅವರ ಧ್ವನಿಯನ್ನು ಹೋಲುತ್ತದೆ ಎಂದು ಲಾಭರಹಿತ ಟ್ರೂತ್ ಲ್ಯಾಬ್ಸ್ ದೃಢಪಡಿಸಿವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಟ್ರೂತ್ ಲ್ಯಾಬ್ಸ್ 2007ರಲ್ಲಿ ಭಾರತದಲ್ಲಿ ಸ್ಥಾಪನೆಯಾಗಿರುವ ಪ್ರಪ್ರಥಮ ಸರ್ಕಾರೇತರ ಸುಸಜ್ಜಿತ ವಿಧಿವಿಜ್ಞಾನ ಪ್ರಯೋಗಾಲಯವಾಗಿದೆ.
ಈ ಸುದ್ದಿ ಓದಿದ್ದೀರಾ? ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿ ಗ್ರೇಸ್ ಅಂಕ ಇಲ್ಲ
ಇದಕ್ಕೆ ಪ್ರತಿಯಾಗಿ, “ಟ್ರೂತ್ ಲ್ಯಾಬ್ಸ್ ವರದಿಯನ್ನು ಅವಲಂಬಿಸಲು ಸಾಧ್ಯವಿಲ್ಲ. ಧ್ವನಿಮುದ್ರಿಕೆಗಳನ್ನು ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ”ಎಂದು ಸರಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಿದರು.
ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಲಯವು, ಮುಚ್ಚಿದ ಲಕೋಟೆಯಲ್ಲಿ ಸರಕಾರಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯನ್ನು ಸಲ್ಲಿಸಬೇಕು ಎಂದು ಸೂಚಿಸಿ, ವಿಚಾರಣೆಯನ್ನು ಮಾರ್ಚ್ 24ಕ್ಕೆ ಮುಂದೂಡಿತು.
