ಸ್ವಯಂ ಘೋಷಿತ ದೇವಮಾನವನ ಕಿರುಕುಳದಿಂದ ಬೇಸತ್ತು 30 ವರ್ಷದ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಭೋಕರ್ದನ್ ತಹಸಿಲ್‌ನ ವಾಲ್ಸಾ ವಡಾಲಾ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಈ ಘಟನೆಗೆ ಸಂಬಂಧಿಸಿದಂತೆ ತನ್ನನ್ನು ತಾನು ದೇವಮಾನವ ಎಂದು ಕರೆದುಕೊಳ್ಳುವ 45 ವರ್ಷದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಕಿರಣ್ ಬಿಡ್ವೆ ತಿಳಿಸಿದ್ದಾರೆ. ಆದರೆ ಸ್ವಯಂ ಘೋಷಿತ ದೇವಮಾನವನ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ.
ಇದನ್ನು ಓದಿದ್ದೀರಾ? ಜನ ಮರುಳೋ ಜಾತ್ರೆ ಮರುಳೋ; ಸ್ವಯಂಘೋಷಿತ ದೇವಮಾನವನ ಪಾದ ಮುಟ್ಟಲು ಪ್ರಾಣತೆತ್ತ ಜನರು
ಈ ಬಗ್ಗೆ ಮೃತ ವ್ಯಕ್ತಿಯ ಪತ್ನಿ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸಂತ್ರಸ್ತ ಮತ್ತು ಆತನ ಪತ್ನಿ ನೆರೆಯ ಬುಲ್ದಾನಾ ಜಿಲ್ಲೆಯ ಧಮಂಗಾವ್‌ನಲ್ಲಿರುವ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಆರೋಪಿ ಸ್ವಯಂ ಘೋಷಿತ ದೇವಮಾನವನನ್ನು ಭೇಟಿಯಾಗಿದ್ದಾರೆ ಎಂದು ಹೇಳಲಾಗಿದೆ.
ಈ ಭೇಟಿಯ ಬಳಿಕ ಆರೋಪಿಯು ನಿರಂತರವಾಗಿ ದಂಪತಿಗೆ ಕಿರುಕುಳ ನೀಡಲು ಆರಂಭಿಸಿದ್ದಾರೆ. ಆಗಾಗ್ಗೆ ದಂಪತಿಗೆ ಕರೆ ಮಾಡಿ ಏನೇನೋ ಬೇಡಿಕೆ ಮುಂದಿಡುತ್ತಿದ್ದನು ಎಂದು ಹೇಳಲಾಗಿದೆ. ಈ ದಂಪತಿಯ ಪುತ್ರಿ ವಾಸ್ತವವಾಗಿ ತನಗೆ ಸೇರಿದವಳು, ತನ್ನವಳು. ಹಾಗಾಗಿ ಆಕೆಯನ್ನು ತನಗೆ ನೀಡಬೇಕು ಎಂದು ದಂಪತಿಗೆ ಒತ್ತಡ ಹೇರಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನು ಓದಿದ್ದೀರಾ? ಹಸು ಕಳ್ಳಸಾಗಣೆ ಶಂಕೆ; ವ್ಯಕ್ತಿಯನ್ನು ಥಳಿಸಿ ಕೊಂದ ಸ್ವಘೋಷಿತ ಗೋ ರಕ್ಷಕರು
ದಂಪತಿಗಳು ತಮ್ಮ ಮಗಳನ್ನು ಸ್ವಯಂ ಘೋಷಿತ ದೇವಮಾನವನಿಗೆ ನೀಡಲು ನಿರಾಕರಿಸಿದಾಗ ಆರೋಪಿಯು ದಂಪತಿಗೆ ಬೆದರಿಕೆ ಹಾಕಲು ಆರಂಭಿಸಿದ್ದಾನೆ. ಮೃತ ವ್ಯಕ್ತಿಯ ಪತ್ನಿಗೆ ಕಿರಕುಳ ನೀಡಲು ಪ್ರಯತ್ನಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಿರಂತರ ಕಿರಕುಳವನ್ನು ಸಹಿಸಲಾಗದೆ ವ್ಯಕ್ತಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಆರೋಪಿಯನ್ನು ಮಂಗಳವಾರ ಬುಲ್ಧಾನಾದ ಗುಮ್ಮಿ ಗ್ರಾಮದಲ್ಲಿ ಬಂಧಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
