ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಮಹಿಳೆ ಮತ್ತು ಯುವಕನನ್ನು ಕಟ್ಟಿಹಾಕಿ ಹಲ್ಲೆ ನಡೆಸಿ, ಇಬ್ಬರನ್ನೂ ಶುದ್ಧೀಕರಿಸುತ್ತೇವೆಂದು ಗೋಮೂತ್ರ ಸುರಿದು ಸ್ಥಳೀಯರು ವಿಕೃತಿ ಮೆರೆದಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ಸುಲ್ತಾನಾಬಾದ್ ಪಟ್ಟಣದಲ್ಲಿ ಘಟನೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆ ಮತ್ತು ಯುವಕನನ್ನು ಒಟ್ಟಿಗೆ ಕಟ್ಟಿಹಾಕಿದ್ದ ಸ್ಥಳೀಯರು, ಅವರ ಮೇಲೆ ನೀರು, ಗೋಮೂತ್ರ ಸುರಿದು ಶುದ್ಧೀಕರಿಸಿದ್ದೇವೆಂದು ವಿಕೃತಿ ಮೆರೆದಿದ್ದಾರೆ. ಯುವಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಸುಲ್ತಾನಾಬಾದ್‌ನ ನಿವಾಸಿ ಮೌನಿಕಾ ಮತ್ತು ಭೂಪಾಲಪಳ್ಳಿಯ ಸ್ವಾಮಿ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದರು. ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ನಂತರದಲ್ಲಿ ಇಬ್ಬರೂ ವಿವಾಹೇತರ ಸಂಬಂಧ ಹೊಂದಿದ್ದರು ಎಂದು ಆರೋಪಿಸಲಾಗಿದೆ.
ಇತ್ತೀಚೆಗೆ, ಮೌನಿಕಾ ಮನೆಗೆ ಬಂದಿದ್ದ ಸ್ವಾಮಿ ಕಳೆದ ಮೂರು ದಿನಗಳಿಂದ ಮೌನಿಕಾ ಅವರ ಮನೆಯಲ್ಲಿಯೇ ಉಳಿದಿದ್ದರು. ಅವರ ಸಂಬಂಧದ ಬಗ್ಗೆ ಅನುಮಾನಗೊಂಡ ಸ್ಥಳೀಯರು ಅವರಿಬ್ಬರನ್ನು ಸಾರ್ವಜನಿಕವಾಗಿ ಕಟ್ಟಿಹಾಕಿ, ಹಲ್ಲೆಗೈದಿದ್ದಾರೆ ಎಂದು ವರದಿಯಾಗಿದೆ.