ಗುಜರಾತ್ ವಿಮಾನ ದುರಂತದಲ್ಲಿ ಮೃತಪಟ್ಟವರ ಪೈಕಿ ಒಂಬತ್ತು ಮಂದಿಯ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಈ ಪೈಕಿ ಡಿಎನ್ಎ ಹೊಂದಾಣಿಗೆ ಮಾಡಿ ಮೊದಲ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಶಿಷ್ಟಾಚಾರದ ಪ್ರಕಾರ, ಸಂಪೂರ್ಣ ಡಿಎನ್ಎ ಪರಿಶೀಲನೆ ಮತ್ತು ಕಾನೂನು ದಾಖಲೆಗಳ ನಂತರವೇ ಮೃತದೇಹಗಳ ಹಸ್ತಾಂತರ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.
ಇನ್ನು ಸಂಬಂಧಿಕರು ಗುರುತಿಸಿದ ಕಾರಣ ಎಂಟು ಮಂದಿಯ ಮೃತದೇಹವನ್ನು ಡಿಎನ್ಎ ಪ್ರೊಫೈಲಿಂಗ್ ಇಲ್ಲದೆಯೇ ಆಸ್ಪತ್ರೆಯು ಅವರ ಕುಟುಂಬಗಳಿಗೆ ಹಸ್ತಾಂತರಿಸಿದೆ. ವಿಮಾನ ಅಪಘಾತ ಸ್ಥಳದಿಂದ ಇಲ್ಲಿಯವರೆಗೆ ಸುಮಾರು 270 ಮೃತದೇಹಗಳನ್ನು ಆಸ್ಪತ್ರೆಗೆ ತರಲಾಗಿದೆ ಎಂದು ವೈದ್ಯರು ಶನಿವಾರ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಗುಜರಾತ್ ವಿಮಾನ ದುರಂತ | ವೈದ್ಯರು ಸೇರಿ ಒಂಬತ್ತು ಮಂದಿ ಸಾವು; ಹಾಸ್ಟೆಲ್ ತೆರವು
ಲಂಡನ್ಗೆ ತೆರಳುತ್ತಿದ್ದ ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್ಲೈನರ್ ಗುರುವಾರ ಪತನಗೊಂಡಿದೆ. ವಿಮಾನದಲ್ಲಿದ್ದ 242 ಪ್ರಯಾಣಿಕರು ಮತ್ತು ಸಿಬ್ಬಂದಿಗಳಲ್ಲಿ ಒಬ್ಬರು ಮಾತ್ರ ಬದುಕುಳಿದಿದ್ದಾರೆ. ವೈದ್ಯಕೀಯ ಸಿಬ್ಬಂದಿಗಳಿದ್ದ ಹಾಸ್ಟೆಲ್ಗೆ ಈ ವಿಮಾನ ಅಪ್ಪಳಿಸಿದ ಕಾರಣ ಮೆಸ್ನಲ್ಲಿ ಊಟ ಮಾಡುತ್ತಿದ್ದ ವೈದ್ಯರು ಸೇರಿ ಒಟ್ಟು ಒಂಬತ್ತು ಮಂದಿ ಮೃತಪಟ್ಟಿದ್ದಾರೆ.
ಇನ್ನು ಡಿಎನ್ಎ ಗುರುತಿಸುವ ಪ್ರಕ್ರಿಯೆ ಪೂರ್ಣವಾಗುವವರೆಗೂ ಅಧಿಕೃತ ಮೃತರ ಸಂಖ್ಯೆ ಹೇಳಲಾಗದು ಎಂದು ವರದಿಯಾಗಿದೆ. ವಿಮಾನದಲ್ಲಿ 169 ಭಾರತೀಯ ಪ್ರಯಾಣಿಕರು, 53 ಬ್ರಿಟಿಷ್, ಏಳು ಮಂದಿ ಪೋರ್ಚುಗೀಸ್ ಮತ್ತು ಒಬ್ಬ ಕೆನಡಿಯನ್ ಮತ್ತು 12 ಸಿಬ್ಬಂದಿ ಇದ್ದರು ಎಂದು ಈಗಾಗಲೇ ಏರ್ ಇಂಡಿಯಾ ತಿಳಿಸಿದೆ. ಮೃತರ ಗುರುತಿಗಾಗಿ ವಿದೇಶದಲ್ಲಿರುವ ಕುಟುಂಬಸ್ಥರೂ ಭಾರತಕ್ಕೆ ಧಾವಿಸಿದ್ದಾರೆ.
