ಸೈಬರ್ ಅಪರಾಧಿಗಳು ಮತ್ತು ವಂಚಕರು 2024ರಲ್ಲಿ ಭಾರತೀಯರ 22,842 ಕೋಟಿ ರೂ.ಗಳನ್ನು ಕದ್ದಿದ್ದಾರೆ ಎಂದು ದೆಹಲಿ ಮೂಲದ ಮಾಧ್ಯಮ ಮತ್ತು ತಂತ್ರಜ್ಞಾನ ಕಂಪನಿ ಡೇಟಾಲೀಡ್ಸ್ ತನ್ನ ವರದಿಯಲ್ಲಿ ತಿಳಿಸಿದೆ.
ಡೇಟಾಲೀಡ್ಸ್ ಬಿಡುಗಡೆ ಮಾಡಿರುವ ‘ಡಿಜಿಟಲ್ ಹಣಕಾಸು ವಂಚನೆ’ಗಳ ಕುರಿತ ವರದಿಯಲ್ಲಿ, ಇಂಡಿಯನ್ ಸೈಬರ್ ಅಪರಾಧ ಸಮನ್ವಯ ಕೇಂದ್ರದ ಅಂದಾಜಿನ ಪ್ರಕಾರ 2025ರಲ್ಲಿ ಭಾರತೀಯರು 1.2 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಕಳೆದುಕೊಳ್ಳಲಿದ್ದಾರೆ ಎಂಬುದಾಗಿ ಭವಿಷ್ಯ ನುಡಿದಿರುವುದಾಗಿ ತಿಳಿಸಿದೆ.
2022ರಲ್ಲಿ ಭಾರತೀಯರು ಡಿಜಿಟಲ್ ಅಪರಾಧಿಗಳು ಮತ್ತು ವಂಚಕರಿಂದ 2,306 ರೂ. ಕಳೆದುಕೊಂಡಿದ್ದರು. ಈ ವಂಚನೆಯು 2023ರಲ್ಲಿ 7,465 ಕೋಟಿ ರೂ.ಗೆ ಏರಿಕೆಯಾಗಿತ್ತು. ಇದೀಗ, 2024ರಲ್ಲಿ ಬರೋಬ್ಬರಿ 22,842 ಕೋಟಿ ರೂ.ಗಳಷ್ಟು ಹಣ ಕಳೆದುಕೊಂಡಿದ್ದಾರೆ. ಈ ಮೊತ್ತವು 2022ಕ್ಕೆ ಹೋಲಿಸಿದರೆ 10 ಪಟ್ಟು ಮತ್ತು 2023ಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಾಗಿದೆ ಎಂದು ಡೇಟಾಲೀಡ್ಸ್ ಹೇಳಿದೆ.
ಸೈಬರ್ ಅಪರಾಧ ದೂರುಗಳ ಸಂಖ್ಯೆಯ ಪ್ರಮಾಣವೂ ಇದೇ ರೀತಿ ಹೆಚ್ಚಾಗಿದೆ. 2023ರಲ್ಲಿ ಸುಮಾರು 15.6 ಲಕ್ಷ ದೂರುಗಳು ದಾಖಲಾಗಿದ್ದರೆ, 2024ರಲ್ಲಿ ಸುಮಾರು 20 ಲಕ್ಷ ದೂರುಗಳು ದಾಖಲಾಗಿವೆ.