ಮಹಾರಾಷ್ಟ್ರ ಮುಖ್ಯಮಂತ್ರಿ ಹುದ್ದೆ ಕುರಿತು ಅಂತಿಮ ನಿರ್ಣಯ ಹೊರಬೀಳದ ಕುರಿತು ಹರಡಿರುವ ವದಂತಿಗಳನ್ನು ಅಲ್ಲಗಳೆದಿರುವ ಶಿವಸೇನೆ ನಾಯಕ ದೀಪಕ್ ಕೇಸರ್ಕರ್ ಮಹಾರಾಷ್ಟ್ರ ನೂತನ ಸರ್ಕಾರ ರಚನೆ ವಿಳಂಬಗೊಳ್ಳಲು ಉಸ್ತುವಾರಿ ಮುಖ್ಯಮಂತ್ರಿ ಏಕನಾಥ್ ಶಿಂದೆ ಕಾರಣವಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಡಿಸೆಂಬರ್ 5ರಂದು ನೂತನ ಸರ್ಕಾರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಿಗದಿಗೊಂಡಿದ್ದು, ರಾಜ್ಯದ ಮುಂದಿನ ನಾಯಕನನ್ನು ಅಂತಿಮಗೊಳಿಸುವ ಚರ್ಚೆಗಳು ಸುಗಮವಾಗಿ ಪ್ರಗತಿಯಲ್ಲಿವೆ ಎಂದು ಅವರು ಒತ್ತಿ ಹೇಳಿದ್ದಾರೆ.
ರಾಜ್ಯದಲ್ಲಿ ನೂತನ ಸರ್ಕಾರ ರಚನೆಯಾಗದಿರಲು ಏಕನಾಥ್ ಶಿಂದೆ ಕಾರಣ ಅಲ್ಲ. ಬಿಜೆಪಿ ವೀಕ್ಷಕರನ್ನು ನೇಮಿಸಿದ್ದು, ಇಂದು ಮುಖ್ಯಮಂತ್ರಿಯ ಹೆಸರು ಪ್ರಕಟಗೊಳ್ಳಲಿದೆ ಎಂದು ದೀಪಕ್ ಕೇಸರ್ಕರ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹಳಿಗೆ ಬಂದ ಸರ್ಕಾರ: ಆಡಳಿತ ಚುರುಕುಗೊಳ್ಳಲಿ, ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿ
ಮುಖ್ಯಮಂತ್ರಿ ಹುದ್ದೆ ಕುರಿತು ನಿರ್ಣಯ ಕೈಗೊಳ್ಳುವ ಅಧಿಕಾರವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್ ಶಾಗೆ ಏಕನಾಥ್ ಶಿಂದೆ ನೀಡಿದ್ದಾರೆ ಎಂದು ಪುನರುಚ್ಚರಿಸಿದ ಕೇಸರ್ಕರ್, ಮಹಾಯುತಿ ಮೈತ್ರಿಕೂಟದ ಒಗ್ಗಟ್ಟಿಗೆ ಶಿಂದೆ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ ಎಂದು ತಿಳಿಸಿದ್ದಾರೆ.
ನವೆಂಬರ್ 23ರಂದು ಪ್ರಕಟಗೊಂಡಿದ್ದ ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ, ಶಿವಸೇನೆ ಹಾಗೂ ಎನ್‌ಸಿಪಿಯನ್ನು ಒಳಗೊಂಡಿರುವ ಮಹಾಯುತಿ ಮೈತ್ರಿಕೂಟ, 288 ಸ್ಥಾನಗಳ ಪೈಕಿ 230 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.
