ಪತಿಯೊಂದಿಗೆ ಪತ್ನಿ ಲೈಂಗಿಕ ಸಂಬಂಧ ಹೊಂದಲು ನಿರಾಕರಿಸುವುದು, ವಿವಾಹೇತರ ಸಂಬಂಧ ಹೊಂದಿದ್ದಾರೆಂದು ಪತಿಯನ್ನು ಅನುಮಾನಿಸುವುದು ಕ್ರೌರ್ಯಕ್ಕೆ ಸಮಾನವಾಗಿದೆ. ಇಂತಹ ವಿಚಾರಗಳನ್ನು ವಿಚ್ಛೇದನ ಪಡೆಯಲು ಕಾರಣವಾಗಿ ಉಲ್ಲೇಖಿಸಬಹುದು ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ.
ದಂಪತಿಗಳಿಗೆ ಪುಣೆ ಕೌಟುಂಬಿಕ ನ್ಯಾಯಾಲಯವು ನೀಡಿದ ವಿಚ್ಛೇದನವನ್ನು ಪ್ರಶ್ನಿಸಿ ಮಹಿಳೆಯೊಬ್ಬರು ಬಾಂಬೆ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿಯಲ್ಲಿ ವಾದಿಸಿದ್ದ ಮಹಿಳೆಯು, ತಮಗೆ ತನ್ನ ಅತ್ತೆ-ಮಾವ ಮಾತ್ರವೇ ಕುರುಕುಳ ನೀಡುತ್ತಿದ್ದರು. ತನ್ನ ಪತಿಯನ್ನು ಪ್ರೀತಿಸುತ್ತೇನೆ, ಅವರಿಂದ ದೂರವಾಗಲು ಬಯಸುವುದಿಲ್ಲ. ತಮಗೆ ವಿಚ್ಛೇದನ ಬೇಡ ಎಂದು ಮನವಿ ಮಾಡಿದ್ದರು.
ಅವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರೇವತಿ ಮೋಹಿತೆ ಡೆರೆ ಮತ್ತು ನೀಲಾ ಗೋಖಲೆ ಅವರಿದ್ದ ಪೀಠವು, ಮಹಿಳೆಯ ಅರ್ಜಿಯನ್ನು ವಜಾಗೊಳಿಸಿದೆ. ಕುಟುಂಬಿಕ ನ್ಯಾಯಾಲಯ ನೀಡಿದ್ದ ವಿಚ್ಛೇದನ ಆದೇಶವನ್ನು ಎತ್ತಿ ಹಿಡಿದಿದೆ.
ಈ ಲೇಖನ ಓದಿದ್ದೀರಾ?: ರಷ್ಯಾ ತೈಲ ಖರೀದಿಸಿದರೆ 500% ಸುಂಕ ಬೆದರಿಕೆ: ಭಾರತದ ಮೇಲೆ ಅಮೆರಿಕ-ನ್ಯಾಟೋ ‘ಇಬ್ಬಂದಿ ನೀತಿ’
ವಿಚಾರಣೆ ವೇಳೆ, ಮಹಿಳೆಯು ತನ್ನ ಪತಿಯೊಂದಿಗೆ ಅವರ ಸಹೋದ್ಯೋಗಿಗಳು ಮತ್ತು ಸ್ನೇಹಿತರ ಎದುರು ವರ್ತಿಸಿರುವ ರೀತಿಯನ್ನು ದೌರ್ಜನ್ಯವೆಂದು ಪರಿಗಣಿಸಲಾಗಿದೆ. ವಿಶೇಷಚೇತನ ಸಹೋದರಿ ಮತ್ತು ಅವರ ಕುಟುಂಬ ಸದಸ್ಯರ ವಿಚಾರದಲ್ಲಿ ಆಕೆಯ ಅಸಡ್ಡೆ ಕೂಡ ಅವರ ದುಃಖಕ್ಕೆ ಕಾರಣವಾಗಿದೆ ಎಂಬುದನ್ನು ನ್ಯಾಯಾಧೀಶರು ಗಮನಿಸಿದ್ದಾರೆ.
ಮಹಿಳೆಯ ಪತಿ ಪರವಾಗಿ ವಾದ ಮಂಡಿಸಿ ವಕೀಲರು, “2013ರಲ್ಲಿ ವಿವಾಹವಾದ ದಂಪತಿಗಳು ಅಂದಿನಿಂದಲೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಪತಿಯ ಕುಟುಂಬದ ಸದಸ್ಯರು, ಸ್ನೇಹಿತರು ಹಾಗೂ ಉದ್ಯೋಗಿಗಳ ಎದುರು ಆಕೆ ಕಿರುಕುಳ ನೀಡುವ ರೀತಿಯಲ್ಲಿ ವರ್ತಿಸಿದ್ದಾರೆ. ಪತಿಯೊಂದಿಗೆ ಲೈಂಗಿಕ ಸಂಬಂಧವನ್ನು ನಿರಾಕರಿದ್ದಾರೆ. ಮಾತ್ರವಲ್ಲದೆ, ವಿವಾಹೇತರ ಸಂಬಂಧ ಹೊಂದಿದ್ದಾನೆಂದು ಶಂಕಿಸಿ, ನಿರಂತರ ಜಗಳ ಮಾಡುವ ಮೂಲಕ ಮಾನಸಿಕ ಕಿರುಕುಳ ನೀಡಿದ್ದಾರೆ” ಎಂದು ಆರೋಪಿಸಿದ್ದಾರೆ.
ಮದುವೆಯಾದ ಎರಡೇ ವರ್ಷದಲ್ಲಿ – 2015ರಲ್ಲಿ ಅರ್ಜಿದಾರ ಮಹಿಳೆಯ ಪತಿಯು ವಿಚ್ಛೇದನಕ್ಕಾಗಿ ಪುಣೆಯ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯವು ಅವರ ಮನವಿಯನ್ನು ಪುರಸ್ಕರಿಸಿತ್ತು. ವಿಚ್ಛೇದನ ನೀಡಿತ್ತು. ವಿಚ್ಛೇದನದ ಆದೇಶವನ್ನು ಪ್ರಶ್ನಿಸಿ, ಮಹಿಳೆಯು ಬಾಂಬೆ ಹೈಕೋರ್ಟ್ ಮೊರೆಹೋಗಿದ್ದರು. ಆದರೆ, ಆಕೆಯ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.