ಸಾಲದ ಹಣ ಹಿಂದಿರುಗಿಸಿಲ್ಲ ಎಂಬ ಕಾರಣಕ್ಕೆ 30 ವರ್ಷದ ಮಹಿಳೆಯನ್ನು ಅಪಹರಿಸಿ, ಕೂಡಿಹಾಕಿ, ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಆರೋಪದ ಮೇಲೆ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕಾರ್ಯಪ್ರವೃತ್ತರಾದ ಚಂದ್ರಾಲೇಔಟ್ ಪೊಲೀಸರು ಸಂತ್ರಸ್ತೆಯನ್ನು ರಕ್ಷಿಸಿದ್ದಾರೆ.
ನಜರತ್ ಬೇಗಂ, ರೇಷ್ಮಾ ಭಾನು ಹಾಗೂ ಸುಹೈಲ್ ಬಂಧಿತ ಆರೋಪಿಗಳು. ದೂರಿನ ಪ್ರಕಾರ, ಸಂತ್ರಸ್ತೆಯು ನಜರತ್ ಬಳಿ ವಾರದ ಬಡ್ಡಿ ಲೆಕ್ಕದಲ್ಲಿ ₹50,000 ಹಾಗೂ ರೇಷ್ಮಾ ಬಳಿ ಎರಡು ವರ್ಷಗಳ ಹಿಂದೆ ₹1 ಲಕ್ಷ ಸಾಲ ಪಡೆದಿದ್ದರು. ನಜರತ್‌ಗೆ ಪ್ರತಿ ವಾರ ₹5,000 ಕಟ್ಟುತ್ತಿದ್ದ ಸಂತ್ರಸ್ತೆ, ಕಳೆದ ಎರಡು ವಾರಗಳಿಂದ ಹಣ ನೀಡಿರಲಿಲ್ಲ. ಅಲ್ಲದೆ, ರೇಷ್ಮಾಗೆ ಕಳೆದ ಆರು ತಿಂಗಳಿಂದ ಬಡ್ಡಿ ಕಟ್ಟಿರಲಿಲ್ಲ. ಹಣಕ್ಕಾಗಿ ರೇಷ್ಮಾ ನಿರಂತರವಾಗಿ ಬೆದರಿಕೆ ಹಾಕುತ್ತಿದ್ದ ಕಾರಣ, ಭಯಭೀತಳಾಗಿದ್ದ ಸಂತ್ರಸ್ತೆ ತನ್ನ ತಾಯಿಯ ಮನೆಗೆ ಹಾಗೂ ನಂತರ ಸ್ನೇಹಿತೆಯೊಬ್ಬಳ ಮನೆಗೆ ವಾಸ್ತವ್ಯ ಬದಲಿಸಿದ್ದರು.
ಆಗಸ್ಟ್ 27 ರಂದು ಹಣ ನೀಡುವುದಾಗಿ ನಂಬಿಸಿ ನಜರತ್ ಸಂತ್ರಸ್ತೆಯನ್ನು ತನ್ನ ಮನೆಗೆ ಕರೆಸಿಕೊಂಡಿದ್ದಳು. ಮಹಿಳೆ ತನ್ನ ಮಗನೊಂದಿಗೆ ಅಲ್ಲಿಗೆ ಹೋದಾಗ ರೇಷ್ಮಾ, ಆಕೆಯ ಪತಿ ಸುಹೈಲ್ ಹಾಗೂ ಇತರ ಇಬ್ಬರು ಅಲ್ಲಿಗೆ ಬಂದು ಬಾಗಿಲು ಹಾಕಿ ಹಲ್ಲೆ ನಡೆಸಿದ್ದಾರೆ. ನಂತರ ತಾಯಿ-ಮಗನನ್ನು ಆಟೋದಲ್ಲಿ ಕುಂಬಳಗೋಡಿನಲ್ಲಿರುವ ರೇಷ್ಮಾ ಮನೆಗೆ ಬಲವಂತವಾಗಿ ಕರೆದೊಯ್ದು ಕೋಣೆಯೊಂದರಲ್ಲಿ ಕೂಡಿಹಾಕಿ ದೊಣ್ಣೆಯಿಂದ ಥಳಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಇದೇ ವೇಳೆ ಆರೋಪಿ ನಜರತ್, ಸಂತ್ರಸ್ತೆಯನ್ನು ವಿವಸ್ತ್ರಗೊಳಿಸಿ ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಿಸಿದ್ದಾಳೆ. ಹಣ ನೀಡದಿದ್ದರೆ ಈ ವಿಡಿಯೊವನ್ನು ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾಳೆ. ಬಳಿಕ ವಕೀಲರೊಬ್ಬರ ಬಳಿ ಕರೆದೊಯ್ದು ಕೆಲವು ಕಾಗದ ಪತ್ರಗಳಿಗೆ ಬಲವಂತವಾಗಿ ಸಹಿ ಹಾಕಿಸಿಕೊಂಡು, ಮರಳಿ ಕೋಣೆಯಲ್ಲಿ ಕೂಡಿಹಾಕಿದ್ದರು ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.
ಆಗಸ್ಟ್ 31ರಂದು ಶೌಚಾಲಯಕ್ಕೆ ಹೋಗುವಾಗ ಸಂತ್ರಸ್ತೆ ಕೋಣೆಯಿಂದ ಹೊರಬರುವಲ್ಲಿ ಯಶಸ್ವಿಯಾಗಿದ್ದಾಳೆ. ಸ್ವಲ್ಪ ಸಮಯದಲ್ಲೇ ಸ್ಥಳಕ್ಕಾಗಮಿಸಿದ ಚಂದ್ರಾಲೇಔಟ್ ಠಾಣೆ ಪೊಲೀಸರು ಆಕೆಯನ್ನು ರಕ್ಷಿಸಿದ್ದಾರೆ. ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.
”ಸಂತ್ರಸ್ತೆ ಹಾಗೂ ಆರೋಪಿಗಳು ಸ್ನೇಹಿತರಾಗಿದ್ದು, ಹಣಕಾಸಿನ ವಿಚಾರವಾಗಿ ಈ ವಿವಾದ ನಡೆದಿದೆ. ದೂರಿನಲ್ಲಿ ಉಲ್ಲೇಖಿಸಿರುವ ವಿವಸ್ತ್ರಗೊಳಿಸಿದ ಹಾಗೂ ವಿಡಿಯೊ ಮಾಡಿದ ಆರೋಪಗಳ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ” ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.





