ಲೋಕಸಭಾ ಚುನಾವಣೆಯ ಕೊನೆ ಹಂತದ ಮತದಾನ ಮುಗಿದಿದೆ. ಇದೀಗ, ದೇಶದಲ್ಲಿ ಎಕ್ಸಿಟ್ ಪೋಲ್‌ಗಳ ಅಬ್ಬರ ನಡಿತಾಯಿದೆ. ದೇಶದಲ್ಲಿ ಕಳೆದ 10 ವರ್ಷಗಳಿಂದ ಹಲವಾರು ಸಮಸ್ಯೆಗಳನ್ನು ಜನರು ಎದುರಿಸುತ್ತಿದ್ದರೂ, ಗೋದಿ ಮೀಡಿಯಾಗಳು ಜನರ ಸಮಸ್ಯೆಯನ್ನು ಮುನ್ನೆಲೆಗೆ ತಂದು ಚರ್ಚಿಸುವಲ್ಲಿ ಸಂಪೂರ್ಣ ವಿಫಲವಾಗಿವೆ. ಇದೀಗ, ಜನರು ಟಿವಿ ಹಾಕಿದರೇ ಸಾಕು, ಮೋದಿಯೇ ಮತ್ತೊಮ್ಮೆ ಪ್ರಧಾನಿ ಆಗುತ್ತಾರೆ ಎಂದು ಎಕ್ಸಿಟ್ ಪೋಲ್‌ಗಳು ಹೇಳುತ್ತಿರುವುದಾಗಿ ಬೊಬ್ಬೆ ಹೊಡೆಯುತ್ತಿವೆ.
2014ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಪ್ರಧಾನಿ ಮೋದಿ ಅವರು ಅಧಿಕಾರಕ್ಕೆರಿದಾಗಿನಿಂದ ಇಲ್ಲಿಯವರೆಗೂ ನಡೆದಿರುವ ಬಹುತೇಕ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಗಳ ಚುನಾವಣೆ ಪೂರ್ವ ಸಮೀಕ್ಷೆ ಮತ್ತು ಮತಗಟ್ಟೆ ಸಮೀಕ್ಷೆ ನಡೆಸಿದ ಕೆಲವು ಗೋದಿ ಮೀಡಿಯಾಗಳು ಹಾಗೂ ಏಜೆನ್ಸಿಗಳು ಬಿಜೆಪಿಯೇ ಗೆಲುವು ಸಾಧಿಸುತ್ತೆ ಎಂದು ಹೇಳಿದ್ದವು. ಇದನ್ನೇ ಇಟ್ಟುಕೊಂಡು ಗೋದಿ ಮೀಡಿಯಾಗಳು ಬೆಳಿಗ್ಗೆಯಿಂದ ರಾತ್ರಿಯವರೆಗೂ ವಿಜೃಂಭಿಸಿದ್ದವು. ಆದರೆ, ಫಲಿತಾಂಶದ ದಿನ ಗೋದಿ ಮೀಡಿಯಾಗಳು ನೀಡಿದ್ದ ಅಂಕಿಅಂಶಗಳು ಸಂಪೂರ್ಣವಾಗಿ ವಿಫಲವಾಗಿದ್ದವು.
ಪ್ರಸ್ತುತ 2024ರ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಎಕ್ಸಿಟ್ ಪೋಲ್‌ಗಳು ಹೊರಬರುತ್ತಿವೆ. ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಬಹುತೇಕ ಮತಗಟ್ಟೆ ಸಮೀಕ್ಷೆಗಳು ಮೋದಿ ಅವರ ಪರವಾಗಿಯೇ ಇವೆ. ಮೋದಿ 3ನೇ ಬಾರಿಗೆ ಪ್ರಧಾನಿ ಆಗುತ್ತಾರೆಂದು ಹೇಳುತ್ತಿವೆ. ಆದರೆ, ನೆಲದ ವಾಸ್ತವಾಂಶ ಬೇರೆಯೇ ಇದೆ. ಜನರಿಗೆ ಮೋದಿ ಸರ್ಕಾರದ ಮೇಲಿದ್ದ ಭರವಸೆಗಳು ಹುಸಿಯಾಗಿದ್ದು, ಮೋದಿ ಜನಪ್ರಿಯತೆ ಕುಂದಿದೆ. ಜನರು ಬಿಜೆಪಿ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
2014ರಲ್ಲಿ ಮೋದಿ ಗದ್ದುಗೆ ಏರಿದಾಗಿನಿಂದ ಇಲ್ಲಿಯವರೆಗೂ ದೇಶದಲ್ಲಿ ಜನರು ನಾನಾ ಸಂಕಷ್ಟಗಳಿಂದ ಪರಿತಪಿಸುತ್ತಿದ್ದಾರೆ. ಬೆಲೆ ಏರಿಕೆ, ಬಡತನ, ನಿರುದ್ಯೋಗ, ಕೃಷಿ ಸಂಬಂಧಿತ ಸಮಸ್ಯೆಗಳು ಸೇರಿದಂತೆ ಮೋದಿ ಏಕಾಏಕಿ ಘೋಷಣೆ ಮಾಡಿ ವಾಪಾಸ ಪಡೆದ ನೋಟ್ ಬ್ಯಾನ್ ಸೇರಿದಂತೆ ಹಲವಾರು ಸಂಗತಿಗಳು ಜನರನ್ನು ಹಿಂಸಿಸಿವೆ.
ಈ ಹಿಂದೆ ಅಂದರೆ, 2023ರ ಕರ್ನಾಟಕ ವಿಧಾನಸಭಾ ಚುನಾವಣೆ ನಡೆದ ಸಮಯದಲ್ಲಿ ಸಮೀಕ್ಷೆ ನಡೆಸಿದ ಬಹುತೇಕ ಏಜೆನ್ಸಿಗಳು ಹಾಗೂ ಮೀಡಿಯಾಗಳು ಬಿಜೆಪಿ ಅಧಿಕಾರ ಹಿಡಿಯಲಿದೆ ಅಥವಾ ಅತಂತ್ರ ಸರ್ಕಾರ ನಿರ್ಮಾಣವಾಗಲಿದೆ ಎಂದು ಹೇಳಿದ್ದವು. ಆದರೆ, ಮೆಗಾ ಸರ್ವೇ ನಡೆಸಿದ್ದ ಈ ದಿನ.ಕಾಮ್ ಸತ್ಯಕ್ಕೆ ಹತ್ತಿರ ಎಂಬಂತೆ ನಿಖರ ಅಂಕಿ ಅಂಶ ನೀಡಿ ಸಂಪೂರ್ಣ ಬಹುಮತದೊಂದಿಗೆ ಕಾಂಗ್ರೆಸ್ ಗೆಲುವು ಸಾಧಿಸುವುದಾಗಿ ಹೇಳಿತ್ತು. ಅದರಂತೆಯೇ, ಕಾಂಗ್ರೆಸ್ ಸಂಪೂರ್ಣ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಇದೀಗ, ಲೋಕಸಭಾ ಚುನಾವಣೆಯ ಸರದಿಯಲ್ಲಿಯೂ ಕೂಡ ಗೋದಿ ಮೀಡಿಯಾಗಳು ಮೋದಿ ವರ್ಚಸ್ಸು ಕಡಿಮೆಯಾಗಿದೆ ಎಂದು ತಿಳಿದಿದ್ದರೂ ಸಹ ಶತಾಯಗತಾಯ ಮೋದಿಯನ್ನು ಮುನ್ನೆಲೆಗೆ ತರಬೇಕು ಎಂದು ಶಕ್ತಿ ಮೀರಿ ಪ್ರಯತ್ನಿಸುತ್ತಿವೆ. ಆದರೆ, ಜನರ ಅಭಿಪ್ರಾಯವೇ ಬೇರೆ ಇದೆ.
ಹೌದು, ಮೋದಿ ಭಜನೆ ಮಾಡುವ ಮೀಡಿಯಾಗಳನ್ನು ಬಿಟ್ಟರೇ, ಸಾಮಾಜಿಕ ವ್ಯವಸ್ಥೆ, ಜನರ ಬಗ್ಗೆ ಖಾಳಜಿ ಇರುವ ಕೆಲವೊಂದು ಡಿಜಿಟಲ್ ಮಾಧ್ಯಮಗಳು ಸತ್ಯದ ಮಾಹಿತಿ ನೀಡಿವೆ. ಡಿಜಿಟಲ್ ಮಾಧ್ಯಮ ಈ ದಿನ.ಕಾಮ್ ಮತ್ತು ಲೋಕನೀತಿ ಸಂಸ್ಥೆ ನಡೆಸಿದ ಜನಭಿಪ್ರಾಯದ ಪ್ರಕಾರ, ಬಹುತೇಕ ಜನರು ಕಳೆದ 10 ವರ್ಷದ ಮೋದಿ ಆಡಳಿತದ ಬಗ್ಗೆ ಅಸಮಾಧಾನ ಹೊಂದಿದ್ದಾರೆ.
ಲೋಕಸಭೆ ಚುನಾವಣೆಗೂ ಮುನ್ನ ಕರ್ನಾಟಕದಲ್ಲಿ ಈ ದಿನ.ಕಾಮ್ ಸಮೀಕ್ಷೆ ನಡೆಸಿದ್ದು, ಮೋದಿ ಆಡಳಿತದಲ್ಲಿ ಬೆಲೆ ಏರಿಕೆಯಾಗಿದೆ ಎಂದು 77% ಜನರು ಹೇಳಿದ್ದಾರೆ. 55% ಜನರು ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ ಎಂದರೆ, 18% ಮಂದಿ ಉದ್ಯೋಗ ಅವಕಾಶಗಳು ಕಡಿಮೆಯಾಗಿವೆ ಎಂದು ಭಾವಿಸುತ್ತಾರೆ. 75%ರಷ್ಟು ಜನರು ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 63% ಮಂದಿ ಕಲ್ಯಾಣ ಯೋಜನೆಗಳು ಕಡಿಮೆಯಾಗಿವೆ ಎಂದು ಭಾವಿಸುತ್ತಾರೆ.
ಕಳೆದ 10 ವರ್ಷಗಳಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ ಎಂದೇ ಹೆಚ್ಚಿನವರು ಹೇಳುತ್ತಿದ್ದಾರೆ. 39.27% ಜನ ನಿರುದ್ಯೋಗ ಹೆಚ್ಚಳಕ್ಕೆ ಬಿಜೆಪಿಯೇ ಕಾರಣ ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ‘ಎಕ್ಸಿಟ್ ಪೋಲ್’ಗಳು ಎಷ್ಟು ನಿಖರ? ನಿರಂತರವಾಗಿ ದಾರಿ ತಪ್ಪಿವೆ ಮತಗಟ್ಟೆ ಸಮೀಕ್ಷೆಗಳು!
ಇನ್ನು, ದೇಶಾದ್ಯಂತ ಸಮೀಕ್ಷೆ ನಡೆಸಿರುವ ಲೋಕನೀತಿ ಮತ್ತು ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವೆಲ್ಪಿಂಗ್ ಸೊಸೈಟೀಸ್ (ಸಿಎಸ್‌ಡಿಎಸ್) ಸಂಸ್ಥೆಯಲ್ಲಿಯೂ ಶೇ.62 ರಷ್ಟು ಜನರು ಉದ್ಯೋಗ ಪಡೆಯುವುದು ಕಷ್ಟವಾಗಿದೆ ಎಂದು ಹೇಳಿದ್ದಾರೆ. 71% ಜನ ಬೆಲೆ ಏರಿಕೆಯಾಗಿದೆ ಎಂದಿದ್ದಾರೆ.
ಮೂಲಭೂತ ಸಮಸ್ಯೆಗಳು ಜನರನ್ನು ಹೆಗ್ಗಿಲ್ಲದೆ ಕಾಡುತ್ತಿವೆ. ನಿರುದ್ಯೋಗ, ಬಡತನ, ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ ಎಂಬುದು ದೇಶದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಜನರು ಮೋದಿ ಸರ್ಕಾರದ ವಿರುದ್ಧ ಅಸಮಧಾನಗೊಂಡಿದ್ದಾರೆ. ಮೋದಿ ಜನರ ಪರ ಆಡಳಿತ ನಡೆಸಿಲ್ಲವೆಂದು ಅರಿತುಕೊಂಡಿದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ, ತಮ್ಮ ಸಂಕಷ್ಟಗಳು ಮತ್ತಷ್ಟು ಉಲ್ಬಣಿಸುತ್ತವೆ ಎಂದು ಭಾವಿಸಿದ್ದಾರೆ. ಬಿಜೆಪಿ ಮತ್ತು ಎನ್‌ಡಿಎಯನ್ನು ಸೋಲಿಸಬೇಕೆಂದು ನಿರ್ಧರಿಸಿ, ಮತದಾನ ಮಾಡಿದ್ದಾರೆ.
ಗಮನಾರ್ಹವಾಗಿ ಬಿಜೆಪಿ ಅಧಿಕಾರದಲ್ಲೇ ಇರುವ ರಾಜ್ಯಗಳಲ್ಲಿ ಹೆಚ್ಚಾಗಿ ಮತದಾನದ ಪ್ರಮಾಣ 2019ಕ್ಕಿಂತ ಕಡಿಮೆಯಾಗಿದೆ. ಅಂದರೆ, ಬಿಜೆಪಿ ಮತ್ತು ಮೋದಿ ವಿರುದ್ಧ ಅಸಮಾಧಾನಗೊಂಡಿದ್ದ ಜನರು ಮತಗಟ್ಟೆಗಳಿಂದ ಹಿಂದೆ ಸರಿದಿದ್ದಾರೆ. ಹೀಗಾಗಿಯೇ ಮೋದಿ ಅವರು ತಮ್ಮ ಸರ್ಕಾರದ ಸಾಧನೆ ಮತ್ತು ಗುರಿಗಳ ಬಗ್ಗೆ ಮಾತನಾಡುವ ಬದಲು, ಕೋಮುದ್ವೇಷ ಭಾಷಣ ಮಾಡಲು ಆರಂಭಿಸಿದ್ದರು.
ಆದರೂ, ಗೋದಿ ಮೀಡಿಯಾಗಳು ಮೋದಿಯನ್ನು ಮುನ್ನೆಲೆಗೆ ತರಲು ಹೆಣಗಾಡುತ್ತಿವೆ. ಸತ್ಯಾಂಶ ಗೋದಿ ಮೀಡಿಯಾಗಳಿಗೂ ತಿಳಿದಿದ್ದರೂ, ಸುಳ್ಳು ಅಂಕಿಅಂಶಗಳೊಂದಿಗೆ ಮೋದಿ ಅವರನ್ನು ವಿಜೃಂಭಿಸುವಲ್ಲಿ ನಿರತವಾಗಿವೆ. ಏನೇ ಇರಲಿ, ಜೂನ್ 4ರಂದು ಫಲಿತಾಂಶ ಹೊರಬೀಳಲಿದ್ದು, ಗೋದಿ ಮೀಡಿಯಾಗಳ ಬಣ್ಣ ಮತ್ತೊಮ್ಮೆ ಬಯಲಾಗಲಿದೆ.