ಜ್ಞಾನವ್ಯಾಪಿ ಮಸೀದಿಯ ತಳಭಾಗದ ಆವರಣದಲ್ಲಿ ಹಿಂದೂ ಭಕ್ತರಿಗೆ ಪೂಜೆಗೆ ಅವಕಾಶ ನೀಡಿದ ವಾರಣಾಸಿ ಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಅಂಜುಮಾನ್ ಇಂತೆಜಾಮಿಯಾ ಮಸೀದಿ ಸಮಿತಿಯು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಸ್ಥಳೀಯ ಆಡಳಿತ ಜ.31ರ ರಾತ್ರಿಯೇ ಪೂಜೆಗೆ ಅವಕಾಶ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ತುರ್ತು ವಿಚಾರಣೆ ಕೈಗೊಳ್ಳಬೇಕೆಂದು ಇಂತೆಜಾಮಿಯಾ ಮಸೀದಿ ಸಮಿತಿ ಸುಪ್ರೀಂಗೆ ಮನವಿ ಸಲ್ಲಿಸಿದೆ. ವಿಚಾರಣೆ ಈಗಾಗಲೇ ಆರಂಭವಾಗಿದೆ. ಪೂಜೆಗೆ ಅವಕಾಶ ನೀಡಿರುವುದರಿಂದ ಮಸೀದಿಯ ಸುತ್ತಲೂ ಭಾರಿ ಬಿಗಿ ಭದ್ರತೆ ಅಳವಡಿಸಲಾಗಿದೆ.
ಸ್ಥಳೀಯ ಆಡಳಿತ ಹಿಂದೂ ಅರ್ಜಿದಾರರೊಂದಿಗೆ ಭಾಗಿಯಾಗಿದೆ ಎಂದು ಮುಸ್ಲಿಂ ಸಂಘಟನೆ ಆರೋಪಿಸಿದೆ. ಈಗಾಗಲೇ ಪೂಜೆ ಆರಂಭವಾಗಿರುವುದರಿಂದ ಸ್ಥಳೀಯ ಆಡಳಿತ ಹಿಂದೂ ಅರ್ಜಿದಾರರೊಂದಿಗೆ ಭಾಗಿಯಾಗಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಪತ್ರದಲ್ಲಿ ತಿಳಿಸಿದೆ.
ಈ ನಡುವೆ ಹಿಂದೂ ಸಮುದಾಯದ ಕಡೆಯ ವಕೀಲರಾದ ವಿಷ್ಣು ಶಂಕರ್ ಜೈನ್, ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿರುವುದನ್ನು ಅಲಹಾಬಾದ್ ಹೈಕೋರ್ಟ್‌ಗೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರವಾಹಕ್ಕೆದುರು ದಶಕ ಕಾಲದ ಈಜು- Scroll.in ಗೆ ಅಭಿನಂದನೆ!
ವಾರಣಾಸಿಯ ಜ್ಞಾನವ್ಯಾಪಿ ಮಸೀದಿಯ ತಳಭಾಗದ ಮುಚ್ಚಲಾಗಿದ್ದ ಆವರಣದಲ್ಲಿ ಹಿಂದೂ ಭಕ್ತರಿಗೆ ಅವಕಾಶ ನೀಡಬೇಕೆಂದು ವಾರಣಾಸಿ ನ್ಯಾಯಾಲಯ ಜ.31 ರಂದು ಆದೇಶ ನೀಡಿತ್ತು. ಕೋರ್ಟ್ ಆದೇಶದ ಅನ್ವಯ ಮಸೀದಿಯ ನಿರ್ಬಂಧಿತ ಪ್ರದೇಶದಲ್ಲಿ ಹಿಂದೂ ಭಕ್ತರು ಪ್ರಾರ್ಥನೆ ಸಲ್ಲಿಸಬಹುದಾಗಿದೆ.
ಶ್ರೀ ಕಾಶಿ ವಿಶ್ವನಾಥ ದೇಗುಲ ಟ್ರಸ್ಟ್ ಕೇಳಿದ ಪ್ರಶ್ನೆಗೆ ವಿಚಾರಣೆಯ ಸಮಯದಲ್ಲಿ ಜಿಲ್ಲಾ ನ್ಯಾಯಾಲಯವು ಹಿಂದೂ ಭಕ್ತರು ಪೂಜೆ ಕೈಗೊಳ್ಳುವ ಸಂದರ್ಭದಲ್ಲಿ ಅಗತ್ಯ ಸೌಲಭ್ಯ ಒದಗಿಸಬೇಕು ಎಂದು ನಿರ್ದೇಶಿಸಿತ್ತು.
ವಾರಣಾಸಿ ಆದೇಶ ಬಂದ ನಂತರ ಕೆಲವು ಮಹಿಳಾ ಅರ್ಜಿದಾರರು ನಿರ್ಬಂಧಿತ ಪ್ರದೇಶದಲ್ಲಿ ಉತ್ಖನನ ಹಾಗೂ ಸಮೀಕ್ಷೆ ನಡೆಸುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಜ್ಞಾನವ್ಯಾಪಿ ಮಸೀದಿಯನ್ನು 17ನೇ ಶತಮಾನದಲ್ಲಿ ಮೊಘಲ್ ಅರಸ ಔರಂಗಜೇಬ್ ದೇಗುಲವಿದ್ದ ಸ್ಥಳದಲ್ಲಿ ನಿರ್ಮಿಸಿದ್ದ ಎಂದು ಹಿಂದೂ ಅರ್ಜಿದಾರರ ವಾದವಾಗಿದೆ.