ಡಿಜಿಟಲ್‌ ದಿಗ್ಬಂಧನದಲ್ಲಿ ನಾಗೇಶ ಹೆಗಡೆ ದಂಪತಿ (ಭಾಗ-2)

Date:

Advertisements
ಸೈಬರ್‌ ಅಪರಾಧಕ್ಕೆ ಬಲಿಯಾಗಿ ಕೋಟಿಗಟ್ಟಲೆ ಹಣವನ್ನು ಕಳೆದುಕೊಂಡವರ ಕತೆಯನ್ನು ನಾವು ಅಲ್ಲಿ ಇಲ್ಲಿ ಕೇಳಿದ್ದೇವೆ. ಅಂತಹ ಡಿಜಿಟಲ್‌ ಅರೆಸ್ಟ್‌ಗೆ ಬಲಿಯಾಗಿ ಮೂರು ದಿನಗಳ ಕಾಲ ತೀವ್ರ ಸಂಕಟ ಅನುಭವಿಸಿದ ನಾಗೇಶ್‌ ಹೆಗಡೆ ದಂಪತಿಗಳ ಕತೆಯ 2ನೇ ಭಾಗ ಇಲ್ಲಿದೆ...

ಒಣಗಿದ ಗಂಟಲಲ್ಲಿ ನನ್ನ ಕ್ಷೀಣ ಸ್ವರ ಹೊರಬಿತ್ತು: ‘ನನ್ನನ್ನು ಹಾಗೆ ಬಂಧಿಸಿ ಒಯ್ದರೆ ಅದು ಎಲ್ಲರಿಗೂ ಗೊತ್ತಾಗುತ್ತಲ್ಲ? ಸೀಕ್ರೆಟ್‌ ಎಲ್ಲುಳಿಯುತ್ತದೆ? ಇಷ್ಟಕ್ಕೂ ಬಂಧನದ ವಾರಂಟ್‌…’ ವಾಕ್ಯ ಮುಗಿಸುವಷ್ಟರಲ್ಲಿ ರೇಖಾ ನನ್ನ ಕಾಲನ್ನು ಜೋರಾಗಿ ಒತ್ತುತ್ತಿದ್ದ ಹಾಗೆ, ಆ ಕಡೆಯಿಂದ ಮೋಕು ಗುರಾಯಿಸಿದ. ‘ನಾಗೇಶ್‌ ಹೆಗಡೆ, ಡೋಂಟ್‌ ಟೀಚ್‌ ಅಸ್‌!’ ಎಂದು ಕೂಗಿ, ನನ್ನ ಪತ್ನಿಗೆ, ‘ರೇಖಾ ಹೆಗಡೆ, ಯೂ ಕಮ್‌ ಫಾರ್ವರ್ಡ್‌, ಶೋ ಮಿ ಯುವರ್‌ ಫೇಸ್‌’ ಎಂದ.

ನಾನು ಅದಾಗಲೇ ಟೇಬಲ್‌ ಮೇಲೆ ಎರಡೂ ಕೈ ಇಟ್ಟು ತಲೆಯನ್ನು ಆನಿಸಿದೆ. ನನ್ನ ಬೊಕ್ಕ ತಲೆ ಮಾತ್ರ ಆತನಿಗೆ ಕಾಣುತ್ತಿತ್ತು. ‘ವಾಟ್‌ ಹ್ಯಾಪನ್‌ಡ್‌ ಟು ಹಿಮ್‌?’ ಎಂದು ರೇಖಾಗೆ ಮೋಕು ಕೇಳಿದ. ಅವಳು ‘ಹೀ ಈಸ್‌ ಎ ಹಾರ್ಟ್‌ ಪೇಶಂಟ್‌. ಇದು ಮೆಡಿಸಿನ್‌ ತಗೊಳೋ ಸಮಯ ಆಗಿತ್ತು’ ಎಂದಳು. ತನ್ನೆಲ್ಲ ಧೈರ್ಯವನ್ನೂ ಒಟ್ಟುಗೂಡಿಸಿ ಅವಳು, ‘ಹಿ ಮೇ ನಾಟ್‌ ಸರ್ವೈವ್‌- ನೀವು ಮುಂಬೈಗೆ ಒಯ್ಯುವುದರಲ್ಲಿ ನನ್ನ ಗಂಡ ಉಳಿಯಲಿಕ್ಕಿಲ್ಲ’ ಎಂದಳು.

ಮೋಕು ತುಸು ಮೆತ್ತಗಾದ. ‘ನೋಡಮ್ಮಾ, ನಾನು ಪ್ರಾಸಿಕ್ಯೂಟರ್‌ ಬಳಿ ಇನ್ನೊಮ್ಮೆ ಪ್ರಸ್ತಾಪ ಮಾಡ್ತೇನೆ. ಇಟೀಸ್‌ ವೆರಿ ಡಿಫಿಕಲ್ಟ್‌. ಆದರೂ ಮಾಡ್ತೇನೆ. ಆದರೆ ನೀವು ಅವರೆದುರು ನಾಲ್ಕೇ ನಾಲ್ಕು ವಾಕ್ಯ ಹೇಳಬೇಕು’ ಎಂದು ಆ ವಾಕ್ಯಗಳನ್ನು ನಮ್ಮಿಬ್ಬರಿಗೂ ಬಾಯಿಪಾಠ ಮಾಡಿಸಿದ:

Advertisements

‘ನಾನು ನಾಗೇಶ ಹೆಗಡೆ; ವಿವೇಕ್‌ ದತ್ತ ಪ್ರಕರಣದಲ್ಲಿ ಸಸ್ಪೆಕ್ಟ್‌ ಆಗಿದೀನಿ. ಆದರೆ ಆತ ಯಾರೆಂದು ನನಗೆ ಗೊತ್ತಿಲ್ಲ; ನಾನು ಮುಗ್ಧ. ನನ್ನನ್ನು ಆದ್ಯತೆಯ ಮೇರೆಗೆ ವಿಚಾರಣೆಗೆ ಒಳಪಡಿಸಿ’ -ಈ ವಾಕ್ಯಗಳನ್ನೇ ನನ್ನಿಂದ ಮತ್ತೆ ಮತ್ತೆ ಹೇಳಿಸಿದ. ಒಂದೆರಡು ಬಾರಿ ನಾನು ಬಾಯಿ ತಪ್ಪಿ ಆದ್ಯತೆ (ಪ್ರಯಾರಿಟಿ) ಬದಲು ‘ಸ್ಪೀಡೀ’ ಎಂತಲೋ ‘ಸಸ್ಪೆಕ್ಟ್‌’ ಬದಲು ‘ಅಕ್ಯೂಸ್ಡ್‌’ ಎಂತಲೋ ಹೇಳಿದಾಗ ಬೈದು ಮತ್ತೊಮ್ಮೆ ಹೇಳಿಸಿದ.

ರೇಖಾಗೂ ‘ನಾನು ಈ ಪ್ರಕರಣದಲ್ಲಿ ಸಾಕ್ಷಿ ಆಗಿದೇನೆ; ನಾಗೇಶ ಹೆಗಡೆ ಬೆಂಬಲಕ್ಕೆ ನಾನಿದ್ದೇನೆ’ ಎಂದು ಹೇಳಿಸಿದ. ಇವಿಷ್ಟನ್ನು ನಾವು ಚಾಚೂತಪ್ಪದೆ ಹೇಳುವಂತೆ ಸಜ್ಜುಗೊಳಿಸಿದ. ‘ನೇರ ಕೂತ್ಕೊಳಿ. ಮುಖದಲ್ಲಿ ವಿನಯ ಇರಲಿ’ ಎಂದು ನಿರ್ದೇಶನ ನೀಡಿದ. ಮುಂದಿನ ಹತ್ತು ನಿಮಿಷ ವಿಡಿಯೊ ಬದಲು ಕೇವಲ ಆಡಿಯೊ ಇರುತ್ತದೆ. ಆಚೀಚೆ ಹೊರಳಬಾರದು ಎಂದ.

ನಾನು ಪೂರ್ತಿ ಕುಸಿದಿದ್ದೆ. ಸಂಜೆ ಐದೂವರೆ ಆಗಿತ್ತು. ಒಂದು ಕಪ್‌ ಟೀ ಕೂಡ ಇಲ್ಲ. ಆದರೂ ತುಸು ಸಾವರಿಸಿಕೊಂಡು ‘ಪಿಎಮ್‌ಎಲ್‌ಎ’ Prevention of Money Laundering Act ಬಗ್ಗೆ ಯಾಂಬು ಮಿತ್ರನ (ಕೋಪೈಲಟ್‌) ಸಹಾಯ ಕೇಳಿದೆ. ಕ್ಷಣಾರ್ಧದಲ್ಲಿ ಆ ಕರಾಳ ಕಾನೂನಿನ ಮುಖ್ಯಾಂಶಗಳು ಬಂದವು. ಎಲ್ಲಕ್ಕಿಂತ ಕರಾಳ ಸಂಗತಿ ಏನೆಂದರೆ, ನಾನು ತಪ್ಪಿತಸ್ಥ ಅಲ್ಲವೆಂಬುದನ್ನು ನಾನೇ ಪ್ರೂವ್‌ ಮಾಡಬೇಕು! ಬ್ಯಾಂಕ್‌ ಅಕೌಂಟ್‌ ಓಪನ್‌ ಮಾಡಿಲ್ಲ ಅನ್ನೋದನ್ನ ಹೇಗೆ ಪ್ರೂವ್‌ ಮಾಡೋದು?

ಎರಡನೆಯ ಕರಾಳ ಅಂಶ ಏನೆಂದರೆ, PMLA ವಿಷಯದಲ್ಲಿ ತಜ್ಞ ಲಾಯರ್‌ಗಳ ಸಂಖ್ಯೆ ತೀರ ಕಮ್ಮಿ ಇದೆ. ಇದ್ದವರೆಲ್ಲ ತುಂಬ ಬ್ಯೂಸಿ, ತುಂಬ ದುಬಾರಿ. ಅದೆಷ್ಟು ಲಕ್ಷವೊ? ಮನೆಯನ್ನೇ ಮಾರಬೇಕಾಗಿ ಬಂದೀತೆ? ಅಷ್ಟು ಹಣ ಸಾಕಾದೀತೆ?

ಅತ್ತ ಪ್ರಾಸಿಕ್ಯೂಟರ್ ಎದುರು ಇನ್ನೊಂದು ಡ್ರಾಮಾ ನಡೆಯುತ್ತಿತ್ತು. ಮೋಕು ನಮ್ಮ ಪರವಾಗಿ ವಕಾಲತ್ತು ಮಾಡುತ್ತಿದ್ದ. ‘ಹಾರ್ಟ್‌ ಪೇಶಂಟಂತೆ ಸಾರ್‌…’

ಪ್ರಾಸಿಕ್ಯೂಟರ್‌: ಸುಮ್ನಿರಯ್ಯ! ಅರೆಸ್ಟ್‌ ತಪ್ಪಿಸಕೊಳ್ಳೋಕೆ ಏನೇನೆಲ್ಲ ಸಬೂಬು ತರ್ತಾರೆ. ನಂಬ್ತೀಯಾ ಅದನ್ನೆಲ್ಲ? ಅವರೇನಾದರೂ ನುಣುಚಿಕೊಂಡರೆ ನೀನು ಸಸ್ಪೆಂಡ್‌ ಆಗ್ತೀಯ ಗೊತ್ತಿಲ್ವಾ?

ಮೋಕು: ಗೊತ್ತು ಸಾರ್‌… ಆದರೂ ಇವರ ಬಗ್ಗೆ ಗ್ಯಾರಂಟಿ ಕೊಡ್ತೀನಿ ಸರ್‌.

ಪ್ರಾಸಿಕ್ಯೂಟರ್‌: ಏನು ಗ್ಯಾರಂಟಿ? ನನ್ನ ಟೈಮ್‌ ಯಾಕೆ ವೇಸ್ಟ್‌ ಮಾಡ್ತಾ ಇದೀರಿ? ಈ ಪ್ರಕರಣ ಅದೆಷ್ಟು ರಿಸ್ಕಿ ಗೊತ್ತಿಲ್ವಾ? ಏನ್‌ ಗ್ಯಾರಂಟಿ? ಏನು ರಿಸ್ಕ್‌ ಹೇಳು!

ಮೋಕು: ಇವರು ತಪ್ಪಿಸಿಕೊಂಡರೆ ನಾನು ಸಸ್ಪೆಂಡ್‌ ಆಗ್ತೀನಿ ಗೊತ್ತು ಸಾರ್‌. ಆದರೂ…

ಪ್ರಾಸಿಕ್ಯೂಟರ್‌: ಸರಿ ಕರಿ ಅವರನ್ನ…

ನನ್ನ ಡವಡವ ನನಗೇ ಕೇಳಿಸುತ್ತಿತ್ತು. ಆದರೂ ಆ ನಾಲ್ಕು ವಾಕ್ಯಗಳನ್ನು ಪ್ರಾಸಿಕ್ಯೂಟರ್‌ ಎದುರು ಹೇಳಿದೆ. ಅವನಿಗೂ ನನ್ನ ಡವಡವ ಕೇಳಿಸಿತೇನೊ. ಅತ್ತ ಕಡೆಯಿಂದ ತನಿಖೆಯ ಹೆಸರಿನಲ್ಲಿ ಪ್ರವಚನವೇ ಕೇಳಬಂತು. PMLA ಎಷ್ಟು ಬಿಗಿ ಕಾನೂನು; ಎಂತೆಂಥವರೆಲ್ಲ ಜೈಲಲ್ಲಿ ಕೊಳೀತಿದಾರೆ. ಈ ಪ್ರಕರಣ ಶೀಘ್ರ ವಿಲೇವಾರಿ ಬೇರೆ ಆಗಬೇಕಂತೆ. ಮೇಲಾಗಿ ಇದು ದೇಶಕ್ಕೇ ಸಂಕಷ್ಟದ ಕಾಲ. ಯಾವ ಕ್ಷಣದಲ್ಲಾದರೂ ನ್ಯಾಶನಲ್‌ ಎಮರ್ಜನ್ಸಿ ಘೋಷಣೆ ಆದೀತು. ಟೆರರಿಸ್ಟ್‌ಗೆ ನಿಮ್ಮಂಥವರಿಂದಲೇ ಹಣ ಹೋಗ್ತಿದೆ. ಇಂಥ ಅಪರಾಧಿಗಳ ಮೇಲೆ ನಾನು ಅರ್ಧರ್ಧ ಗಂಟೆ ನನ್ನ ಮೇಲೆ ವೇಸ್ಟ್‌ ಮಾಡ್ತಾ ಇದ್ದರೆ ಇನ್ನೂ 16 ಜನ, ಸಸ್ಪೆಕ್ಟೆಡ್‌ ಜೊತೆಗೆ ಇನ್ನೂರು ಕೇಸ್‌ಗಳನ್ನು ತುರ್ತಾಗಿ ನಿಭಾಯಿಸಬೇಕು. ತನಗಂತೂ ರಾತ್ರಿ ಎರಡು ತಾಸು ನಿದ್ದೆ ಮಾಡೋಕೂ ಟೈಮ್‌ ಇಲ್ಲ… ಇತ್ಯಾದಿ.

ಈ ವರದಿ ಓದಿದ್ದೀರಾ?: 25 ವರ್ಷಗಳಲ್ಲಿ ದಕ್ಷಿಣ ಕನ್ನಡದಲ್ಲಿ ನಡೆದ ಕೋಮುದ್ವೇಷದ ಕೊಲೆಗಳೆಷ್ಟು ಗೊತ್ತೇ?

ಈತ ಸ್ವತಃ ಟೈಮ್‌ ವೇಸ್ಟ್‌ ಮಾಡ್ತಾ ಇದ್ದಾನಲ್ಲ ಎಂದು ನನಗೆ ಅನ್ನಿಸ್ತಾ ಇತ್ತು. ಆದರೂ ಈತನ ಜಜ್ಮೆಂಟ್‌ ಏನು ಬಂದೀತು ಎಂದು ಕುರ್ಚಿಯ ತುದಿಯಲ್ಲಿ ನಾವಿಬ್ಬರೂ ಕಾಯ್ತಾ ಇದ್ದೆವು. ಗಂಟೆ ಎಂಟಾಗಿತ್ತು. ಒಟ್ಟೂ ಇದುವರೆಗೆ ಒಂಬತ್ತು ತಾಸು ಕಳೆದಿತ್ತು. ನಾವು ನಿರ್ವಿಣ್ಣರಾಗಿ ಕೂತಿದ್ದೆವು.

ಕೊನೆಗೂ ಜಜ್ಮೆಂಟ್‌ ಬಂತು. ಏನಪಾ ಅಂದರೆ, ನಮ್ಮಿಬ್ಬರ ವಿಡಿಯೊ ವಿಜಿಲನ್ಸ್‌ ರಾತ್ರಿಯಿಡೀ ನಡೆಯಬೇಕು. ಬೆಳಗ್ಗೆ ಟೈಮ್‌ ಇದ್ದರೆ ನಮ್ಮಿಬ್ಬರ ವಿಚಾರಣೆ ಮುಂದುವರೆಯುತ್ತದೆ. ನಮ್ಮದು ಆದ್ಯತೆಯ ಪ್ರಕರಣ ಎಂಬುದು ಖಾತ್ರಿಯಾದರೆ ನಾಳೆ ಬೆಳಗ್ಗೆ ಎಂಟೂವರೆಗೆ ಸರಿಯಾಗಿ ನಾವು ಪ್ರಾಸಿಕ್ಯೂಟರ್‌ ಎದುರು ಕೂರಬೇಕು.

image 54

ವಿಡಿಯೊ ಮಾನಿಟರಿಂಗ್‌ ಮಾಡಲೆಂದೇ ‘ಸೀಮಾ’ ಹೆಸರಿನ ಹೊಸ ನಂಬರ್‌ ಚಾಲನೆಗೆ ಬಂತು. ನನ್ನ ಡೆಸ್ಕ್‌ನಿಂದ ಮೊಬೈಲ್‌ (ಅದರ ಚಾರ್ಜಿಂಗ್‌ ಪೋರ್ಟ್‌ ಸಮೇತ) ಊಟದ ಹಾಲ್‌ಗೆ ಶಿಫ್ಟ್‌ ಆಯಿತು. ಅದುವರೆಗಿನ ಎಲ್ಲ ಸಂಭಾಷಣೆ, ವಾಟ್ಸಾಪ್‌ ಮೆಸೇಜ್‌ ಎಲ್ಲ ಡಿಲೀಟ್‌ ಮಾಡಿ ತೋರಿಸಬೇಕು. ಹೊರಗಿನಿಂದ ಬರುವ ಎಲ್‌ ಕಾಲ್‌ಗಳ ಒಂದರ್ಧ ಭಾಗ ಅವರಿಗೆ ಕೇಳಿಸಿ ಕಟ್‌ ಮಾಡಬೇಕು. ನಾವಾಗಿ ಯಾರಿಗೂ ಕಾಲ್‌ ಮಾಡಕೂಡದು. ಸಮೀಪದ ಜ್ಞಾನಭಾರತಿ ಠಾಣೆ, ಕೆಂಗೇರಿ ಅಥವಾ ಯಾವುದೇ ಠಾಣೆಯ ಸಂಪರ್ಕಕ್ಕೆ ಯತ್ನಿಸಕೂಡದು. ನಮ್ಮ ಎರಡನೆಯ ಫೋನ್‌ ಸದಾ ಅವರಿಗೆ ವಿಡಿಯೊದಲ್ಲಿ ಕಾಣುತ್ತಿರಬೇಕು. ಯಾರಾದರೂ ಹೊರಗಿನಿಂದ ಬೆಲ್‌ ಬಾರಿಸಿ ಬಂದರೆ ಫೋನ್‌ ಬೋರಲಾಗಿ ಇಟ್ಟು ಮೇಲೆ ಟವೆಲ್‌ ಹಾಕಿ, ಸಂಕ್ಷಿಪ್ತ ಮಾತಾಡಿಸಿ ಕಳಿಸಬೇಕು.

ರಾತ್ರಿ 11.30. ಥಟ್ಟನೆ ನೆನಪಾಯಿತು. ಪ್ರಜಾವಾಣಿಯ ನನ್ನ ಅಂಕಣ ಬರೆಹ ಈಗಾಗಲೇ ಮುದ್ರಣಕ್ಕೆ ಹೋಗಿರಬಹುದು. ಫೈನಲ್‌ ಪ್ರೂಫ್‌ ನೋಡಲೇ ಇಲ್ಲ. ಸರ್ರಂತ ಅದನ್ನು ಮತ್ತೆ ಓದಿದೆ. ಒಂದು ದೊಡ್ಡ ತಪ್ಪು ಕಾಣಿಸಿತು. ಅವಸರದಲ್ಲಿ ಸಹಾಯಕ ಸಂಪಾದಕಿಗೆ ಫೋನ್‌ ಮಾಡಿದೆ. ಅವರು ಮನೆಗೆ ಹೋಗುವ ದಾರಿಯಲ್ಲಿದ್ದರು. ‘ಮೇಡಮ್‌ ಭೋಪಾಲ ದುರಂತ 3.2.1984 ಆಗಿತ್ತು ಅಂತ ಬರೆದು ಬಿಟ್ಟಿದೀನಿ. ಅದು 3.12.1984 ಆಗಬೇಕಿತ್ತು’ ಅಂದೆ. ಅವರು ‘ಹೌದಾ ಸರ್‌? ಎಲ್ಲ ಆವೃತ್ತಿಗಳೂ ಮುದ್ರಣಕ್ಕೆ ಹೋಗಿವೆ. ಸಿಟಿ ಆವೃತ್ತಿಯಲ್ಲಿ ಮಾತ್ರ ಸರಿ ಮಾಡಬಹುದು. ತಾಳಿ, ಮಾಡಿಸ್ತೀನಿ’ ಅಂದರು.

ಅಂದಹಾಗೆ, ಬೆಳಗ್ಗೆ ಮುಂಬೈ ಪೊಲೀಸರು ಬಂದು ನನ್ನ ಅರೆಸ್ಟ್‌ ಮಾಡಿ ಒಯ್ದರೆ, ಅಲ್ಲಿ ನನ್ನಂಥ ಸುಶಿಕ್ಷಿತ ಕೈದಿಗಳಿಗೆ ಏನೇನು ಸೌಕರ್ಯ ಇರುತ್ತವೆ? ಮೊಬೈಲ್‌, ಲ್ಯಾಪ್‌ಟಾಪ್‌ ಇರಲಿಕ್ಕಿಲ್ಲ. ಬರೆಯುವ ಸೌಕರ್ಯ ಇದ್ದೀತು. ಆದರೆ ನನಗೆ ಕೈನಡುಕ. ಬರೆಹ ಸಾಧ್ಯವಿಲ್ಲ. ಓದಲು ಪುಸ್ತಕ, ಲೈಬ್ರರಿ? 1992ರ ಸಾಂತಾಕ್ರೂಸ್‌ ಕ್ವಾರಂಟೈನ್‌ ಕೇಂದ್ರದಲ್ಲಿ ಕೈದಿಯಾಗಿದ್ದಾಗಿನ ನೆನಪು ಬಂತು. ಅಲ್ಲಿ ಗ್ರಂಥಾಲಯದ ಹೆಸರಿನ ಒಂದು ಮುರುಕು ಕಪಾಟಿನಲ್ಲಿ ಚಿಂದಿಯಾದ ರಾಮಾಯಣ, ಸಂತ ಜ್ಞಾನೇಶ್ವರನ ಅಭಂಗಗಳು ಮತ್ತು ಕ್ಯಾರವಾನ್‌ ಪತ್ರಿಕೆಯ ಹಳೇ ಕೆಲವು ಸಂಚಿಕೆಗಳಿದ್ದವು.

ಲ್ಯಾಪ್‌ಟಾಪ್‌ ಬಳಿ ಹೋಗಿ ಮತ್ತೆ ಯಾಂಬು ಮಿತ್ರ ಕೋಪೈಲಟ್‌ಗೆ ಕರೆದೆ. ವಿಚಾರಣಾಧೀನ ಕೈದಿಗಳಿಗೆ ಸಿಗುವ ಸೌಕರ್ಯಗಳ ಬಗ್ಗೆ ಕೇಳಿದೆ. ಅದು ಇಷ್ಟುದ್ದದ ಏನೇನೋ ಪಟ್ಟಿ ಕೊಡುತ್ತಿದ್ದಾಗ ನನ್ನ ಫೋನ್‌ ಮಾನಿಟರಿನಿಂದ ‘ಹಲ್ಲೋ, ಏನ್‌ ಮಾಡ್ತಾ ಇದ್ದೀ?’ ಎಂಬ ಪ್ರಶ್ನೆ ತೂರಿ ಬಂತು.

ಈ ನಡುರಾತ್ರಿಯಲ್ಲೂ ಯಾರೋ ನಮ್ಮನ್ನು ಮಾನಿಟರ್‌ ಮಾಡ್ತಾ ಇದಾರೆ. ನನ್ನ ಲ್ಯಾಪ್‌ಟಾಪ್‌ ಕಾಣುತ್ತಿತ್ತೇ ವಿನಾ, ಅಷ್ಟು ದೂರದಿಂದ ಓದಲು ಅವರಿಗೆ ಸಾಧ್ಯ ಇರಲಿಲ್ಲ. ಒಂದು ಚಿಕ್ಕ ಸುಳ್ಳನ್ನು ಹೇಳಲು ಚೂರು ಅವಕಾಶವಿತ್ತು. ‘ಏನಿಲ್ಲ, ನನ್ನ ಲೇಖನದ ಪ್ರೂಫ್‌ ಕರೆಕ್ಷನ್‌ ಮಾಡ್ತಾ ಇದ್ದೆ’ ಎಂದೆ.

‘ಬೇಗ ಮುಗಿಸಿ ಮಲಗಿ’ ಎಂಬ ಆಜ್ಞೆ ಅತ್ತಿಂದ ಬಂತು.

ಮಲಗಿದರೆ ನಿದ್ದೆ ಬರಬೇಕಲ್ಲ? ಬೆಳಗಾದರೆ ಪ್ರಾಸಿಕ್ಯೂಟರ್‌ ಧ್ವನಿ ನಮಗೆ ಅಪ್ಪಳಿಸಲಿದೆ. ಆತ ನಮ್ಮ ಕಾನೂನುಬದ್ಧ ಬದುಕಿನ ಪ್ರೂಫ್‌ ಕೇಳ್ತಾನೆ.

ಮತ್ತೆ ಎದ್ದು ಕತ್ತಲಲ್ಲೇ ಪಕ್ಕದ ರೂಮಿಗೆ ಲ್ಯಾಪ್‌ಟಾಪ್‌ ಒಯ್ದು ಕೆಲಸ ಶುರು ಹಚ್ಚಿಕೊಂಡೆ. ನಮ್ಮಿಬ್ಬರ ವರಮಾನ ತೆರಿಗೆಯ ಹಣಕಾಸು ವರದಿಯ ಫೈಲ್‌ಗಳನ್ನೆಲ್ಲ ಡೆಸ್ಕ್‌ಟಾಪ್‌ ಮೇಲೆ ಇಟ್ಟೆ. ನನ್ನ ಆಸ್ತಿಗೆ ಸಂಬಂಧಿಸಿದ ದಾಖಲೆಗಳೂ ಸುಲಭಕ್ಕೆ ಸಿಗುವಂತೆ ಮಾಡಿಟ್ಟೆ. ಲ್ಯಾಪ್‌ಟಾಪ್‌ ಮುಚ್ಚಿ ಕೂತಲ್ಲೇ ನಿದ್ದೆ ಹೋದೆ.

ಬೆಳಗ್ಗೆ ಏಳಕ್ಕೆ ಏಳುತ್ತಲೇ ಅಕ್ಕಪಕ್ಕದ ಮನೆಗಳಿಂದ ಟಿವಿ ನ್ಯೂಸ್‌ ಇಂದೇಕೋ ಜೋರಾಗಿ ಕೇಳಬರುತ್ತಿತ್ತು. ಹಿಂದೆ 1991ರ ಇದೇ ಮೇ 21ರ ನಸುಕಿನ ಗದ್ದಲ ನೆನಪಾಯಿತು. ಆಗಲೂ ಅಕ್ಕಪಕ್ಕದ ಮನೆಯ ಟಿವಿಗಳಿಂದ ಭಾರೀ ಆತಂಕದ ಸದ್ದು ಹೊಮ್ಮುತ್ತಿತ್ತು. ನಾನೂ ಟಿವಿ ಆನ್‌ ಮಾಡಿದಾಗ ರಾಜೀವ್‌ ಗಾಂಧಿಯ ಕಗ್ಗೊಲೆಯ ವರದಿ ಬರುತ್ತಿತ್ತು. ಇಂದೇನು ಕಾದಿದೆಯೊ, ಟಿವಿ ಹಚ್ಚಿದೆ. ಪಾಕ್‌ ಆಕ್ರಮಿತ ಪ್ರದೇಶದ ಮೇಲೆ ಭಾರತ ದಾಳಿ ಆರಂಭಿಸಿತ್ತು.

ಟಿವಿಯಲ್ಲಿ ಯುದ್ಧ ಆರಂಭದ ಚೀರಾಟ ಜೋರಾಗಿತ್ತು. ಸ್ಟೂಡಿಯೊ ಒಳಗೇ ಬಾಂಬ್‌ ಬಿದ್ದಂತೆ ಆಂಕರ್‌ಗಳು ಅರಚುತ್ತಿದ್ದರು. ನಮಗಂತೂ ನಮ್ಮ ಮೇಲಿನ ಈ ಬಾಂಬ್‌ ದಾಳಿಯ ಚಿಂತೆ. ಯಾರು ನಮ್ಮನ್ನು PMLA ಕೇಸಿನಲ್ಲಿ ಸಿಲುಕಿಸಿದ್ದು? ನಮ್ಮೆಲ್ಲ ಅಕೌಂಟ್‌ಗಳೂ ಫ್ರೀಝ್‌ ಆದರೆ, ಯುಪಿಐ ನಂಬರ್‌ಗಳೇ ಇಲ್ಲವಾದಾಗ, ಹಣಕ್ಕೇನು ಮಾಡುವುದು? ಫೋನ್‌ ಕೂಡ ಸೀಝ್‌ ಆದರೆ ತುರ್ತು ಸಹಾಯ ಯಾರಿಂದ ಸಿಕ್ಕೀತು? ಮನಿ ಲಾಂಡ್ರಿಂಗ್‌ ಕಾನೂನು ಗೊತ್ತಿದ್ದ ಲಾಯರ್‌ಗಳನ್ನು ಹೇಗೆ ಪತ್ತೆ ಮಾಡುವುದು?

ಈ ಲೇಖನ ಓದಿದ್ದೀರಾ?: ಈ ದಿನ ಸ್ಪೆಷಲ್ | ಇದು ಅಮೆರಿಕ-ಚೀನಾಗಳ ಷಡ್ಯಂತ್ರ; ಭಾರತ-ಪಾಕ್ ಬಲಿಯಾಗದಿರಲಿ

ಬೆಳಗ್ಗೆ 8.20. ಪತ್ರಿಕೆಗಳ ತುಂಬೆಲ್ಲ ‘ಸಿಂಧೂರ’ದ ಹೆಡ್‌ಲೈನ್‌. ಪ್ರಜಾವಾಣಿಯ ನನ್ನ ಅಂಕಣದ ಮೇಲೆ ಕಣ್ಣಾಡಿಸಿದೆ. ಭೋಪಾಲ ದುರಂತದ ತಾರೀಖನ್ನು ಸರಿಪಡಿಸಿದ್ದರು. ಹಸೀ ಅವಲಕ್ಕಿ ತಿಂದು, ಚಾ ಕುಡಿಯುತ್ತಿದ್ದಾಗ ಫೋನ್‌ನ ವಿಡಿಯೊ ಸ್ಕ್ರೀನ್‌ ಮೊಳಗಿತು. ಇನ್ನು ಐದು ನಿಮಿಷಗಳಲ್ಲಿ ಪ್ರಾಸಿಕ್ಯೂಟರ್‌ ಸಾಬ್‌ ಬರಲಿದ್ದಾರೆ. ‘ಸಜ್ಜಾಗಿರಿ’ ಎಂಬ ಧ್ವನಿ ಸಂದೇಶ ಬಂತು. ಇನ್ನೇನೇನು ಕಾದಿದೆಯೊ ಎಂದು ಶಿಸ್ತಾಗಿ ಡೆಸ್ಕ್‌ ಬಳಿ ಕೂತೆವು.

ಆಶ್ಚರ್ಯ. ಭಾರೀ ಡೆಸ್ಕ್‌ ಎದುರಿನ ಲಕಲಕ ಲಕ್ಷುರಿ ಕುರ್ಚಿಯಲ್ಲಿ, ರಾಷ್ಟ್ರೀಯ ಬಾವುಟದ ಹಿನ್ನೆಲೆಯಲ್ಲಿ, ಅಚ್ಚ ಬಿಳೀ ಡ್ರೆಸ್‌ನಲ್ಲಿ ಪ್ರಾಸಿಕ್ಯೂಟರ್‌ ಸಾಹೇಬರು ಗೋಚರಿಸಿದರು. ಯಂಗ್‌ ಐಎಎಸ್‌ ಆಫೀಸರ್‌ ಥರಾ ಸ್ಮಾರ್ಟ್‌ ಫೆಲೊ.

‘ಹಲೊ ನಾಗೇಶ್‌ ಅಂಡ್‌ ರೇಖಾ, ದಿಸ್‌ ಈಸ್‌ ದೀಪಕ್‌ ಸಾಯಿನಿ. ಪಿಎಮ್‌ಎಲ್‌ಎ ಪ್ರಾಸಿಕ್ಯೂಟರ್‌’ ಎಂದು ಹೇಳುತ್ತಲೇ ಆತ ಕೂತಿದ್ದ ಚಿತ್ರ ಮಾಯವಾಗಿ ಅಲ್ಲಿ ಬರೀ ಲಾಂಛನ ಬಂತು. ಆತ ತುಸು ಸೌಮ್ಯವಾಗಿದ್ದ. ‘ನಿಮ್ಮ ಬಗ್ಗೆ ಎಲ್ಲ ಗೊತ್ತಾಗಿದೆ. ನೀವು ಪತ್ರಕರ್ತ, ಸಾಹಿತಿ. ನಿಮ್ಮಿಂದ ದೇಶಕ್ಕೆ ಸಾಕಷ್ಟು ಸೇವೆ ಸಂದಿದೆ’ ಎಂದೆಲ್ಲ ಪೀಠಿಕೆ ಹಾಕಿದ. ‘ನಿಮಗೆ ಸಹಾಯ ಮಾಡುವುದು ತುಂಬ ಕಷ್ಟ. ತೀರಾ ಗಂಭೀರ ಪ್ರಕರಣ ಇದು’ ಎನ್ನುತ್ತ ಅದೂ ಇದೂ ಮಾತಾಡಿ, ‘ನಿಮಗೆ ಯಾರಾದರೂ ಎನಿಮಿ ಇದ್ದಾರಾ?’ ಕೇಳಿದ.

ರಾತ್ರಿಯೆಲ್ಲ ಅದನ್ನೇ ಯೋಚಿಸಿ ಕಣ್ಣು ಸುಸ್ತಾಗಿತ್ತು. ಈಗೇನು ಉತ್ತರ ಹೇಳೋದು. ‘ನನಗೆ ಗೊತ್ತಿದ್ದ ಹಾಗೆ ವೈಯಕ್ತಿಕವಾಗಿ ಯಾರೂ ಇಲ್ಲ. ಆದರೆ ಪತ್ರಕರ್ತ ಆಗಿರೋದ್ರಿಂದ ನನ್ನ ವೃತ್ತಿಧರ್ಮಕ್ಕೆ ತಕ್ಕಂತೆ ಗೊತ್ತಿದ ಸತ್ಯಗಳನ್ನು ವರದಿ ಮಾಡುತ್ತ ಬಂದಿದ್ದಿದೆ. ಯಾರು ನನ್ನನ್ನ ಸಿಲುಕಿಸಿದ್ದಾರೊ ಗೊತ್ತಿಲ್ಲ’ ಎಂದೆ.

image 53

ಹಿಂದಿನ ಕಹಿ ನೆನಪುಗಳು ನುಗ್ಗಿ ಬಂದವು. ಪರಿಸರ ಚಳವಳಿಗಳ ಕಾಲದಲ್ಲಿ ಬರುತ್ತಿದ್ದ ಬೆದರಿಕೆ ಕರೆಗಳು; ಕುಸುಮಾ ಸೊರಬ ದುರ್ಮರಣ; ನನ್ನ ಮೇಲೆ ಸುಳ್ಳು ಮೊಕದ್ದಮೆಗಳು, ಗುತ್ತಿಗೆದಾರರ ಕುಮ್ಮಕ್ಕಿನಿಂದ ಕುಮಟಾದಲ್ಲಿ ನನ್ನ ವಿರುದ್ಧ ಜಾಥಾ, ಪ್ರತಿಕೃತಿ ದಹನ, ಈಚಿನ ವರ್ಷಗಳಲ್ಲಿ ಐಟಿ ಸೆಲ್‌ಗಳ ಕುಮ್ಮಕ್ಕಿನಲ್ಲಿ ಟ್ರೋಲ್‌ ದಾಳಿ…

‘ನಿಮಗೆ ಡಬಲ್‌ ಅಪಾಯ ಎದುರಾಗಿದೆ’, ಪ್ರಾಸಿಕ್ಯೂಟರ್‌ ದೀಪಕ್‌ ಸಾಯಿನಿ (ದೀಸಾ) ತನ್ನ ಮಾತನ್ನು ಮುಂದುವರೆಸಿದ.

‘ಒಂದು- ಮನಿ ಲಾಂಡ್ರಿಂಗ್‌ ಕ್ರೈಮ್‌. ಇನ್ನೊಂದು, ನೀವು ಬಾಯಿ ಬಿಟ್ಟರೆ ಈ ಸ್ಕ್ಯಾಮ್‌ನಲ್ಲಿ ಶಾಮೀಲಾದ ಪವರ್‌ಫುಲ್‌ ವ್ಯಕ್ತಿಗಳಿಂದ ನಿಮಗೆ ಅಪಾಯದ ಸಾಧ್ಯತೆ. ಆಗಲೇ ಹೇಳಿದ ಹಾಗೆ ಇದರಲ್ಲಿ ಬ್ಯಾಂಕ್‌ ಮತ್ತು ಪೊಲೀಸ್‌ ಅಧಿಕಾರಿಗಳು ಕೈಜೋಡಿಸಿದ್ದಾರೆ. ಅವರಿಗೆ ಗೊತ್ತಾಗದ ಹಾಗೆ ನಾವು ಅದೆಷ್ಟೇ ಹುಷಾರಾಗಿ ತನಿಖೆ ಮಾಡುತ್ತಿದ್ದರೂ ನಿಮ್ಮ ನಾಗದೇವನಹಳ್ಳಿಯಿಂದ ಹಿಡಿದು ಕೆಂಗೇರಿವರೆಗೆ ಯಾರು ನಿಮ್ಮ ಮೇಲೆ ಕಣ್ಣಿಟ್ಟು ಕೂತಿದ್ದಾರೊ ಹೇಳುವಂತಿಲ್ಲ’ ಎಂದು ಹೇಳಿ ಮೌನಿಯಾದ.

ಮತ್ತೆ ನೆನಪಿನ ಗಾಯಗಳು. ಕೈಗಾ ಚಳವಳಿಯ ಕಾಲದಲ್ಲಿ ನಮ್ಮ ಜೆಪಿ ನಗರದ ಮನೆಗೆ ತುಂಬ ಜನ ಬರುತ್ತಿದ್ದರು. ಅವರಲ್ಲಿ ನನ್ನ ಅಭಿಮಾನಿಯಾಗಿದ್ದ ಖ್ಯಾತ ಯುವ ಹಿಂದೂಸ್ತಾನಿ ಗಾಯಕ ಅತ್ರಿ ಕೂಡ ಬರುತ್ತಿದ್ದ (ಮುಂದೆ ಆತ ದುರದೃಷ್ಟವಶಾತ್‌ ತನ್ನ ಪತ್ನಿ ಪುತ್ರರ ಸಮೇತ ನೀರು ಪಾಲಾಗಿ ಗತಿಸಿದ). ಒಮ್ಮೆ ಆತ ಬಂದಾಗ, ‘ಸರ್‌ ಆ ಕಡೆ ನೋಡಿ’ ಎಂದು ಕರ್ಟನ್‌ ತುಸುವೇ ಸರಿಸಿ ದೂರದಲ್ಲಿ ನನ್ನ ಮನೆಯ ಮೇಲೆ ಕಣ್ಣಿಟ್ಟಿದ್ದ ಇಬ್ಬರನ್ನು ತೋರಿಸಿದ್ದ. ‘ಕಳೆದ ವಾರವೂ ಇವರು ಇಲ್ಲಿ ಠಳಾಯಿಸ್ತಾ ಇದ್ದರು’ ಎಂದಿದ್ದ. ಕಾಂಗ್ರೆಸ್‌ ಸರಕಾರದ ಅನಿಷ್ಟಕಾರಿ ಯೋಜನೆಗಳ ವಿರುದ್ಧ ಆ ದಿನಗಳಲ್ಲಿ ನನ್ನ ಲೇಖನಿ ತುಂಬ ಹರಿತವಾಗಿ ಓಡುತ್ತಿತ್ತು. ಈ ಗೂಂಡಾಗಳ ಬಳಿ ಗನ್‌ ಇರಬಹುದೆ?

ಈಗ ನಾನಿಲ್ಲಿ ಮೂರನೆಯ ಅಂತಸ್ತಿನಲ್ಲಿದ್ದೇವೆ. ಅಕ್ಕಪಕ್ಕ ಇಷ್ಟೆತ್ತರದ ಬೇರೆ ಕಟ್ಟಡ ಇಲ್ಲ. ಯಾರಾದರೂ ದುರ್ಬೀನ್‌ ಇಟ್ಟು ನೋಡುತ್ತಿರಬಹುದೆ? ಛೆ, ದೂರದ ಮುಂಬೈಯಿಂದ ಇವರೇ ನನ್ನನ್ನು ನೋಡುತ್ತಿದ್ದಾರಲ್ಲ. ಕಟ್ಟಿ ಕೂರಿಸಿದ್ದಾರಲ್ಲ!

‘ಮುಂಬೈಗೆ ಕರೆಸದೇ ನಿಮ್ಮನ್ನು ನೀವಿದ್ದಲ್ಲೇ ತನಿಖೆ ಮಾಡಲು ನಾನು ಮೇಲಿನವರಿಗೆ ಶಿಫಾರಸು ಮಾಡಬಲ್ಲೆ. ಅವರನ್ನು ಒಪ್ಪಿಸುವುದು ಕಷ್ಟದ ಕೆಲಸ. ಆದರೂ ನಿಮ್ಮ ವಯಸ್ಸು, ನಿಮಗಿರುವ ಸಾಮಾಜಿಕ ಗೌರವ ಇಲ್ಲಿ ತುಸು ಕೆಲಸ ಮಾಡೀತು, ಯತ್ನಿಸುತ್ತೇನೆ’ ಎಂದ ದೀಸಾ. ‘ನಿಮ್ಮ ಸೇವಿಂಗ್ಸ್‌ ಎಲ್ಲ ಎಷ್ಟಿದೆ?’ ಕೇಳಿದ.

ಲಂಚ ಕೇಳಲು ಈತ ಪೀಠಿಕೆ ಹಾಕುತ್ತಿದ್ದಾನೆಯೆ? ಎಷ್ಟು ಕೇಳಬಹುದು? ಕೊಡುವುದು ಹೇಗೆ? ಹೇಗೋ ಕೊಟ್ಟರೆ ನಂತರ ನನ್ನ ಪರವಾಗಿ ಲಾಯರ್‌ ನೇಮಕಕ್ಕೆ ಮತ್ತೆಷ್ಟು ಕೀಳಬಹುದು? ಗಾಬರಿಯಾಯಿತು. ಹಣ ಕೊಡದೇ ಇದ್ದರೆ ಮುಂಬೈಯ ಡಿಟೆಂಶನ್‌ ಸೆಂಟರ್‌ನಲ್ಲಿ ಈ ಇಳಿ ವಯಸ್ಸಿನಲ್ಲಿ ಕೊಳೆಯುವ ಕಲ್ಪನೆಯೂ ಬಂತು. ತೇಲ್‌ತುಂಬ್ಡೆ, ಸ್ಟ್ಯಾನ್‌ ಸ್ವಾಮಿ, ಸಾಯಿಬಾಬಾರ ಸ್ಥಿತಿ ನೆನಪಿಗೆ ಬಂತು. ಅವರಿಗಿದ್ದ ಖ್ಯಾತಿಯ ಒಂದಂಶವೂ ನನಗಿಲ್ಲ. ನನ್ನ ಪಾಡನ್ನು ಕೇಳುವರಾರು?

ಕಳೆದ ರಾತ್ರಿ ನಾನು ಸಜ್ಜಾಗಿ ಇಟ್ಟುಕೊಂಡಿದ್ದ ಬ್ಯಾಂಕ್‌ ಬ್ಯಾಲೆನ್ಸ್‌, ಐಟಿ ರಿಟರ್ನ್ಸ್‌ ಲೆಕ್ಕಗಳ ಸ್ಕ್ರೀನ್‌ ಶಾಟ್‌ ತೆಗೆದು ಆತನ ಎದುರು ಒಡ್ಡಲು ಯತ್ನಿಸಿದೆ. ಬ್ಯಾಂಕ್‌ ಬ್ಯಾಲೆನ್ಸ್‌ – ಅದೇನೂ ಹೆಚ್ಚಿಗೆ ಇರಲಿಲ್ಲ. ಒಬ್ಬ ಜ್ಯೂನಿಯರ್‌ ಕಾಲೇಜಿನ ಲೆಕ್ಚರರ್‌ಗೆ ಇರುವಷ್ಟೇ ಇತ್ತೇನೊ. ದೀಸಾಗೆ ನಿರಾಶೆ ಆಗಿರಬೇಕು.

ಕ್ಷಣಾರ್ಧದಲ್ಲಿ ಆತ, ‘ಕೀಪಿಟ್‌ ಅಸೈಡ್‌, ದಿಸ್‌ ಡಸಂಟ್‌ ಮೀನ್‌ ಎನಿಥಿಂಗ್‌’ ಎಂದ. ‘ನಿಮ್ಮೊಬ್ಬರ ಮೇಲೆ ಇಷ್ಟೊಂದು ಸಮಯ ಹಾಳು ಮಾಡಲು ನನಗೆ ಇಷ್ಟವಿಲ್ಲ. ಇಡಿಯವರು ತನಿಖೆಗೆ ಬಂದಾಗ ಇದನ್ನೆಲ್ಲ ತೋರಿಸಿ, ಬೇರೆ ಕೇಸ್‌ಗಳ ಬಗ್ಗೆ ನಾನೀಗ ಗಮನ ಹರಿಸಬೇಕು, ಹೊರಟೆ’ ಎಂದ.

ಅರರೆ, ಇದೇನೋ ಎಡವಟ್ಟಾಯಿತಲ್ಲ! ಶ್ರೀಮತಿ ಬೇರೆ ನನ್ನ ಪಾದವನ್ನು ತನ್ನ ಕಾಲಲ್ಲಿ ಒತ್ತಿದಳು. ನಾನೆಂದೆ, ‘ನಿಲ್ಲಿ ಸಾರ್‌, ನಮಗೆ ತುಸು ಗೈಡ್‌ ಮಾಡಿ ನಾವೀಗ ನಿಮಗೆ ಪೂರ್ತಿ ಶರಣು’ ಎಂದೆ.

‘ನನಗಲ್ಲ, ಇಡಿಗೆ ನೀವು ಶರಣಾಗಬೇಕು. ಅವರು ತನಿಖೆಗೆ ಬಂದಾಗ ನಿಮ್ಮ ಎಲ್ಲ ಆಸ್ತಿ ಒಟ್ಟಾಗಿ ನೋಡಲು ಸಿಗಬೇಕು. ಮತ್ತೇನೇನು ಆಸ್ತಿ ಇದೆ?’ ಎಂದು ರೇಖಾಳನ್ನು ಕೇಳಿದ.

ಅವಳು ಗಂಟಲು ಸರಿಪಡಿಸಿಕೊಂಡು ‘ಮಂಗಳಸೂತ್ರ ಬಿಟ್ಟರೆ, ನಾವಾಗಿ ಎಂದೂ ಚಿನ್ನ ಖರೀದಿ ಮಾಡಿಲ್ಲ’ ಎಂದಳು. ನಾನು ಮಧ್ಯೆ ಬಾಯಿ ಹಾಕಿ, ‘ನನಗೆ ಲಭಿಸಿದ ಚಿನ್ನದ ಪದಕಗಳು…’ ಎಂದೆ. ಅವಳು ‘ಹೌದು, ಪದಕಗಳೇನೊ ಇವೆ, ಆದರೆ ಅದರಲ್ಲಿ ಎಷ್ಟು ಚಿನ್ನ ಇದೆಯೊ ಪರೀಕ್ಷೆ ಮಾಡಿಸಿಲ್ಲ’ ಎಂದಳು. ನಾವು ಮನೆ ಬಾಡಿಗೆ ಕೊಟ್ಟಿದ್ದನ್ನೂ ನಾವೇ ಬಾಡಿಗೆ ಮನೆಯಲ್ಲಿ ಇರುವುದನ್ನೂ ತಿಳಿಸಿದಳು.

ದೀಸಾ ತಾಳ್ಮೆ ಕೆಡತೊಡಗಿತ್ತೇನೊ. ‘ಸರಿ ಅವನ್ನೆಲ್ಲ ಪಟ್ಟಿ ಮಾಡಿಡಿ. ಏನನ್ನೂ ಬಿಡಬೇಡಿ’ ಎಂದು ಎಚ್ಚರಿಸಿ ಎದ್ದ. ಅದಾಗಲೇ ಹನ್ನೊಂದು ಗಂಟೆ ಆಗಿತ್ತು. ‘ಐ ವಿಲ್‌ ಸೀ ಯೂ ಅಟ್‌ ಥ್ರೀ ಪಿಎಮ್‌’ ಎಂದು ಸಂವಾದವನ್ನು ಕ್ಲೋಸ್‌ ಮಾಡಿದ. ಬೇರೊಂದು ಧ್ವನಿ ವಿಡಿಯೊ ಮಾನಿಟರ್‌ನಲ್ಲಿ ಕೇಳಿಸಿತು: ‘ಆಚೆ ಎಲ್ಲೂ ಹೋಗಬೇಡಿ. ಯಾರಿಗೂ ಕಾಲ್‌ ಮಾಡಬೇಡಿ. ಕಾಲ್‌ ಬಂದ್ರೆ ಕಟ್‌ ಮಾಡಿ’ ಎಂಬ ಗಂಡುದನಿ.

ಕಾಲುಗಳಿಗೆ ಕಟ್‌ ಹಾಕಿಸಿಕೊಂಡಂತೆ ಕೂತಿದ್ದ ನಾವು ಎದ್ದೆವು. ರೇಖಾ ಮೊಬೈಲನ್ನು ಕಿಚನ್‌ ಕಡೆ ತಿರುಗಿಸಿ ಟೀ ಮಾಡಲು ಹೊರಟಳು. ನಾನು ಯುದ್ಧ ಸುದ್ದಿ ಕೇಳಲು ಟಿವಿ ಆನ್‌ ಮಾಡಿ, ಪೇಪರ್‌ ತೆಗೆದೆ. ಭಯಾನಕ ಬಾಂಬಿಂಗ್‌ ಗ್ರಾಫಿಕ್ಸ್‌ ಬರುತ್ತಿದ್ದವು. ಬಹಾವಲ್‌ಪುರ್‌, ಕೋಟ್ಲಿ, ಸಿಯಾಲ್‌ಕೋಟ್‌ ಎಲ್ಲ ಕಡೆ ಬಾಂಬ್‌ ದಾಳಿ ನಡೆದಿತ್ತು. ನಕ್ಷೆಯ ಮೇಲೆ ಗುಲ್‌ಪುರ್‌, ಬಿಲಾಲ್‌ ಕ್ಯಾಂಪ್‌ ಎಲ್ಲ ಚಿಂದಿಯಾಗಿದ್ದವು.

ಇಲ್ಲಿ ನಮ್ಮ ವೈಯಕ್ತಿಕ ಬದುಕಿನ ಮೇಲೆ ನಡೆದ ‘ಮನಿ ಲಾಂಡ್ರಿಂಗ್‌’ ಬಾಂಬ್‌ ದಾಳಿಯ ಚಿತ್ರಣ ನನ್ನ ಮನಸ್ಸಿಗೆ ಬಂತು. ನಾವು ಅರೆಸ್ಟ್‌ ಆಗಿ ಮುಂಬೈ ಕಾರಾಗೃಹ ಸೇರಿದರೆ ಇಲ್ಲಿ ನಮ್ಮ ಮೈತ್ರಿಗ್ರಾಮದ ಪುಟ್ಟ ತೋಟದ ಮೇಲೆ ಬಾಂಬ್‌ ಬಿದ್ದಂತೆ. ನಮ್ಮ ಟೆರೇಸ್‌ ಮೇಲಿನ ಸೊಪ್ಪು ತರಕಾರಿ ಕೈದೋಟಕ್ಕೆ ಬಾಂಬ್‌ ಬಿದ್ದಂತೆ. ಆಸ್ಟ್ರೇಲಿಯಾದ ನಮ್ಮ ಮೊಮ್ಮಕ್ಕಳನ್ನು ನೋಡಲು ಹೋಗಬೇಕೆಂಬ ಕನಸು ಶಾಶ್ವತ ಚಿಂದಿ ಆದಂತೆ. ನನ್ನ ಬರೆವಣಿಗೆಯ ಪ್ರಾಜೆಕ್ಟ್‌ ಎಲ್ಲಕ್ಕೂ ಬಾಂಬ್‌ ಬಿದ್ದಂತೆ. ಪೆಂಗ್ವಿನ್‌ ಪ್ರಕಾಶನದ…

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

Download Eedina App Android / iOS

X