ನಿನ್ನೆ(ಮೇ 11) ತಡರಾತ್ರಿ ಅಮೃತಸರದ ಸ್ವರ್ಣ ಮಂದಿರದ ಬಳಿ ಸ್ಫೋಟ ಸಂಭವಿಸಿದ್ದು, ಈ ಸಂಬಂಧ ಪಂಜಾಬ್ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಅಮೃತಸರದ ಹೆರಿಟೇಜ್ ಸ್ಟ್ರೀಟ್ ಬಳಿ ಇಂದು ಮುಂಜಾನೆ 1 ಗಂಟೆ ಸುಮಾರಿಗೆ ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿದೆ. ಇದು ಐದು ದಿನಗಳಲ್ಲಿ ಸಂಭವಿಸಿದ ಮೂರನೇ ಸ್ಫೋಟವಾಗಿದೆ. ಮೊದಲ ಸ್ಫೋಟ ಮೇ 6 ರಂದು, ಎರಡನೆಯ ಸ್ಫೋಟ ಸೋಮವಾರ ಸಂಭವಿಸಿತ್ತು. ಸ್ಫೋಟ ಸಂಭವಿಸಿದ ಸ್ಥಳವೂ ಸ್ವರ್ಣ ಮಂದಿರದಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಪಂಜಾಬ್ ಪೊಲೀಸರು ಸ್ಫೋಟದ ಸ್ಥಳದಿಂದ ವಿಧಿವಿಜ್ಞಾನ ಮಾದರಿಗಳನ್ನು ಸಂಗ್ರಹಿಸಿದ್ದು, ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ. ಸ್ಫೋಟದಲ್ಲಿ ಯಾವುದೇ ದೊಡ್ಡ ಮಟ್ಟದ ರಾಸಾಯನಿಕಗಳನ್ನು ಬಳಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಎರಡು ಸ್ಫೋಟಗಳಲ್ಲಿ ಬಳಸಲಾದ ಸ್ಫೋಟಕವನ್ನು ಆರೋಗ್ಯ ಪಾನೀಯ ಕ್ಯಾನ್‌ಗಳೊಂದಿಗೆ ಪ್ಯಾಕ್ ಮಾಡಲಾಗಿತ್ತು. ಸೋಮವಾರ ನಡೆದ ಸ್ಫೋಟದಲ್ಲಿ ಒಬ್ಬರು ಗಾಯಗೊಂಡಿದ್ದರು. ಇಂದಿನ ಸ್ಫೋಟಕವನ್ನು ಕಚ್ಚಾ ರೀತಿಯಲ್ಲಿ ತಯಾರಿಸಲಾಗಿದ್ದು, ಯಾವುದೇ ದೊಡ್ಡ ಮದ್ದುಗಳನ್ನು ಬಳಸಲಾಗಿಲ್ಲ. ಸ್ಫೋಟಕವನ್ನು ಕಂಟೇನರ್‌ನಲ್ಲಿ ಇರಿಸಲಾಗಿತ್ತು. ಸರಣಿ ಸ್ಫೋಟದಿಂದ ಸಾರ್ವಜನಿಕರು ಆತಂಕಗೊಂಡಿದ್ದು, ರಾಜ್ಯದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.