ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಕೈಗೊಳ್ಳಲು ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಅವರ ದೆಹಲಿ ನಿವಾಸಕ್ಕೆ ಜಾರಿ ನಿರ್ದೇಶನಾಲಯ ಅಧಿಕಾರಿಗಳಿ ಆಗಮಿಸಿದ್ದಾರೆ. ಸೊರೇನ್ ಅವರು ಕೂಡ ಇಡಿ ಅವರ ಹೊಸ ಸಮನ್ಸ್‌ಗೆ ಪ್ರತಿಕ್ರಿಯೆಯಾಗಿ ದೆಹಲಿಗೆ ಅನಿರೀಕ್ಷಿತ ಪ್ರವಾಸ ಕೈಗೊಂಡಿದ್ದಾರೆ ಎನ್ನಲಾಗಿದೆ.
ಜನವರಿ 29 ಅಥವಾ 31 ರಂದು ವಿಚಾರಣೆಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ಹೇಮಂತ್ ಸೊರೇನ್ ಅವರಿಗೆ ಮನವಿ ಮಾಡಿದ್ದರು.
“ಭೇಟಿಯು ಪೂರ್ವ ಯೋಜನೆಯನ್ನು ಹೊಂದಿರಲಿಲ್ಲ. ಇಡಿಯವರ ಹೊಸ ಸಮನ್ಸ್ ವಿತರಿಸಿದ ನಂತರ ಅನಿರೀಕ್ಷಿತ ಭೇಟಿಯಾಗಿದೆ. ಜನವರಿ 29,30 ಹಾಗೂ 31ರಂದು ಕೆಲವೊಂದು ವೇಳಾಪಟ್ಟಿಯನ್ನು ಕೈಗೊಂಡಿದ್ದರು” ಎಂದು ಅನಾಮಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೇಮಂತ್ ಸೊರೇನ್ ಅವರು ದೆಹಲಿಗೆ ಕಾನೂನು ಸಮಾಲೋಚನೆಗಾಗಿ ಆಗಮಿಸಿದ್ದಾರೆ ಎಂದು ಮೂಲಗಳು ಸೂಚಿಸಿವೆ. ಆದರೆ ಈ ಮಾಹಿತಿಯನ್ನು ಸಿಎಂ ಕಚೇರಿ ಪರಿಶೀಲಿಸಿರಲಿಲ್ಲ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೂವರು ಮಾನಗೆಟ್ಟ ನಾಯಕರು ಮತ್ತು ರಾಮ ರಾಜಕಾರಣ
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಇಡಿ ಅಧಿಕಾರಿಗಳು ಜನವರಿ 20 ರಂದು ಸೊರೇನ್ ಅವರ ಅಧಿಕೃತ ಕಚೇರಿಯಲ್ಲಿ ಈ ಹಿಂದೆ ಹೇಳಿಕೆ ಪಡೆದುಕೊಂಡಿದ್ದವು. ವಿಚಾರಣೆ ಪೂರ್ಣಗೊಂಡಿಲ್ಲದ ಕಾರಣ ಹೊಸದಾಗಿ ಸಮನ್ಸ್ ನೀಡಲಾಗಿದೆ ಎನ್ನಲಾಗಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯು ಮಾಫಿಯಾದಿಂದ ಅಕ್ರಮವಾಗಿ ಭೂಮಾಲಿಕತ್ವ ಬದಲಾವಣೆಯ ದೊಡ್ಡ ಹಗರಣವಾಗಿದೆ ಎನ್ನಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿಯು 2011ರ ಬ್ಯಾಚಿನ ಐಎಎಸ್ ಅಧಿಕಾರಿ ಒಳಗೊಂಡು 14 ಮಂದಿಯನ್ನು ಬಂಧಿಸಿದೆ.
ಆದಾಗ್ಯೂ, ಇಡಿ ನೀಡುತ್ತಿರುವ ಹಲವು ಸಮನ್ಸ್‌ಗಳ ಬಗ್ಗೆ ಆಡಳಿತರೂಢ ಪಕ್ಷ ಜೆಎಂಎಂ, ಪ್ರಜಾಸತ್ತಾತ್ಮಕ ಸರ್ಕಾರವನ್ನು ಇಡಿ, ಸಿಬಿಐಗಳ ಮೂಲಕ ದುರ್ಬಳಕೆ ಮಾಡಿಕೊಂಡು ಬಿಜೆಪಿ ಅಸ್ಥಿರಗೊಳಿಸುತ್ತಿದೆ ಎಂದು ಪ್ರತಿಭಟನೆ ನಡೆಸುತ್ತಿದೆ. ರಾಂಚಿಯ ಮೊರಬದಿ ಕ್ರೀಡಾಂಗಣದಲ್ಲಿ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.