ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಟ್ರೈನಿ ವೈದ್ಯೆ ಮೇಲಿನ ಅತ್ಯಾಚಾರ-ಕೊಲೆ ಪ್ರಕರಣದ ವಿರುದ್ಧ ಕಾಲೇಜು ಆಸ್ಪತ್ರೆಯ ಸಿಬ್ಬಂದಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ, ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಶುಕ್ರವಾರ ಮುಂಜಾನೆಯೇ ಕೋಲ್ಕತ್ತಾದಲ್ಲಿರುವ ಸಂದೀಪ್ ಘೋಷ್ ಅವರ ಬೆಳೆಘಾಟ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮುಂಜಾನೆ 6.25ರ ವೇಳೆಗೆ ಅಧಿಕಾರಿಗಳು ಘೋಷ್ ಅವರ ನಿವಾಸದ ಬಳಿಗೆ ತೆರಳಿದ್ದಾರೆ. ಅಧಿಕಾರಿಗಳು ನಿವಾಸದ ಹೊರಗೆಯೇ ನಿಂತಿದ್ದು, ಮನೆಯನ್ನು ಸುತ್ತವರಿಸಿದ್ದಾರೆ. ಆದರೆ, ಅವರು ಮನೆಯೊಳಗೆ ಪ್ರವೇಶಿಸಲು ಬಾಗಿಲನ್ನು ತೆರೆದಿಲ್ಲ ಎಂದು ವರದಿಯಾಗಿದೆ.
ಸಂದೀಪ್ ಘೋಷ್ ಅವರು ಪ್ರಾಂಶುಪಾಲರಾಗಿದ್ದ ಅವಧಿಯಲ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಹಣಕಾಸು ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ. ಅಕ್ರಮಗಳ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಿ ಕೋಲ್ಕತ್ತಾ ಹೈಕೋರ್ಟ್ ಈ ಹಿಂದೆಯೇ ಆದೇಶಿಸಿತ್ತು. ಅಲ್ಲದೆ, ಘೋಷ್ ಅವರನ್ನು ಸಿಬಿಐ ಈಗಾಗಲೇ ಬಂಧಿಸಿದೆ. ಸೋಮವಾರ (ಸೆ.2) ಘೋಷ್ ಅವರನ್ನು ಬಂಧಿಸಲಾಗಿದ್ದು, ಎಂಟು ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಿ ಕೋಲ್ಕತ್ತಾ ಹೈಕೋರ್ಟ್ ಆದೇಶಿಸಿದೆ.
ಘೋಷ್ ಅವರ ವಿರುದ್ಧ ಸಿಬಿಐ ಐಪಿಸಿ ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿ), ಸೆಕ್ಷನ್ 420 ಐಪಿಸಿ (ವಂಚನೆ ಮತ್ತು ಅಪ್ರಮಾಣಿಕತೆ) ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ-1988ರ ಅಡಿಯಲ್ಲಿ ಪ್ರಕರಣ ದಾಖಲಿಸಿದೆ.