ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸುವವರೆಗೂ ಸರ್ಕಾರವನ್ನು ರಚಿಸಬಾರದು. 2019ರಲ್ಲಿ ಕಸಿದುಕೊಳ್ಳಲಾಗಿರುವ ರಾಜ್ಯವನ್ನು ಕೇಂದ್ರ ಸರ್ಕಾರ ಮರಳಿ ನೀಡಬೇಕು ಎಂದು ಅವಾಮಿ ಇತ್ತೆಹಾದ್ ಪಕ್ಷದ (ಎಐಪಿ) ಅಧ್ಯಕ್ಷ, ಬಾರಾಮುಲ್ಲಾ ಸಂಸದ ಇಂಜಿನಿಯರ್ ರಶೀದ್ ಆಗ್ರಹಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಫಲಿತಾಂಶ ಹೊರಬೀಳುತ್ತಿದೆ. ಕಾಂಗ್ರೆಸ್ ಮತ್ತು ಎನ್‌ಸಿ ಮೈತ್ರಿಕೂಟ ಮುನ್ನಡೆ ಸಾಧಿಸಿದ್ದು, ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇದೆ. ಈ ನಡುವೆ, ಜಮ್ಮು ಮತ್ತು ಕಾಶ್ಮೀರದ ಪ್ರಮುಖ ರಾಜಕೀಯ ಪಕ್ಷಗಳಿಗೆ ಕರೆಕೊಟ್ಟಿರುವ ರಶೀದ್, “ಜಮ್ಮು-ಕಾಶ್ಮೀರಕ್ಕೆ ಸಂಪೂರ್ಣ ರಾಜ್ಯತ್ವ ಮರಳುವವರೆಗೂ ಸರ್ಕಾರ ರಚಿಸಬಾರದು” ಎಂದು ಒತ್ತಾಯಿಸಿದ್ದಾರೆ.
“ಚುನಾವಣೆಯಲ್ಲಿ ಒಂದು ಪಕ್ಷ ಅಥವಾ ಮೈತ್ರಿ ಪಕ್ಷಗಳು ಬಹುಮತ ಪಡೆದರೂ ಕೂಡ ಸರ್ಕಾರ ರಚಿಸಬಾರದು. ಎಲ್ಲ ಪಕ್ಷಗಳು ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಮರಳಿ ಸ್ಥಾಪಿಸುವಂತೆ ಕೇಂದ್ರದ ಮುಂದೆ ಬೇಡಿಕೆಯಿಡಬೇಕು” ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯು 90 ಸ್ಥಾನಗಳನ್ನು ಹೊಂದಿದೆ. ಈ ಪೈಕಿ, ಕಾಂಗ್ರೆಸ್ ಮೈತ್ರಿಕೂಟ 49, ಬಿಜೆಪಿ 18, ಪಿಡಿಪಿ 2 ಹಾಗೂ ಇತರರು 9 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಸರ್ಕಾರ ರಚಿಸಲು ಕನಿಷ್ಠ 46 ಸ್ಥಾನಗಳ ಅಗತ್ಯವಿದೆ.