ಇಡೀ ದೇಶದಲ್ಲಿ ವಿಜಯ ದಶಮಿ ಸಂಭ್ರಮ ಮನೆ ಮಾಡಿದೆ. ಎಲ್ಲೆಡೆ ದಸರಾ ಆರಚಣೆ ನಡೆಯುತ್ತಿದೆ. ಆದರೆ, ಭಾರತದ ಈ ಒಂದು ಗ್ರಾಮದಲ್ಲಿ ದಸರಾ ಸಂಭ್ರಮವಿಲ್ಲ. ಈ ಗ್ರಾಮದ ಜನರು ದಸರಾ ಆಚರಿಸುವುದೇ ಇಲ್ಲ. ಉತ್ತರ ಪ್ರದೇಶದ ಬಿಸ್ರಖ್ ಗ್ರಾಮದಲ್ಲಿ ವಿಜಯ ದಶಮಿಯನ್ನು ಸಂಭ್ರಮಿಸುವುದಿಲ್ಲ. ಬದಲಾಗಿ ರಾವಣನ ಸಂಹಾರಕ್ಕಾಗಿ ಅವರು ದುಃಖಿಸುತ್ತಾರೆ. ಸಂತಾಪ ವ್ಯಕ್ತಪಡಿಸುತ್ತಾರೆ.
ರಾವಣ ಬಿಸ್ರಖ್ ಗ್ರಾಮದಲ್ಲಿಯೇ ಜನಿಸಿದ್ದರೆಂದು ಗ್ರಾಮದ ಜನರು ನಂಬಿಸಿದ್ದಾರೆ. ತಮ್ಮನ್ನು ತಾವು ರಾವಣನ ಅಂಶಸ್ಥು ಎಂದು ಪರಿಗಣಿಸುತ್ತಾರೆ. ಹೀಗಾಗಿ, ರಾವಣ, ಕುಂಭಕರ್ಣ ಹಾಗೂ ರಾವಣ ಪುತ್ರ ಮೇಘನಾಥನ ಪ್ರತಿಕೃತಿಯನ್ನು ಸುಡುವುದನ್ನು ಈ ಗ್ರಾಮದ ಜನರು ವಿರೋಧಿಸುತ್ತಾರೆ. ರಾವಣನನ್ನು ಪ್ರಾರ್ಥಿಸುತ್ತಾರೆ.
ರಾಮಾಯಣದಲ್ಲಿ ಹೇಳಲಾಗಿರುವಂತೆ ರಾವಣ ಕೆಟ್ಟ ವ್ಯಕ್ತಿಯಲ್ಲ. ಆತ ಶಿವನ ಪರಮ ಭಕ್ತನಾಗಿದ್ದರು. ತನ್ನ ಜ್ಞಾನದಿಂದಲೇ ಶಿವನನ್ನು ಒಲಿಸಿಕೊಂಡಿದ್ದರು ಎಂದು ಗ್ರಾಮಸ್ಥರು ಹೇಳುತ್ತಾರೆ. ಗ್ರಾಮದಲ್ಲಿ ರಾವಣ ಮಂದಿರವೂ ಇದ್ದು, ನಿತ್ಯ ಪೂಜೆ ಸಲ್ಲಿಸುತ್ತಾರೆ.
ಗ್ರಾಮದಲ್ಲಿರುವ ದೇವಾಲಯದಲ್ಲಿ ರಾವಣ ಮತ್ತು ಆತನ ತಂದೆ ವಿಶ್ರವಸ್ ಋಷಿ ಪೂಜಿಸುತ್ತಿದ್ದ ಶಿವಲಿಂಗವನ್ನೇ ಇಂದಿಗೂ ಪೂಜಿಸಲಾಗುತ್ತಿದೆ ಎಂದು ಗ್ರಾಮದ ಜನರು ಹೇಳುತ್ತಾರೆ. ಅಲ್ಲದೆ, ರಾವಣನಿಗೆ ಹೊಸ ದೇವಾಲಯ ಕಟ್ಟುವುದಕ್ಕಾಗಿ ಹಣ ಸಂಗ್ರಹವನ್ನೂ ಮಾಡುತ್ತಿದ್ದಾರೆ.
ಗಮನಾರ್ಹವಾಗಿ ಭಾರತದಲ್ಲಿ ಸುಮಾರು 5 ರಾವಣ ದೇವಾಲಯಗಳಿವೆ. ಉತ್ತರ ಪ್ರದೇಶದ ಬಿಸ್ರಖ್ ಗ್ರಾಮ ಮತ್ತು ಕಾನ್ಪುರ, ಮಧ್ಯಪ್ರದೇಶದ ವಿದಿಶಾ, ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಸಂಗೋಲಾ ಗ್ರಾಮ ಹಾಗೂ ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿ ರಾವಣ ದೇವಾಲಯಗಳಿವೆ.