ನಡತೆಯ ಬಗ್ಗೆ ಶಂಕೆ ವ್ಯಕ್ತಪಡಿಸಿ 40 ವರ್ಷದ ಬುಡಕಟ್ಟು ಮಹಿಳೆಯೊಬ್ಬರನ್ನು ನಡುಬೀದಿಯಲ್ಲಿ ಬೆತ್ತಲೆಗೊಳಿಸಿ, ಕೂದಲು ಬೋಳಿಸಿ, ತೀವ್ರವಾಗಿ ಹಲ್ಲೆ ನಡೆಸಿದ ಅಮಾನವೀಯ ಘಟನೆ ರಾಜಸ್ಥಾನದ ಬಾನ್ಸ್‌ವಾರಾ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಪತಿ ಸೇರಿದಂತೆ ಆತನ ಸಂಬಂಧಿಕರಾದ ಒಟ್ಟು ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸೆಪ್ಟೆಂಬರ್ 1 ರಂದು ಈ ಘಟನೆ ನಡೆದಿದ್ದು, ಗುರುವಾರ (ಸೆಪ್ಟೆಂಬರ್ 3) ದೌರ್ಜನ್ಯದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಕೆಯನ್ನು ಪತಿ ಮತ್ತು ಇತರರು ಗ್ರಾಮದ ರಸ್ತೆಯಲ್ಲಿ ಬರಿಗಾಲಿನಲ್ಲಿ ನಡೆಸಿಕೊಂಡು ಹೋಗಿದ್ದಾರೆ. ನಂತರ ತಲೆ ಬೋಳಿಸಿ, ಹಲವರು ಸೇರಿ ಥಳಿಸಿದ್ದಾರೆ. ವೈರಲ್ ಆಗಿರುವ ವಿಡಿಯೊದಲ್ಲಿ, ಕೆಲ ಮಹಿಳೆಯರೇ ಸಂತ್ರಸ್ತೆಯ ಬಟ್ಟೆ ಹರಿದು, ದೊಣ್ಣೆಯಿಂದ ಹೊಡೆಯುತ್ತಿರುವುದು ಸೆರೆಯಾಗಿದೆ. ಈ ವೇಳೆ ಅಲ್ಲಿದ್ದ ಮಕ್ಕಳು ಸೇರಿದಂತೆ ಇತರರು ನಗುತ್ತಾ, ವಿಡಿಯೊ ಚಿತ್ರೀಕರಿಸುತ್ತಿದ್ದರು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಬಾನ್ಸ್‌ವಾರಾ ಡಿವೈಎಸ್‌ಪಿ ಬಾಬು ಲಾಲ್ ರೇಗರ್, “ಸೆ. 3 ರಂದು ವಿಡಿಯೊ ವೈರಲ್ ಆಗಿದ್ದರೂ, ಸೆ. 1 ರಂದೇ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಪತಿ-ಪತ್ನಿ ನಡುವೆ ಭಿನ್ನಾಭಿಪ್ರಾಯವಿತ್ತು. ಮಹಿಳೆಯ ಪತಿ ಮತ್ತು ಆತನ ಆರು ಸಂಬಂಧಿಗಳನ್ನು ಬಂಧಿಸಲಾಗಿದೆ” ಎಂದು ತಿಳಿಸಿದ್ದಾರೆ. “ಸಂತ್ರಸ್ತೆ ನೆರೆಯ ರಾಜ್ಯಕ್ಕೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಹತ್ತು ದಿನಗಳ ಹಿಂದೆಯಷ್ಟೇ ಆಕೆ ಗುತ್ತಿಗೆದಾರನ ಬಳಿಗೆ ಕೆಲಸಕ್ಕೆ ತೆರಳಿದ್ದರು. ಆದರೆ, ಆಕೆಯ ನಡತೆಯ ಮೇಲೆ ಶಂಕೆಗೊಂಡ ಪತಿ, ಆಕೆಯನ್ನು ಅಲ್ಲಿಂದ ವಾಪಸ್ ಕರೆತಂದು ಸೆಪ್ಟೆಂಬರ್ 1ರಂದು ಈ ರೀತಿ ಹಲ್ಲೆ ನಡೆಸಿದ್ದಾನೆ” ಎಂದು ಅರ್ತುನಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ವಿನೋದ್ ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ.
ಈ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ, ಮಹಿಳೆಯ ಮೇಲೆ ಹಲ್ಲೆ, ಉದ್ದೇಶಪೂರ್ವಕವಾಗಿ ಬೆತ್ತಲೆಗೊಳಿಸುವಿಕೆ, ಗುಂಪುಗಾರಿಕೆ ಮತ್ತು ಐಟಿ ಕಾಯ್ದೆ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತೆಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಬಂಧಿತ ಏಳು ಮಂದಿಯನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಗೋವಿಂದ್ ಸಿಂಗ್ ದೋಟಾಸರಾ, “ಇದು ರಾಜಸ್ಥಾನಕ್ಕೆ ತಲೆತಗ್ಗಿಸುವಂತಹ ಘಟನೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ‘ಬೇಟಿ ಬಚಾವೋ’ ಮತ್ತು ಮಹಿಳಾ ಸುರಕ್ಷತೆಯ ಬಗ್ಗೆ ದೊಡ್ಡದಾಗಿ ಜಾಹೀರಾತು ನೀಡುವ ಬಿಜೆಪಿ ಸರ್ಕಾರದಲ್ಲಿ, ಪೊಲೀಸರು ಎಷ್ಟೊಂದು ಸಂವೇದನಾರಹಿತರಾಗಿದ್ದಾರೆ ಎಂದರೆ, ಮೂರು ದಿನಗಳ ಕಾಲ ‘ಸಾಕ್ಷ್ಯ’ದ ನೆಪವೊಡ್ಡಿ ಎಸ್‌ಎಚ್‌ಒ ಈ ದೌರ್ಜನ್ಯವನ್ನು ಮುಚ್ಚಿಹಾಕಲು ಯತ್ನಿಸಿದ್ದಾರೆ” ಎಂದು ಗಂಭೀರ ಆರೋಪ ಮಾಡಿದ್ದಾರೆ. ಜೊತೆಗೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.





