'ಐ ಕ್ಯಾನ್ ಹಿಯರ್ ದ ಹೋಲ್ ವರ್ಲ್ಡ್ ಸಿಂಗಿಂಗ್ ಟುಗೇದರ್'…. ಹಸಿರನ್ನು ಉಳಿಸುವ ಪದ ಜಗದಗಲ ಕೇಳಿ ಬರುತ್ತಿರುವುದು ನಿಜವೇ? ನಿಜ, ಸ್ವಲ್ಪಮಟ್ಟಿಗೆ ನಿಜ. ಬುಲ್ಡೋಜರ್ ಅಡಿಗೆ ಬೀಳುತ್ತೇವೆ ಎಂದಾಗ ಗೂಡಿನಲ್ಲಿರುವ ಮರಿಗಳ ರಕ್ಷಣೆಗೆ ಕೂಗಾಡುವ ಪುಟ್ಟ ಹಕ್ಕಿಗಳ ಚೀರಾಟದಂತಿದೆ ಈ ಹಾಡು...
ಡೇವಿಡ್ ಆಟೆನ್ ಬರೋ ಅವರ ನಿರೂಪಣೆಯಲ್ಲಿ ಮೂಡಿ ಬಂದ ‘ಅವರ್ ಪ್ಲಾನೆಟ್’ ಸಾಕ್ಷ್ಯ ಚಿತ್ರ ಸರಣಿಯ ಪ್ರತಿ ಎಪಿಸೋಡ್‌ನ ಕೊನೆಗೊಂದು ಒಂದು ಸುಮಧುರ ಇಂಗ್ಲಿಷ್ ಹಾಡು ಕೇಳಿಬರುತ್ತದೆ. ಒಂದು ಸಾಲಿನಲ್ಲಿ ಇಡೀ ಹಾಡಿನ ಭಾವಾರ್ಥವನ್ನು ಹೀಗೂ ಬರೆಯಬಹುದು…
”ಜಗದಗಲ ಕೇಳಿಸುತಿದೆ ಒಕ್ಕೊರಲ ಹಾಡು
ಇಂದಲ್ಲವಾದರೆ ಮುಂದೆಂದು ಬದಲಾವಣೆಯು”
ವಿಶ್ವ ಪರಿಸರ ದಿನವನ್ನು ‘ಆಚರಿಸುವ’ ಇವತ್ತಿನ ದಿನ ಈ ಭೂಮಿಯ ಮೇಲಿನ ಪರಿಸರ ಸಂರಕ್ಷಣೆಯ ವಿಚಾರದಲ್ಲಂತೂ ‘ಇಂದೆಲ್ಲವಾದರೆ ಮುಂದೆಂದು’ ಎಂದು ಕೇಳಲೇಬೇಕಾಗಿದೆ. ಭೂಮಿಯನ್ನು ಆ ಮೂಲಕ ನಮ್ಮನ್ನು ನಾವು ಉಳಿಸಿಕೊಳ್ಳಲು ಒಕ್ಕೊರಲ ಹಾಡು ಹಾಡಬೇಕಾಗಿದೆ.
ಕಳೆದ ಶತಮಾನದ ಅರವತ್ತು ಎಪ್ಪತ್ತರ ದಶಕಗಳನ್ನು ಪರಿಸರ ಮಾಲಿನ್ಯ ಮತ್ತು ನೈಸರ್ಗಿಕ ಸಂಪನ್ಮೂಲಗಳ ನಾಶದ ಬಗ್ಗೆ ಚಿಂತನೆ ನಡೆದ, ಜಗತ್ತಿನ ಜನರಲ್ಲಿ ಪರಿಸರದ ಅರಿವು ಮೂಡಿದ ದಶಕಗಳು ಎನ್ನಬಹುದು. ಇಪ್ಪತ್ತೊಂದನೆಯ ಶತಮಾನದ ಮೊದಲೆರಡು ದಶಕಗಳು ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಗಳೆಂಬ ದುರಂತಮಯ ವಿದ್ಯಮಾನಗಳು ಗಮನಕ್ಕೆ ಬಂದ ಮತ್ತು ಹೆಚ್ಚಿನ ತಿಳಿವಳಿಕೆ ಮೂಡಿದ ದಶಕಗಳು ಎನ್ನಬಹುದು. ಈಗ ಜಲ ಮೂಲಗಳು ನಾಶ ಆಗುತ್ತಿವೆ, ಇರುವ ನೀರು ಮಲಿನಗೊಳ್ಳುತ್ತಿದೆ, ಕಾಡು – ಜೀವ ವೈವಿಧ್ಯ ನಾಶ ಆಗುತ್ತಿದೆ, ಮಣ್ಣು ಸತ್ತಿದೆ, ಗಾಳಿ ವಿಷಮಯವಾಗಿದೆ, ಆಹಾರ ದೇಹದಲ್ಲಿ ವಿಷ ತುಂಬಿಕೊಂಡಿದೆ ಎಂಬೆಲ್ಲ ಅರಿವು ಹೆಚ್ಚಾಗುತ್ತಿದೆ. ಆದರೆ ಅರಿವು ಹೆಚ್ಚಾಗಿರುವಷ್ಟು ಪ್ರಮಾಣದಲ್ಲಿ ಕ್ರಿಯೆ ನಡೆಯುತ್ತಿಲ್ಲ.
ಜನಸಾಮಾನ್ಯರ ಜೀವನದ ಮೇಲೆ ಪ್ರಭಾವ ಬೀರುವ ಹೊಸ ಸಂಶೋಧನೆ, ತಿಳಿವಳಿಕೆಗಳು ಬಹಳಷ್ಟು ಸಲ ತಜ್ಞರು, ವಿಜ್ಞಾನಿಗಳ ಮಟ್ಟದಲ್ಲೇ ಉಳಿದು ತಳಮಟ್ಟದವರೆಗೆ ಜನಸಾಮಾನ್ಯರಿಗೆ ತಲುಪುವುದಿಲ್ಲ. ಸಂಶೋಧನೆಯು ಹೊಸ ಸರಕು ಉತ್ಪಾದನೆಗೆ ದಾರಿಯಾದರೆ ಅದು ಮಾರುಕಟ್ಟೆಯ ಮೂಲಕ ಜನರಿಗೆ ತಲಪುತ್ತದೆ. ಪರಿಸರ ಸಮಸ್ಯೆ ಮತ್ತು ಸಂರಕ್ಷಣೆಯ ವಿಚಾರಗಳು ಜನಸಾಮಾನ್ಯರಿಗೆ ತಲಪಬೇಕಾದರೆ ಅವು ಸಾಂಸ್ಕೃತಿಕ ರೂಪ ಪಡೆಯಬೇಕು, ಅನುಸರಿಸಬಹುದಾದ ನಡೆಗಳಾಗಬೇಕು. ಇತ್ತೀಚೆಗಿನ ತಂತ್ರಜ್ಞಾನ ಮತ್ತು ಸಂವಹನ ಕ್ರಾಂತಿಯು ದೃಶ್ಯ ಮಾಧ್ಯಮಗಳನ್ನು ಸುಲಭದ ಸಾಂಸ್ಕೃತಿಕ ಸಲಕರಣೆಗಳಾಗಿಸಿವೆ. ಆದುದರಿಂದಲೇ ಈ ಭೂಮಿಯ ಪರಿಸರದ ಸಂಗತಿಗಳನ್ನು, ಆಪತ್ತುಗಳನ್ನು, ಬದಲಾವಣೆ ತರಬೇಕಾದ ಅಗತ್ಯಗಳನ್ನು ಅದ್ಭುತವಾಗಿ ಕಟ್ಟಿಕೊಡುವ ‘ಅವರ್ ಪ್ಲಾನೆಟ್’ ಚಿತ್ರ ಸರಣಿಯನ್ನು ಅದು ಸಾಕ್ಷ್ಯಚಿತ್ರವಾದರೂ ಕೂಡ 2019ರಲ್ಲಿ ಅದು ಬಿಡುಗಡೆಯಾದ ಒಂದೇ ವರ್ಷದ ಅವಧಿಯಲ್ಲಿ ಹತ್ತು ಕೋಟಿ ಕುಟುಂಬಗಳ ಜನ ವೀಕ್ಷಣೆ ಮಾಡಿದರು. ಇಂದಿಗೆ ಈ ಸರಣಿಯ ಚಿತ್ರಗಳನ್ನು ನೋಡಿದ ಮಂದಿಯ ಸಂಖ್ಯೆ ಬಹಳನೇ ಇರಬಹುದು.
ಹವಾಮಾನ ಬದಲಾವಣೆಯು ಸೇರಿದಂತೆ ಪ್ರಕೃತಿ ತನ್ನ ಸಹಜತೆಯನ್ನು ಕಳಕೊಂಡಿರುವುದರಿಂದ ಆಗುತ್ತಿರುವ ಅಡ್ಡ ಪರಿಣಾಮಗಳ ನೇರ ಪರಿಣಾಮವನ್ನು ನಾವು ಇಂದು ಎದುರಿಸುತ್ತಿದ್ದೇವೆ. ಇತ್ತೀಚಿನ ಒಂದು ಪ್ರಮುಖ ಪ್ರಾಕೃತಿಕ ವಿದ್ಯಮಾನವಾಗಿರುವ ಅಕಾಲಿಕ ಮಳೆ ಮತ್ತು ಮರುಭೂಮಿಯಲ್ಲೂ ಪ್ರವಾಹ ಸ್ವರೂಪದ ಮಳೆಯಾಗುತ್ತಿರುವುದು ಹವಾಮಾನ ಬದಲಾವಣೆಯ ಪರಿಣಾಮವೇ ಆಗಿದೆ. ನಮ್ಮ ರಾಜ್ಯದಲ್ಲಿ ಈ ವರ್ಷ ವಾಡಿಕೆಯ ಮುಂಗಾರು ಮಳೆಯು ಬರಬೇಕಾದ ಸಮಯಕ್ಕಿಂತ ಬಹಳ ಮೊದಲೇ ಪೂರ್ವ ಮುಂಗಾರು ಜೊತೆಗೆ ಜೊತೆಗೆನೇ ಬಂದು, ಕರಾವಳಿಯಲ್ಲೂ ಬಯಲು ಸೀಮೆಯಲ್ಲೂ ಏಕ ಕಾಲಕ್ಕೆ ಬಂದು ಕೆಲವು ಕಡೆ ಪ್ರವಾಹ ಬರುವುದೆಂದರೆ ಏನಿದು?
ಕೆಲವು ತಜ್ಞರ ಪ್ರಕಾರ ಪರಿಸರ ನಾಶ ಎಷ್ಟರ ಮಟ್ಟಿಗೆ ಆಗಿದೆ ಎಂದರೆ ನಾವೀಗ ‘ಟಿಪ್ಪಿಂಗ್ ಪಾಯಿಂಟ್’ನಲ್ಲಿ ಇದ್ದೇವೆ. ಅಂದರೆ ಇನ್ನೇನು ಮಹಾನ್ ಕಂದಕಕ್ಕೆ ಬೀಳಲಿದ್ದೇವೆ, ಸಮತೋಲನ ಕಾಯ್ದುಕೊಂಡು ಒಂದು ಹೆಜ್ಜೆ ಹಿಂದೆ ಇಟ್ಟು ಸದ್ಯಕ್ಕೆ ನಮ್ಮನ್ನು ನಾವು ಬಚಾವ್ ಮಾಡಿಕೊಳ್ಳಲೂ ಅಸಾಧ್ಯ ಅನ್ನುವಷ್ಟರ ಮಟ್ಟಿಗೆ ಗಂಭೀರವಾಗಿದೆಯಂತೆ ಪರಿಸ್ಥಿತಿ. ಮೇಲೆ ಪ್ರಸ್ತಾಪಿಸಿದ ಹಾಡಿನ ಮೂಲ ಪಠ್ಯ ಓದಿದರೆ ‘ಕಾಲ ಇನ್ನೂ ಮಿಂಚಿಲ್ಲ’ ಎಂಬ ಸಾಲಿದೆ. ಹೌದೋ ಅಲ್ಲವೋ ತಿಳಿಯದು ಆದರೆ ಹಾಗೆಂದು ಹೇಳದೆ ಬೇರೆ ದಾರಿಯಿಲ್ಲ. ಈಗಲಾದರೂ ಈ ಭೂಮಿಯನ್ನು, ನಮ್ಮನ್ನು ನಾವು ‘ಹೀಲಿಂಗ್’ ಮಾಡಿಕೊಳ್ಳುವ, ಉಪಭೋಗದ, ಕೆಲವರ ಅತಿಭೋಗದ ಕಾಯಿಲೆಗಳಿಂದ ಗುಣ ಪಡಿಸಿಕೊಳ್ಳುವ ಅನಿವಾರ್ಯತೆ ಇದೆ.
‘ಐ ಕ್ಯಾನ್ ಹಿಯರ್ ದ ಹೋಲ್ ವರ್ಲ್ಡ್ ಸಿಂಗಿಂಗ್ ಟುಗೇದರ್’… ಹಸಿರನ್ನು ಉಳಿಸುವ ಪದ ಜಗದಗಲ ಕೇಳಿ ಬರುತ್ತಿರುವುದು ನಿಜವೇ? ನಿಜ, ಸ್ವಲ್ಪಮಟ್ಟಿಗೆ ನಿಜ. ಬುಲ್ಡೋಜರ್ ಅಡಿಗೆ ಬೀಳುತ್ತೇವೆ ಎಂದಾಗ ಗೂಡಿನಲ್ಲಿರುವ ಮರಿಗಳ ರಕ್ಷಣೆಗೆ ಕೂಗಾಡುವ ಪುಟ್ಟ ಹಕ್ಕಿಗಳ ಚೀರಾಟದಂತಿದೆ ಈ ಹಾಡು. ಪಂಚೇಂದ್ರಿಯಗಳು ಸರಿ ಇರುವವರಿಗೆ ಈ ಕೂಗಾಟ ಕೇಳಿಸುತ್ತದೆ. ‘ಅಭಿವೃದ್ಧಿ’ ಹೆಸರಿನ ಓಟದಲ್ಲಿ ಸದ್ದು ಗದ್ದಲದಲ್ಲಿ ಕುರುಡರಾಗಿ ಕಿವುಡರಾಗಿದ್ದೇ ಸುಖ ಪಡುವವರಿಗೆ ಕಾಣಿಸುವುದಿಲ್ಲ, ಕೇಳಿಸುವುದಿಲ್ಲ. ಹಾಡುವ ದನಿ ಚಿಕ್ಕದಾದರೂ ಹಾಡುವ ಹಕ್ಕಿಗಳ ಸಂಖ್ಯೆಯು ನಿಧಾನವಾಗಿಯಾದರೂ ಹೆಚ್ಚುತ್ತಿದೆ.
‘ಹೌ ಡೇರ್ ಯೂ’ ಅಂದರೆ ‘ನಿಮಗೆಷ್ಟು ಕೊಬ್ಬು’ ಎಂದು ಪದೇಪದೇ ಮೀಟಿಂಗ್‌ಗಳನ್ನಷ್ಟೇ ಮಾಡಿ ಯಾವ ತೀರ್ಮಾನಗಳನ್ನೂ ಮಾಡದ, ಮಾಡಿದ ತೀರ್ಮಾನಗಳನ್ನುಅನುಷ್ಠಾನ ಮಾಡದ ರಾಷ್ಟ್ರ ರಾಷ್ಟ್ರಗಳ ನಾಯಕರಿಗೆ ಮುಖಕ್ಕೆ ಹೊಡೆದಂತೆ ಹೇಳಿದ ಗ್ರೇಟಾ ತನ್‌ಬರ್ಗ್ ತಮಗೆ ಗೊತ್ತಿರಬಹುದು. ಪರಿಸರ ಸಂರಕ್ಷಣೆ, ಕ್ಲೈಮೇಟ್ ಚೇಂಜ್ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಯುವಜನರ ಸಂಖ್ಯೆಯೂ ಜಗತ್ತಿನಾದ್ಯಂತ ಹೆಚ್ಚುತ್ತಿದೆ. ಈ ಭೂಮಿಯ ಮೇಲಿನ ನೈಸರ್ಗಿಕ ಸಂಪನ್ಮೂಲಗಳು ಎಲ್ಲಾ ಜೀವಿಗಳಿಗೂ, ಎಲ್ಲಾ ತಲೆಮಾರುಗಳಿಗೂ ಸೇರಿದ್ದು. ಇವತ್ತಿನ ಯುವಜನರು, ಮಕ್ಕಳು ಮುಂದೆ ಹಲವು ದಶಕಗಳ ಈ ಭೂಮಿಯ ಕಾಲ ಬಾಳಿ ಬದುಕಬೇಕಾದವರು. ಆದುದರಿಂದ ಈ ಪರಿಸರವನ್ನು ಸುಸ್ಥಿರ ರೀತಿಯಲ್ಲಿ ಅನುಭವಿಸುವುದು ಯುವಜನರ ಹಕ್ಕು ಮತ್ತು ಅದನ್ನು ಸಂರಕ್ಷಣೆ ಮಾಡುವುದು ಅವರ ಕರ್ತವ್ಯ ಕೂಡ ಹೌದು. ಅದು ಇದೀಗ ಅವರಿಗೆ ಅರ್ಥವಾಗುತ್ತಿದೆ. ಅವರು ತಲೆಮಾರುಗಳ ನಡುವಿನ ಪರಿಸರ ನ್ಯಾಯ, ಸಾಮಾಜಿಕ ನ್ಯಾಯವನ್ನು ಕೇಳುತ್ತಿದ್ದಾರೆ. ಈವರೆಗಿನ ಪರಿಸರ ನಾಶದಲ್ಲಿ ದೊಡ್ಡ ಪಾಲುದಾರರಾಗಿರುವ ಈಗಿನ ‘ದೊಡ್ಡವರು’ ಇದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ.
ಈ ಲೇಖನ ಓದಿದ್ದೀರಾ?: ವಿಶ್ವ ಪರಿಸರ ದಿನ 2025: ಬನ್ನಿ… ಪ್ಲಾಸ್ಟಿಕ್ ಮಾಲಿನ್ಯಕ್ಕೆ ಅಂತ್ಯ ಹಾಡೋಣ…
ಪರಿಸರದ ಸಮಸ್ಯೆಗಳನ್ನು, ಪರಿಣಾಮಗಳನ್ನು ಮತ್ತು ಮೂಲ ಕಾರಣಗಳನ್ನು ಅರಿಯುವುದಲ್ಲಿ ಒಟ್ಟು ಸಮಾಜ ಸೋತಿದೆಯಂತಲೇ ಹೇಳಬಹುದು. ಅಥವಾ ಕೆಲವು ಹಿತಾಸಕ್ತಿಗಳು ಸೋಲಿಸಿವೆ ಎಂದರೂ ಸರಿಯೇ. ಕೇವಲ ಮರ ಬೆಳೆಸುವುದು, ಪ್ಲಾಸ್ಟಿಕ್ ಹೆಕ್ಕುವುದರಿಂದ ನಮ್ಮ ಸಮಸ್ಯೆಗಳಿಗೆ ಪರಿಹಾರ ಹುಡುಕಲಾರೆವು. ಯುವಜನರೂ ಸೇರಿದಂತೆ ಜನರು ಅವರ ಸಂಪೂರ್ಣ ಜೀವನ ಶೈಲಿಯನ್ನು ಪರಿಸರ ಸ್ನೇಹಿಯಾಗಿ ಪರಿವರ್ತನೆ ಮಾಡಿಕೊಳ್ಳುವುದು, ಅವರ ಜೀವನೋಪಾಯ-ಉತ್ಪಾದನೆ – ಉದ್ಯೋಗದ ದಾರಿಗಳನ್ನು ಕೂಡ ಹಸಿರು ಹಾದಿಯಾಗಿಸುವುದು ಬಹಳ ಮುಖ್ಯ. ನೆಲ ಜಲ ಸಂರಕ್ಷಣೆಯ ಕೆಲಸಗಳನ್ನು ಮಾಡುವುದು, ಸುಸ್ಥಿರ ಕೃಷಿ , ಹಸಿರು ಉತ್ಪಾದನಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಹವ್ಯಾಸ, ಜೀವನ, ಜೀವನೋಪಾಯ ಎಲ್ಲವೂ ಆಗಬೇಕಾಗಿದೆ.
ನಾವು ಬದಲಾದರೆ ಸಾಲದು. ಎಲ್ಲರೂ ಸಾಮೂಹಿಕವಾಗಿ ಬದಲಾಗುವುದು ಮುಖ್ಯ. ನಮ್ಮ ವ್ಯವಸ್ಥೆಯೂ ಪರಿಸರ ಸಂರಕ್ಷಣೆಯ ಪರವಾಗಿ ಇರುವುದು ಮುಖ್ಯ. ಅದಕ್ಕಾಗಿ ಎಲ್ಲ ಸ್ತರದ ಜನರು, ಯುವಜನರು ಗ್ರಾಮಾಭಿವೃದ್ಧಿಯ ಗ್ರಾಮ ಸಭೆಯಿಂದ ಹಿಡಿದು ಮಾಲಿನ್ಯ ನಿಯಂತ್ರಣ ಮಂಡಳಿಯವರೆಗೂ ಇಲ್ಲಿ ನಡೆಯುವ ಎಲ್ಲ ತೀರ್ಮಾನಗಳಲ್ಲಿ ಭಾಗವಹಿಸಬೇಕು. ಈ ಭೂಮಿಯ ಪರಿಸರವನ್ನು ಹೇಗೆ ಕಾಪಾಡಬಲ್ಲೆವು, ಸುಸ್ಥಿರ ಬದುಕನ್ನು ಹೇಗೆ ಕಟ್ಟಬಲ್ಲೆವು ಎಂದು ತಮ್ಮ ಅಭಿಪ್ರಾಯ ಮಂಡಿಸಿ ಕಾರ್ಯಯೋಜನೆಗಳನ್ನು ಮಾಡಬೇಕಾಗಿದೆ. ತೀರ್ಮಾನ ತೆಗೆದುಕೊಳ್ಳುವುದನ್ನು ಮುಂಚೂಣಿಯ ರಾಜಕೀಯ ನಾಯಕರಿಗೆ, ಬಂಡವಾಳ ಹೂಡುವವರಿಗಷ್ಟೇ ಬಿಟ್ಟರೆ ನಮ್ಮ ಕಥೆ ಮುಗಿದಂತೆ.
ಬದಲಾವಣೆ ಅನಿವಾರ್ಯ ಮತ್ತು ಬದಲಾವಣೆ ಸಾಧ್ಯ. ಬತ್ತಿ ಹೋಗಿ ಮರುಭೂಮಿಯಾದ ವಿಶ್ವದ ಅತಿ ದೊಡ್ಡ ಒಳನಾಡಿನ ಸಮುದ್ರವಾದ ಅರಾಲ್ ಸಮುದ್ರ ಮತ್ತೆ ಸಮುದ್ರವಾಗುತ್ತಲಿದೆ; ಅಮೆರಿಕಾದ ಕ್ಲಮಾತ್ ನದಿಗೆ ಅಡ್ಡಲಾಗಿ ಹಾಕಿದ್ದ ನಾಲ್ಕು ಅಣೆಕಟ್ಟೆಗಳನ್ನು ಒಡೆದುಹಾಕಲಾಗಿದೆ (decommissioned), ಮತ್ತೆ ಸಾಲ್ಮಾನ್ ಮೀನುಗಳು ನದಿ ಸೇರುತ್ತಿವೆ, ಅಲ್ಲಿನ ಕ್ಲಮಾತ್ ಮತ್ತು ಇತರ ಬುಡಕಟ್ಟು ಜನರ ಮುಖದಲ್ಲಿ ನಗು ಮೂಡುತ್ತಿದೆ; ಮಹಾಸಾಗರಗಳಲ್ಲಿ ಕಡಲುಗಳ್ಳರಿಗೆ ಬಲಿಯಾಗಿ ನಾಶದ ಅಂಚಿನಲ್ಲಿದ್ದ ತಿಮಿಂಗಿಲಗಳು (ಬ್ಲೂ ವೇಲ್ಸ್, ಗ್ರೇ ವೇಲ್ಸ್, ನಾರ್ತ್ ಅಟ್ಲಾಂಟಿಕ್ ವೇಲ್ಸ್) ಮತ್ತೆ ಸಾಗರಗಳನ್ನು ಆಳುತ್ತಿವೆ. ಬೋಳು ಗುಡ್ಡಗಳು ಹಸಿರಾಗುತ್ತಿವೆ, ಬತ್ತಿದ ನದಿಗಳು ಪುನಶ್ಚೇತನಗೊಳ್ಳುತ್ತಿವೆ… ಜಗತ್ತಿನಾದ್ಯಂತ ಪರಿಸರ ಉಳಿಸುವ ಸಾವಿರಾರು ಪ್ರಯತ್ನಗಳೂ ಚಾಲ್ತಿಯಲ್ಲಿವೆ. ಸಾವಿರಾರು ಸಂಘ ಸಂಸ್ಥೆಗಳು, ಸಂಘಟನೆಗಳು, ಹೋರಾಟಗಳು, ಆಂದೋಲನಗಳು, ವಕಾಲತ್ತುಗಳು… ಹಸಿರನ್ನುಳಿಸಲು, ಉಸಿರನ್ನು ಉಳಿಸಲು ಅದೆಷ್ಟು ಪ್ರಯತ್ನಗಳು…! ನಿರಾಶರಾಗಬೇಡಿ. ಹಾಗೆಂದು ಸುಮ್ಮನಿರಬೇಡಿ.
ಹೌದು ಹಸಿರು ಹಾಡು ಕೇಳಿಸುತ್ತಿದೆ. ಕಿವಿಗೊಡಬೇಕು, ದನಿಗೂಡಿಸಬೇಕು.

ಜನಾರ್ದನ ಕೆಸರಗದ್ದೆ
‘ಪ್ರೀತಿಯ ಗಾಳಿ ಬೀಸುತಿದೆ ಹಟ್ಟಿ ಮೊಹಲ್ಲಾಗಳ ನಡುವೆ’ ಎಂಬ ಖ್ಯಾತ ಹಾಡಿನ ರಚನಾಕಾರರಾದ ಜನಾರ್ದನ ಕೆಸರಗದ್ದೆಯವರು ಮೂರು ದಶಕಗಳಿಂದ ಸಾಮಾಜಿಕ ಕಾರ್ಯಕರ್ತರಾಗಿ ನಾಡಿನ ಹಲವು ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. 'ಸಂವಾದ' ಎಂಬ ಸರಕಾರೇತರ ಸಂಸ್ಥೆಯಲ್ಲಿ ಕಾರ್ಯಕ್ರಮ ಸಂಯೋಜಕರಾಗಿ ಕೆಲಸ ಮಾಡುತ್ತಿರುವ ಜನಾರ್ದನ, ಯುವಜನರನ್ನು ಸಬಲೀಕರಣಗೊಳಿಸುವ ಕಾಯಕದಲ್ಲಿ ನಿರತರಾದವರು. ಕೃಷಿ, ಪರಿಸರ, ಯುವ ಸಬಲೀಕರಣ, ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳಲ್ಲಿ ಪರಿಣತರು. ಸರಕಾರದ ಇಲಾಖೆಗಳಿಗೆ, ಸಂಘ ಸಂಸ್ಥೆಗಳಿಗೆ, ಆಸ್ಪತ್ರೆಗಳ ಸಮಿತಿಗಳಿಗೆ, ವಿವಿಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಹೋಗಿ ತಮ್ಮ ತಮ್ಮ ಅನುಭವವನ್ನು ಹಂಚಿಕೊಂಡವರು. ಹೊಸ ಕಾಲಕ್ಕೆ ಹೊಸ ಹಾಡುಗಳನ್ನು ಸೃಷ್ಟಿಸಿರುವುದರಲ್ಲಿ ಜನಾರ್ದನ ಅವರ ಹಿರಿಮೆಯಿದೆ.