ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಲಿಖಾನ್ ಮಹ್ಮದಾಬಾದ್ ವಿರುದ್ಧದ ತನಿಖಾ ವ್ಯಾಪ್ತಿ ಅವರ ಫೇಸ್‌ಬುಕ್ ಪೋಸ್ಟ್‌ಗೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್ಐಅರ್ ವ್ಯಾಪ್ತಿಯೊಳಗೇ ಇರಬೇಕೇ ಹೊರತು, ಆ ವ್ಯಾಪ್ತಿಯನ್ನು ಇಷ್ಟ ಬಂದಂತೆ ವಿಸ್ತರಿಸಬಾರದು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ.
ತಮಗೆ ಬಂಧನದ ವಿರುದ್ಧ ರಕ್ಷಣೆ ಮಂಜೂರು ಮಾಡಲು ವಿಧಿಸಿರುವ ಷರತ್ತುಗಳನ್ನು ಸಡಿಲಿಸಬೇಕು ಎಂದು ಆಕ್ಷೇಪಿಸಿ ಪ್ರಾಧ್ಯಾಪಕ ಅಲಿಖಾನ್ ಮಹ್ಮದಾಬಾದ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ದೀಪಂಕರ್ ದತ್ ಅವರನ್ನೊಳಗೊಂಡ ನ್ಯಾಯಪೀಠ, “ನಿಮ್ಮ ತನಿಖೆಯನ್ನು ಎಡ, ಬಲ, ಮಧ್ಯ ಎಂದು ಬದಲಿಸಬೇಡಿ. ಕೇವಲ ಎರಡು ಎಫ್‌ಐಅರ್‌ಗಳಿಗೆ ಸಂಬಂಧಿಸಿದಂತೆ ಮಾತ್ರ ನಿಮ್ಮ ಗಮನ ಕೇಂದ್ರೀಕರಿಸಿ” ಎಂದು ಸ್ಪಷ್ಟವಾಗಿ ಸೂಚಿಸಿತು.
ಇದನ್ನು ಓದಿದ್ದೀರಾ? ಆಪರೇಷನ್ ಸಿಂಧೂರ ಬಗ್ಗೆ ಪೋಸ್ಟ್; ಅಶೋಕ ವಿವಿ ಪ್ರಾಧ್ಯಾಪಕ ಅಲಿ ಖಾನ್‌ಗೆ ಮಧ್ಯಂತರ ಜಾಮೀನು
ಪ್ರಾಧ್ಯಾಪಕ ಅಲಿಖಾನ್ ಮಹ್ಮದಾಬಾದ್ ಅವರ ನಿವಾಸ ಮತ್ತಿತರ ಸ್ಥಳಗಳ ಶೋಧ ನಡೆಸಬೇಕು ಎಂದು ರಾಜ್ಯ ಸರಕಾರ ಹೇಳಿಕೆ ನೀಡಿದ ಬೆನ್ನಿಗೇ ನ್ಯಾಯಾಲಯ ಈ ನಿರ್ದೇಶನ ನೀಡಿದೆ.
“ತನಿಖೆಯು ಕೇವಲ ಎರಡು ಎಫ್‌ಐಆರ್‌ಗಳಿಗೆ ಮಾತ್ರ ಸೀಮಿತವಾಗಿರಬೇಕು. ತನಿಖಾ ವರದಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು. ಮಧ್ಯಂತರ ರಕ್ಷಣೆ ಮುಂದುವರಿಯಲಿದೆ ಎಂದು ನಾವು ಆದೇಶಿಸುತ್ತಿದ್ದೇವೆ” ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ನಿರ್ದೇಶನ ನೀಡಿದೆ.
ಈ ನಡುವೆ, ತನಗೆ ಬಂಧನದಿಂದ ರಕ್ಷಣೆ ಮಂಜೂರು ಮಾಡುವ ವೇಳೆ, ನಾನು ಯಾವುದೇ ಸಾಮಾಜಿಕ ಪೋಸ್ಟ್‌ಗಳನ್ನು ಮಾಡಬಾರದು ಎಂದು ವಿಧಿಸಲಾಗಿರುವ ಷರತ್ತನ್ನು ಸಡಿಲಿಸಬೇಕು ಎಂದು ಪ್ರಾಧ್ಯಾಪಕ ಅಲಿಖಾನ್ ಮಾಡಿದ ಮನವಿಯನ್ನು ತಳ್ಳಿ ಹಾಕಿದ ನ್ಯಾಯಪೀಠ, “ಈ ಆದೇಶವು ನಿಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಯಾವುದೇ ಪೋಸ್ಟ್ ಮಾಡುವಂತಿಲ್ಲ ಎಂಬ ಷರತ್ತಿಗೆ ಒಳಪಟ್ಟಿದೆಯೇ ಹೊರತು, ನೀವು ಸಾಮಾನ್ಯ ಪೋಸ್ಟ್‌ಗಳನ್ನು ಮಾಡಲು ಯಾವುದೇ ನಿರ್ಬಂಧವನ್ನು ಒಳಗೊಂಡಿಲ್ಲ” ಎಂದು ಸ್ಪಷ್ಟಪಡಿಸಿತು.