ಆಂಧ್ರಪ್ರದೇಶದ ಅನಕಾಪಲ್ಲಿ ಜಿಲ್ಲೆಯಲ್ಲಿರುವ ವಿಶಾಖಪಟ್ಟಣಂ ಉಕ್ಕು ಕಾರ್ಖಾನೆಯಲ್ಲಿ (ವಿಎಸ್‌ಪಿ) ಸೋಮವಾರ ಸಂಜೆ ಸಂಭವಿಸಿದ ಭೀಕರ ಅಗ್ನಿ ಅನಾಹುತದಲ್ಲಿ ಕನಿಷ್ಠ ಎಂಟು ಮಂದಿ ಕಾರ್ಮಿಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಕಾರ್ಖಾನೆಯ ಸ್ಟೀಲ್ ಮೆಲ್ಟ್ ಶಾಪ್ (ಎಸ್‌ಎಂಎಸ್) ಘಟಕ-1 ರ ಲ್ಯಾಡಲ್‌ನಲ್ಲಿ (ದೊಡ್ಡ ಪಾತ್ರೆ) ಉಂಟಾದ ಸೋರಿಕೆಯಿಂದಾಗಿ ಈ ದುರಂತ ಸಂಭವಿಸಿದೆ ಎಂದು ನಂಬಲಾಗಿದೆ. ಕರಗಿದ ಕಬ್ಬಿಣದ ದ್ರವವು ಅಕಸ್ಮಾತ್ತಾಗಿ ಹೊರಚೆಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಈ ಭಾರಿ ಅನಾಹುತ ಸಂಭವಿಸಿದ್ದು, ಕಾರ್ಖಾನೆಯ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ದುರ್ಘಟನೆ ಸಂಭವಿಸಿದ ಸಮಯದಲ್ಲಿ ಘಟಕದಲ್ಲಿ ಸುಮಾರು 20 ಮಂದಿ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳದಲ್ಲಿ ಹಾಹಾಕಾರ ಉಂಟಾಗಿದ್ದು, ಬಹುತೇಕ ಕಾರ್ಮಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಬೆಂಕಿಯ ತೀವ್ರತೆಗೆ ಸಿಲುಕಿದ ಸುಮಾರು ಎಂಟು ಮಂದಿ ಕಾರ್ಮಿಕರು ಪ್ರಾಣ ಕಳೆದುಕೊಂಡಿರುವ ಭೀತಿ ಎದುರಾಗಿದೆ. ಘಟನಾ ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ರಕ್ಷಣಾ ತಂಡಗಳು ಸಮರೋಪಾದಿಯಲ್ಲಿ ಕಾರ್ಯಾಚರಣೆ ಮುಂದುವರಿಸಿವೆ.
ಇದನ್ನು ಓದಿದ್ದೀರಾ? ‘ಇಂಡಿಯಾ’ ಒಕ್ಕೂಟದ ಸಭೆ | ಭಿನ್ನಾಭಿಪ್ರಾಯಗಳ ಮಂಥನ – ಸದೃಢ ಭವಿಷ್ಯದ ಹೆಜ್ಜೆಗಳು
ಕಾರ್ಮಿಕ ಸಂಘಟನೆಯ ಮುಖಂಡ ಎನ್. ಅಯೋಧ್ಯಾರಾಮ್ ಈ ಕುರಿತು ಪ್ರತಿಕ್ರಿಯಿಸಿ, “ಭಾರಿ ಸ್ಫೋಟದಿಂದಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ನಾವು ಶಂಕಿಸಿದ್ದೇವೆ. ಆದರೆ, ಈ ದುರ್ಘಟನೆಗೆ ನಿಖರವಾದ ಕಾರಣವನ್ನು ಪತ್ತೆಹಚ್ಚಲು ಸಮಗ್ರ ತನಿಖೆಯ ಅಗತ್ಯವಿದೆ. ಮೃತಪಟ್ಟವರು ಗುತ್ತಿಗೆ ಕಾರ್ಮಿಕರೋ ಅಥವಾ ಕಾಯಂ ಉದ್ಯೋಗಿಗಳೋ ಎಂಬುದು ಇನ್ನಷ್ಟೇ ದೃಢಪಡಬೇಕಿದೆ” ಎಂದು ಸ್ಪಷ್ಟಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಿಖರ ಮಾಹಿತಿಗಾಗಿ ಅಧಿಕಾರಿಗಳು ಮತ್ತು ಕಾರ್ಮಿಕ ಸಂಘಟನೆಗಳು ಕಾಯುತ್ತಿವೆ.
ಈ ಭೀಕರ ದುರಂತದ ಬಗ್ಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ತೀವ್ರ ಆಘಾತ ಮತ್ತು ಸಂತಾಪ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳದಲ್ಲಿರುವ ಅಧಿಕಾರಿಗಳೊಂದಿಗೆ ನೇರವಾಗಿ ದೂರವಾಣಿಯಲ್ಲಿ ಮಾತನಾಡಿದ ಅವರು, ಜೀವಹಾನಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಸ್ಥಳದ ವಸ್ತುಸ್ಥಿತಿ ಹಾಗೂ ನಡೆಯುತ್ತಿರುವ ಪರಿಹಾರ ಕಾರ್ಯಾಚರಣೆಗಳ ಕುರಿತು ಮಾಹಿತಿ ನೀಡಿದ್ದಾರೆ. ತಕ್ಷಣವೇ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ತ್ವರಿತವಾಗಿ ರಕ್ಷಣಾ ಮತ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.





