ಬೀದಿನಾಯಿಯೊಂದು ನವಜಾತ ಶಿಶುವಿನ ಮೃತದೇಹವನ್ನು ತನ್ನ ಬಾಯಿಯಲ್ಲಿ ಕಚ್ಚಿ ತಿರುಗುತ್ತಿದ್ದ ಘಟನೆ ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರ ನಡೆದಿದೆ. ಆಸ್ಪತ್ರೆಯ ಶೌಚಾಲಯದ ಬಳಿಯಿದ್ದ ನಾಯಿಯ ಬಾಯಿಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ. ಭದ್ರತಾ ಸಿಬ್ಬಂದಿಗಳು ನಾಯಿಯನ್ನು ಓಡಿಸಿ ಮೃತದೇಹವನ್ನು ಆಸ್ಪತ್ರೆಗೆ ಒಪ್ಪಿಸಿದ್ದಾರೆ. ಸದ್ಯ ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.
ಜಿಲ್ಲಾ ಕೇಂದ್ರ ಕಚೇರಿಯಿಂದ ಸುಮಾರು 25 ಕಿಲೋಮೀಟರ್ ದೂರದ ಮ್ಹೌನಲ್ಲಿರುವ ನಾಗರಿಕ ಆಸ್ಪತ್ರೆಯ ಅಧಿಕಾರಿಗಳು ಮತ್ತು ಪೊಲೀಸರು ಈ ನವಜಾತ ಶಿಶುವಿನ ಸಾವು ಮತ್ತು ಪೋಷಕರು ಯಾರು ಎಂಬ ಬಗ್ಗೆ ತನಿಖೆ ನಡೆಸಲು ಆರಂಭಿಸಿದ್ದಾರೆ.
ಇದನ್ನು ಓದಿದ್ದೀರಾ? ಹಾಸನ l ನವಜಾತ ಶಿಶು ಮೃತ ದೇಹ ರಾಜಕಾಲುವೆಯಲ್ಲಿ ಪತ್ತೆ
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಮ್ಹೌ ನಾಗರಿಕ ಆಸ್ಪತ್ರೆಯ ಉಸ್ತುವಾರಿ ಡಾ.ಎಚ್.ಆರ್. ವರ್ಮಾ, “ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ ಈ ಘಟನೆ ಬೆಳಗಿನ ಜಾವ 1:30ರಿಂದ 2 ಗಂಟೆಯ ನಡುವೆ ನಡೆದಿದೆ. ಈ ಅವಧಿಯಲ್ಲಿ ಬಾಲಕಿಯೊಬ್ಬಳು ಶೌಚಾಲಯಕ್ಕೆ ಹೋಗುತ್ತಿರುವುದು ಕಂಡುಬಂದಿದೆ. ಆಕೆಯ ಮಗುವೇ ಇದಾಗಿರಬಹುದು ಎಂಬ ಅನುಮಾನವಿದೆ” ಎಂದಿದ್ದಾರೆ.
“17 ವರ್ಷದ ಬಾಲಕಿ ಹೊಟ್ಟೆ ನೋವೆಂದು ಹೇಳಿ ಆಸ್ಪತ್ರೆಗೆ ಶುಕ್ರವಾರ ರಾತ್ರಿ ಸುಮಾರು 9 ಗಂಟೆಗೆ ದಾಖಲಾಗಿದ್ದಳು ಎಂಬುದು ತಿಳಿದುಬಂದಿದೆ. ಬಾಲಕಿ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿರುವ ಸಾಧ್ಯತೆಯಿದೆ” ಎಂದು ಡಾ.ಎಚ್.ಆರ್. ವರ್ಮಾ ಹೇಳಿದ್ದಾರೆ.
ಇನ್ನು ಈ ಬಾಲಕಿಯು ಈ ಘಟನೆ ನಡೆದ ಕೆಲವೇ ಸಮಯದಲ್ಲಿ ನಾಪತ್ತೆಯಾಗಿದ್ದಾಳೆ. ಅಪರಿಚಿತ ವ್ಯಕ್ತಿಯೊಂದಿಗೆ ಆಸ್ಪತ್ರೆಯಿಂದ ತೆರಳಿರುವುದು ಕಂಡುಬಂದಿದೆ. ಬಹುಶಃ ಶೌಚಾಲಯದಲ್ಲಿ ಶಿಶು ಹುಟ್ಟುವಾಗಲೇ ಮೃತಪಟ್ಟಿರಬಹುದು. ಅದನ್ನು ನಾಯಿಯೊಂದು ತೆಗೆದುಕೊಂಡು ಹೋಗಿದೆ” ಎಂದಿದ್ದಾರೆ.
“ಶನಿವಾರ ಬೆಳಿಗ್ಗೆ ಶಿಶುವಿನ ಮೃತದೇಹದ ನಾವು ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿ ಇನ್ನಷ್ಟೇ ಸಿಗಬೇಕು. ಪ್ರಾಥಮಿಕ ವರದಿಯ ಪ್ರಕಾರ ಹೆರಿಗೆ ಅಕಾಲಿಕವಾಗಿದೆ ಎಂದು ಹೇಳಲಾಗಿದೆ. ಪೊಲೀಸರು ಈ ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಪೊಲೀಸರಿಗೆ ಎಲ್ಲಾ ಸಿಸಿಟಿವಿ ದೃಶ್ಯವನ್ನು ನಾವು ಒದಗಿಸುತ್ತೇವೆ” ಎಂದು ವರ್ಮಾ ಹೇಳಿದ್ದಾರೆ.
