ಜಾರಿ ನಿರ್ದೇಶನಾಲಯವನ್ನು (ED) ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಇಡಿ ತನ್ನ ಕಾನೂನಿನ ಮಿತಿಯೊಳಗೆ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಬೇಕು. ತನಿಖಾ ಸಂಸ್ಥೆಯು ವಂಚಕನಂತೆ ವರ್ತಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ಅಡಿ ದಾಖಲಾಗುವ ಪ್ರಕರಣಗಳಲ್ಲಿ ಆರೋಪಿಗಳ ಬಂಧನ, ಶೋಧ ಹಾಗೂ ವಶಕ್ಕೆ ಪಡೆಯುವ ಇಡಿ ಅಧಿಕಾರವನ್ನು ಎತ್ತಿಹಿಡಿದ್ದ ಸುಪ್ರೀಂ ಕೋರ್ಟ್ 2022ರ ಜುಲೈ ತೀರ್ಪುನ್ನು ಪ್ರಶ್ನಿಸಿ, ಮೇಲ್ಮನವಿ ಸಲ್ಲಿಸಲಾಗಿತ್ತು. ಆರ್ಜಿಯನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ಉಜ್ಜಲ್ ಭೂಯಾನ್ ಹಾಗೂ ಎನ್. ಕೋಟೀಶ್ವರ್ ಸಿಂಗ್ ಅವರಿದ್ದ ಪೀಠವು ವಿಚಾರಣೆ ನಡೆಸಿದೆ. ಈ ವೇಳೆ, ‘ನೀವು ವಂಚಕನಂತೆ ವರ್ತಿಸಲು ಸಾಧ್ಯವಿಲ್ಲ’ ಎಂದು ಇಡಿಯನ್ನು ಪೀಠವು ತರಾಟೆಗೆ ತೆಗೆದುಕೊಂಡಿದೆ.
ಕೇಂದ್ರ ಸರ್ಕಾರ ಮತ್ತು ED ಪರ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ (ASG) S.V. ರಾಜು, “ಆದಾಗ್ಯೂ, 2019ರಲ್ಲಿಯೇ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ಪಿಎಂಎಲ್‌ಎಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿದಿದೆ. ಹೀಗಾಗಿ, ಪರಿಶೀಲನಾ ಅರ್ಜಿಗಳನ್ನು ವಿಚಾರಣೆಗೆ ತೆಗೆದುಕೊಳ್ಳಬಾರದು” ಎಂದು ವಾದಿಸಿದರು.
“ಹಿಂದಿನ ತೀರ್ಪಿನ ವಿರುದ್ಧ ಸಲ್ಲಿಸಲಾಗಿರುವ ಪರಿಶೀಲನಾ ಅರ್ಜಿಗಳು ಕೇವಲ ‘ಮರೆಮಾಚಿದ ಮೇಲ್ಮನವಿ’ಗಳಾಗಿವೆ. ‘ಪ್ರಭಾವಿ ವಂಚಕರು’ ಕಾನೂನು ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಂಡು ತನಿಖೆಗಳನ್ನು ವಿಳಂಬಗೊಳಿಸುತ್ತಾರೆ. ಇಡಿ ಅಧಿಕಾರಿಗಳು ತನಿಖೆ ನಡೆಸುವ ಬದಲು ನ್ಯಾಯಾಲಯಕ್ಕೆ ಹಾಜರಾಗುವುದರ ಮೇಲೆ ಕೇಂದ್ರೀಕರಿಸುವಂತೆ ಒತ್ತಾಯಿಸುತ್ತಾರೆ” ಎಂದು ಹೇಳಿದರು.
ಆದಾಗ್ಯೂ, ನ್ಯಾಯಮೂರ್ತಿ ಭುಯಾನ್ ಅವರು ಸಂಸ್ಥೆ ದಾಖಲಿಸಿರುವ ಪ್ರಕರಣಗಳಿಗೂ – ಶಿಕ್ಷೆಯಾದ ಪ್ರಕರಣಗಳಿಗೂ ಇರುವ ಭಾರೀ ಅಂತರದ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಈ ಲೇಖನ ಓದಿದ್ದೀರಾ?: ಬಿಹಾರದಲ್ಲಿ ಎದುರಾಳಿಗಳ ಕೈಕಾಲು ಕಟ್ಟಿ, ತಾನು ಗೆಲ್ಲುವುದು ಬಿಜೆಪಿ ಹುನ್ನಾರ
“ನೀವು ವಂಚಕನಂತೆ ವರ್ತಿಸಲು ಸಾಧ್ಯವಿಲ್ಲ. ನೀವು ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಕಳೆದ ಐದು ವರ್ಷಗಳಲ್ಲಿ ಇಡಿ ಸುಮಾರು 5,000 ಇಸಿಐಆರ್‌ಗಳನ್ನು (ಜಾರಿ ಪ್ರಕರಣದ ಮಾಹಿತಿ ವರದಿ) ನೋಂದಾಯಿಸಿದೆ. ಆದರೆ, ಶಿಕ್ಷೆಯ ಪ್ರಮಾಣವು 10%ಗಿಂತ ಕಡಿಮೆಯಿದೆ ಎಂಬುದನ್ನು ನಾನು ಗಮನಿಸಿದ್ದೇನೆ. ಇಡಿಯ ಇಮೇಜ್ ಬಗ್ಗೆಯೂ ನಮಗೆ ಕಳವಳವಿದೆ. 5–6 ವರ್ಷಗಳ ಕಸ್ಟಡಿ ನಂತರ, ಜನರನ್ನು ಖುಲಾಸೆಗೊಳಿಸಿದರೆ, ಖುಲಾಸೆಗೋಂಡವರ ಸಮಯ ನಷ್ಟಕ್ಕೆ ಯಾರು ಜವಾಬ್ದಾರರು” ಎಂದು ನ್ಯಾಯಮೂರ್ತಿ ಭುಯಾನ್ ಪ್ರಶ್ನಿಸಿದ್ದಾರೆ.
ಅಲ್ಲದೆ, ಇದೇ ವರ್ಷದ ಮೇ ತಿಂಗಳಿನಲ್ಲಿ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು TASMAC (ತಮಿಳುನಾಡು ರಾಜ್ಯ ಮಾರ್ಕೆಟಿಂಗ್ ಕಾರ್ಪೊರೇಷನ್)ನ ‘ಮದ್ಯ ಹಗರಣ’ ಪ್ರಕರಣದಲ್ಲಿ ಇಡಿಯನ್ನು ತರಾಟೆಗೆ ತೆಗೆದುಕೊಂಡಿತ್ತು. ‘ಇಡಿ ತನ್ನ ಎಲ್ಲ ಮಿತಿಗಳನ್ನು ದಾಟುತ್ತಿದೆ. ಅದು ದೇಶದ ಫೆಡರಲ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತಿದೆ’ ಎಂದು ಹೇಳಿತ್ತು.