ಚುನಾವಣಾ ಇತಿಹಾಸದಲ್ಲಿ ಅಚ್ಚರಿಯ ಘಟನೆಯೊಂದು ಗುರುವಾರ ನಡೆದಿದೆ. ವಿದ್ಯುನ್ಮಾನ ಮತಯಂತ್ರ (ಇವಿಎಂ) ಮೂಲಕ ಚಲಾಯಿಸಲಾಗಿದ್ದ ಮತಗಳನ್ನು ಸುಪ್ರೀಂ ಕೋರ್ಟ್ ಆವರಣದಲ್ಲಿಯೇ ಮರು ಎಣಿಕೆ ನಡೆಸಲಾಗಿದೆ. ಈ ವೇಳೆ, ಹಿಂದಿನ ಫಲಿತಾಂಶದಲ್ಲಿ ಸೋತಿದ್ದಾರೆಂದು ಘೋಷಿಸಲಾಗಿದ್ದ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಇದು, ಚುನಾವಣಾ ಪ್ರಕ್ರಿಯೆಯ ಬಗ್ಗೆ ಭಾರೀ ಕಳವಳ ಮತ್ತು ಆತಂಕ ಹುಟ್ಟುಹಾಕಿದೆ.
ಹರಿಯಾಣದ ಪಾಣಿಪತ್ ಜಿಲ್ಲೆಯ ಬುವಾನಾ ಲುಖು ಗ್ರಾಮ ಪಂಚಾಯತಿಗೆ 2022ರ ನವೆಂಬರ್ 2ರಂದು ಚುನಾವಣೆ ನಡೆದಿತ್ತು. ಆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮೋಹಿತ್ ಕುಮಾರ್ ಎಂಬವರು ತಮ್ಮ ಪ್ರತಿಸ್ಪರ್ಧಿ ಕುಲದೀಪ್ ಸಿಂಗ್ ವಿರುದ್ಧ ಸೋತಿದ್ದಾರೆ ಎಂದು ಫಲಿತಾಂಶದಲ್ಲಿ ಘೋಷಿಸಲಾಗಿತ್ತು.
ಆದರೆ, ಈ ಫಲಿತಾಂಶವನ್ನು ಒಪ್ಪಿಕೊಳ್ಳದೆ, ಅನುಮಾನ ವ್ಯಕ್ತಪಡಿಸಿದ್ದ ಮೋಹಿತ್ ಕುಮಾರ್, ಸ್ಥಳೀಯ ಚುನಾವಣಾ ನ್ಯಾಯಮಂಡಳಿಯ ಮೆಟ್ಟಿಲೇರಿದ್ದರು. ನ್ಯಾಯಮಂಡಣಿಯು ಕೇವಲ ಒಂದು ಬೂತ್ (ನಂ.69) ಮತಗಳ ಮರುಎಣಿಕೆಗೆ ಸೂಚಿಸಿತ್ತು. ಆದರೆ, ಆ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಬಳಿಕ, ಮೋಹಿತ್ ಕುಮಾರ್ ಅವರು ಸುಪ್ರೀಂ ಕೋರ್ಟ್ ಮೊರೆಹೋಗಿದ್ದರು.
ಅವರ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಸೂರ್ಯ ಕಾಂತ್, ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಎನ್. ಕೋಟೀಶ್ವರ್ ಸಿಂಗ್ ಅವರಿದ್ದ ಪೀಠವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿತ್ತು. “ಬುವಾನಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲ ಬೂತ್‌ಗಳ ಇವಿಎಂ ಮತಗಳನ್ನು ಸುಪ್ರೀಂ ಕೋರ್ಟ್ ಆವರಣದಲ್ಲಿ, ನ್ಯಾಯಾಲಯದ ರಿಜಿಸ್ಟಾರ್ ಕಾವೇರಿ ಅವರ ಉಸ್ತುವಾರಿಯಲ್ಲಿ ಮರುಎಣಿಕೆ ನಡೆಸಬೇಕು. ಅದನ್ನು ವಿಡಿಯೋ ಚಿತ್ರೀಕರಣ ಮಾಡಬೇಕು” ಎಂದು ಪೀಠವು ಆದೇಶಿಸಿತ್ತು.
ಅಂತಿಮವಾಗಿ, ಗುರುವಾರ, ಮತಗಳ ಮರುಎಣಿಕೆ ನಡೆದಿದೆ. ಚಲಾವಣೆಯಾಗಿದ್ದ ಒಟ್ಟು 3,767 ಮತಗಳಲ್ಲಿ ಈ ಹಿಂದೆ ಸೋತಿದ್ದಾರೆಂದು ಘೋಷಿಸಿಲಾಗಿದ್ದ ಮೋಹಿತ್ ಕುಮಾರ್ ಅವರು 1,051 ಮತಗಳು ಪಡೆದಿದ್ದಾರೆ. ಗೆದ್ದಿದ್ದಾರೆಂದು ಘೋಷಿಸಿ, ಪಂಚಾಯತಿ ಸದಸ್ಯತ್ವ ನೀಡಲಾಗಿದ್ದ ಕುಲದೀಪ್ ಸಿಂಗ್ 1,000 ಮತಗಳನ್ನು ಪಡೆದಿದ್ದಾರೆ.
ಹೀಗಾಗಿ, 2022ರಲ್ಲಿ ಪರಾಜಿತರೆಂದು ಘೋಷಿಸಿದ್ದ ಮೋಹಿತ್ ಅವರು 51 ಮತಗಳ ಅಂತರದಲ್ಲಿ ಕುಲದೀಪ್ ಸಿಂಗ್ ವಿರುದ್ಧ ಗೆದ್ದಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ಈ ಲೇಖನ ಓದಿದ್ದೀರಾ?: ಕ್ಯೂಬಾ ಕ್ರಾಂತಿಯ ಕಿಡಿ, ಬಂಡವಾಳಿಗರ ದುಸ್ವಪ್ನ ಫಿಡೆಲ್ ಕ್ಯಾಸ್ಟ್ರೋ
ಮರುಎಣಿಕೆಯ ಮರದಿಯನ್ನು ಗಮನಿಸಿದ ನ್ಯಾಯಾಲಯವು, ಮೋಹಿತ್ ಕುಮಾರ್ ಅವರನ್ನೇ ಬುವಾನಾ ಲಖು ಗ್ರಾಮ ಪಂಚಾಯಿತಿಯ ನೂತನ ಸರಪಂಚ್ (ಸದಸ್ಯ) ಎಂದು ಘೋಷಿಸಿದೆ. ಎರಡು ದಿನಗಳೊಳಗೆ ಅಧಿಕೃತ ಅಧಿಸೂಚನೆ ಹೊರಡಿಸಿ, ಮೋಹಿತ್ ಕುಮಾರ್ ಅವರಿಗೆ ತಕ್ಷಣವೇ ಅಧಿಕಾರ ವಹಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಪಾಣಿಪತ್ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.