ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ‘ಫ್ಯಾಂಟಸಿ ಕ್ರಿಕೆಟ್ ಅಪ್ಲಿಕೇಶನ್’ನ ಜಾಹೀರಾತನ್ನು ಸಾಮಾಜಿಕ ಜಾಲತಾಣಗಳ ತಮ್ಮ ಖಾತೆಯಲ್ಲಿ ಹಂಚಿಕೊಂಡ ಬಳಿಕ ಭಾರೀ ಟ್ರೋಲ್‌ಗೆ ಗುರಿಯಾಗಿದ್ದಾರೆ. ಬಿಜೆಪಿಯ ಮಾಜಿ ಸಂಸದರೂ ಆಗಿರುವ ಗಂಭೀರ್ ನೆಟ್ಟಿಗರ ಟ್ರೋಲ್‌ನಿಂದ ಮುಜುಗರಕ್ಕೆ ಸಿಲುಕಿದ್ದಾರೆ.
ಬೆಟ್ಟಿಂಗ್ ಅಪ್ಲಿಶೇಷನ್ ಆಗಿರುವ ‘ರಿಯಲ್ 11’ನ ಪ್ರಚಾರಕ್ಕಾಗಿ ಅದರ ಜಾಹೀರಾತನ್ನು ಇನ್ಸ್‌ಟಾಗ್ರಾಂ, ಎಕ್ಸ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಗಂಭೀರ್ ಹಂಚಿಕೊಂಡಿದ್ದಾರೆ. ಅವರು ಜಾಹೀರಾತನ್ನು ಹಂಚಿಕೊಂಡ ಕೆಲವೇ ನಿಮಿಷಗಳಲ್ಲಿ ಅವರ ಅಭಿಮಾನಿಗಳು ‘ಬೆಟ್ಟಿಂಗ್ ಅಪ್ಲಿಕೇಶನ್’ಅನ್ನು ಪ್ರಚಾರ ಮಾಡುತ್ತಿರುವ ಗಂಭೀರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟೀಕೆ ಮಾಡಿದ್ದಾರೆ.
ಜಾಹೀರಾತನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ಗಂಭೀರ್, “ಆಶಾದಾಯಕವಾಗಿ, ಭಾರತವು T20 ಕ್ರಿಕೆಟ್ ಸರಣಿಯಲ್ಲಿ ಬಾಂಗ್ಲಾದೇಶದ ವಿರುದ್ಧ ತಮ್ಮ ಪ್ರಾಬಲ್ಯವನ್ನು ಮುಂದುವರೆಸುತ್ತದೆ. Real11official ಜೊತೆಗೆ ಟಿ20ಯ ಮೂರು ಪಂದ್ಯಗಳ ಸರಣಿಯನ್ನು ನೋಡಿ, ಆನಂದಿಸಿರಿ. ಭಾರತ ತಂಡವು 3-0 ಅಂತರದಲ್ಲಿ ಸರಳಿಯನ್ನು ಗೆಲ್ಲುತ್ತದೆಯೇ? ನಿಮ್ಮ ಅಭಿಪ್ರಾಯವನ್ನು ಹೌದು/ಇಲ್ಲವೆಂದು ಹಂಚಿಕೊಳ್ಳಿ ಹಾಗೂ ತ್ವರಿತ ನಗದು ಬಹುಮಾನಗಳನ್ನು ಪಡೆಯಿರಿ” ಎಂದು ಪೋಸ್ಟ್ ಮಾಡಿದ್ದಾರೆ.
ಈ ಹಿಂದೆ, ಇದೇ ಗಂಭೀರ್ ಅವರು ಪಾನ್ ಮಸಾಲಾ ಮತ್ತು ಬೆಟ್ಟಿಂಗ್ ಅಪ್ಲಿಕೇಶನ್‌ಗಳನ್ನು ಪ್ರಚಾರ ಮಾಡಿದ ಮಾಜಿ ಕ್ರಿಕೆಟಿಗರನ್ನು ಟೀಕಿಸಿದ್ದರು. ಇದೀಗ, ಅವರೇ ‘ಬೆಟ್ಟಿಂಗ್ ಅಪ್ಲಿಕೇಶನ್’ಅನ್ನು ಪ್ರಚಾರ ಮಾಡುತ್ತಿದ್ದಾರೆ. ಇದು ಗಂಭೀರ್ ಅವರ ‘ಡಬಲ್ ಸ್ಟ್ಯಾಂಡ್’ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.