ನಟಿ ಹಾಗೂ ರಾಜಕಾರಣಿ ಖುಷ್ಬು ಸುಂದರ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ತಮಿಳುನಾಡಿನ ಡಿಎಂಕೆ ವಕ್ತಾರ ಶಿವಾಜಿ ಕೃಷ್ಣಮೂರ್ತಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.
ಈ ಬಗ್ಗೆ ಹೇಳಿಕೆ ಪ್ರಕಟಿಸಿರುವ ಡಿಎಂಕೆ ಪ್ರಧಾನ ಕಾರ್ಯದರ್ಶಿ ದೊರೈ ಮುರುಗನ್, “ಪಕ್ಷದ ಶಿಸ್ತು ಉಲ್ಲಂಘಿಸಿ ಅಪಕೀರ್ತಿ ತಂದಿರುವ ಶಿವಾಜಿ ಕೃಷ್ಣಮೂರ್ತಿ ಅವರನ್ನು ಪ್ರಥಾಮಿಕ ಸದಸ್ಯತ್ವ ಸೇರಿದಂತೆ ಪಕ್ಷದ ಎಲ್ಲ ಹುದ್ದೆಗಳಿಂದ ವಜಾ ಮಾಡಲಾಗುತ್ತಿದೆ” ಎಂದು ತಿಳಿಸಿದ್ದಾರೆ.
ಇತ್ತೀಚಿಗಷ್ಟೆ ಕೃಷ್ಣಮೂರ್ತಿ ಅವರು ತಮ್ಮ ಸಾರ್ವಜನಿಕ ಭಾಷಣವೊಂದರಲ್ಲಿ ಖುಷ್ಬು ಅವರನ್ನು ‘ಹಳೆಯ ಪಾತ್ರೆ’ ಎಂದು ಹೀಯಾಳಿಸಿದ್ದರು.
ಈ ಸುದ್ದಿ ಓದಿದ್ದೀರಾ? ಉತ್ತರ ಪ್ರದೇಶ | ಕಳ್ಳನೆಂದು ಮುಸ್ಲಿಂ ಯುವಕನನ್ನು ಮರಕ್ಕೆ ಕಟ್ಟಿ ʼಜೈ ಶ್ರೀರಾಮ್ʼ ಹೇಳುವಂತೆ ಹಲ್ಲೆ
ಕೃಷ್ಣಮೂರ್ತಿ ಅವರ ಹೇಳಿಕೆಯ ಬಗ್ಗೆ ಟ್ವೀಟ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದ ಖುಷ್ಬು ಅವರು, “ಈ ರೀತಿಯ ಹೇಳಿಕೆಗಳು ಡಿಎಂಕೆ ನಾಯಕರ ರಾಜಕೀಯ ಸಂಸ್ಕೃತಿಯನ್ನು ತೋರಿಸುತ್ತವೆ. ಈ ರೀತಿ ಮಾತನಾಡುವವರು ಆ ಪಕ್ಷದಲ್ಲಿ ಅನೇಕರಿದ್ದಾರೆ. ಮಹಿಳೆಯರನ್ನು ನಿಂದಿಸುವುದು, ಅವರ ಬಗ್ಗೆ ಅಶ್ಲೀಲವಾದ ಅಗ್ಗದ ಮಾತುಗಳನ್ನುಆಡುವುದರಿಂದ ಅವರಿಗೆ ಉತ್ತಮ ಸ್ಥಾನಮಾನಗಳು ಸಿಗಬಹುದು. ಮುಖ್ಯಮಂತ್ರಿ ಸ್ಟಾಲಿನ್ ಅವರೇ ನಿಮ್ಮ ಕುಟುಂಬದ ಮಹಿಳೆಯರ ಬಗ್ಗೆ ಇಂತಹ ಹೇಳಿಕೆಗಳನ್ನು ನೀವು ಸ್ವೀಕರಿಸುತ್ತೀರಾ?” ಎಂದು ಪ್ರಶ್ನಿಸಿದ್ದರು.
“ನಿಮ್ಮ ಕಾರ್ಯಕರ್ತರು ಕಲ್ಲು ತೂರಾಟ ಮಾಡುತ್ತಾರೆ ಮತ್ತು ವಿನಾಶವನ್ನು ಸೃಷ್ಟಿಸುತ್ತಾರೆ. ನಿಮಗೆ ಅರ್ಥವಾಗದ ಸಂಗತಿಯೆಂದರೆ, ಅವರು ನನ್ನನ್ನು ಮಾತ್ರವಲ್ಲ, ನಿಮ್ಮನ್ನು ಮತ್ತು ನಿಮ್ಮ ತಂದೆಯಂತಹ ಮಹಾನ್ ನಾಯಕನನ್ನು ಅವಮಾನಿಸುತ್ತಾರೆ. ಆದರೂ ಇಂತಹವರಿಗೆ ಹೆಚ್ಚು ಸ್ಥಾನಮಾನಗಳನ್ನು ನೀಡುತ್ತೀರಿ. ನಿಮ್ಮ ಪಕ್ಷ ಅಸಭ್ಯ ಗೂಂಡಾಗಿರಿಗೆ ಸುರಕ್ಷಿತ ತಾಣವಾಗುತ್ತಿದೆ. ಇದು ನಾಚಿಕೆಗೇಡಿನ ಸಂಗತಿ” ಎಂದು ಆಕ್ರೋಶ ಹೊರಹಾಕಿದ್ದರು.
ಶಿವಾಜಿ ಕೃಷ್ಣಮೂರ್ತಿ ಕೆಲವು ದಿನಗಳ ಹಿಂದಷ್ಟೆ ರಾಜ್ಯಪಾಲರ ಬಗ್ಗೆ ವಿವಾದಾತ್ಮಕವಾಗಿ ಮಾತನಾಡಿದ್ದರು. ಆಗ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ಅವರು ಕ್ಷಮೆಯಾಚಿಸಿದ ನಂತರ ಅಮಾನತನ್ನು ಹಿಂಪಡೆಯಲಾಗಿತ್ತು.