ಅಕ್ರಮ ಹಣ ವರ್ಗಾವಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ) ಯುಪಿಎ ಅವಧಿಗಿಂತ ಬಿಜೆಪಿ ಅವಧಿಯಲ್ಲಿ ಆಸ್ತಿ ಮುಟ್ಟುಗೋಲು, ಬಂಧನ ಮುಂತಾದವು ಸೇರಿ 86 ಪಟ್ಟು ಹೆಚ್ಚು ದಾಳಿ ನಡೆದಿದೆ ಎಂದು ಅಂಕಿಅಂಶಗಳು ಹೇಳುತ್ತವೆ. ದಾಳಿಯಲ್ಲಿ 2014ರಿಂದ ಕಳೆದ 9 ವರ್ಷಗಳಿಂದ ಬಂಧನಗಳು ಹಾಗೂ ಆಸ್ತಿ ಮುಟ್ಟುಗೊಲು 25 ಪಟ್ಟು ಹೆಚ್ಚಾಗಿವೆ.
ಸುದ್ದಿಸಂಸ್ಥೆಯೊಂದು ಬಿಡುಗಡೆಗೊಳಿಸಿರುವ ವರದಿಯಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ(ಪಿಎಂಎಲ್‌ಎ) 2014ರ ಏಪ್ರಿಲ್‌ನಿಂದ ಮಾರ್ಚ್ 2014ರವರೆಗಿನ 9 ವರ್ಷದ ಅವಧಿಯಲ್ಲಿ ಕೇಂದ್ರಿಯ ತನಿಖಾ ಸಂಸ್ಥೆಯು ಜುಲೈ 2005 ರಿಂದ 2014ರ ಮಾರ್ಚ್‌ವರೆಗೆ ನಡೆಸಿದ್ದ ದಾಳಿಗಿಂತ ಹೆಚ್ಚು ದಾಳಿ ನಡೆಸಿವೆ.
ಪಿಎಂಎಲ್‌ಎ ಕಾಯ್ದೆಯನ್ನು 2002ರಲ್ಲಿ ಜಾರಿಗೊಳಿಸಿ 2005ರ ಜೂನ್‌ನಲ್ಲಿ ಅನುಷ್ಠಾನಗೊಳಿಸಲಾಯಿತು. ಕಾಯ್ದೆಯು ತೆರಿಗೆ ವಂಚನೆ, ಕಪ್ಪು ಹಣ ಹಾಗೂ ಅಕ್ರಮ ಹಣ ವರ್ಗಾವಣೆಯಂತಹ ಗಂಭೀರ ಅಫರಾಧಗಳನ್ನು ತನಿಖೆಗೊಳಪಡಿಸಲಾಗುತ್ತದೆ.
2014ರಿಂದ 2024ರವರೆಗೆ ಇ.ಡಿಯು ಪಿಎಂಎಲ್‌ಎ ಕಾಯ್ದೆಯಡಿ 5155 ಪ್ರಕರಣಗಳನ್ನು ದಾಖಲಿಸಿದ್ದರೆ, 2004 ರಿಂದ 2014ರವರೆಗೂ 1797 ದೂರುಗಳನ್ನು ಜಾರಿ ನಿರ್ದೇಶನಾಲಯ ದಾಖಲಿಸಿದೆ.
ಬಿಜೆಪಿ ಅವಧಿಯಲ್ಲಿ 755 ಮಂದಿಯನ್ನು ಬಂಧಿಸಿ 1,21,618 ಕೋಟಿ ರೂ. ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಯುಪಿಎ ಅವಧಿಯಲ್ಲಿ ಕೇವಲ 26 ಬಂಧನ ಹಾಗೂ 5,086 ಕೋಟಿ ರೂ. ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು ಎಂದು ಅಂಕಿಅಂಶಗಳು ಹೇಳುತ್ತವೆ.
ಬಂಧನಗಳು ಬಿಜೆಪಿ ಸರ್ಕಾರದ ಅವಧಿಯಲ್ಲಿ 26 ಪಟ್ಟು ಹೆಚ್ಚಾಗಿದ್ದರೆ, ಆಸ್ತಿ ಮುಟ್ಟುಗೋಲು 24 ಪಟ್ಟು ಏರಿಕೆಯಾಗಿವೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕುಮಾರಸ್ವಾಮಿಯವರನ್ನು ಸೋಲಿಸಲು ಬಿಜೆಪಿ ಸುಪಾರಿ ಕೊಟ್ಟಿದೆಯೇ, ಆತಂಕಕ್ಕೊಳಗಾಗಿದ್ದಾರೆಯೇ?
ಕಳೆದ ಒಂದು ದಶಕದಲ್ಲಿ ತನಿಖಾ ಸಂಸ್ಥೆಯು ಹಲವು ಸ್ಥಿರಾಸ್ತಿ ಹಾಗೂ ಚರಾಸ್ಥಿಗಳಿಗೆ ಸಂಬಂಧಿಸಿದಂತೆ 1971 ತಾತ್ಕಾಲಿಕ ಮುಟ್ಟುಗೋಲು ಆದೇಶ ಹೊರಡಿಸಿದೆ. ಯುಪಿಎ ಅವಧಿಯಲ್ಲಿ 311 ಆದೇಶಗಳನ್ನು ಮಾತ್ರ ಹೊರಡಿಸಲಾಗಿತ್ತು.
ಆರೋಪಪಟ್ಟಿ ಕೂಡ ಕಳೆದ ಒಂದು ದಶಕದಲ್ಲಿ 12 ಪಟ್ಟು ಹೆಚ್ಚಾಗಿದೆ. ಬಿಜೆಪಿ ಅವಧಿಯಲ್ಲಿ 1281 ಆರೋಪಪಟ್ಟಿ ಸಲ್ಲಿಸಿದ್ದರೆ, ಯುಪಿಎ ಅವಧಿಯಲ್ಲಿ 102 ಆರೋಪಪಟ್ಟಿಗಳನ್ನು ಮಾತ್ರ ಕೋರ್ಟ್‌ಗೆ ಸಲ್ಲಿಸಲಾಗಿದೆ.
ಶಿಕ್ಷೆಯು ಕೂಡ ಬಿಜೆಪಿ ಅವಧಿಯಲ್ಲಿ ಹೆಚ್ಚಾಗಿರುವುದನ್ನು ಅಂಕಿಅಂಶಗಳು ತೋರಿಸುತ್ತದೆ. 36 ಪ್ರಕರಣಗಳಲ್ಲಿ ವಿವಿಧ ನ್ಯಾಯಾಲಯಗಳು 63 ಮಂದಿಗೆ ಶಿಕ್ಷೆ ಪ್ರಕಟಿಸಿದೆ. ಆದರೆ ಯುಪಿಎ ಅವಧಿಯಲ್ಲಿ ಯಾವುದೇ ಶಿಕ್ಷೆ ಪ್ರಕಟಿಸಲಾಗಿಲ್ಲ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಪ್ಪಿತಸ್ಥ ಆರೋಪಿಗಳು ಬಿಜೆಪಿಯ ಅವಧಿಯಲ್ಲಿಯೇ ದೇಶ ಬಿಟ್ಟು ವಿದೇಶಕ್ಕೆ ಪರಾರಿಯಾಗಿದ್ದಾರೆ. ಅವರ ವಿರುದ್ಧ 24 ಇಂಟರ್‌ಪೋಲ್ ರೆಡ್ ನೋಟಿಸ್‌ಗಳನ್ನು ಹೊರಡಿಸಲಾಗಿದೆ.
ಇವರಲ್ಲಿ ವಿಜಯ್ ಮಲ್ಯ, ನೀರವ್ ಮೋದಿ ಹಾಗೂ ಸಂಜಯ್ ಬಂಢಾರಿ ಪ್ರಮುಖರು. ಮೂವರು ಉದ್ಯಮಿಗಳು ಭಾರತದಲ್ಲಿ ಸಾವಿರಾರು ಕೋಟಿ ಹಣ ವಂಚಿಸಿ ಇಂಗ್ಲೆಂಡ್‌ನಲ್ಲಿ ತಲೆಮರೆಸಿಕೊಂಡಿದ್ದಾರೆ. ಇವರನ್ನು ದೇಶಕ್ಕೆ ಕರೆತರಲು ಇಡಿ ಪ್ರಯತ್ನಿಸಿದರೂ ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿಲ್ಲ.
ಇ.ಡಿ ಪ್ರಮುಖ ಹಣಕಾಸು ಅಪರಾಧಗಳಾದ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಹಾಗೂ ದೇಶಭ್ರಷ್ಟ ಆರ್ಥಿಕ ಅಪರಾಧಗಳ ಕಾಯ್ದೆಯಡಿ(ಎಫ್‌ಇಒಎ) ತನಿಖೆ ನಡೆಸುತ್ತದೆ.
