ಭಾರತವೆಂಬ ಮಹಾನ್ ಮಾರುಕಟ್ಟೆಯ ಹೆಬ್ಬಾಗಿಲುಗಳನ್ನು ವಿದೇಶೀ ಕಂಪನಿಗಳಿಗೆ ಹಾರು ಹೊಡೆದು ತೆರೆಯಲಿಲ್ಲವೇ ಮನಮೋಹನ್ ಸಿಂಗ್?

Date:

Advertisements
ಸಮ್ಮಿಶ್ರ ಸರ್ಕಾರ ನಡೆಸಬೇಕಿದ್ದರೆ ಮಿತ್ರಪಕ್ಷಗಳ ಮರ್ಜಿ ಹಿಡಿಯಲೇಬೇಕಾಗುತ್ತದೆ ಎಂಬ ಗುರಾಣಿ ಹಿಡಿದ ಮನಮೋಹನ್, ಹಲವು ಅಕ್ರಮಗಳ ವಿರುದ್ಧ ಕತ್ತಿಯನ್ನು ಒರೆಯಿಂದ ಹಿರಿದು ಝಳಪಿಸಲಿಲ್ಲ ಕೂಡ. ಅಷ್ಟರಮಟ್ಟಿಗೆ ಅವರು ತಪ್ಪಿತಸ್ಥರು. ಕುರಿಮರಿಯ ಮೌನವು, ಕೆಲವು ಸಲ ತೋಳದ ದುಷ್ಟ ಹಂಚಿಕೆಗಿಂತಲೂ ಹಾನಿಕಾರಿ ಆಗಬಲ್ಲದು ಎಂದಿದ್ದಾರೆ ರಾಜಕೀಯ ವಿಶ್ಲೇಷಕರು. 

ಮನಮೋಹನ್ ಸಿಂಗ್ ಅವರ ವ್ಯಕ್ತಿಗತ ಪ್ರಾಮಾಣಿಕತೆಯನ್ನು ಇಂದಿಗೂ ಯಾರೂ ಪ್ರಶ್ನಿಸಲಾರರು. ಸೋನಿಯಾ ಗಾಂಧಿ ಒಲ್ಲೆನೆಂದಾಗ ಆಕಸ್ಮಿಕವಾಗಿ ಪ್ರಧಾನಿ ಪದವಿಯನ್ನೇರಿದ ಮನಮೋಹನ್ ತಮ್ಮ ಮೊದಲ ಅವಧಿಯಲ್ಲಿ ಅತ್ಯುತ್ತಮ ಮತ್ತು ಸಚ್ಚಾರಿತ್ರ್ಯದ ಪ್ರಧಾನಿ ಎಂದು ದೇಶದ ಒಳಗೆ ಮತ್ತು ಹೊರಗೆ ಹೆಸರು ಮಾಡಿದವರು.

ಮನಮೋಹ‌ನ್ ಸಿಂಗ್ ಪ್ರಾಮಾಣಿಕತೆ ಮತ್ತು ಸಜ್ಜನಿಕೆ ಯುಪಿಎ ಸರ್ಕಾರದ ಮೊದಲ ಅವಧಿಯಲ್ಲಿ ಹೆಸರಾಗಿತ್ತು. ಈ ಸಾರ್ವಜನಿಕ ಗ್ರಹಿಕೆಯನ್ನು ಕೆಡವಲು ಬಿಜೆಪಿ ಬಹುವಾಗಿ ಪ್ರಯತ್ನಿಸಿತು. ಹೆಗ್ಗಳಿಕೆಯ ಈ ಕಂಬವನ್ನು ಕೆಡವಿದರೆ ಸೌಧ ತಾನಾಗಿಯೇ ಉರುಳುವುದು ಎಂಬುದು ಬಿಜೆಪಿಯ ಲೆಕ್ಕಾಚಾರ ಆಗಿತ್ತು.‌

ಮಾತು ಮಾತಿಗೆ ಸೋನಿಯಾ ಮುಂದೆ ಮಂಡಿಯೂರುವ ಪ್ರಧಾನಿ ಎಂಬ ಪ್ರಚಾರವನ್ನು ತಾರಕಕ್ಕೆ ಒಯ್ದಿದ್ದರು ಬಿಜೆಪಿ ಮಹಾರಥಿ ಆಡ್ವಾಣಿ. ಶಿಖಂಡಿ ಎಂದೂ ಜರೆದುಬಿಟ್ಟಿದ್ದರು. ಆದರೆ ಅಂತಿಮವಾಗಿ ಮನಮೋಹನ್ ಗೆದ್ದಿದ್ದರು. ಎರಡನೆಯ ಅವಧಿಯಲ್ಲಿ ಕಲ್ಲಿದ್ದಿಲು ಮತ್ತು ಸಾಲು ಸಾಲು ಹಗರಣಗಳ ಮಸಿ ಕಾಂಗ್ರೆಸ್ ಪಕ್ಷ ಮಾತ್ರವೇ ಅಲ್ಲದೆ ಮನಮೋಹ‌ನ್ ಸದಾ ಧರಿಸುವ ಕೊಕ್ಕರೆ ಗರಿ ಬಿಳುಪಿನ ಉಡುಪುಗಳಿಗೆ ಬಲವಾಗಿಯೇ ಮೆತ್ತಿಕೊಂಡಿತ್ತು. ಕಡೆಗೆ ಚುನಾವಣೆಗಳಲ್ಲಿ ಕಾಂಗ್ರೆಸ್ಸಿನ ಘೋರ ಸೋಲಿಗೂ ದಾರಿ ಮಾಡಿತು.

Advertisements

ಪ್ರಾಮಾಣಿಕತೆ ಮತ್ತು ಸಮಚಿತ್ತ ಗುಣದ ವ್ಯಕ್ತಿ ಮನಮೋಹನ್ ಕಾಂಗ್ರೆಸ್ಸಿನ ರಾಜಕೀಯದಲ್ಲಿ ತೊಡಗಿದವರಲ್ಲ. ಏರಿ ಬಂದ ಏಣಿಯನ್ನೇ ಒದೆಯುವ ಜಾಯಮಾನದ ರಾಜಕಾರಣಿಯೂ ಆಗಿರಲಿಲ್ಲ. ಸೋನಿಯಾ ಅವರ ಪರಮಾಧಿಕಾರವನ್ನು ಪ್ರಶ್ನಿಸುವುದಿಲ್ಲ. ನೆಹರೂ-ಗಾಂಧಿ ಮನೆತನದ ಕುಡಿಗಳು ‘ಪ್ರಾಯ’ಕ್ಕೆ ಬಂದಾಗ ತಕರಾರಿಲ್ಲದೆ ಕುರ್ಚಿ ಬಿಟ್ಟುಕೊಡುತ್ತಾರೆ ಇತ್ಯಾದಿ. ಹೀಗಾಗಿಯೇ ಪ್ರಣಬ್ ಮುಖರ್ಜಿ ಬದಲಿಗೆ ಮನಮೋಹನ್ ಅವರನ್ನು ಆರಿಸಿದ್ದರು ಸೋನಿಯಾ.

ನೆನ್ನೆ ಮೊನ್ನೆಯ ಹುಡುಗ ರಾಹುಲ್ ಗಾಂಧಿ ತಮ್ಮ ಸರ್ಕಾರದ ಸುಗ್ರೀವಾಜ್ಞೆಯೊಂದನ್ನು ಅಸಂಬದ್ಧ ಅಪಾಲಾಪವನ್ನು ಹರಿದು ಕಸದ ಬುಟ್ಟಿಗೆ ಹಾಕಬೇಕು ಎಂದು ಬಹಿರಂಗವಾಗಿ ಜರೆದರೂ ಸಿಟ್ಟಿಗೇಳದ ಸಾಧು. ಈ ಸಹನೆಯ ಹಿಂದಿನ ಗುಟ್ಟನ್ನು ಅವರು ಆ ನಂತರ ಹೊರಗೆಡವಿದರು. ರಾಹುಲ್ ತಮ್ಮ ಕೃತ್ಯಕ್ಕೆ ಕ್ಷಮೆ ಕೇಳಿದ್ದರಂತೆ.

ಸಮ್ಮಿಶ್ರ ಸರ್ಕಾರ ನಡೆಸಬೇಕಿದ್ದರೆ ಮಿತ್ರಪಕ್ಷಗಳ ಮರ್ಜಿ ಹಿಡಿಯಲೇಬೇಕಾಗುತ್ತದೆ ಎಂಬ ಗುರಾಣಿ ಹಿಡಿದ ಮನಮೋಹನ್, ಹಲವು ಅಕ್ರಮಗಳ ವಿರುದ್ಧ ಕತ್ತಿಯನ್ನು ಒರೆಯಿಂದ ಹಿರಿದು ಝಳಪಿಸಲಿಲ್ಲ ಕೂಡ. ಅಷ್ಟರಮಟ್ಟಿಗೆ ಅವರು ತಪ್ಪಿತಸ್ಥರು. ಕುರಿಮರಿಯ ಮೌನವು, ಕೆಲವು ಸಲ ತೋಳದ ದುಷ್ಟ ಹಂಚಿಕೆಗಿಂತಲೂ ಹಾನಿಕಾರಿ ಆಗಬಲ್ಲದು ಎಂದಿದ್ದಾರೆ ರಾಜಕೀಯ ವಿಶ್ಲೇಷಕರು. ಅವರ ಈ ನಿಷ್ಕ್ರಿಯೆಯನ್ನು ಅನುಮಾನಿಸುವವರ ವ್ಯಾಖ್ಯಾನವೇ ಬೇರೆ. ಅವರು ಮೂಲಭೂತವಾಗಿ ರಾಜಕಾರಣಿಯಲ್ಲ ಎಂಬ ಟೀಕೆಯನ್ನು ಈ ವರ್ಗ ಒಪ್ಪುವುದಿಲ್ಲ. ಹತ್ತು ವರ್ಷಗಳ ಕಾಲ ಇಷ್ಟು ದೊಡ್ಡ ದೇಶವನ್ನು ಅಧಿಕಾರ ಕಳೆದುಕೊಳ್ಳದೆ ಆಳಿದ ಪ್ರಧಾನಿ ತಾವು ವಾಸ್ತವವಾಗಿ ಚತುರ ರಾಜಕಾರಣಿಯೂ, ಕಳಪೆ ಆಡಳಿತಗಾರನೂ ಎಂದು ರುಜುವಾತು ಮಾಡಿ ತೋರಿದ್ದಾರೆ ಎಂಬುದು ವಿಶ್ಲೇಷಕರ ಅನಿಸಿಕೆ.

ನರಸಿಂಹ ರಾವ್ ಜೊತೆ ಸಿಂಗ್

ಈಗ ಪಾಕಿಸ್ತಾನದ ಭಾಗವಾಗಿರುವ ಪಂಜಾಬಿನ ಹಳ್ಳಿಯೊಂದರಲ್ಲಿ ಹುಟ್ಟಿದ ಪ್ರಧಾನಿ ಮನಮೋಹನ್ ಸಿಂಗ್ ಆಕ್ಸ್‌ಫರ್ಡ್ ವಿವಿಯಿಂದ ಡಾಕ್ಟರೇಟ್ ಪದವಿ ಪಡೆದ ಅರ್ಥಶಾಸ್ತ್ರಜ್ಞ. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಕೆಲವೇ ಕಾಲ ಅಧ್ಯಾಪಕರಾಗಿದ್ದ ಸಿಂಗ್, ಆನಂತರ ಕೇಂದ್ರ ಸರ್ಕಾರದಲ್ಲಿ ಆರ್ಥಿಕ ಸಲಹೆಗಾರನ ಪಾತ್ರ ವಹಿಸಿದರು. ಹಣಕಾಸು ಕಾರ್ಯದರ್ಶಿಯಾದರು. ಪ್ರಣಬ್ ಮುಖರ್ಜಿ ಅರ್ಥಮಂತ್ರಿಯಾಗಿದ್ದಾಗ ರಿಸರ್ವ್ ಬ್ಯಾಂಕಿನ ಗೌರ್ನರ್ ಆಗಿದ್ದರು. ಯೋಜನಾ ಆಯೋಗದ ಉಪಾಧ್ಯಕ್ಷರಾದರು. ಜೆನೀವಾದಲ್ಲಿ ಕೇಂದ್ರ ಕಚೇರಿ ಹೊಂದಿದ್ದ ಆರ್ಥಿಕ ನೀತಿಯ ಸ್ವತಂತ್ರ ಚಿಂತಕರ ಚಾವಡಿಯಾಗಿದ್ದ ಸೌತ್ ಕಮೀಷನ್ನಿನ ಸೆಕ್ರೆಟರಿ ಜನರಲ್ ಹುದ್ದೆಯಲ್ಲಿದ್ದದ್ದು ಮೂರು ವರ್ಷಗಳ ಕಾಲ. ಭಾರತಕ್ಕೆ ಮರಳಿ ಅಂದಿನ ಪ್ರಧಾನಿ ವಿ.ಪಿ.ಸಿಂಗ್ ಅವರಿಗೆ ಆರ್ಥಿಕ ಸಲಹೆಗಾರರಾದರು. ಕೇಂದ್ರ ಲೋಕಸೇವಾ ಆಯೋಗ ಮತ್ತು ಯೂನಿವರ್ಸಿಟಿ ಗ್ರ್ಯಾಂಟ್ಸ್ ಕಮೀಷನ್ನಿನ ಅಧ್ಯಕ್ಷರೂ ಆದರು.

ಈ ಬರೆಹ ಓದಿದ್ದೀರಾ? ಡಾ. ಸಿಂಗ್‌ರೊಂದಿಗೆ ಅತೀಕ್ ಕೆಲಸ: ದೂರದೃಷ್ಟಿ, ಸಮರ್ಪಣಾ ಭಾವ, ಸಮಗ್ರತೆಯ ನೆನಪುಗಳು

1991ರಲ್ಲಿ ಅಂದಿನ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರು ಡಾ. ಸಿಂಗ್ ಅವರನ್ನು ತಮ್ಮ ಸಚಿವ ಸಂಪುಟದಲ್ಲಿ ಹಣಕಾಸು ಸಚಿವರನ್ನಾಗಿ ನೇಮಕ ಮಾಡಿಕೊಂಡರು. ಒಂದು ದಿನ ತಮ್ಮ ಪ್ರಿನ್ಸಿಪಲ್ ಸೆಕ್ರೆಟರಿಯವರನ್ನು ನನ್ನ ಬಳಿಗೆ ಕಳಿಸಿದರು ನರಸಿಂಹರಾವ್. ನೀವು ಹಣಕಾಸು ಸಚಿವರಾಗಬೇಕೆಂಬುದು ಪ್ರಧಾನಿ ಬಯಕೆ ಎಂಬ ಸಂದೇಶವನ್ನು ತಂದಿದ್ದರು ಪ್ರಿನ್ಸಿಪಲ್ ಸೆಕ್ರೆಟರಿ. ಆ ಮಾತನ್ನು ನಾನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಆದರೆ ಮರುದಿನ ನನ್ನನ್ನು ಹುಡುಕಿ ಹಿಡಿದ ಪ್ರಧಾನಿ ಸಿಟ್ಟಾಗಿದ್ದರು. ಸೂಕ್ತ ದಿರಿಸು ಧರಿಸಿ ಪ್ರಮಾಣವಚನ ಸ್ವೀಕರಿಸಲು ರಾಷ್ಟ್ರಪತಿ ಭವನಕ್ಕೆ ಬರಬೇಕೆಂದು ತಾಕೀತು ಮಾಡಿದರು. ಹೀಗೆ ಜರುಗಿತ್ತು ನನ್ನ ರಾಜಕೀಯ ರಂಗ್ರಪ್ರವೇಶ ಎಂದು ಬ್ರಿಟಿಷ್ ಪತ್ರಕರ್ತ ಮಾರ್ಕ್ ಟುಲ್ಲಿ ಅವರಿಗೆ ನೀಡಿದ ಸಂದರ್ಶನವೊಂದರಲ್ಲಿ ಸಿಂಗ್ ನೆನೆದಿದ್ದಾರೆ.

ಅಸ್ಸಾಮಿನಿಂದ ರಾಜ್ಯಸಭೆಗೆ ಅವರನ್ನು ಆರಿಸಿ ತರಲಾಗಿತ್ತು. ಮಾಜಿ ಮುಖ್ಯಮಂತ್ರಿ ಹಿತೇಶ್ವರ ಸೈಕಿಯಾ ಅವರ ಮನೆಯ ಬಾಡಿಗೆದಾರ. ಬಾಡಿಗೆಯನ್ನು ಚಾಚೂತಪ್ಪದೆ ಸಂದಾಯ ಮಾಡಿದರಂತೆ. 1998ರಿಂದ 2004ರ ತನಕ ವಾಜಪೇಯಿ ನೇತೃತ್ವದ ಎನ್.ಡಿ.ಎ.ಸರ್ಕಾರದ ಅವಧಿಯಲ್ಲಿ ಸಿಂಗ್ ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕ. 2004ರ ಚುನಾವಣೆಗಳಲ್ಲಿ ಎನ್.ಡಿ.ಎ. ಸರ್ಕಾರ ಅನಿರೀಕ್ಷಿತ ಪತನ ಎದುರಿಸಿತ್ತು. ಆಗ ಅಧಿಕಾರಕ್ಕೆ ಹಿಡಿಯುವ ಅವಕಾಶ ಒದಗಿದ್ದು ಕಾಂಗ್ರೆಸ್ ನೇತೃತ್ವದ ಒಕ್ಕೂಟಕ್ಕೆ. ಅಷ್ಟೇ ಅನಿರೀಕ್ಷಿತವಾಗಿ ಪ್ರಧಾನಿ ಪಟ್ಟ ಏರಿದ್ದರು ಮನಮೋಹ‌ನ್‌ ಸಿಂಗ್.

ಜವಾಹರಲಾಲ್ ನೆಹರೂ ನಂತರ ಜಗತ್ತೆಲ್ಲ ಕೊಂಡಾಡಿದ ಭಾರತದ ಪ್ರಧಾನಿ ಎಂಬುದು ಮನಮೋಹನ್ ಸಿಂಗ್ ಕುರಿತು ಫೋರ್ಬ್ಸ್ ನಿಯತಕಾಲಿಕದ ಬಣ್ಣನೆ. ನ್ಯೂಸ್ ವೀಕ್ ನಿಯತಕಾಲಿಕದ ಪ್ರಕಾರ ವಿಶ್ವದ ಇತರೆ ನಾಯಕರು ಗೌರವಿಸಿದ ನಾಯಕ ಮನಮೋಹ‌ನ್‌ ಸಿಂಗ್‌. ಬಹುವಾಗಿ ಕೊಂಡಾಡಿದ ವಿದೇಶೀ ಮಾಧ್ಯಮಗಳೇ ಸಿಂಗ್ ಅವರನ್ನು ಅವರ ಸರ್ಕಾರದಲ್ಲಿನ ಹಗರಣಗಳು ಮತ್ತು ನಿಷ್ಕ್ರಿಯತೆಗಾಗಿ ಕಡೆ ಕಡೆಗೆ ಕಟು ಟೀಕೆಗೆ ಗುರಿ ಮಾಡಿದ್ದುಂಟು.

ಮನಮೋಹನ್‌ ಸಿಂಗ್‌

ಆದರೆ ಈ ಟೀಕೆಗಳಲ್ಲಿ ಆರ್ಥಿಕ ಸುಧಾರಣೆಗಳನ್ನು ಸಂಪೂರ್ಣವಾಗಿ ಜಾರಿಗೆ ತರಲಿಲ್ಲ ಎಂಬ ಅಸಮಾಧಾನವೇ ಪ್ರಧಾನವಾಗಿ ಅಡಗಿತ್ತು. ಭಾರತವೆಂಬ ಮಹಾನ್ ಮಾರುಕಟ್ಟೆಯ ಹೆಬ್ಬಾಗಿಲುಗಳನ್ನು ವಿದೇಶೀ ಕಂಪನಿಗಳಿಗೆ ಸಾರಾಸಗಟಾಗಿ ಹಾರು ಹೊಡೆದು ತೆರೆಯಲಿಲ್ಲ ಎಂಬುದು ಈ ಟೀಕೆಗಳ ಹಿಂದಿದ್ದ ಅಸಲು ತಿರುಳು. ಸರ್ಕಾರದ ಪ್ರಮುಖ ತೀರ್ಮಾನಗಳು ಸೋನಿಯಾಗಾಂಧಿ ಅವರ ಜನಪಥ್ ನಿವಾಸದಲ್ಲಿ ನಡೆಯುತ್ತಿದ್ದವು. ಜಾರಿ ಮಾಡುವ ಕೆಲಸವಷ್ಟೇ ಪ್ರಧಾನಿಗೆ ಉಳಿದಿರುತ್ತಿತ್ತು ಎಂಬ ಪ್ರಶ್ನೆ ಅವರನ್ನು ಪ್ರಚೋದಿಸಲಿಲ್ಲ. ಬದಲಿಗೆ ಅದೊಂದು ಕೊರತೆಯೇ ಆಗಿರಲಿಲ್ಲ, ರಾಹುಲ್ ಮತ್ತು ಸೋನಿಯಾ ಅವರು ಕಷ್ಟಕಾಲದಲ್ಲಿ ಸರ್ಕಾರಕ್ಕೆ ಬೆಟ್ಟದಷ್ಟು ಬೆಂಬಲ ನೀಡಿದ್ದಾರೆ ಎಂದು ಸಮರ್ಥಿಸಿಕೊಂಡರು.

ಹಸ್ತಕ್ಷೇಪ ನಡೆಯಲೇ ಇಲ್ಲ, ಭಿನ್ನಾಭಿಪ್ರಾಯ ಇರಲೇ ಇಲ್ಲವೆಂದು ಪ್ರತಿಭಟಿಸುವ ಗೋಜಿಗೆ ಅವರು ಹೋಗಲಿಲ್ಲ. ಅವರು ಹೇಳಿದ ಮೇಲೆ ಸರಿ ಮಾಡಿಕೊಂಡೆವು. ದೇಶಹಿತದ ದೃಷ್ಟಿಯಿಂದ ಹಸ್ತಕ್ಷೇಪ ಆದರೆ ತಪ್ಪೇನು ಎಂದು ಮರು ಪ್ರಶ್ನಿಸಿದರು. ಈ ವ್ಯವಸ್ಥೆ ಅತ್ಯಂತ ಫಲಪ್ರದವಾಗಿತ್ತು. ಹತ್ತು ವರ್ಷಗಳ ಅವಧಿಯನ್ನು ಯಾವುದೇ ತೊಂದರೆ ಇಲ್ಲದೆ ಪೂರ್ಣಗೊಳಿಸಲು ಸೋನಿಯಾ ನೀಡಿರುವ ಬೆಂಬಲ ಅಪಾರ ಎಂದು ಮನಮೋಹನ್‌ ಸಿಂಗ್ ಪತ್ರಕರ್ತರ ಪ್ರಶ್ನೆಯನ್ನು ಚಿವುಟಿ ಹಾಕಿದ್ದರು.

ಇದನ್ನೂ ಓದಿ ಮನಮೋಹನ್ ಸಿಂಗ್ ಎಂಬ ‘ಕುರಿಮರಿ’ಯ ಮುಂದೆ ಸೋತಿದ್ದ ‘ಉಕ್ಕಿನ ಮನುಷ್ಯ’ ಆಡ್ವಾಣಿ

ಉಮಾಪತಿ ಡಿ
ಡಿ ಉಮಾಪತಿ
+ posts

ಹಿರಿಯ ಪತ್ರಕರ್ತರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಿ ಉಮಾಪತಿ
ಡಿ ಉಮಾಪತಿ
ಹಿರಿಯ ಪತ್ರಕರ್ತರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

Download Eedina App Android / iOS

X