ಹಾವೇರಿ ಗೋಲಿಬಾರ್ ಘಟನೆ ಕೇವಲ ನೆನಪಿನಲ್ಲಿಯೇ ಮುಗಿಯದೆ, ರೈತರ ಕಷ್ಟಗಳಿಗೆ ಸೂಕ್ತ ಪರಿಹಾರ, ನ್ಯಾಯ, ಗೌರವ ದೊರಕಿಸುವಂತೆ ಸಮಾಜ ಮತ್ತು ಸರ್ಕಾರಗಳನ್ನು ಜಾಗೃತಿಗೊಳಿಸುವ ಕಾರ್ಯವಾಗಬೇಕು.
ಬೆಂಕಿಯಂತೆ ಕಾದ ಭೂಮಿ ಒಡಲು ಹೊಕ್ಕು ತಂಪಾಗಿಸಲು ಮುಂಗಾರು ಮಳೆ ಬೀಳುವ ತಿಂಗಳು ಜೂನ್. ಈ ಮಳೆಗೆ ಭೂಮಿ ಹದಗೊಂಡಾಗ ರೈತರಲ್ಲಿ ಸಂಭ್ರಮ, ಖಷಿ ಇಮ್ಮಡಿಗೊಂಡು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವರು. ಆಕಾಶದಲ್ಲಿಯ ಮುಂಗಾರು ಮೋಡಗಳೊಂದಿಗೆ ಕಾರ್ಮೋಡವಾಗಿ ಎರಗಿದ ಹಾವೇರಿ ಗೋಲಿಬಾರ್ ಎಂದೂ ಮರೆಯದ ಕಹಿ ನೆನಪಾಗಿ ಉಳಿದಿದೆ.
ಅಂದು ಬಿತ್ತನೆ ಬೀಜ, ಗೊಬ್ಬರ ಕೊಳ್ಳಲು ಬಂದ ರೈತರ ಎದೆಗೆ ಗುಂಡೇಟ್ಟು ಬಿದ್ದಿತ್ತು. ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ವಾರದಲ್ಲೇ ಅಮಾಯಕ ರೈತರ ಜೀವವನ್ನು ಬಲಿ ತೆಗೆದುಕೊಂಡಿತ್ತು. ಆ ಘಟನೆ ನಡೆದು ಇಂದಿಗೆ 18 ವರ್ಷಗಳು ತುಂಬಿದ್ದು, 19ನೇ ವರ್ಷಕ್ಕೆ ದಾಪುಗಾಲಿಟ್ಟಿದೆ… ಮತ್ತಷ್ಟು ರೈತ ಹೋರಾಟಗಾರರಿಗೆ ದೈರ್ಯ ತಂದಿದೆ.
ಆ ಕರಾಳ ದಿನವನ್ನು ನೆನೆದು ಹಾವೇರಿಯ ವಿವಿಧ ರೈತ ಸಂಘಟನೆಗಳ ಸಮ್ಮುಖದಲ್ಲಿ ಪ್ರತಿವರ್ಷ ಜೂನ್ 10ರಂದು ನಗರದ ಸಿದ್ದಪ್ಪ ಸರ್ಕಲ್ ವೃತ್ತದ ಬಳಿ ಇರುವ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ ರೈತ ಹುತಾತ್ಮ ದಿನಾಚರಣೆ ಆಚರಿಸಿ, ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿವರ್ಷ ಪ್ರತಿಭಟಿಸುತ್ತ ಬಂದಿರುವರು.
ಮುಂಗಾರು ಮಳೆ ಸುರಿದು ಹದಗೊಂಡ ಜೂನ್ ತಿಂಗಳು…… ಭೂಮಿಯೊಡಲಿಗೆ ಬೀಜ ಬಿತ್ತುವ ತವಕ, ಸಂತಸದೊಂದಿಗೆ ಬೀಜ-ಗೊಬ್ಬರ ಕೊಳ್ಳಲು ಬಂದ ರೈತರು ಬೀಜ-ಗೊಬ್ಬರಕ್ಕಾಗಿ ಪ್ರತಿಭಟಿಸುವ ಪರಿಸ್ಥಿತಿ ಎದುರಾಗಿತ್ತು. ಅದೇ 2008ರ ಜೂನ್ 10 ರೈತರ ಪಾಲಿಗೆ ಕರಾಳ ದಿನವಾಯಿತು. ರೈತರು ಬೀಜ-ಗೊಬ್ಬರಕ್ಕಾಗಿ ತೀವ್ರ ಪ್ರತಿಭಟನೆ ಮಾಡಿದರು. ಈ ಪ್ರತಿಭಟನೆಯನ್ನು ಹತ್ತಿಕ್ಕಲು ಪೋಲಿಸರು ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ(ಗೋಲಿಬಾರ್) ನಡೆಸಿದರು. ಈ ದಾಳಿಯಲ್ಲಿ ಸಿದ್ದಲಿಂಗಪ್ಪ ಚೂರಿ ಹಾಗೂ ಪುಟ್ಟಪ್ಪ ಹೊನ್ನತ್ತಿ ಎಂಬ ರೈತರ ಎದೆಗೆ ಗುಂಡುಗಳು ಹೊಕ್ಕು ಹುತಾತ್ಮರಾಗುವರು.

ಗೋಲಿಬಾರ್ ದಾಳಿಯಲ್ಲಿ ಎಂಟು ಮಂದಿ ಗಾಯಗೊಂಡು ಶಾಶ್ವತ ಅಂಗವೈಕಲ್ಯದಿಂದ ಬಳಲುವಂತಾಯಿತು. ಕೆಲವರು ನಿಧಾನವಾಗಿ ಚೇತರಿಸಿಕೊಂಡರೂ, ಜೀವನೋಪಾಯ ಗಳಿಸಲು ಅಸಮರ್ಥರಾಗಿದ್ದು, ಕುಟುಂಬದವರ ಮೇಲೆಯೇ ಅವಲಂಬಿತರಾದರು. ಈ ಗುಂಡಿನ ದಾಳಿಗೆ ಬಲಿಯಾಗಿ, ಇತಿಹಾಸ ಪುಟದಲ್ಲಿ ಕರಾಳ ಅಧ್ಯಾಯವೊಂದು ಕಪ್ಪು ಚುಕ್ಕೆಯಾಗಿ ಅಚ್ಚಳಿಯದೆ ಶಾಶ್ವತವಾಗಿ ಉಳಿದಿದೆ. ಅದುವರೆಗೂ ರೈತ ನಾಯಕನೆಂದು ಬೀಗುತ್ತಿದ್ದ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಈ ಘಟನೆಯು ಇಂದಿಗೂ ಕಳಂಕದಂತೆ ಮೆತ್ತಿಕೊಂಡಿದೆ.
ಗೋಲಿಬಾರ್ ದಾಳಿಯಲ್ಲಿ ಹುತಾತ್ಮರಾದ ರೈತ ಸಿದ್ದಲಿಂಗಪ್ಪ ಚೂರಿ ಅವರ ಪತ್ನಿ ಕುಸುಮಾ ಅವರಿಗೆ ಸರ್ಕಾರದಿಂದ ಸಿ ದರ್ಜೆಯ ನೌಕರಿ ಸಿಕ್ಕಿದೆ. ಇನ್ನೋರ್ವ ರೈತ ಹುತಾತ್ಮ ಪುಟ್ಟಪ್ಪ ಹೊನ್ನತ್ತಿ ಅವರ ಪತ್ನಿ ಕರಿಬಸಮ್ಮ ಅವರಿಗೆ ಸರ್ಕಾರದಿಂದ ಶಾಲೆಯೊಂದರಲ್ಲಿ ಡಿ ದರ್ಜೆಯ ನೌಕರಿ ಸಿಕ್ಕಿದೆ. ಮೂವರು ಮಕ್ಕಳಿಗೆ ಸರ್ಕಾರದ ವತಿಯಿಂದ ಉಚಿತ ಶಿಕ್ಷಣ ದೊರೆತಿದೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಈ ದಿನ.ಕಾಮ್ ಜತೆಗೆ ಮಾತನಾಡಿ, “ಬಿತ್ತನೆ ಬೀಜ-ರಸಗೊಬ್ಬರಕ್ಕಾಗಿ ಪ್ರತಿಭಟಿಸಿ ಗೋಲಿಬಾರ್ ದಾಳಿಗೆ ಹುತಾತ್ಮಾರಾಗಿ ಇಂದಿಗೆ ಹದಿನೆಂಟು ವರ್ಷಗಳಾದರೂ ರೈತರು ಬೀಜ-ರಸಗೊಬ್ಬರಕ್ಕಾಗಿ ಪರದಾಡುವ, ಬೀದಿಗಿಳಿಯುವ ಪರಿಸ್ಥಿತಿ ಬದಲಾಗಿಲ್ಲ. ಈ ಸಮಸ್ಯೆಯನ್ನು ಯಾವುದೇ ಸರ್ಕಾರಗಳೂ ಪರಿಹರಿಸುತ್ತಿಲ್ಲ. ಕಂಪೆನಿಗಳು ಮೆಕ್ಕೆಜೋಳ ಬೀಜಕ್ಕೆ ₹800ರಿಂದ ₹2,800ರವರೆಗೆ ಒಂದೊಂದು ರೀತಿಯಲ್ಲಿ ದರ ನಿಗದಿ ಮಾಡಿರುವರು. ಹಾಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮೆಕ್ಕೆಜೋಳಕ್ಕೆ ಒಂದೇ ದರ ಜಾರಿಗೆ ತರಬೇಕೆಂದು ಒತ್ತಾಯಿಸಿ ಜೂನ್ 10ರಂದು ಸಿದ್ದಪ್ಪ ಸರ್ಕಲ್ ಬಳಿ ರೈತ ಹುತಾತ್ಮ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ, ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ಮಾಡಲಾಗುವುದು” ಎಂದು ಹೇಳಿದರು.
ಒಟ್ಟಿನಲ್ಲಿ ಅನ್ನದಾತನ ಬಾಳು ಸದಾ ಗೋಳು ಅನ್ನುವಂತಾಗಿದೆ. ಇನ್ನಾದರೂ ರಾಜಕೀಯ ಮುಖಂಡರು ರೈತರ ಸಮಸ್ಯೆಯನ್ನು ರಾಜಕೀಯ ದಾಳವಾಗಿ ಬಳಸದೇ ರೈತರ ಸಮಸ್ಯೆಗೆ ಸ್ಪಂದಿಸಲಿ. ಜೂನ್ 10ರಂದು ನಡೆಯುವ 18ನೇ ಹುತಾತ್ಮ ದಿನವು ರಾಜಕಾರಣಿಗಳಿಗೆ ಎಚ್ಚರಿಕೆಯ ಕರೆಗಂಟೆಯಾಗಬೇಕು.
ಅನ್ನದಾತರ ಆಕ್ರೋಶಕ್ಕೆ ಪ್ರತಿಯಾಗಿ ಬಂದ ಗುಂಡುಗಳು ಕೇವಲ ರೈತರನ್ನಲ್ಲ, ಸಮಸ್ತ ಕೃಷಿ ಸಮುದಾಯದ ನಂಬಿಕೆಯನ್ನೇ ಘಾಸಿಗೊಳಿಸಿದವು. ಈ ಘಟನೆಯಿಂದ ಮಳೆ ಬಂದರೂ, ಬೆಳೆ ಬೆಳೆದರೂ, ರೈತನ ಸಮಸ್ಯೆಗಳು ಮುಗಿಯುವುದಿಲ್ಲ ಎಂಬುದು ನೆನಪಾಗುತ್ತದೆ. ಸರ್ಕಾರಿ ನೀತಿಗಳು, ಬೆಳೆ ಬೆಲೆ, ಆಧುನಿಕ ಬಿತ್ತನೆ ಬೀಜ-ಗೊಬ್ಬರಗಳ ಅಲಭ್ಯತೆ, ಆರ್ಥಿಕ ಸಂಕಷ್ಟಗಳು ಇನ್ನೂ ರೈತರನ್ನು ಕಾಡುತ್ತಿವೆ. ಹಾವೇರಿ ಗೋಲಿಬಾರ್ ಕೇವಲ ಒಂದು ಜಿಲ್ಲೆಯ ಘಟನೆಯಲ್ಲ; ಇದು ಭಾರತದ ರೈತರ ಹೋರಾಟದ ಒಂದು ಕರಾಳ ಅಧ್ಯಾಯ.
ಇದನ್ನೂ ಓದಿದ್ದೀರಾ? ಹಾವೇರಿ | ಬಿತ್ತನೆ ಬೀಜಕ್ಕೆ ಭಾರೀ ಬೇಡಿಕೆ: ರೈತ ಸಂಪರ್ಕ ಕೇಂದ್ರಗಳ ಎದುರು ಕಿಕ್ಕಿರಿದ ಜನ
ಆದರೂ ರೈತರು ನಿರಾಶೆಯಲ್ಲಿ ಮುಳುಗುವವರಲ್ಲ. ರೈತರು ಮುಂಗಾರು ಮಳೆಯಂತೆ ಪ್ರತಿ ವರ್ಷವೂ ಹೊಸ ಭರವಸೆಯೊಂದಿಗೆ ಬೀಜ ಬಿತ್ತುತ್ತಾರೆ, ಬೆಳೆ ಬೆಳೆಯುತ್ತಾರೆ. ಆದ್ದರಿಂದ ರೈತರ ಉನ್ನತಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುದು ಇಂದಿನ ಅವಶ್ಯಕತೆಯಾಗಿದೆ. ಹಾವೇರಿ ಗೋಲಿಬಾರ್ ಘಟನೆ ಕೇವಲ ನೆನಪಿನಲ್ಲಿಯೇ ಮುಗಿಯದೆ, ರೈತರ ಕಷ್ಟಗಳಿಗೆ ಸೂಕ್ತ ಪರಿಹಾರ, ನ್ಯಾಯ, ಗೌರವ ದೊರಕಿಸುವಂತೆ ಸಮಾಜ ಮತ್ತು ಸರ್ಕಾರಗಳನ್ನು ಜಾಗೃತಿಗೊಳಿಸುವ ಕಾರ್ಯವಾಗಬೇಕು.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.




