ದೆಹಲಿ ವಿಮಾನ ನಿಲ್ಧಾಣದಲ್ಲಿ ತಮ್ಮ ಆ್ಯಪಲ್ ವಾಚ್ಅನ್ನು ಇಬ್ಬರು ಮುಸ್ಲಿಂ ವ್ಯಕ್ತಿಗಳು ಕದ್ದಿದ್ದಾರೆಂದು ವೈದ್ಯ ತುಷಾರ್ ಮೆಹ್ತಾ ಎಂಬವರು ಆರೋಪಿಸಿದ್ದರು. ಅವರ ಆರೋಪದ ಬಗ್ಗೆ ಸಿಐಎಸ್‌ಎಫ್ ಪರಿಶೀಲನೆ ನಡೆಸಿದ್ದು, ಅವರ ಆರೋಪ ಸುಳ್ಳು ಎಂದು ಹೇಳಿದೆ. ಅವರ ವಾಚ್ಅನ್ನು ಮುಸ್ಲಿ ವ್ಯಕ್ತಿಗಳು ಕದ್ದಿಲ್ಲ ಮಾತ್ರವಲ್ಲದೆ, ಅವರ ವಾಚ್ ಕಳುವೇ ಆಗಿಲ್ಲ ಎಂದು ಪತ್ತೆ ಮಾಡಿದೆ. ಈ ಮೂಲಕ, ವೈದ್ಯ ತುಷಾರ್ ಮೆಹ್ತಾ ಅವರು ಉದ್ದೇಶಪೂರ್ವಕವಾಗಿ ಕೋಮುದ್ವೇಷ ಬಿತ್ತಲು ಯತ್ನಿಸಿದ್ದಾರೆ ಎಂಬುದು ಬಹಿರಂಗವಾಗಿದೆ.
ವಿಮಾನ ನಿಲ್ದಾಣದಲ್ಲಿ ಸುಹೈಬ್ ಮತ್ತು ಎಂಡಿ ಸಾಕಿಬ್ ಎಂದು ಗುರುತಿಸಲಾದ ಇಬ್ಬರು ಮುಸ್ಲಿಮರು ತಮ್ಮ ವಾಚ್‌ಅನ್ನು ಕದ್ದಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದರು. ಮೆಹ್ತಾ ಅವರು ಮಾಡಿದ ಆರೋಪದ ಪೋಸ್ಟ್ ಭಾರೀ ವೈರಲ್ ಆಗಿತ್ತು. ಮಾಧ್ಯಮಗಳೂ ಸತ್ಯಾಸತ್ಯೆಯನ್ನು ಪರಿಶೀಲಿಸದೆ, ಆತನ ಪೋಸ್ಟ್‌ಅನ್ನು ಇಟ್ಟುಕೊಂಡು ಮುಸ್ಲಿಮರ ವಿರುದ್ಧ ಪ್ರಚೋದನಾಕಾರಿ, ದ್ವೇಷ ಪೂರಿತ ಸುದ್ದಿಗಳನ್ನು ಪ್ರಟಿಸಿದ್ದವು. ಮೆಹ್ತಾ ಆರೋಪ ಮತ್ತು ಮಾಧ್ಯಮಗಳ ವರದಿಯಿಂದಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಐಎಸ್‌ಎಫ್, ತ್ವರಿತ ವಿಚಾರಣೆ ನಡೆಸಿದೆ.
ವಿಮಾನ ನಿಲ್ಧಾಣದ ಸಿಸಿಟಿವಿ ದೃಶ್ಯಗಳನ್ನು ಸಿಐಎಸ್‌ಎಫ್ ಪರಿಶೀಲನೆ ನಡೆಸಿದೆ. ತನಿಖೆ ಮತ್ತು ಸಿಸಿಟಿವಿ ದೃಶ್ಯಗಳ ಪರಿಶೀಲನೆ ವೇಳೆ, ಡಾ. ಮೆಹ್ತಾ ಅವರೇ ಟ್ರೇಯಿಂದ ತಮ್ಮ ವಾಚ್ಅನ್ನು ತೆಗೆದುಕೊಂಡಿದ್ದು, ಬೋರ್ಡಿಂಗ್ ಗೇಟ್‌ಗೆ ಹೋಗುವ ಮೊದಲು ಅದನ್ನು ತಮ್ಮ ಕೈಗೆ ಧರಿಸಿರುವುದು ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಅಲ್ಲದೆ, ಮೆಹ್ತಾ ಪ್ರತಿಪಾದಿಸಿರುವಂತೆ ಅವರು ಯಾವುದೇ CISF ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿರುವುದಾಗಲೀ, ಇತರ ವ್ಯಕ್ತಿಗಳ ಅನುಮಾನಾಸ್ಪವಾಗಿ ನಡೆದುಕೊಂಡಿರುವುದಾಗಲೀ ಕಂಡುಬಂದಿಲ್ಲ ಎಂದು ಸಿಐಎಸ್‌ಎಫ್ ಸ್ಪಷ್ಟಪಡಿಸಿದೆ.

ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಕೂಡ ಸಿಐಎಸ್‌ಎಫ್ ಪರಿಶೀಲನೆ ನಡೆಸಿದ್ದು, ವಾಸ್ತವಾಂಶವನ್ನು ಪತ್ತೆ ಹಚ್ಚಿದೆ ಎಂದು ಹೇಳಿದೆ. ಅಲ್ಲದೆ, ವಾಸ್ತವಾಂಶ ಬಹಿರಂಗಗೊಳ್ಳುತ್ತಿದ್ದಂತೆಯೇ ಡಾ. ಮೆಹ್ತಾ ತಮ್ಮ ಪೋಸ್ಟ್ ಅನ್ನು ಡಿಲಿಟ್ ಮಾಡಿದ್ದಾರೆ.
ಮೆಹ್ತಾ ಆರೋಪಿವಿದು;
ಕಳೆದ ವಾರ, ‘ಎಕ್ಸ್’ನಲ್ಲಿ ಪೋಸ್ಟ್ ಆಗಿದ್ದ ಡಾ. ತುಷಾರ್ ಮೆಹ್ತಾ, “ಇಂದು ವಿಚಿತ್ರ ಮತ್ತು ಆಘಾತಕಾರಿ ಘಟನೆಯೊಂದು ನಡೆದಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಗಾಗಿ ನನ್ನ ಆಪಲ್ ವಾಚ್‌ಅನ್ನು ಟ್ರೇನಲ್ಲಿ ಇಟ್ಟಿದ್ದೆ. ಸ್ಕ್ಯಾನರ್ ದಾಟಿ ಮುಂದೆ ಬಂದಾಗ ನಾನು ವಸ್ತುಗಳನ್ನು ಮತ್ತೆ ನನ್ನ ಲ್ಯಾಪ್‌ಟಾಪ್ ಬ್ಯಾಗ್‌ಗೆ ತುಂಬಲು ಪ್ರಾರಂಭಿಸಿದೆ. ಈ ವೇಳೆ ಏನೋ ಕಾಣೆಯಾಗಿದೆ ಎಂದು ನನಗೆ ಅನಿಸಿತು. ಆಗ ನನ್ನ ವಾಚ್ ಕಾಣಿಸುತ್ತಿಲ್ಲ ಎಂಬುವುದು ನನ್ನ ಗಮನಕ್ಕೆ ಬಂತು. ನಾನು ಅಲ್ಲಿ ನಿಂತಿದ್ದ ಸಿಐಎಸ್‌ಎಫ್ ಸಿಬ್ಬಂದಿಗೆ ಈ ಬಗ್ಗೆ ಕೇಳಿದೆ. ಅವರು ನನ್ನ ಬ್ಯಾಗ್, ಪಾಕೆಟ್ ಇತ್ಯಾದಿಗಳನ್ನು ಮತ್ತೆ ನೋಡುವಂತೆ ಹೇಳಿದರು. ಅದನ್ನು ನಾನು ಮೊದಲೇ ಪರಿಶೀಲಿಸಿದ್ದೆ, ನಾನು ಕುತೂಹಲದಿಂದ ತಿರುಗಿ ನಡೆದುಕೊಂಡು ಹೋಗುವಾಗ ಯಾರೋ ನನ್ನತ್ತ ಹಿಂತಿರುಗಿ ನೋಡುತ್ತಿರುವುದನ್ನು ನೋಡಿದೆ. ನಾನು ಆ ವ್ಯಕ್ತಿಯನ್ನು ಹಿಂಬಾಲಿಸಿದೆ. ಕೆಲವು ಹೆಜ್ಜೆ ಮುಂದೆ ನಡೆದಾಗ, ನಾನು ಆ ವ್ಯಕ್ತಿ ವಾಚ್ ಅಂಗಡಿಯೊಂದರಲ್ಲಿ ನಿಂತಿರುವುದನ್ನು ಗಮನಿಸಿದೆ. ನಾನು ತಕ್ಷಣ ಅವನ ಬಳಿಗೆ ಹೋಗಿ ಅವನ ಪ್ಯಾಂಟ್ ಜೇಬಿನಲ್ಲಿದ್ದ ವಾಚ್ ತೆಗೆದುಕೊಂಡೆ. ಈ ವೇಳೆ ಸಂಬಂಧವಿಲ್ಲದಿದ್ದರೂ ವಾಚ್ ಅಂಗಡಿಯವ ನನ್ನ ಜೊತೆ ಕೆಟ್ಟದಾಗಿ ವರ್ತಿಸಿದ. ಇದರಿಂದಾಗಿ ಅವರಿಬ್ಬರು ಮೊದಲೇ ಪರಿಚಯಸ್ಥರು ಎಂದು ನನಗೆ ಮನವರಿಕೆಯಾಯಿತು. ಬಳಿಕ ನಮ್ಮ ನಡುವೆ ವಾಗ್ವಾದ ನಡೆಯಿತು. ಅಷ್ಟರಲ್ಲಿ ಇನ್ನೋರ್ವ ಅಲ್ಲಿಂದ ಪರಾರಿಯಾಗಿದ್ದಾನೆ. ವಿಮಾನಕ್ಕೆ ತಡವಾಗಿದ್ದರಿಂದ ನಾನು ಅಲ್ಲಿಂದ ಹೊರಟು ಬಂದೆ. ಈ ವೇಳೆ ಸಿಐಎಸ್‌ಎಫ್ ಸಿಬ್ಬಂದಿ ಅಂಗಡಿಯವನ ಜೊತೆ ಬಂದು ನಾನು ಕೆಟ್ಟ ವರ್ತನೆ ಮಾಡಿದ್ದೇನೆ ಎಂದು ಕ್ಷಮೆ ಕೇಳುವಂತೆ ಸೂಚಿಸಿದ್ದಾರೆ. ಈ ವೇಳೆ ನಾನು ಸಿಐಎಸ್‌ಎಫ್‌ನ ಹಿರಿಯ ಅಧಿಕಾರಿಗೆ ಕರೆ ಮಾಡಿ ಮಾತನಾಡಿದೆ. ಆ ಬಳಿಕ ಸಿಐಎಸ್‌ಎಫ್ ಸಿಬ್ಬಂದಿ ನನಗೆ ತೆರಳಲು ಅನುವು ಮಾಡಿಕೊಟ್ಟರು. ವಾಚ್ ಅಂಗಡಿಯವನ ಹೆಸರು ಸುಹೈಬ್ ಮತ್ತು ಕಳ್ಳತನ ಮಾಡಿದ ವ್ಯಕ್ತಿಯ ಹೆಸರು ಎಂ.ಡಿ ಸಾಕಿಬ್. ಭದ್ರತಾ ತಪಾಸಣೆ ವೇಳೆ ನಿಮ್ಮ ವಸ್ತುಗಳ ಬಗ್ಗೆ ದಯವಿಟ್ಟು ಗಮನ ಇಟ್ಟುಕೊಳ್ಳಿ” ಎಂದು ಬರೆದುಕೊಂಡಿದ್ದರು.

ವೈದ್ಯನ ಕೃತ್ಯದ ಆಕ್ರೋಶ
“ಬಹುಶಃ, ವೈದ್ಯ ತುಷಾರ್ ಮೆಹ್ತಾ ತನಿಖಾ ಸಂಸ್ಥೆಗಳಿಂದ ಇಷ್ಟು ತ್ವರಿತ ಪ್ರತಿಕ್ರಿಯೆ ಬರಬಹುದೆಂದು ನಿರೀಕ್ಷಿಸಿರಲಿಲ್ಲ. ತುಷಾರ್ ಮೆಹ್ತಾ ಮುಸ್ಲಿಮರನ್ನು ದೂಷಿಸುವ ಮೂಲಕ ಇಸ್ಲಾಮೋಫೋಬಿಯಾ ಹರಡಲು ಮುಂದಾಗಿದ್ದರು. ಆದರೆ, ಅವರ ಸುಳ್ಳು ಬಹಿರಂಗಗೊಂಡಿದೆ. ಹೆಸರು ಗಳಿಸಲು ಇಂತಹ ಕೃತ್ಯಕ್ಕೆ ಯಾರೂ ಇಳಿಯಬಾರದು. ಇಂತಹ ಪೋಸ್ಟ್‌ಗಳನ್ನು ನಂಬುವುದಕ್ಕೂ ಮುನ್ನ, ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು” ಎಂದು ನೆಟ್ಟಿಗರು ಹೇಳಿದ್ದಾರೆ.