ದೆಹಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಗುರುವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದೆ. ಈ ಬೆನ್ನಲ್ಲೇ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ದೆಹಲಿ ಆರೋಗ್ಯ ಸಚಿವ ಸೌರಭ್ ಭಾರದ್ವಾಜ್, “ಜಾರಿ ನಿರ್ದೇಶನಾಲಯಕ್ಕೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನೆಯಲ್ಲಿ ಬರೀ 70,000 ರೂಪಾಯಿ ಲಭಿಸಿದೆ” ಎಂದು ಹೇಳಿದರು.
“ಮುಖ್ಯಮಂತ್ರಿ ಕೇಜ್ರಿವಾಲ್ ಮನೆಯಲ್ಲಿ ಇಡಿ ಶೋಧ ಕಾರ್ಯಾಚರಣೆ ನಡೆಸಿದೆ. ಅವರಿಗೆ ಬರೀ 70,000 ರೂಪಾಯಿ ಸಿಕ್ಕಿದ್ದು, ಅದನ್ನು ಹಿಂದಿರುಗಿಸಿದ್ದಾರೆ. ಬಳಿಕ ಮುಖ್ಯಮಂತ್ರಿಯ ಮೊಬೈಲ್ ಅನ್ನು ಪಡೆದು, ಬಂಧಿಸಿದ್ದಾರೆ. ಇಡಿ ಅಧಿಕಾರಿಗಳಿಗೆ ಯಾವುದೇ ಪುರಾವೆ ಅಥವಾ ಅಧಿಕ ಹಣ ದೊರೆತಿಲ್ಲ” ಎಂದು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದರು.
#WATCH | On the arrest of Delhi CM Arvind Kejriwal by the ED, AAP leader and Delhi Minister Saurabh Bharadwaj says, “The Chief Minister’s house was searched. They just found Rs 70,000 in cash…They have taken the Chief Minister’s mobile and have arrested him. They haven’t got… pic.twitter.com/v4pyhbD7Q9
— ANI (@ANI) March 21, 2024
“ಪ್ರಧಾನಿ ನರೇಂದ್ರ ಮೋದಿ ನಮ್ಮ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಂದ ಆತಂಕಕ್ಕೆ ಒಳಗಾಗಿದ್ದಾರೆ, ಅದಕ್ಕಾಗಿ ಕೇಜ್ರಿವಾಲ್‌ರನ್ನು ಬಂಧಿಸಿದ್ದಾರೆ. ಇಂದು ಅವರು ಅಧಿಕಾರದಲ್ಲಿರುವ ಕಾರಣ ತಮ್ಮ ಏಜೆನ್ಸಿಗಳ ಮೂಲಕ ಕೇಜ್ರಿವಾಲ್‌ರನ್ನು ಬಂಧಿಸಿದರು. ಈಗ ಮೋದಿ ಅವರನ್ನು ತಡೆಯಲು ಯಾರೂ ಇಲ್ಲ. ಅವರು ಈಗಾಗಲೇ ಇಬ್ಬರು ಮುಖ್ಯಮಂತ್ರಿಗಳನ್ನು ಬಂಧಿಸಿದ್ದಾರೆ. ಇನ್ನೂ ಹಲವಾರು ಮಂದಿಯನ್ನು ಬಂಧಿಸಬಹುದು” ಎಂದು ಭೂ ವಂಚನೆ ಪ್ರಕರಣದಲ್ಲಿ ಬಂಧಿತರಾಗಿರುವ ಜಾರ್ಖಂಡ್ ಮುಖ್ಯಮಂತ್ರಿಯಾಗಿದ್ದ ಹೇಮಂತ್ ಸೊರೇನ್ ಅವರನ್ನು ಉಲ್ಲೇಖಿಸಿ ಹೇಳಿದರು.
ದೆಹಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನೀಡುತ್ತಿರುವ ಸಮನ್ಸ್‌ಗಳಿಂದ ಮಧ್ಯಂತರ ರಕ್ಷಣೆ ನೀಡಬೇಕೆಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ ಅರ್ಜಿಯನ್ನು ದೆಹಲಿ ಹೈಕೋರ್ಟ್ ನಿರಾಕರಿಸಿದ ಬೆನ್ನಲ್ಲೇ, ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಇದಕ್ಕೂ ಮುನ್ನ ಕೇಜ್ರಿವಾಲ್ ಅವರಿಗೆ ಇಡಿ ಒಂಬತ್ತು ಬಾರಿ ಸಮನ್ಸ್ ನೀಡಿದ್ದು, ಕೇಜ್ರಿವಾಲ್ ಹಾಜರಾಗಲಿರಲಿಲ್ಲ.
ಇದನ್ನು ಓದಿದ್ದೀರಾ? ಅಬಕಾರಿ ಹಗರಣ | ದೆಹಲಿ ಸಿಎಂ, ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಬಂಧನ
ದೇಶದಾದ್ಯಂತ ಪ್ರತಿಭಟನೆಗೆ ಕರೆ ನೀಡಿದ ಆಪ್
ತಡರಾತ್ರಿ ಪತ್ರಿಕಾಗೋಷ್ಠಿ ನಡೆಸಿದ ಎಎಪಿ ದೆಹಲಿ ಘಟಕದ ಸಂಚಾಲಕರು ಗೋಪಾಲ್ ರೈ ಅವರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರನ್ನು ಬಂಧಿಸಿದ ಬಿಜೆಪಿ ವಿರುದ್ಧ ರಾಷ್ಟ್ರವ್ಯಾಪ್ತಿ ಪ್ರತಿಭಟನೆಗೆ ಕರೆ ನೀಡಿದರು. ಈ ಬಂಧನವನ್ನು “ಪ್ರಜಾಪ್ರಭುತ್ವದ ಕಗ್ಗೊಲೆ” ಮತ್ತು “ಸರ್ವಾಧಿಕಾರದ ಘೋಷಣೆ” ಎಂದು ಗೋಪಾಲ್ ರೈ ಹೇಳಿದರು.