- ದುರ್ಬಲಗೊಂಡು ರಾಜಸ್ಥಾನ ಪ್ರವೇಶಿಸಲಿರುವ ಬಿಪೊರ್‌ಜಾಯ್ ಚಂಡಮಾರುತ
- ಚಂಡಮಾರುತ ಹಿನ್ನೆಲೆ ಇದುವರೆಗೆ 94 ಸಾವಿರ ಜನರ ಸ್ಥಳಾಂತರ
ಬಿಪೊರ್‌ಜಾಯ್ ಚಂಡಮಾರುತ ಗುಜರಾತ್ ಕರಾವಳಿಗೆ ಗುರುವಾರ (ಜೂನ್ 15) ರಾತ್ರಿ ಪ್ರವೇಶಿಸಿದೆ. ಸೌರಾಷ್ಟ್ರ ಮತ್ತು ಕಚ್ ತೀರ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿದೆ. ಇದರಿಂದ ಇಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ತೀರ ಪ್ರದೇಶಗಳಲ್ಲಿ ಭಾರೀ ಮಳೆ ಉಂಟಾಗುತ್ತಿದೆ. ಮನೆಗಳು, ಬೆಳೆ, ರಸ್ತೆ, ವಿದ್ಯುತ್ ಸರಬರಾಜು ಮತ್ತು ತಗ್ಗು ಪ್ರದೇಶಗಳಲ್ಲಿ ಅಪಾರ ಹಾನಿಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಭಾರೀ ಮಳೆಯಿಂದ 700ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ ಎಂದು ಗೃಹ ಸಚಿವಾಲಯದ ರಾಜ್ಯ ಖಾತೆ ಸಚಿವ ಹರ್ಷ್ ಸಂಘ ಹೇಳಿದ್ದಾರೆ.
ಎಷ್ಟು ಹಾನಿಯಾಗಿದೆ ಹಾಗೂ ಸಾವು-ನೋವು ಸಂಭವಿಸಿದೆ ಎಂದು ಸರ್ಕಾರ ಸದ್ಯಕ್ಕೆ ಖಚಿತ ಮಾಹಿತಿ ನೀಡಿಲ್ಲ.
ಚಂಡಮಾರುತದ ಪರಿಣಾಮ ಎದುರಿಸುತ್ತಿರುವ ಎಂಟು ಜಿಲ್ಲೆಗಳಲ್ಲಿ ಸಾವಿರಕ್ಕೂ ಅಧಿಕ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಭಾವನಗರನಲ್ಲಿ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಜಾನುವಾರುಗಳನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದ ತಂದೆ ಹಾಗೂ ಮಗ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಬಿಪೊರ್‌ಜಾಯ್ ಚಂಡಮಾರುತ ಹಿನ್ನೆಲೆ ಮುಂಜಾಗ್ರತೆಯಾಗಿ ಸಮುದ್ರ ತೀರದ ಜನವಸತಿ ಪ್ರದೇಶಗಳಿಂದ ಈವರೆಗೆ ಸುಮಾರು 94 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ. ಅವರಿಗಾಗಿ 8 ಜಿಲ್ಲೆಗಳಲ್ಲಿ 1,521 ತಾತ್ಕಾಲಿಕ ಶಿಬಿರ ಸ್ಥಾಪಿಸಲಾಗಿದೆ. ಸ್ಥಳಾಂತರಗೊಂಡವರಲ್ಲಿ 8,900 ಮಕ್ಕಳು, 1,100 ಗರ್ಭಿಣಿಯರು ಇದ್ದಾರೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿರುವ ಒಟ್ಟು ಸಂತ್ರಸ್ತರ ಪೈಕಿ 46,823 ಮಂದಿ ಕಚ್ ಜಿಲ್ಲೆಯವರಾಗಿದ್ದು, ಉಳಿದವರು ಪೋರಬಂದರ್, ಜುನಾಗಢ, ಗಿರ್-ಸೋಮನಾಥ್, ಜಮ್ನಗರ್, ದೇವಭೂಮಿ ದ್ವಾರ್ಕಾ, ಮೊರ್ಬಿ ಮತ್ತು ಸೌರಾಷ್ಟ್ರ ಭಾಗದ ರಾಜ್ಕೋಟ್ ನವರಾಗಿದ್ದಾರೆ ಎಂದು ಮಾಧ್ಯಮಗಳು ತಿಳಿಸಿವೆ.
ರಾಜಸ್ಥಾನದತ್ತ ಬಿಪೊರ್‌ಜಾಯ್
ಗುಜರಾತ್‌ಗೆ ಅಪ್ಪಳಿಸಿ, ಅಬ್ಬರಿಸುತ್ತಿರುವ ಬಿಪೊರ್‌ಜಾಯ್ ಚಂಡಮಾರುತ ಈಗ ರಾಜಸ್ಥಾನದ ಕಡೆ ಮುಖ ಮಾಡಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಬಾರ್ಮೆರ್, ಜಾಲೋರ್, ಜೈಸಲ್ಮರ್, ಸಿರೋಹಿ, ಜೋದ್ಪುರ, ಪಾಲಿ ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್’ ಘೋಷಣೆ ಮಾಡಿದೆ.
ಪ್ರಬಲ ಚಂಡಮಾರುತವಾಗಿ ಗುಜರಾತಿಗೆ ಅಪ್ಪಳಿಸಿದ್ದ ಬಿಪೊರ್‌ಜಾಯ್ ಕ್ರಮೇಣ ದುರ್ಬಲಗೊಂಡು ಸೌರಾಷ್ಟ್ರ ಮತ್ತು ಕಳ್ ಮೂಲಕ ಶುಕ್ರವಾರ ಸಂಜೆ ದಕ್ಷಿಣ ರಾಜಸ್ಥಾನ ಪ್ರವೇಶಿಸಲಿದೆ ಎಂದು ಐಎಂಡಿ ತಿಳಿಸಿದೆ.
ಹವಾಮಾನ ಇಲಾಖೆ ಎಚ್ಚರಿಕೆ ಹಿನ್ನೆಲೆಯಲ್ಲಿ ಜೋಧಪುರ ವಿಶ್ವವಿದ್ಯಾಲಯವು ಶುಕ್ರವಾರ ಮತ್ತು ಶನಿವಾರದಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಿದೆ.
ಬಾರ್ಮೆರ್-ಜೋದ್ಪುರ ನಡುವೆ ಸಂಚರಿಸಬೇಕಿದ್ದ ಪ್ಯಾಸೆಂಜರ್ ರೈಲುಗಳನ್ನು ಎರಡು ದಿನ ರದ್ದು ಮಾಡಲಾಗಿದೆ.
ಬಿಪೊರ್‌ಜಾಯ್ ಚಂಡಮಾರುತ ಹಿನ್ನೆಲೆ ಬಾರ್ಮೆರ್ ಮತ್ತು ಜಾಲೋರನಲ್ಲಿ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವವರಿಗೆ ಬೇರೆಡೆ ತೆರಳುವಂತೆ ಸೂಚನೆ ನೀಡಲಾಗಿದೆ.
ಈ ಸುದ್ದಿ ಓದಿದ್ದೀರಾ? ದೆಹಲಿ | ಕೋಚಿಂಗ್ ಸೆಂಟರ್‌ನಲ್ಲಿ ಬೆಂಕಿ ಅವಘಡ; ಹಗ್ಗದ ಸಹಾಯದಿಂದ ಕೆಳಕ್ಕೆ ಜಿಗಿದ ವಿದ್ಯಾರ್ಥಿಗಳು
ಜೈಸಲ್ಮರ್‌ನ ಡಬ್ಬಾ ಗ್ರಾಮದಿಂದ 450 ಜನರನ್ನು ಸ್ಥಳಾಂತರಿಸಲಾಗಿದೆ. ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ, ನರೇಗಾ ಕಾಮಗಾರಿಗಳನ್ನು ನಿಲ್ಲಿಸಲಾಗಿದೆ. ಭಾರೀ ಮಳೆಯ ಸೂಚನೆ ನೀಡಲಾಗಿದ್ದು ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಬಿಪೊರ್‌ಜಾಯ್ ಚಂಡಮಾರುತ ಹಿನ್ನೆಲೆ ಬಾರ್ಮೆರ್, ಜಲೋರ್, ಜೈಸಲ್ಮರ್‌ನಲ್ಲಿ ಗುರುವಾರ ಮಧ್ಯಾಹ್ನ ಬಲವಾದ ಗಾಳಿ ಬೀಸುತ್ತಿದ್ದು ಹಲವೆಡೆ ಸಾಧಾರಣ ಮಳೆಯಾಗಿದೆ. ಬಾರ್ಮೆರನ ಗ್ರಾಮೀಣ ಪ್ರದೇಶಗಳಲ್ಲಿ ಗುರುವಾರ ಸಂಜೆಯವರೆಗೆ 20 ಮಿ.ಮೀ ಮಳೆ ದಾಖಲಾಗಿದೆ.