ಇಂಡಿಯಾ ಒಕ್ಕೂಟಕ್ಕೆ ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾಗಿಲ್ಲ. ಪಶ್ಚಿಮ ಬಂಗಾಳದಲ್ಲಿ ಎಲ್ಲ 42 ಲೋಕಸಭಾ ಕ್ಷೇತ್ರದಲ್ಲಿಯೂ ಟಿಎಂಸಿ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದೆ. ಈ ನಡುವೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ‘ಚುನಾವಣೆಯಲ್ಲಿ ಮೈತ್ರಿಗಾಗಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಇಂದಿಗೂ ಬಾಗಿಲು ತೆರೆದಿದೆ’ ಎಂದು ಹೇಳಿದ್ದಾರೆ.
ಪಾಟ್ನಾದಲ್ಲಿ ಪ್ರತಿಪಕ್ಷಗಳ ರ‍್ಯಾಲಿಗೆ ಮುನ್ನ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ವಕ್ತಾರ ಜೈರಾಮ್ ರಮೇಶ್, ನಾವು ಇನ್ನೂ ಭರವಸೆ ಹೊಂದಿದ್ದೇವೆ. ಬಿಜೆಪಿಯನ್ನು ಸೋಲಿಸುವುದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆದ್ಯತೆಯಾಗಿದೆ. ಹಾಗಿದ್ದಾಗ ಭಾರತದ ಮೈತ್ರಿಯಲ್ಲಿ ನಾನು ಸೇರುತ್ತೇನೆ ಎಂದು ಅವರು ಹೇಳುವ ಭರವಸೆಯಿದೆ ಎಂದು ತಿಳಿಸಿದ್ದಾರೆ.
“ನಾವು ಇಂದಿಗೂ ಮೈತ್ರಿಯ ಬಾಗಿಲನ್ನು ಮುಚ್ಚಿಲ್ಲ. ಮಮತಾರ ಟಿಎಂಸಿ ಎಲ್ಲಾ 42 ಸ್ಥಾನಗಳಲ್ಲಿ (ಪಶ್ಚಿಮ ಬಂಗಾಳದಲ್ಲಿ) ಸ್ಪರ್ಧಿಸುವುದಾಗಿ ಈಗಾಗಲೇ ಘೋಷಿಸಿದೆ, ಆದರೆ ಅವರು ಎಲ್ಲಿ ಸ್ಪರ್ಧಿಸುತ್ತಾರೆ ಎಂಬ ಘೋಷಣೆ ಮಾಡಿಲ್ಲ. ಮೈತ್ರಿಯ ಮಾತುಕತೆ ಮುಂದುವರೆದಿದೆ, ಟಿಎಂಸಿಗೆ ಬಾಗಿಲು ತೆರೆದಿದೆ. ಮಮತಾ ಅಂತಿಮ ಮಾತು ಹೇಳುವವರೆಗೂ ನಾವು ಅಂತಿಮವಾಗಿ ಏನು ಹೇಳಲಾಗದು,” ಎಂದು ಹೇಳಿದರು.
ಬಿಹಾರದ ರಾಜಧಾನಿ ಪಾಟ್ನಾದಲ್ಲಿ ನಡೆಯಲಿರುವ ರ‍್ಯಾಲಿಯ ಬಗ್ಗೆ ಈ ಸಂದರ್ಭದಲ್ಲೇ ಮಾತನಾಡಿದ ರಮೇಶ್, ಇದು ಜಂಟಿ ವಿರೋಧ ಪಕ್ಷದ ರ‍್ಯಾಲಿಯಾಗಿದ್ದು, ಶನಿವಾರ ಪ್ರಧಾನಿ ಪಾಟ್ನಾಗೆ ಹೋದ ಬಳಿಕವೇ ಶುರುವಾಗಲಿದೆ. ಇದು ಬಹಳ ಮಹತ್ವದ ರಾಜಕೀಯ ರ‍್ಯಾಲಿಯಾಗಿದೆ ಮತ್ತು ಇದು ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳನ್ನು ಸೋಲಿಸಲು ಪ್ರತಿಪಕ್ಷಗಳ ಒಗ್ಗಟ್ಟಿನ ಪ್ರದರ್ಶನವಾಗಿದೆ ಎಂದರು.
ಮಾಜಿ ಕಾಂಗ್ರೆಸ್ ಅಧ್ಯಕ್ಷ ಮತ್ತು ವಯನಾಡು ಸಂಸದ ರಾಹುಲ್ ಗಾಂಧಿ ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅದಕ್ಕಾಗಿ ಭಾರತ್ ಜೋಡೋ ಯಾತ್ರೆಗೆ ವಿರಾಮ ನೀಡಿದ್ದಾರೆ ಎಂದು ರಮೇಶ್ ತಿಳಿಸಿದರು. ರಾಹುಲ್ ಗಾಂಧಿ ಅವರು ವಿರೋಧ ಪಕ್ಷದ ರ‍್ಯಾಲಿಗಾಗಿ ಪಾಟ್ನಾಗೆ ಹೋಗಬೇಕಾಗಿದೆ. ಆದ್ದರಿಂದ ಸ್ವಲ್ಪ ಬದಲಾವಣೆಯಾಗಿದೆ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಅದರಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಲೋಕದಳದ ಭಾಗವಹಿಸುವಿಕೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ರಮೇಶ್, ಅಲಿಗಢದಲ್ಲಿ ನಡೆದ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರನ್ನು ‘ನಿಜವಾದ’ ಲೋಕದಳ ಸ್ವಾಗತಿಸಿತು. ಮಾಜಿ ಪ್ರಧಾನಿಗಳಾದ ಚೌಧರಿ ಚರಣ್ ಸಿಂಗ್, ಇಂದಿರಾ ಗಾಂಧಿ ಮತ್ತು ಲೋಕದಳದ ಪೋಸ್ಟರ್‌ಗಳು, ಬ್ಯಾನರ್‌ಗಳು ಮತ್ತು ಹೋರ್ಡಿಂಗ್‌ಗಳು ಅಲ್ಲಿದ್ದವು ಎಂದರು.
“ಅದು ನಿಜವಾದ ಲೋಕದಳ, ಅಸಲಿ ಲೋಕದಳ, ಆರ್‌ಎಲ್‌ಡಿ (ರಾಷ್ಟ್ರೀಯ ಲೋಕದಳ) ನಕಲಿ ಲೋಕದಳ,” ಎಂದು ಪ್ರತಿಪಾದಿಸಿದರು. ಕೇಂದ್ರ ಸರ್ಕಾರ ಇತ್ತೀಚೆಗೆ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಿ ಗೌರವಿಸಿದ ನಂತರ ಆರ್‌ಎಲ್‌ಡಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಸೇರ್ಪಡೆಗೊಂಡಿದೆ.