ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ದೇಶಾದ್ಯಂತ ಮುಸ್ಲಿಂ ವಿರೋಧಿ ದ್ವೇಷವನ್ನು ಮಾಧ್ಯಮಗಳು, ಸಂಘಪರಿವಾರ ವ್ಯಾಪಕವಾಗಿ ಹರಡುತ್ತಿವೆ. ಈ ನಡುವೆ, ಮುಸ್ಲಿಮರನ್ನು ಗುರಿಯಾಗಿಸಿಕೊಂಡು ದ್ವೇಷಪೂರಿತ ಮತ್ತು ಆಕ್ಷೇಪಾರ್ಹ ಪೋಸ್ಟರ್‌ವೊಂದನ್ನು ಪಶ್ಚಿಮ ಬಂಗಾಳದ ಕಲ್ಯಾಣಿಯಲ್ಲಿರುವ ಬಿಧನ್ ಚಂದ್ರ ಕೃಷಿ ವಿಶ್ವವಿದ್ಯಾಲಯದ ಸೂಚನಾ ಫಲಕದಲ್ಲಿ ಹಾಕಲಾಗಿದೆ. ಈ ಪೋಸ್ಟರ್ ಶಿಕ್ಷಣ ಸಂಸ್ಥೆಗಳಲ್ಲಿ ಕೋಮುದ್ವೇಷದ ಬೋಧನೆ ನಡೆಯುತ್ತಿದೆ ಎಂಬುದನ್ನು ಸೂಚಿಸುತ್ತದೆ ಎಂಬ ಅಭಿಪ್ರಾಯ, ಆತಂಕ ವ್ಯಕ್ತವಾಗಿದೆ.
ವಿಶ್ವವಿದ್ಯಾಲಯದ ಪ್ರವೇಶದಲ್ಲಿ ಹಾಕಲಾಗಿರುವ ದ್ವೇಷದ ಪೋಸ್ಟರ್‌ನಲ್ಲಿ ‘ನಾಯಿಗಳು ಮತ್ತು ಮುಸ್ಲಿಮರಿಗೆ ಅವಕಾಶವಿಲ್ಲ’ ಎಂದು ಬರೆಯಲಾಗಿದೆ. ಅಲ್ಲದೆ, ‘ಎಲ್ಲ ಕಣ್ಣುಗಳು ಪಹಲ್ಗಾಮ್ ಮೇಲಿದೆ’ ಮತ್ತು ‘ಭಯೋತ್ಪಾದನೆ ಎಂದರೆ ಇಸ್ಲಾಂ’ ಎಂದೂ ಬರೆಯಲಾಗಿದೆ. ಇದು ಮುಸ್ಲಿಮರ ವಿರುದ್ಧದ ದ್ವೇಷವನ್ನು ಪ್ರತಿಧ್ವನಿಸುತ್ತದೆ.
ಈ ವರದಿ ಓದಿದ್ದೀರಾ?: ಸರ್ವಪಕ್ಷಗಳ ಸಭೆಗೆ ಪ್ರಧಾನಿ ಮೋದಿ ಗೈರು: ದೇಶಕ್ಕಿಂತ ಚುನಾವಣೆಯೇ ಮುಖ್ಯವಾಯಿತಾ?
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ನಡೆದ ಭಯೋತ್ಪಾದಕ ದಾಳಿ ಘಟನೆಯನ್ನು ಬಲಪಂಥೀಯ ಸಂಘಟನೆಗಳು ಮತ್ತು ಹಿಂದುತ್ವವಾದಿಗಳು ಮುಸ್ಲಿಂ ವಿರೋಧಿ ಭಾವನೆಯನ್ನು ಪ್ರಚೋದಿಸಲು ಬಳಸಿಕೊಳ್ಳುತ್ತಿದ್ದಾರೆ. ಅದರಲ್ಲೂ, ವಿಶೇಷವಾಗಿ ಕಾಶ್ಮೀರಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಕೋಮು ದ್ವೇಷವನ್ನು ಹರಡಲಾಗುತ್ತಿದೆ. ಆದರೆ, ಪಹಲ್ಗಾಮ್ ದಾಳಿ ವೇಳೆ ಸಂತ್ರಸ್ತರ ರಕ್ಷಣೆ ಮತ್ತು ಸಹಾಯಕ್ಕೆ ಧಾವಿಸಿದ್ದೂ ಮುಸ್ಲಿಮರೇ ಎಂಬ ಅಂಶಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಚಲಾಗುತ್ತಿದೆ.