ಐವತ್ತು ವರ್ಷಗಳ ಹಿಂದೆ ದೇಶದಲ್ಲಿ ಹೇರಲಾಗಿದ್ದ ತುರ್ತುಪರಿಸ್ಥಿತಿಯ ಕಾರಣಕ್ಕಾಗಿ ಇಂದಿರಾ ಗಾಂಧಿ ಅವರನ್ನು ತೀವ್ರವಾಗಿ ವಿರೋಧ ಮತ್ತು ಟೀಕೆ ಮಾಡಲಾಗುತ್ತಿದೆ. ಹೋರಾಟಗಾರರನ್ನು ಇಂದಿರಾ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ, ದಬ್ಬಾಳಿಕೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ತುರ್ತುಪರಿಸ್ಥಿತಿಯ ವೇಳೆ, ಮಾನವೀಯ ಪ್ರಸಂಗವೊಂದು ನಡೆದಿದೆ. ಅದು, ಇಂದಿರಾ ಗಾಂಧಿ ಅವರೇ ತಮ್ಮ ಕಡು ವಿರೋಧಿ, ಜೆಪಿ ಚಳುವಳಿ ನಾಯಕ ಜಯಪ್ರಕಾಶ್ ನಾರಾಯಣ್ ಅವರ ಚಿಕಿತ್ಸೆಗಾಗಿ 90,000 ರೂ. ಸರ್ಕಾರಿ ನೆರವು ನೀಡಿದ್ದರು ಎಂಬುದು. ಆದಾಗ್ಯೂ, ನೆರವು ಸಂಪೂರ್ಣ ಮಾಹಿತಿ ತಿಳಿಯದೆ ಜಯಪ್ರಕಾಶ್ ಅವರು ದೇಣಿಗೆಯನ್ನು ತಿರಸ್ಕರಿಸಿದ್ದರು ಮತ್ತು ಇಂದಿರಾ ಅವರಿಗೆ ಪತ್ರ ಬರೆದು ಗೊಂದಲ ಬಗ್ಗೆ ಸ್ಪಷ್ಟನೆಯನ್ನೂನೀಡಿದ್ದರು.
1975ರ ಜೂನ್ 25ರಂದು ಇಂದಿರಾ ಗಾಂಧಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದರು. ತುರ್ತು ಪರಿಸ್ಥಿತಿ ವಿರುದ್ಧ ದೇಶಾದ್ಯಂತ ಭಾರೀ ಹೋರಾಟಗಳು ಭುಗಿಲೆದ್ದಿದ್ದವು. ತುರ್ತುಪರಿಸ್ಥಿತಿಗೂ ಮುನ್ನವೇ ಸರ್ಕಾರದ ವಿರುದ್ಧ ಗುಜರಾತ್ ಮತ್ತು ಬಿಹಾರದಲ್ಲಿ ನಡೆಯುತ್ತಿದ್ದ ಹೋರಾಟಗಳನ್ನು ಜಯಪ್ರಕಾಶ್ ನಾರಾಯಣ್ ಮುನ್ನಡೆಸುತ್ತಿದ್ದರು. ಅವರನ್ನು, ತುರ್ತು ಪರಿಸ್ಥಿತಿ ಘೋಷಣೆಯಾದ ಮಾರನೆಯ ದಿನವೇ (ಜೂನ್ 26) ಬಂಧಿಸಲಾಗಿತ್ತು. ಅವರನ್ನು ಬರೋಬ್ಬರಿ, 5 ತಿಂಗಳುಗಳ ಕಾಲ ಚಂಡೀಗಢ ಜೈಲಿನಲ್ಲಿ ಇರಿಸಲಾಗಿತ್ತು. ಅದೇ ವರ್ಷದ ನವೆಂಬರ್ 30ರಂದು ಅವರು ಪೆರೋಲ್ ಮೇಲೆ ಬಿಡುಗಡೆಯಾಗಿದ್ದರು.
ಜೈಲಿನಲ್ಲಿದ್ದ ಸಮಯದಲ್ಲಿ, ಜಯಪ್ರಕಾಶ್ ನಾರಾಯಣ್ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು. ಕಿಡ್ನಿ ವೈಫಲ್ಯದಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಜಯಪ್ರಕಾಶ್ ಅವರಿಗೆ ಪೋರ್ಟಬಲ್ ಡಯಾಲಿಸಿಸ್ ಯಂತ್ರದ ಅಗತ್ಯವಿತ್ತು. ಈ ವೇಳೆ, ಅವರಿಗೆ ಯಂತ್ರ ಖರೀದಿಗೆ ಮತ್ತು ಚಿಕಿತ್ಸೆಗಾಗಿ ಇಂದಿರಾ ಗಾಂಧಿ ಅವರೇ 90,000 ರೂ. ನೆರವು ನೀಡಿದ್ದರು ಎಂಬುದನ್ನು ಪುಸ್ತಕವೊಂದು ಬಹಿರಂಗಪಡಿಸಿದೆ.
ಸುಗತ ಶ್ರೀನಿವಾಸರಾಜು ಅವರ ‘ದಿ ಕನ್ಸೈನ್ಸ್ ನೆಟ್‌ವರ್ಕ್: ಎ ಕ್ರಾನಿಕಲ್ ಆಫ್ ರೆಸಿಸ್ಟೆನ್ಸ್ ಟು ಎ ಡಿಕ್ಟೇಟರ್‌ಶಿಪ್’ ಪುಸ್ತಕದಲ್ಲಿ ವಿವರಿಸಿರುವಂತೆ; ಜಯಪ್ರಕಾಶ್ ಅವರು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದರು. ಅವರ ಜೀವ ಉಳಿಸಲು ಮತ್ತು ಜೀವಮಾನವಿಡೀ ಡಯಾಲಿಸಿಸ್ ಅಗತ್ಯವಿತ್ತು. ಶೀಘ್ರದಲ್ಲೇ, ಅವರ ಚಿಕಿತ್ಸೆಯ ವೆಚ್ಚ ಮತ್ತು ಅವರಿಗೆ ಬೇಕಾಗಿದ್ದ ಡಯಾಲಿಸಿಸ್ ಯಂತ್ರವನ್ನು ಹೊಂದಿಸುವುದು ಸವಾಲಾಗಿತ್ತು. ಆದರೆ, ಸರ್ಕಾರದ ಸಹಾಯವನ್ನು ಸ್ವೀಕರಿಸಲಾಗುವುದಿಲ್ಲವೆಂದು ಜಯಪ್ರಕಾಶ್ ನಿರ್ಧರಿಸಿದ್ದರು. ಹೀಗಾಗಿ, ದೇಣಿಗೆ ಸಂಗ್ರಹಕ್ಕೆ ಅವರ ಬೆಂಬಲಿಗರು ಮುಂದಾಗಿದ್ದರು.
ಈ ಲೇಖನ ಓದಿದ್ದೀರಾ?: ದೇವರಾಜ ಅರಸು ಮತ್ತು ತುರ್ತುಪರಿಸ್ಥಿತಿ: ಒಡನಾಡಿಗಳು ಕಂಡಂತೆ
ಜಯಪ್ರಕಾಶ್ ಅವರ ಆರೋಗ್ಯ ಸ್ಥಿತಿಯ ಕುರಿತ ಸುದ್ದಿಗಳು ಹರಿದಾಡಲು ಆರಂಭಿಸುತ್ತಿದ್ದಂತೆಯೇ, ದೇಶ-ವಿದೇಶಗಳಿಂದ ಬೆಂಬಲಿಗರು ಹಣ ಸಹಾಯ ಮಾಡಿದರು. ಆದರೂ, ದುಬಾರಿ ಡಯಾಲಿಸಿಸ್ ಯಂತ್ರಕ್ಕೆ ಬೇಕಾಗುವಷ್ಟು ಹಣವನ್ನು ತ್ವರಿತವಾಗಿ ಸಂಗ್ರಹಿಸುವುದು ಕಷ್ಟವಾಗಿತ್ತು. ಆ ಸಮಯದಲ್ಲಿ, ಜಯಪ್ರಕಾಶ್ ಅವರ ಸ್ಥಿತಿ ಮತ್ತು ಹಣ ಸಂಗ್ರಹ ಪ್ರಯತ್ನದ ಬಗ್ಗೆ ತಿಳಿದ ಇಂದಿರಾ ಗಾಂಧಿ ಅವರು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಯಿಂದ 90,000 ರೂ. ಮೊತ್ತದ ಚೆಕ್‌ಅನ್ನು ಕಳುಹಿಸಿದ್ದರು ಎಂದು ಪುಸ್ತಕ ವಿವರಿಸಿದೆ.
ಆದಾಗ್ಯೂ, ಇಂದಿರಾ ಗಾಂಧಿ ಅವರು ನೀಡಿದ್ದ ಚೆಕ್ ಬಗ್ಗೆ ಅಮೆರಿಕದಲ್ಲಿ ಜಯಪ್ರಕಾಶ್ ಅವರಿಗಾಗಿ ಹಣ ಸಂಗ್ರಹಿಸುತ್ತಿದ್ದ ಭಾರತೀಯರ ಸಂಘಟನೆ ‘ಇಂಡಿಯನ್ಸ್ ಫಾರ್ ಡೆಮಾಕ್ರಸಿ’ (IFD) ಅಸಮಾಧಾನ ವ್ಯಕ್ತಪಡಿಸಿತ್ತು. ಚೆಕ್‌ಅನ್ನು ಇಂದಿರಾ ಅವರಿಗೆ ವಾಪಸ್ ಕಳಿಸುವಂತೆ ಭಾರತದಲ್ಲಿ ಹಣ ಸಂಗ್ರಹದ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದ ‘ಗಾಂಧಿ ಪೀಸ್ ಫೌಂಡೇಶನ್’ನ ರಾಧಾಕೃಷ್ಣ ಅವರನ್ನು ಒತ್ತಾಯಿಸಿತ್ತು.
ಈ ಲೇಖನ ಓದಿದ್ದೀರಾ?: ತುರ್ತುಪರಿಸ್ಥಿತಿ | ಕತ್ತಲೆಯ ಕಾಲದಲ್ಲಿ ವ್ಯಂಗ್ಯದ ಬೆಳಕು
“ಇಂದಿರಾ ಗಾಂಧಿ ನೀಡಿದ ಚೆಕ್‌ಅನ್ನು ಸ್ವೀಕರಿಸಿದರೆ ಜಯಪ್ರಕಾಶ್ ಅವರ ಬೆಂಬಲಿಗರು ಮತ್ತು ಅಭಿಮಾನಿಗಳು ಬಹಳ ನಿರಾಶೆಗೊಳ್ಳುತ್ತಾರೆಂದು ನಾವು ಭಾವಿಸಿದ್ದೆವು. ಹೀಗಾಗಿ, ಚೆಕ್‌ಅನ್ನು ಹಿಂದಿರುಗಿಸುವಂತೆ ಜಯಪ್ರಕಾಶ್ ಅವರಿಗೆ ಮನವಿ ಮಾಡಿದೆವು. ನಮ್ಮ ಮಧ್ಯಸ್ಥಿಕೆಯಿಂದಲೇ ಚೆಕ್‌ಅನ್ನು ಹಿಂದಿರುಗಿಸಲಾಯಿತು” ಎಂದು ಐಎಫ್‌ಡಿ ಸದಸ್ಯ ಆನಂದ್ ಕುಮಾರ್ ಹೇಳಿಕೊಂಡಿದ್ದಾರೆ. ಅಲ್ಲದೆ, ಸಂಘಟನೆಯು ವಿವಿಧ ಮೂಲಗಳಿಂದ ಚಿಕಿತ್ಸೆಗೆ ಅಗತ್ಯವಿದ್ದಷ್ಟು ಹಣವನ್ನೂ ಸಂಗ್ರಹಿಸಿದ್ದಾಗಿಯೂ ತಿಳಿಸಿದ್ದಾರೆ.
ಆರೋಗ್ಯದಲ್ಲಿ ಚೇತರಿಕೆ ಕಂಡ ಬಳಿಕ 1976ರ ಜೂನ್ 11ರಂದು ಜಯಪ್ರಕಾಶ್ ಅವರು ಇಂದಿರಾ ಗಾಂಧಿ ಅವರಿಗೆ ಪತ್ರವನ್ನು ಬರೆದಿದ್ದರು. ಪತ್ರದಲ್ಲಿ; “ತಾವು ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ಹಣ ಕಳಿಸಿದ್ದೀರಿ ಎಂಬುದು ನನಗೆ ತಿಳಿದಿರಲಿಲ್ಲ. ನಿಮ್ಮ ವೈಯಕ್ತಿಕ ಖಾತೆಯಿಂದ ಕಳಿಸಿದ್ದೀರೆಂದು ಭಾವಿಸಿದ್ದೆ. ನಾವು ಆ ಸಮಯದಲ್ಲಿ, ‘ನೀವು ಇಷ್ಟು ದೊಡ್ಡ ಮೊತ್ತದ ಹಣವನ್ನು ದೇಣಿಗೆ ನೀಡಲು ಸಾಧ್ಯವಿಲ್ಲ’ ಎಂಬುದನ್ನು ಯೋಚಿಸಬೇಕಿತ್ತು. ಆದರೆ, ತಿಳಿಯಲಿಲ್ಲ. ಅದೇನೆ ಇರಲಿ, ನಿಮ್ಮ ನಿಧಿಯಿಂದ ಚೆಕ್ ಬರುವುದಕ್ಕೂ ಮೊದಲೇ, ಸಾರ್ವಜನಿಕರಿಂದ 3 ಲಕ್ಷ ರೂ. ಹಣ ಸಂಗ್ರಹವಾಗಿತ್ತೆಂದು ತಿಳಿಯಿತು. ನೀವು ನನ್ನನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳುವುದಿಲ್ಲ. ನನ್ನನ್ನು ಕೃತಜ್ಞತೆ ಇಲ್ಲದ ವ್ಯಕ್ತಿಯೆಂದು ಭಾವಿಸುವುದಿಲ್ಲವೆಂದು ನಾನು ಪ್ರಮಾಣಿಕವಾಗಿ ನಂಬಿದ್ದೇನೆ” ಎಂದು ಹೇಳಿದ್ದರು.
ಮುಂದುವರೆದು, “ನೀವು ನೀಡಿದ ನೆರವನ್ನು ಹಿಂದಿರುಗಿಸಿದ್ದರಲ್ಲಿ ಯಾವುದೇ ಅಗೌರವದ ಉದ್ದೇಶವಿಲ್ಲ. ನನ್ನ ಆರೋಗ್ಯದ ಬಗ್ಗೆ ನೀವು ತೋರಿಸಿರುವ ಕಾಳಜಿಗೆ ನಾನು ಕೃತಜ್ಞನಾಗಿದ್ದೇನೆ” ಎಂದು ಪತ್ರದಲ್ಲಿ ಬರೆದಿದ್ದರು.