ತಮ್ಮ ಭೂಮಿಯನ್ನು ಬಿಜೆಪಿ ನಾಯಕರೊಬ್ಬರು ಕಬಳಿಸುತ್ತಿದ್ದಾರೆ ಎಂದು ಆರೋಪಿಸಿರುವ ಮತ್ತು 1,000 ರೂ. ಪಿಂಚಣಿಯಲ್ಲಿ ಬದುಕುತ್ತಿರುವ ವೃದ್ಧ ದಲಿತ ರೈತರನ್ನು ಇ.ಡಿ. ಹಿಂಸಿಸುತ್ತಿದೆ. ವಿಚಾರಣೆಗೆ ಇ.ಡಿ. ಕರೆದಾಗ ಈ ದಲಿತರ ಖಾತೆಯಲ್ಲಿ ಇದ್ದದ್ದು 450 ರೂಪಾಯಿ!
ಕನ್ನೈಯನ್ ಮತ್ತು ಕೃಷ್ಣನ್ ತಮಿಳುನಾಡಿನ ಸೇಲಂ ಜಿಲ್ಲೆಯ ಅತ್ತೂರಿನ ಎಪ್ಪತ್ತರ ಹರೆಯದ ರೈತ ಸಹೋದರರು. 2023 ರ ಜುಲೈನಲ್ಲಿ ಇವರಿಗೆ ಜಾರಿ ನಿರ್ದೇಶನಾಲಯ (ಇ.ಡಿ.) ಏಕಾಏಕಿ ಸಮನ್ಸ್ ನೀಡಿದೆ. ಕೇಂದ್ರ ಸರ್ಕಾರದ ಬಹು-ಶಿಸ್ತಿನ ಈ ಸಂಸ್ಥೆ ಪ್ರಕರಣವೊಂದರ ತನಿಖೆ ನಡೆಸುತ್ತಿದೆ. ಮನಿ ಲಾಂಡರಿಂಗ್ ಮತ್ತು ವಿದೇಶಿ ಹಣ ವಿನಿಮಯ ಕಾನೂನುಗಳ ಉಲ್ಲಂಘನೆ ಮಾಡಿದ್ದಕ್ಕಾಗಿ ಈ ಹಿರಿಯ ನಾಗರಿಕರಿಗೆ ಸಮನ್ಸ್ ನೀಡಿ ವಿವಾದದ ಸುಳಿಯಲ್ಲಿ ಸಿಲುಕಿಕೊಂಡಿದೆ.
ತಮ್ಮ ಗ್ರಾಮದಲ್ಲಿ 6.5 ಎಕರೆ ಕೃಷಿ ಭೂಮಿ ಹೊಂದಿರುವ ಈ ಸಹೋದರರಿಗೆ ಇ.ಡಿ. ಯಾಕೆ ಸಮನ್ಸ್ ನೀಡಿದೆ ಎಂಬುದು ಗೊಂದಲಕಾರಿ ಸಂಗತಿ. ಇ.ಡಿ. ತಾನು ಕಳುಹಿಸಿದ ಸಮನ್ಸ್‌ನ ಲಕೋಟೆಯಲ್ಲಿ ರೈತರ ಜಾತಿಯನ್ನು ‘ಹಿಂದೂ ಪಾಲರ್ಗಳು’ ಎಂದು ನಮೂದಿಸಿರುವುದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ತಿಂಗಳಿಗೆ ಬರುವ 1,000 ರೂಪಾಯಿ ಪಿಂಚಣಿಯಲ್ಲಿ ಜೀವನ ಸಾಗಿಸುತ್ತಿರುವ ಈ ದಲಿತ ರೈತರನ್ನು ಇ.ಡಿ. ಹಿಂಸಿಸುತ್ತಿದೆ ಎಂದು ಆರೋಪಿಸಲಾಗಿದೆ. ಭೂ ವಿವಾದ ಪ್ರಕರಣದಲ್ಲಿ ಸಿಲುಕಿರುವ ಇವರು, ಸ್ಥಳೀಯ ಬಿಜೆಪಿ ನಾಯಕರೊಬ್ಬರು ತಮ್ಮ ಭೂಮಿಯನ್ನು ಅಕ್ರಮವಾಗಿ ಕಬಳಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪ ಮಾಡಿದ್ದಾರೆ.
ಜೂನ್ 26, 2023 ರಂದು ಇ.ಡಿ.ಯ ಸಹಾಯಕ ನಿರ್ದೇಶಕರಾದ ರಿತೇಶ್ ಕುಮಾರ್ ಅವರು ರೈತರಿಗೆ ನೀಡಿರುವ ಸಮನ್ಸ್‌ನ ಪ್ರತಿ ‘ದಿ ನ್ಯೂಸ್ ಮಿನಿಟ್’ಗೆ ಸಿಕ್ಕಿದೆ. ಸಮನ್ಸ್ ಪ್ರಕಾರ, ತನಿಖಾಧಿಕಾರಿ (ಐಒ) ರಿತೇಶ್ ಕುಮಾರ್ ಮನಿ ಲಾಂಡರಿಂಗ್ ತಡೆಗಟ್ಟುವಿಕೆ ಕಾಯಿದೆ, 2002ರ ಅಡಿಯಲ್ಲಿ ತನಿಖೆ ನಡೆಸುತ್ತಿದ್ದು, ಜುಲೈ 5, 2023 ರಂದು ಏಜೆನ್ಸಿಯ ಮುಂದೆ ಹಾಜರಾಗುವಂತೆ ಕಣ್ಣಿಯಾನ್ ಮತ್ತು ಕೃಷ್ಣನ್ ಅವರಿಗೆ ಹೇಳಿದ್ದಾರೆ.
“ಈಗ, ಸದರಿ ಅಧಿನಿಯಮದ 50ನೇ ಸೆಕ್ಷನ್‌ನ ಉಪ-ವಿಭಾಗ (2) ಮತ್ತು ಉಪ-ವಿಭಾಗ (3) ರ ಅಡಿಯಲ್ಲಿ ನನಗೆ ಸಿಕ್ಕಿರುವ ಅಧಿಕಾರಗಳನ್ನು ಚಲಾಯಿಸಲು, ನನ್ನ ಮುಂದೆ ಈ ಕನ್ನಿಯನ್ ಎಸ್/ಒ ಚಿನ್ನಸಾಮಿಯನ್ನು ಲಗತ್ತಿಸಲಾದ ವೇಳಾಪಟ್ಟಿಯ ಪ್ರಕಾರ ದಾಖಲೆಗಳೊಂದಿಗೆ 05/07/2023 ಕಚೇರಿಯಲ್ಲಿ ನನ್ನ ಮುಂದೆ ಹಾಜರಾಗಲು ಬಯಸುತ್ತೇನೆ” ಎಂದು ಸಮನ್ಸ್‌ನಲ್ಲಿ ಉಲ್ಲೇಖಿಸಲಾಗಿದೆ.
ಈ ಇಬ್ಬರಿಗೂ ತಮ್ಮ ಮನೆಯವರ ಹಾಗೂ ತಮ್ಮ ಪಾನ್ ಕಾರ್ಡ್ ನಕಲು ಪ್ರತಿ, ಆಧಾರ್ ಕಾರ್ಡ್, ವೋಟರ್ ಐಡಿ, ಪಾಸ್ ಪೋರ್ಟ್‌ನ ಪ್ರತಿ, ಎರಡು ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳು, ತೆರಿಗೆ ರಿಟರ್ನ್ಸ್ ನಕಲು ಪ್ರತಿಗಳು, ತಾವು ಮಾಡಿರುವ ಹೂಡಿಕೆಯ ವಿವರಗಳನ್ನು ವಿಚಾರಣೆಗೆ ಬರುವಾಗ ತರುವಂತೆ ತಿಳಿಸಲಾಗಿದೆ. ಅವರ ಕುಟುಂಬದ ಸದಸ್ಯರು ಮತ್ತು ಅವರ ಹೆಸರಿನಲ್ಲಿರುವ ಸ್ಥಿರಾಸ್ತಿಗಳ ವಿವರಗಳು, ಬ್ಯಾಂಕ್ ಖಾತೆಗಳ ವಿವರಗಳು, ಸ್ಥಿರ ಠೇವಣಿ, ಕೃಷಿ ಭೂಮಿಯ ವಿವರಗಳು ಮತ್ತು ಬೆಳೆ ಉತ್ಪಾದನೆಯ ವಿವರಗಳನ್ನೂ ನೀಡುವಂತೆ ಹೇಳಲಾಗಿದೆ.
’ದಿ ನ್ಯೂಸ್ ಮಿನಿಟ್’ ಜೊತೆ ಮಾತನಾಡಿರುವ ಕನ್ನಿಯನ್ ಮತ್ತು ಕೃಷ್ಣನ್ ಪರ ವಕೀಲರಾದ ದಲಿತ್ ಪರ್ವೀನಾ, ಸಮನ್ಸ್‌ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ಉಲ್ಲೇಖಿಸಲಾಗಿಲ್ಲ ಎಂದು ಹೇಳಿದ್ದಾರೆ. “ಸಹೋದರರಿಗೆ ಈ ಪ್ರಕರಣ ಏನೆಂಬುದೇ ತಿಳಿದಿಲ್ಲ ಮತ್ತು ಸಮನ್ಸ್‌ನಲ್ಲಿ ಸರಿಯಾದ ದಾಖಲೆಗಳೊಂದಿಗೆ ಇ.ಡಿ. ಮುಂದೆ ಹಾಜರಾಗುವಂತೆ ಹೇಳಿರುವುದನ್ನು ಹೊರತುಪಡಿಸಿ ಬೇರೆ ಏನನ್ನೂ ಉಲ್ಲೇಖಿಸಿಲ್ಲ. ಈ ರೈತರು ಸದ್ಯ ಸಿಲುಕಿರುವ ಒಂದೇ ಒಂದು ಪ್ರಕರಣವೆಂದರೆ ಸ್ಥಳೀಯ ಬಿಜೆಪಿ ಪದಾಧಿಕಾರಿಯೊಬ್ಬರು ಇವರ ಜಮೀನನ್ನು ಕಬಳಿಸಲು ಯತ್ನಿಸಿದ್ದು” ಎಂದು ಪರ್ವೀನಾ ಹೇಳಿದ್ದಾರೆ.
ಕಣ್ಣಿಯಾನ್ ಮತ್ತು ಕೃಷ್ಣನ್ ಅವರು ಸೇಲಂ ಜಿಲ್ಲೆಯ ಅತ್ತೂರ್ ಬಳಿಯ ರಾಮನಾಯ್ಕನ್ಪಾಳ್ಯಂನಲ್ಲಿ 6.5 ಎಕರೆ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಇವರು ತಮ್ಮ ಕೃಷಿ ಭೂಮಿಯನ್ನು ಕಬಳಿಸಲು ಯತ್ನಿಸಿರುವ ಬಿಜೆಪಿಯ ಸೇಲಂ ಪೂರ್ವ ಜಿಲ್ಲಾ ಕಾರ್ಯದರ್ಶಿ ಗುಣಶೇಖರ್ ವಿರುದ್ಧ ಕಾನೂನು ಮೊಕದ್ದಮೆ ಹೂಡಿದ್ದಾರೆ. ಕೃಷ್ಣನ್ ಅವರ ದೂರಿನ ಆಧಾರದ ಮೇಲೆ, ಗುಣಶೇಖರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, 2020 ರಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಕೃಷ್ಣನ್ ಮತ್ತು ಗುಣಶೇಖರ್ ನಡುವಿನ ಈ ಭೂ ಸಂಬಂಧಿತ ಸಿವಿಲ್ ಪ್ರಕರಣದ ವಿಚಾರಣೆ ಅತ್ತೂರು ನ್ಯಾಯಾಲಯದಲ್ಲಿದೆ.
ಈ ಹಿನ್ನೆಲೆಯಲ್ಲಿ ಇ.ಡಿ. ರೈತರಿಗೆ ಸಮನ್ಸ್ ನೀಡಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ರೈತರನ್ನು ಬೆದರಿಸುವ ಮೂಲಕ ಬಿಜೆಪಿ ಕಾರ್ಯಕಾರಿಣಿಗೆ ಇ.ಡಿ. ನೆರವಾಗುತ್ತಿದೆಯೇ ಎಂಬ ಪ್ರಶ್ನೆಗಳು ಎದ್ದಿವೆ.
“ನಾವು ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಜುಲೈ 2023ರಲ್ಲಿ ಇಡಿ ಅಧಿಕಾರಿಗಳನ್ನು ಭೇಟಿ ಮಾಡಲು ಹೋದೆವು. ಅವರು ನಮ್ಮನ್ನು ಮತ್ತೆ ಹಾಜರಾಗುವಂತೆ ಹೇಳಿದರು. ನಾವು ಹೇಗೋ ಬದುಕುತ್ತಿದ್ದೇವೆ, ನಮ್ಮ ಮೇಲೆ ಅಕ್ರಮ ಸಂಪತ್ತಿನ ಆರೋಪವನ್ನು ಮಾಡಲು ಹೇಗೆ ಸಾಧ್ಯ?” ಎಂದು ಕೃಷ್ಣನ್ ಪ್ರಶ್ನಿಸಿದ್ದಾರೆ.
ಇ.ಡಿ. ಕಚೇರಿಯಲ್ಲಿ ಈ ರೈತರಿಗೆ ಇಂಗ್ಲಿಷ್‌ನಲ್ಲಿ ವಿಚಾರಣೆಯ ಪ್ರೊಫಾರ್ಮಾವನ್ನು ಭರ್ತಿ ಮಾಡಲು ಹೇಳಲಾಗಿದೆ. ಅದನ್ನು ಅವರ ವಕೀಲರೇ ತುಂಬಬೇಕಾಯ್ತು. ವಿದೇಶಿ ವಿನಿಮಯ ನಿಯಮಗಳ ಕಾಯ್ದೆ (FERA) ಅಥವಾ ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆಯ (FEMA) ಉಲ್ಲಂಘನೆಗಳ ಅಡಿಯಲ್ಲಿ ಅವರನ್ನು ಕರೆಸಲಾಗಿದೆಯೇ, ಬಂಧಿಸಲಾಗಿದೆಯೇ ಅಥವಾ ಶಿಕ್ಷೆಗೆ ಗುರಿಪಡಿಸಲಾಗಿದೆಯೇ ಅಥವಾ ಕಸ್ಟಮ್ಸ್, ಡಿಆರ್‌ಐ ಅಥವಾ ಆದಾಯ ತೆರಿಗೆ ಕಾಯ್ದೆಗಳ ಅಡಿಯಲ್ಲಿ ಅಪರಾಧಗಳಲ್ಲಿ ತೊಡಗಿಸಿಕೊಂಡಿದ್ದಾರೆಯೇ ಎಂಬ ಪ್ರಶ್ನೆಗಳನ್ನು ಪ್ರೊಫಾರ್ಮಾನಲ್ಲಿ ಕೇಳಲಾಗಿದೆ.
ಅದೇ ಪ್ರೋಫಾರ್ಮಾನಲ್ಲಿ, ರೈತರು ತಮ್ಮ ಹಣಕಾಸಿನ ವಿವರಗಳ ಬಗ್ಗೆ ವಿವರಗಳನ್ನು ಭರ್ತಿ ಮಾಡಲು ಹೇಳಲಾಗಿದೆ. ಇಬ್ಬರೂ ರೈತರು ತಮಿಳುನಾಡು ಸರ್ಕಾರದಿಂದ ಬರುವ 1,000 ರೂಪಾಯಿಗಳ ವೃದ್ಧಾಪ್ಯ ಪಿಂಚಣಿಯ ಬಗ್ಗೆ ವಿವರ ನೀಡಿ, ಬೇರೆ ಆದಾಯದ ಮೂಲವಿಲ್ಲ ಎಂದು ನಮೂದಿಸಿದ್ದಾರೆ. ದಲಿತ್ ಪರ್ವೀನಾ ಮಾತನಾಡಿ, “ಭೂವಿವಾದದ ಸಮಸ್ಯೆಯಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ರೈತರಿಗೆ ತಮ್ಮ ಜಮೀನಿನಲ್ಲಿ ಕೃಷಿ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಅವರ ಏಕೈಕ ಆದಾಯದ ಮೂಲವೆಂದರೆ ವೃದ್ಧಾಪ್ಯ ವೇತನ. ಅದು ಬಿಟ್ಟರೆ ತಮಿಳುನಾಡು ಸರ್ಕಾರ ನೀಡುವ ಉಚಿತ ಪಡಿತರದಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ” ಎಂದು ಹೇಳಿದ್ದಾರೆ.
ಇ.ಡಿ. ಕಚೇರಿಗೆ ಹೋಗುವ ಖರ್ಚಿಗಾಗಿ ಇವರು ತಮ್ಮ ಭೂಮಿಯನ್ನು ಒತ್ತೆ ಇಟ್ಟು ಸಾಲ ಮಾಡಬೇಕಾಯ್ತು ಎಂದು ವಕೀಲೆ ಪರ್ವೀನಾ ‘ದಿ ನ್ಯೂಸ್ ಮಿನಿಟ್’ ತಿಳಿಸಿದ್ದಾರೆ. ”ಚೆನ್ನೈನಲ್ಲಿರುವ ಇ.ಡಿ. ಕಚೇರಿಯಲ್ಲಿ ಐಒ ಎದುರು ಹಾಜರಾಗುವಂತೆ ಸಮನ್ಸ್ ಬಂದಾಗ ಇವರ ಬ್ಯಾಂಕ್ ಖಾತೆಯಲ್ಲಿಇದ್ದದ್ದು ಕೇವಲ 450 ರೂಪಾಯಿ ಮಾತ್ರ. ವಾಹನ ಹಾಗೂ ಇತರೆ ವೆಚ್ಚಕ್ಕಾಗಿ 50 ಸಾವಿರ ರೂಪಾಯಿ ಸಾಲ ಮಾಡಿದ್ದು, ಅದನ್ನು ತೀರಿಸಲು ಪರದಾಡಬೇಕಾಗಿದೆ” ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ ಬಿಜೆಪಿ ಕಾರ್ಯಾಧ್ಯಕ್ಷ ಗುಣಶೇಖರ್ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದನ್ನು ಹರಿಯಬಿಟ್ಟಿದ್ದು, ತಮಿಳುನಾಡು ಪೊಲೀಸರು ಇ.ಡಿ. ಮತ್ತು ಬಿಜೆಪಿಯ ಮಾನಹಾನಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ತಮ್ಮ ಸಹೋದ್ಯೋಗಿ ಗುಣಶೇಖರ್ ಅವರನ್ನು ಸಮರ್ಥಿಸಿಕೊಂಡು ’ದಿ ನ್ಯೂಸ್ ಮಿನಿಟ್’ ಜೊತೆಗೆ ಮಾತನಾಡಿರುವ ಸೇಲಂ ಪೂರ್ವ ಜಿಲ್ಲಾ ಬಿಜೆಪಿ ಅಧ್ಯಕ್ಷ ಪಿ ಷಣ್ಮುಗನಾಥನ್, ಯಾರು ದೂರು ದಾಖಲಿಸಿದ್ದಾರೆ ಮತ್ತು ಇ.ಡಿ. ರೈತರಿಗೆ ಹೇಗೆ ಸಮನ್ಸ್ ನೀಡಿದೆ ಎಂಬ ಮಾಹಿತಿಯನ್ನು ಸಂಗ್ರಹಿಸುತ್ತಿರುವುದಾಗಿ ತಿಳಿಸಿದ್ದಾರೆ.