ಕೋಲ್ಕತ್ತಾ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಮತ್ತು ಬಿಜೆಪಿ ನಾಯಕ ಅಭಿಜಿತ್ ಗಂಗೋಪಾಧ್ಯಾಯ, ಮಾಜಿ ಟಿಎಂಸಿ ಸಂಸದ ಅರ್ಜುನ್ ಸಿಂಗ್ ಸೇರಿದಂತೆ ಬಿಜೆಪಿಯ ನಾಲ್ವರು ನಾಯಕರಿಗೆ ಕೇಂದ್ರ ಪಡೆಗಳ ಭದ್ರತೆಯನ್ನು ವಿಸ್ತರಿಸಲು ಗೃಹ ಸಚಿವಾಲಯ (ಎಂಎಚ್‌ಎ) ನಿರ್ಧರಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಬಿಜೆಪಿಯ ಜಿಲ್ಲಾ ಮಟ್ಟದ ನಾಯಕರಾದ ಅಭಿಜಿತ್ ಬರ್ಮನ್ ಮತ್ತು ತಪಸ್ ದಾಸ್ ಅವರಿಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ವಿಐಪಿ ಭದ್ರತಾ ವಿಭಾಗದ ಸಿಬ್ಬಂದಿ ಭದ್ರತಾ ರಕ್ಷಣೆಯನ್ನು ಕೇಂದ್ರ ಗೃಹ ಸಚಿವಾಲಯ ನಿಡಿದೆ.
ಇನ್ನು ಬರ್ಮನ್ ಮತ್ತು ದಾಸ್ ಅವರಿಗೆ ‘ಎಕ್ಸ್’ ವರ್ಗದಡಿ ಭದ್ರತೆ ನೀಡಲಾಗಿದೆ. ಮಾಜಿ ನ್ಯಾಯಾಧೀಶ, ಬಿಜೆಪಿ ನಾಯಕ ಗಂಗೋಪಾಧ್ಯಾಯ ಅವರಿಗೆ ‘ಝಡ್’ ಭದ್ರತೆ ನೀಡಲಾಗಿದ್ದು, ಅವರಿಗೆ ಕೇಂದ್ರ ಮೀಸಲು ಪೊಲೀಸ್ ಪಡೆಯ ಕಮಾಂಡೋಗಳು ರಕ್ಷಣೆ ನೀಡಲಿದ್ದಾರೆ.
ಇದನ್ನು ಓದಿದ್ದೀರಾ? ಕೇಜ್ರಿವಾಲ್ ಬಂಧನ ಖಂಡಿಸಿ ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕಲು ಎಎಪಿ ಸಜ್ಜು; ಹೆಚ್ಚಿದ ಭದ್ರತೆ
ಗಂಗೋಪಾಧ್ಯಾಯ ಮತ್ತು ಟಿಎಂಸಿ ಸಂಸದ ಅರ್ಜುನ್ ಸಿಂಗ್ ಅವರು ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದರು. ಇದಾದ ಕೆಲವು ದಿನಗಳ ನಂತರ ಮಾರ್ಚ್ 27 ರಂದು ಗೃಹ ಸಚಿವಾಲಯ ಅವರಿಗೆ ಭದ್ರತೆಯನ್ನು ನೀಡಿದೆ. ಅಭಿಜಿತ್ ಬರ್ಮನ್ ಮತ್ತು ತಪಸ್ ದಾಸ್ ಅವರಿಗೆ ಮಾರ್ಚ್ 29 ರಂದು ವಿಐಪಿ ಭದ್ರತೆಯನ್ನು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಂಗೋಪಾಧ್ಯಾಯ ಅವರು ಕೋಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ರಾಜೀನಾಮೆ ನೀಡಿದ ಕೆಲವೇ ದಿನಗಳಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಇನ್ನು ಸುಮಾರು 20 ತಿಂಗಳ ಹಿಂದೆ ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ಬ್ಯಾರಕ್‌ಪುರ ಸಂಸದ ಅರ್ಜುನ್ ಸಿಂಗ್ ಕಳೆದ ತಿಂಗಳು ಬಿಜೆಪಿಗೆ ಮರಳಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಧಿಕಾರಿಗಳು “ಭಾರತದಾದ್ಯಂತ ಏಳು ಹಂತಗಳಲ್ಲಿ ಏಪ್ರಿಲ್ 19 ರಂದು ಪ್ರಾರಂಭವಾಗುವ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಗೃಹ ಸಚಿವಾಲಯ ನಾಲ್ಕು ಬಿಜೆಪಿ ನಾಯಕರಿಗೆ ಭದ್ರತೆಯನ್ನು ನೀಡಿದೆ” ಎಂದು ತಿಳಿಸಿದ್ದಾರೆ.