ಅದಾನಿಗಾಗಿ ಸೆಬಿ ಅಧ್ಯಕ್ಷೆ ಮಾಧವಿ ಬುಚ್ ರಕ್ಷಣೆಗೆ ನಿಂತರೆ ಮೋದಿ?

Date:

Advertisements
ಸೆಬಿ ಅಧ್ಯಕ್ಷೆಯನ್ನು ಮೋದಿ, ಮೋದಿಯನ್ನು ಸೆಬಿ ಅಧ್ಯಕ್ಷೆ, ಅದಾನಿಯನ್ನು ಮೋದಿ ಹೀಗೆ ಒಬ್ಬರನ್ನು ಒಬ್ಬರು ರಕ್ಷಿಸಿಕೊಳ್ಳುತ್ತಾ ಕೋಟ್ಯಂತರ ಜನರ ಹೂಡಿಕೆಗೆ ಗಂಡಾಂತರ ತಂದಿದ್ದಾರೆ. ಯಾರು ಯಾರ ರಕ್ಷಣೆ ಮಾಡಿದರೂ ಕೊನೆಗೆ ಮುಳುಗುವುದು ನಮ್ಮ ನಿಮ್ಮ ಹೂಡಿಕೆಯ ದೋಣಿಯಲ್ಲವೇ?

ಅದಾನಿ ಸಂಸ್ಥೆಯ ಅಕ್ರಮ ವಹಿವಾಟಿನಲ್ಲಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಅಧ್ಯಕ್ಷೆ ಮಾಧವಿ ಬುಚ್‌ ಹಾಗೂ ಆಕೆಯ ಪತಿ ಧವಲ್ ಬುಚ್ ಭಾಗಿಯಾಗಿರುವ ಬಗ್ಗೆ ಹಿಂಡೆನ್‌ಬರ್ಗ್‌ ಇತ್ತೀಚೆಗೆ ವರದಿ ಮಾಡಿದೆ. ತನ್ನ ವಿರುದ್ದದ ಆರೋಪವನ್ನು ಸೆಬಿ ಅಧ್ಯಕ್ಷೆ ಅಲ್ಲಗಳೆದಿದ್ದರೂ ಅವರ ನಡೆಯು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಭಾರತದ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ ಗ್ರೂಪ್‌ನ ವಂಚನೆಯನ್ನು ಕಳೆದ ವರ್ಷ ಬಹಿರಂಗಪಡಿಸಿದ್ದ ಅಮೆರಿಕ ಮೂಲದ ಶಾರ್ಟ್‌ ಸೆಲ್ಲರ್‌ ಕಂಪನಿ ಹಿಂಡೆನ್‌ಬರ್ಗ್‌ ಇತ್ತೀಚೆಗೆ ಸ್ಪೋಟಕ ವರದಿಯೊಂದನ್ನು ಬಿಡುಗಡೆ ಮಾಡಿದೆ. ವರದಿಯಲ್ಲಿ ಸೆಬಿ ಅಧ್ಯಕ್ಷೆ ಮಾಧವಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ಅದಾನಿ ಮನಿ ಸೈಫನಿಂಗ್ ಹಗರಣದಲ್ಲಿ ಬಳಸಲಾದ ಆಫ್‌ಶೋರ್ ಫಂಡ್‌ನಲ್ಲಿ ಪಾಲನ್ನು ಹೊಂದಿದ್ದರು ಎಂದು ಆರೋಪಿಸಿದೆ.

ಅದಾನಿ ಮನಿ ಸೈಫನಿಂಗ್ ಹಗರಣದಲ್ಲಿ ಬಳಸಲಾದ ಕಡಲಾಚೆಯ ಘಟಕಗಳಲ್ಲಿ ಸೆಬಿ ಅಧ್ಯಕ್ಷೆ ಮಾಧವಿ ಬುಚ್ ಕೂಡ ಪಾಲು ಹೊಂದಿದ್ದಾರೆ ಎಂದು ವಿಸಲ್ ಬ್ಲೋವರ್‌ನಿಂದ ಪಡೆದ ದಾಖಲೆಗಳು ತೋರಿಸುತ್ತವೆ ಎಂದು ಹಿಂಡೆನ್‌ಬರ್ಗ್ ರಿಸರ್ಚ್ ವರದಿ ಉಲ್ಲೇಖಿಸಿದೆ. ಇದಾದ ಬಳಿಕ ಹೇಳಿಕೆಯನ್ನು ಬಿಡುಗಡೆ ಮಾಡಿದ ಬುಚ್ ದಂಪತಿ ಈ ಆರೋಪವನ್ನು ನಿರಾಕರಿಸಿದ್ದಾರೆ. ಆದರೆ ಅದರ ಜೊತೆಗೆ ಪರೋಕ್ಷವಾಗಿ ತಾವು ಹೂಡಿಕೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.

Advertisements

ಇದನ್ನು ಓದಿದ್ದೀರಾ? ಮಾಧವಿ ಬುಚ್ ವಿರುದ್ಧ ತಿರುಗಿಬಿದ್ದ ಸೆಬಿ ಉನ್ನತಾಧಿಕಾರಿಗಳು

“ನನ್ನ ಪತಿಗೆ ಅನಿಲ್ ಅಹುಜಾ ಜೊತೆಗಿನ ಬಾಲ್ಯದ ಸ್ನೇಹದಿಂದಾಗಿ ಐಪಿಇ-ಪ್ಲಸ್ ಫಂಡ್‌ನಲ್ಲಿ ಹೂಡಿಕೆ ಮಾಡಲಾಗಿದೆಯೇ ಹೊರತು ಹಣ ಅದಾನಿಗೆ ಹೋಗಿಲ್ಲ” ಎಂದು ಹೇಳಿಕೊಂಡಿದ್ದಾರೆ. ಅದಾದ ಬಳಿಕ ಹಲವು ವರದಿಗಳು ಸೆಬಿ ಅಧ್ಯಕ್ಷೆಯ ಹೂಡಿಕೆ ಸುತ್ತ ಇರುವ ಅನುಮಾನವನ್ನು ಎಳೆಎಳೆಯಾಗಿ ಸ್ಪಷ್ಟಪಡಿಸುತ್ತಾ ಬಂದಿವೆ. ಅದರಲ್ಲಿ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರ ತನಿಖಾ ವರದಿ ಕೂಡ ಒಂದಾಗಿದೆ.

ಇವೆಲ್ಲವುದರ ನಡುವೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಸಭೆಗೆ ಸೆಬಿ ಅಧ್ಯಕ್ಷೆ ಸತತ ಎರಡು ಬಾರಿ ಗೈರಾಗಿರುವುದು ಗುಮಾನಿ ಹುಟ್ಟಿಸಿದೆ. ಮಾಧವಿ ಪುರಿ ಬುಚ್ ಗುರುವಾರ ಎರಡನೇ ಬಾರಿಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಸಭೆಗೆ ಗೈರಾಗಿದ್ದಾರೆ. ಕೊನೆಗೆ ಸಮಿತಿಯು ಸಭೆಯನ್ನು ಮುಂದೂಡಿದೆ.

ಸಭೆಗೆ ಹಾಜರಾಗಲು ಬುಚ್‌ಗೆ ಆತಂಕವೇ?

ಪಿಎಸಿಯ ಮೊದಲ ಸಭೆಯಲ್ಲಿ ಮಾರುಕಟ್ಟೆ ನಿಯಂತ್ರಕ ಸಂಸ್ಥೆಗಳ ಬಗ್ಗೆ ಪರಿಶೀಲನೆಗೆ ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಸೆಬಿ ಅಧ್ಯಕ್ಷೆಗೆ ಸಮನ್ಸ್ ಅನ್ನು ನೀಡಲಾಗಿತ್ತು. ತಾವು ಯಾವುದೇ ತಪ್ಪು ಮಾಡಿಲ್ಲ ಎಂದಾದ ಮೇಲೆ ಸಭೆಗೆ ಹಾಜರಾಗಲು ಸೆಬಿ ಅಧ್ಯಕ್ಷೆ ಮಾಧವಿ ಬುಚ್‌ ಹಿಂಜರಿಯುವುದೇಕೆ? ಕೊನೆ ಕ್ಷಣದಲ್ಲಿ ಕಾರಣ ನೀಡಿ ತಪ್ಪಿಸುವುದು ಏಕೆ ಎಂಬ ಪ್ರಶ್ನೆಗಳಿವೆ. ಈ ಪ್ರಶ್ನೆಗಳನ್ನು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿ ಹಲವು ವಿಪಕ್ಷ ನಾಯಕರುಗಳು ಕೂಡಾ ಎತ್ತಿದ್ದಾರೆ.

ಇದನ್ನು ಓದಿದ್ದೀರಾ? ಪಿಎಸಿ ಸಭೆಗೆ ಎರಡನೇ ಬಾರಿಯೂ ಸೆಬಿ ಮುಖ್ಯಸ್ಥೆ ಮಾಧವಿ ಪುರಿ ಬುಚ್ ಗೈರು

ಇನ್ನೊಂದೆಡೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಮುಖ್ಯಸ್ಥ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಸೆಬಿ ಬಗ್ಗೆ ಪರಿಶೀಲನೆ ನಡೆಸುವ ವಿಚಾರದಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದು ಬಿಜೆಪಿ ಸಂಸದ ರವಿಶಂಕರ್ ಪ್ರಸಾದ್ ಆರೋಪಿಸಿದ್ದಾರೆ. ಸೆಬಿಯ ಕಾರ್ಯನಿರ್ವಹಣೆಯನ್ನು ಪರಿಶೀಲಿಸುವುದನ್ನು ಬಿಜೆಪಿ ನಾಯಕರೇಕೆ ವಿರೋಧಿಸುತ್ತಿದ್ದಾರೆ?

ಪವನ್ ಖೇರಾ ತನಿಖಾ ವರದಿ ಏನು ಹೇಳುತ್ತೆ?

ಸೆಬಿ ಮುಖ್ಯಸ್ಥೆ ನಡೆಸಿದ ಅವ್ಯವಹಾರದಿಂದಾಗಿ ಸುಮಾರು 10 ಕೋಟಿ ಹೂಡಿಕೆದಾರರ ಉಳಿತಾಯವು ಅಪಾಯದಲ್ಲಿದೆ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಅವರ ತನಿಖಾ ವರದಿ ಹೇಳುತ್ತದೆ. ಕೆಲವು ಕಾರ್ಪೊರೇಟ್ ಸಂಸ್ಥೆಗಳ ಜೊತೆಗೆ ಮಾಧವಿ ಬುಚ್ ರಾಜಿ ಮಾಡಿಕೊಂಡಿದ್ದಾರೆ ಎಂದು ಪವನ್ ಖೇರಾ ಆರೋಪಿಸಿದ್ದಾರೆ. ಐಸಿಐಸಿಐ ಸೇರಿದಂತೆ ಕೆಲವು ಸಂಸ್ಥೆಗಳ ಹೆಸರನ್ನು ಉಲ್ಲೇಖಿಸಿದ್ದಾರೆ.

ಯಾರಿಂದ ಯಾರ ರಕ್ಷಣೆ?

ಈಗಾಗಲೇ ಸೆಬಿ ಅಧ್ಯಕ್ಷೆ ಆಗಿದ್ದುಕೊಂಡು ಬುಚ್ ಇತರೆ ಮೂರು ಸಂಸ್ಥೆಗಳಿಂದ ಸಂಬಳ ಪಡೆದಿರುವುದು ಬಹಿರಂಗವಾಗಿದೆ. ಸೆಬಿ ಅಧ್ಯಕ್ಷೆಯ ಈ ಅವ್ಯವಹಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನವೂ ಹಲವು ಶಂಕೆಗೆ ದಾರಿಮಾಡಿಕೊಟ್ಟಿದೆ. ಚುನಾವಣಾ ಬಾಂಡ್ ಎಂಬ ವಿಶ್ವದ ಅತೀ ದೊಡ್ಡ ಹಗರಣದ ಬಗ್ಗೆ ತನಿಖೆ ನಡೆಯುವುದು ಎಷ್ಟು ಮುಖ್ಯವೋ ಸೆಬಿ ಮುಖ್ಯಸ್ಥೆ ವಿರುದ್ದವಿರುವ ಆರೋಪಗಳ ಬಗ್ಗೆಯೂ ತನಿಖೆ ಅತ್ಯಗತ್ಯ. ಇದು ಕೋಟ್ಯಂತರ ಹೂಡಿಕೆದಾರರ ಭವಿಷ್ಯದ ಪ್ರಶ್ನೆ.

2014ರಲ್ಲಿ ಪ್ರಧಾನಿಯಾದ ಮೋದಿ ಆರಂಭದಿಂದಲೂ ನಿರಂತರವಾಗಿ ಅದಾನಿ-ಅಂಬಾನಿಯ ಬಾಲಂಗೋಚಿಯಾಗಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಅದಾನಿ ಸಂಸ್ಥೆಯನ್ನು ತನ್ನ ಅಧಿಕಾರ ಬಳಸಿಕೊಂಡು ಪ್ರಧಾನಿ ರಕ್ಷಿಸುತ್ತಿರುವುದು ಸ್ಪಷ್ಟವಾಗಿದೆ. ಈಗ ಸೆಬಿ ಅಧ್ಯಕ್ಷೆಯ ಅಕ್ರಮಗಳ ವಿಚಾರದಲ್ಲಿ ಮೌನ ತಳೆದಿರುವ ಮೋದಿ, ಬುಚ್ ರಕ್ಷಣೆ ಮಾಡುವ ಮೂಲಕ ಅದಾನಿಯ ಅಂಗರಕ್ಷಕರಾಗಿ ನಿಂತಿದ್ದಾರೆ. ತನ್ನ ಸ್ನೇಹಿತನ ರಕ್ಷಣೆ ಮಾಡದಿದ್ದರೆ ತನ್ನೆಲ್ಲಾ ವಂಚನೆಗಳು ಕೂಡಾ ಬಟ್ಟಬಯಲಾಗುವ ಆತಂಕವೂ ಮೋದಿಗೆ ಇದೆ.

ಪವನ್ ಖೇರಾ ಹೇಳುವಂತೆ ಕಾರ್ಪೊರೇಟ್ ವಲಯದಲ್ಲಿ ಸಾಕಷ್ಟು ಮಾತುಗಳು ಹರಿದಾಡುತ್ತಿದೆ. ಅವುಗಳಲ್ಲಿ ಷೇರು ಮಾರುಕಟ್ಟೆ ವಂಚನೆ ವಿಚಾರದಲ್ಲಿ ಪ್ರಧಾನಿ ಮೋದಿಯನ್ನೇ ಸೆಬಿ ಅಧ್ಯಕ್ಷೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂಬುದು ಕೂಡ ಒಂದು. ಮೋದಿಯನ್ನು ಬುಚ್ ಬ್ಲ್ಯಾಕ್‌ಮೇಲ್ ಮಾಡಿ ತನಿಖೆಯಿಂದ ತಪ್ಪಿಸಿಕೊಂಡಿರುವುದಾದರೆ ಅದು ಖಂಡಿತವಾಗಿಯೂ ಅತೀ ಗಂಭೀರವಾದ ವಿಚಾರ. ಸೆಬಿ ಅಧ್ಯಕ್ಷೆಯನ್ನು ಮೋದಿ, ಮೋದಿಯನ್ನು ಸೆಬಿ ಅಧ್ಯಕ್ಷೆ, ಅದಾನಿಯನ್ನು ಮೋದಿ ಹೀಗೆ ಒಬ್ಬರನ್ನು ಒಬ್ಬರು ರಕ್ಷಿಸಿಕೊಳ್ಳುತ್ತಾ ಕೋಟ್ಯಂತರ ಜನರ ಹೂಡಿಕೆಗೆ ಗಂಡಾಂತರ ತಂದಿದ್ದಾರೆ. ಯಾರು ಯಾರ ರಕ್ಷಣೆ ಮಾಡಿದರೂ ಕೊನೆಗೆ ಮುಳುಗುವುದು ನಮ್ಮ ನಿಮ್ಮ ಹೂಡಿಕೆಯ ದೋಣಿಯಲ್ಲವೇ?

Mayuri
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

Download Eedina App Android / iOS

X