CMRL ಹಣ ವರ್ಗಾವಣೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇಡಿ) ಬುಧವಾರ ಕೇರಳ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅವರ ಅಳಿಯ ಪಿ ಎ ಮೊಹಮ್ಮದ್ ರಿಯಾಸ್ ಮತ್ತು ಇತರ ಹಲವರ ನಿವಾಸದ ಮೇಲೆ ದಾಳಿ ನಡೆಸಿದೆ.
ತಿರುವನಂತಪುರಂನಲ್ಲಿರುವ ವಿಜಯನ್ ಬಾಡಿಗೆ ನಿವಾಸ ಮತ್ತು ಕೋಝಿಕ್ಕೋಡ್ನಲ್ಲಿರುವ ರಿಯಾಸ್ ನಿವಾಸ ಸೇರಿದಂತೆ ಕೇರಳದಾದ್ಯಂತ ಒಟ್ಟು 10 ಸ್ಥಳಗಳಲ್ಲಿ ದಾಳಿ ನಡೆಸಲಾಗುತ್ತಿದೆ. ಹಿರಿಯ CMRL ಅಧಿಕಾರಿಗಳ ನಿವಾಸಗಳ ಮೇಲೂ ಏಕಕಾಲದಲ್ಲಿ ಶೋಧ ನಡೆಯುತ್ತಿದೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಕೇರಳದಲ್ಲಿ ಬಿಜೆಪಿಗೆ ನೆರವು ನೀಡಿದವರಾರು?; ಸಿಎಂ ಪಿಣರಾಯಿ ಸರ್ಕಾರಕ್ಕೆ ಸವಾಲಿನ ಪ್ರಶ್ನೆ
ಇತ್ತೀಚೆಗೆ ಕೇರಳ ಹೈಕೋರ್ಟ್ CMRL ಹಣ ವರ್ಗಾವಣೆ ಪ್ರಕರಣದಲ್ಲಿ ED ಪ್ರಕ್ರಿಯೆಗಳನ್ನು ರದ್ದುಗೊಳಿಸಲು ಮತ್ತು ಕೇಂದ್ರ ಸಂಸ್ಥೆ ಹೊರಡಿಸಿದ ಸಮನ್ಸ್ ರದ್ದುಗೊಳಿಸಲು ನಿರಾಕರಿಸಿದೆ. ಇದಾಗುತ್ತಿದ್ದಂತೆ ಇಡಿ ದಾಳಿ ನಡೆಸಿದೆ.
ಸಿಎಂ-ಮೋದಿ ಭೇಟಿ ಬೆನ್ನಲ್ಲೇ ಇಡಿ ದಾಳಿ
ಕೇರಳದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಿಪಿಐ(ಎಂ) ನೇತೃತ್ವದ ಎಲ್ಡಿಎಫ್ ಮೈತ್ರಿಕೂಟ ಸೋಲು ಕಂಡಿದೆ. ಪಿಣರಾಯಿ ವಿಜಯನ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಪ್ರಸ್ತುತ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಸದ್ಯ ಯುಡಿಎಫ್ ಸರ್ಕಾರವಿದ್ದು ವಿ.ಡಿ. ಸತೀಶನ್ ನೂತನ ಮುಖ್ಯಮಂತ್ರಿಯಾಗಿದ್ದಾರೆ. ಸತೀಶನ್ ಇತ್ತೀಚಿಗಷ್ಟೇ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಈ ಭೇಟಿಯ ಬೆನ್ನಲ್ಲೇ ಪಿಣರಾಯಿ ನಿವಾಸದ ಮೇಲೆ ದಾಳಿ ನಡೆದಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಮೂಡಿಸಿದೆ.
ಈ ದಾಳಿಯ ಬಗ್ಗೆ ಪ್ರತಿಕ್ರಿಯಿಸಿರುವ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ ಎ ಬೇಬಿ, “ಕಾಮ್ರೇಡ್ ಪಿಣರಾಯಿ ವಿಜಯನ್ ಅವರ ನಿವಾಸದ ಮೇಲೆ ಇಡಿ ದಾಳಿ ನಡೆಸಿರುವುದನ್ನು ಸಿಪಿಐಎಂ ಖಂಡಿಸುತ್ತದೆ. ಇದು ಬಿಜೆಪಿ ಸರ್ಕಾರವು ವಿರೋಧ ಪಕ್ಷದ ನಾಯಕರನ್ನೇ ಗುರಿಯಾಗಿಟ್ಟುಕೊಂಡು ಮಾಡುವ ದಾಳಿಯಾಗಿದೆ. ಇಂತಹ ಕ್ರಮಗಳಿಗೆ ಪಿಣರಾಯಿ ವಿಜಯನ್ ಅಥವಾ ಸಿಪಿಐಎಂ ಬೆದರುವುದಿಲ್ಲ. ಯುಡಿಎಫ್ ಸರ್ಕಾರ ಈ ದಾಳಿಯಲ್ಲಿ ಭಾಗಿಯಾಗಿದೆಯೇ” ಎಂದು ಪ್ರಶ್ನಿಸಿದ್ದಾರೆ.
ಏನಿದು ಪ್ರಕರಣ?
ಸಿಎಂಆರ್ಎಲ್ ಅಕ್ರಮ ಹಣ ವರ್ಗಾವಣೆ ಪ್ರಕರಣವು ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ಟಿ. ವೀಣಾ ಮತ್ತು ಅವರ ಐಟಿ ಕಂಪನಿಗೆ ಸಂಬಂಧಿಸಿದ ಒಂದು ಪ್ರಮುಖ ರಾಜಕೀಯ ಮತ್ತು ಕಾನೂನು ವಿವಾದವಾಗಿದೆ. ಕೊಚ್ಚಿನ್ ಮಿನರಲ್ಸ್ ಆಂಡ್ ರುಟೈಲ್ ಲಿಮಿಟೆಡ್ (CMRL) ಎಂಬ ಖಾಸಗಿ ಕಂಪನಿಯು ಯಾವುದೇ ಸೇವೆ ಪಡೆಯದಿದ್ದರೂ ವೀಣಾ ಅವರ ಕಂಪನಿಗೆ ಕೋಟ್ಯಂತರ ರೂಪಾಯಿ ಹಣ ನೀಡಿದೆ ಎಂಬುದು ಈ ಪ್ರಕರಣದ ಮುಖ್ಯ ಆರೋಪವಾಗಿದೆ. ಕೊಚ್ಚಿನ್ ಮಿನರಲ್ಸ್ ಆ್ಯಂಡ್ ರೂಟೈಲ್ ಲಿಮಿಟೆಡ್ (CMRL) ಎಂಬ ಖಾಸಗಿ ಗಣಿ ಕಂಪನಿಯು 2018 ರಿಂದ 2019ರ ಅವಧಿಯಲ್ಲಿ ಒಟ್ಟು ₹1.72 ಕೋಟಿ ಹಣವನ್ನು ಪಾವತಿಸಿತ್ತು ಎಂದು ದೂರಲಾಗಿದೆ. ಈ ಸಂಬಂಧ ಇಡಿ 2024ರಲ್ಲಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ಆದರೆ ವಿಪಕ್ಷ ನಾಯಕರುಗಳನ್ನೇ ಗುರಿಯಾಗಿಸಿಕೊಂಡು ಇಡಿ ದಾಳಿ ನಡೆಯುತ್ತಿರುವುದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.




