ಲೋಕಸಭಾ ಚುನಾವಣೆಯ ಪ್ರಚಾರದ ಹಾಡಿನ ಸಾಲುಗಳನ್ನು ಮಾರ್ಪಡಿಸುವಂತೆ ಎಎಪಿ ಪಕ್ಷಕ್ಕೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಕೇಬಲ್ ಟೆಲಿವಿಷನ್ ನೆಟ್ವರ್ಕ್ ನಿಯಮಗಳ 1994ರ ಜಾಹೀರಾತು ನಿಯಮಗಳು ಒಳಗೊಂಡಿರುವಂತೆ ಪಕ್ಷವು ಪ್ರಚಾರಕ್ಕೆ ಬದ್ಧರಾಗಿರಬೇಕು ಎಂದು ಚುನಾವಣಾ ಆಯೋಗ ತಿಳಿಸಿದೆ.
ಪ್ರಮಾಣೀಕರಣಕ್ಕಾಗಿ ಅಗತ್ಯವಿರುವ ಸ್ಪಷ್ಟೀಕರಣಗಳನ್ನು ಅಳವಡಿಸಿದ ನಂತರ ಎಎಪಿ ಚುನಾವಣಾ ಪ್ರಚಾರಕ್ಕಾಗಿ ಮರು ಸಲ್ಲಿಕೆ ಮಾಡಬಹುದು ಎಂದು ಚುನಾವಣಾ ಆಯೋಗ ಹೇಳಿದೆ.
ಪ್ರಚಾರದ ಹಾಡಿನ ವಿಷಯವು ನ್ಯಾಯಾಂಗದ ಮೇಲೆ ಸ್ಪಷ್ಟವಾಗಿ ಪ್ರತಿಕೂಲ ಪರಿಣಾಮ ಬೀರಲಿದ್ದು, ಇದು ಚುನಾವಣಾ ಆಯೋಗದ ನಿಯಮಗಳು ಹಾಗೂ ಜಾಹೀರಾತು ನಿಯಮಗಳ ನಿಬಂಧನೆಗಳನ್ನು ಉಲ್ಲಂಘಿಸುತ್ತದೆ ಎಂದು ಚುನಾವಣಾ ಆಯೋಗವು ನೋಟಿಸ್ನಲ್ಲಿ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ದಿನ ಸಂಪಾದಕೀಯ | ಸುಳ್ಳುಗಾರರನ್ನು ಸೋಲಿಸುವ ಸಮಯ ಬಂದಿದೆ; ಮತದಾರರೇ ಮುಂದಾಗಬೇಕಿದೆ
ಸೆರೆಮನೆಯ ಹಿಂದೆ ಅರವಿಂದ್ ಕೇಜ್ರಿವಾಲ್ ನಿಂತಿರುವ ‘ಜೇಲ್ ಕೆ ಜವಾಬ್ ಮೆ ಹಮ್ ವೋಟ್ ದೇಂಗೆ’ ಸಾಲು ಜನರಲ್ಲಿ ಆಕ್ರಮಣಕಾರಿ ಸ್ವಭಾವವನ್ನು ಹುಟ್ಟುಹಾಕುತ್ತದೆ. ಈ ಸಾಲನ್ನು ಜಾಹೀರಾತಿನಲ್ಲಿ ಹಲವು ಬಾರಿ ಬಳಸಲಾಗಿರುವುದರಿಂದ ಕೇಬಲ್ ಟೆಲಿವಿಷನ್ ನೆಟ್ವರ್ಕ್ ನಿಯಮಗಳ 1994ರ ಜಾಹೀರಾತು ನಿಯಮಗಳು ಒಳಗೊಂಡಿರುವ ಚುನಾವಣಾ ಆಯೋಗದ ಮಾರ್ಗಸೂಚಿಗಳು ಹಾಗೂ ನಿಯಮ 6(1(ಜಿ)ರಡಿಯ ನಿಬಂಧನೆಗಳನ್ನು ಉಲ್ಲಂಘಿಸುತ್ತದೆ ಎಂದು ಆಯೋಗ ತಿಳಿಸಿದೆ.
ಈ ನಡುವೆ ಎಎಪಿ ನಾಯಕಿ ಅತಿಶಿ ಅವರು ಚುನಾವಣಾ ಆಯೋಗ ಎಎಪಿಯ ಪ್ರಚಾರದ ಹಾಡನ್ನು ನಿಷೇಧಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಮೂಲಕ ಚುನಾವಣಾ ಆಯೋಗದ ಕ್ರಮಕೈಗೊಳ್ಳುವ ಮೂಲಕ ರಾಜಕೀಯ ಅಸ್ತ್ರವನ್ನು ಎಎಪಿ ಮೇಲೆ ಬಳಸಲಾಗುತ್ತಿದೆ ಎಂದು ಅತಿಶಿ ತಿಳಿಸಿದ್ದಾರೆ.
ಇತಿಹಾಸದಲ್ಲಿ ಮೊದಲ ಬಾರಿಗೆ ಚುನಾವಣಾ ಪ್ರಚಾರದ ಹಾಡನ್ನು ಚುನಾವಣಾ ಆಯೋಗ ನಿಷೇಧಿಸಿದೆ. ಎಎಪಿಯ ಪ್ರಚಾರದ ಹಾಡನ್ನು ನಿಷೇಧಿಸುವ ಮೂಲಕ ಬಿಜೆಪಿ ಮತ್ತೊಂದು ಅಸ್ತ್ರ ಬಳಸಿದೆ ಎಂದು ಹೇಳಿದರು.
