ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ನ ಹಿರಿಯ ನಾಯಕ ಕಮಲ್ ನಾಥ್ ರಾಜ್ಯದ ಜನರನ್ನು ಹಾಗೂ ಕಾಂಗ್ರೆಸ್ನ ಧೈರ್ಯಶಾಲಿ ಕಾರ್ಯಕರ್ತರನ್ನು ಭಾರತ್ ಜೋಡೋ ನ್ಯಾಯಯಾತ್ರೆಯಲ್ಲಿ ಪಾಲ್ಗೊಳ್ಳಿ ಎಂದು ಕರೆ ನೀಡಿದ್ದಾರೆ. ಇದರೊಂದಿಗೆ ಬಿಜೆಪಿ ಸೇರ್ಪಡೆಯಾಗುವ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಭಾರತ್ ಜೋಡೋ ನ್ಯಾಯ ಯಾತ್ರೆಯೊಂದಿಗೆ ಆಗಮಿಸುತ್ತಿರುವ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಲು ಮಧ್ಯ ಪ್ರದೇಶದ ಜನರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹರ್ಷಿತರಾಗಿದ್ದಾರೆ. ನಮ್ಮ ನಾಯಕ ರಾಹುಲ್ ಗಾಂಧಿ ಅವರು ದೇಶದ ಬೀದಿಗಳ ಮೂಲಕ ಬಿಜೆಪಿಯ ಅನ್ಯಾಯ, ದಬ್ಬಾಳಿಕೆ ಹಾಗೂ ದೌರ್ಜನ್ಯದ ವಿರುದ್ಧ ಹೋರಾಡಲು ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಮಧ್ಯ ಪ್ರದೇಶದ ಜನರು ಹಾಗೂ ಕಾಂಗ್ರೆಸ್ನ ಧೈರ್ಯಶಾಲಿ ಕಾರ್ಯಕರ್ತರು ಭಾರತ್ ಜೋಡೋ ನ್ಯಾಯಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ರಾಹುಲ್ ಅವರಿಗೆ ಶಕ್ತಿ ಹಾಗೂ ಉತ್ಸಾಹ ನೀಡಬೇಕು. ಅನ್ಯಾಯವನ್ನು ಕೊನೆಗೊಳಿಸಲು ನಾವೆಲ್ಲರೂ ಈ ಅಭಿಯಾನದಲ್ಲಿ ಪಾಲ್ಗೊಳ್ಳೋಣ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಾಂಡ್ ಎಂಬ ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಜನ ಪ್ರಶ್ನಿಸಬಾರದೇ?
ಈ ಮೂಲಕ ಕಮಲ್ನಾಥ್ ಅವರು ಬಿಜೆಪಿಗೆ ಸೇರುವ ಎಲ್ಲ ವದಂತಿಗಳಿಗೂ ತೆರೆ ಎಳೆದಿದ್ದಾರೆ.
ಈ ನಡುವೆ ಕಮಲ್ನಾಥ್ ಅವರ ಪ್ರಾಬಲ್ಯದ ಮಧ್ಯಪ್ರದೇಶದ ಚಿನ್ದ್ವಾರ ಜಿಲ್ಲೆಯ ಹಲವು ಕಾಂಗ್ರೆಸ್ ನಾಯಕರು ಬುಧವಾರ(ಫೆ.21) ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಚಿನ್ದ್ವಾರ ಜಿಲ್ಲೆಯ ಸುಮಾರು 1500 ಸ್ಥಳೀಯ ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ ಎಂದು ಬಿಜೆಪಿಯ ಜಿಲ್ಲಾಧ್ಯಕ್ಷರು ತಿಳಿಸಿದ್ದಾರೆ.
ಬಿಜೆಪಿಗೆ ಸೇರ್ಪಡೆಯಾದವರಲ್ಲಿ ಜಿಲ್ಲಾ ಕಾರ್ಯದರ್ಶಿಗಳು, ಪಾಲಿಕೆ ಸದಸ್ಯರು, ಸರಪಂಚರು, ಜನಪದ ಸದಸ್ಯರು ಮುಂತಾದವರು ಇದ್ದಾರೆ.