ಕೇಂದ್ರ ಗೃಹಮಂತ್ರಿ ಅಮಿತ್ ಶಾ ರಾಜ್ಯಸಭೆಯಲ್ಲಿ ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾರೆಂದು ದೇಶದೆಲ್ಲೆಡೆ ಪ್ರತಿಭಟನೆಗಳು ಭುಗಿಲೆದ್ದಿವೆ. ಸಂಸತ್ ಮತ್ತು ರಾಜ್ಯ ವಿಧಾನಸಭೆಯು ಕಡುಕಹಿಯ ಕಾಳಗ ಕಣಗಳಾಗಿ ಹೋಗಿವೆ.
“ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎಂದು ಜಪಿಸುವುದು ಫ್ಯಾಶನ್ ಆಗಿ ಹೋಗಿದೆ. ಅಷ್ಟು ಸಲ ಭಗವಂತನ ನಾಮಸ್ಮರಣೆ ಮಾಡಿದ್ದರೆ ಅವರಿಗೆ ಸ್ವರ್ಗದಲ್ಲೇ ಜಾಗ ಸಿಕ್ಕುಬಿಡುತ್ತಿತ್ತು….. ತಮ್ಮನ್ನು ‘ನಿರ್ಲಕ್ಷಿಸಿದ’ ಮತ್ತು ‘ಅಸಂತೃಪ್ತಿಯ” ಕಾರಣಕ್ಕಾಗಿ ಅಂಬೇಡ್ಕರ್ ಅವರು ರಾಜೀನಾಮೆ ನೀಡಿ ನೆಹರು ಸಂಪುಟದಿಂದ ನಿರ್ಗಮಿಸಿದ್ದರು ಎಂದು ಅಮಿತ್ ಶಾ ರಾಜ್ಯಸಭೆಯಲ್ಲಿ ಮಾತನಾಡುತ್ತ ಹೇಳಿದ್ದರು.
ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದರು- ‘ಅಮಿತ್ ಶಾ ಮಾತುಗಳು ಬಿಜೆಪಿ- ಆರೆಸ್ಸೆಸ್ ಬಾಬಾಸಾಹೇಬರ ಕುರಿತು ಹೊಂದಿದ್ದ ದ್ವೇಷವನ್ನು ತೋರುತ್ತವೆ. ಅಂಬೇಡ್ಕರ್ ಹೆಸರು ಹೇಳಿದರೇ ಇವರಿಗೆ ಕಿರಿಕಿರಿಯಾಗುತ್ತದೆ. ಬಾಬಾ ಸಾಹೇಬರರ ಪ್ರತಿಕೃತಿಯನ್ನು ಸುಟ್ಟು ಹಾಕಿದ್ದವರು ಇದೇ ಮಂದಿಯ ಪೂರ್ವಿಕರು…’
ಜೈರಾಮ್ ಹೇಳಿದ್ದು ನಿಜವೇ? ಪೂರ್ವಿಕರು ಬಾಬಾಸಾಹೇಬರ ಪ್ರತಿಕೃತಿಯನ್ನು ಸುಟ್ಟಿದ್ದರೇ?
ಅಂಬೇಡ್ಕರ್ ಅವರ ಪ್ರತಿಕೃತಿಯನ್ನು 1949ರ ಡಿಸೆಂಬರ್ 12ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಸುಟ್ಟಿದ್ದು ಹೌದು. ಜೊತೆಜೊತೆಗೆ ನೆಹರೂ ಅವರ ಪ್ರತಿಕೃತಿಯನ್ನೂ ಸುಡಲಾಯಿತು ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯು ವರದಿ ಮಾಡಿದೆ.
ಅಂಬೇಡ್ಕರ್ ಅವರು ರೂಪಿಸಿದ್ದ ‘ಹಿಂದೂ ಕೋಡ್ ಬಿಲ್’ ಮಸೂದೆಯನ್ನು ಆರೆಸ್ಸೆಸ್ ಕಟುವಾಗಿ ವಿರೋಧಿಸಿತ್ತು. ಹಿಂದೂ ವಿವಾಹ ಮತ್ತು ಉತ್ತರಾಧಿಕಾರದಂತಹ ವಿಷಯಗಳಲ್ಲಿ ಮಹಿಳೆಯರಿಗೆ ಹೆಚ್ಚು ಹಕ್ಕುಗಳ ನೀಡುವುದು ಈ ಮಸೂದೆಯ ಉದ್ದೇಶವಾಗಿತ್ತು.
“1949ರ ಡಿಸೆಂಬರ್ 11ರಂದು ಆರೆಸ್ಸೆಸ್ ದೆಹಲಿಯ ರಾಮಲೀಲಾ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಏರ್ಪಡಿಸಿತ್ತು. ಭಾಷಣಕಾರರೆಲ್ಲ ಮಸೂದೆಯನ್ನು ಖಂಡಿಸಿದರು. ಹಿಂದೂ ಸಮಾಜದ ಮೇಲೆ ಎಸೆಯಲಾಗಿರುವ ಪರಮಾಣು ಬಾಂಬು ಎಂದು ಒಬ್ಬ ಭಾಷಣಕಾರ ಹೇಳಿದರೆ, ಬ್ರಿಟಿಷರು ಹೇರಿದ್ದ ಕರಾಳ ರೌಲಟ್ ಕಾಯಿದೆಯಷ್ಟೇ ಕರಾಳವಿದು, ಈ ಮಸೂದೆಯ ವಿರುದ್ಧದ ಹೋರಾಟವು ನೆಹರೂ ಸರ್ಕಾರದ ಪತನಕ್ಕೆ ದಾರಿಯಾಗಲಿದೆ ಎಂದು ಬಣ್ಣಿಸಿದ ಮತ್ತೊಬ್ಬ. ಮರುದಿನ ಆರೆಸ್ಸೆಸ್ ಕಾರ್ಯಕರ್ತರ ಗುಂಪೊಂದು ಅಸೆಂಬ್ಲಿ ಕಟ್ಟಡದತ್ತ ಮೆರವಣಿಗೆಯಲ್ಲಿ ತೆರಳಿ ‘ಹಿಂದೂ ಕೋಡ್ ಬಿಲ್ ಗೆ ಧಿಕ್ಕಾರ, ಪಂಡಿತ್ ನೆಹರೂ ಮುರ್ದಾಬಾದ್’ ಘೋಷಣೆಗಳನ್ನು ಕೂಗಿದರು. ಪ್ರತಿಭಟನಾಕಾರರು ಪ್ರಧಾನಿ ನೆಹರೂ ಮತ್ತು ಡಾ.ಅಂಬೇಡ್ಕರ್ ಅವರ ಪ್ರತಿಕೃತಿಗಳನ್ನು ಸುಟ್ಟರು. ಶೇಖ್ ಅಬ್ದುಲ್ಲಾ ಅವರ ಕಾರನ್ನು ಜಖಂಗೊಳಿಸಿದರು” ಎಂದು ಇತಿಹಾಸಕಾರ ರಾಮಚಂದ್ರ ಗುಹ ಅವರು ‘ಇಂಡಿಯಾ ಆಫ್ಟರ್ ಗಾಂಧೀ’ ಎಂಬ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.
ಹಿಂದೂ ಕೋಡ್ ಬಿಲ್ ನ್ನು ಅಂಬೇಡ್ಕರ್ ಅವರು ಬಯಸಿದ ರೂಪದಲ್ಲಿ ತ್ವರಿತ ಗತಿಯಲ್ಲಿ ಮಂಡಿಸಿ ಸಂಸತ್ತಿನ ಅಂಗೀಕಾರ ಪಡೆಯುತ್ತಿಲ್ಲ ಎಂಬುದು ಅಂಬೇಡ್ಕರ್ ಅಸಮಾಧಾನವಾಗಿತ್ತು. ಅವರು ಕೇಂದ್ರ ಕಾನೂನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕಾರಣಗಳಲ್ಲಿ ಇದೂ ಸೇರಿತ್ತು. ಆದರೆ ‘ಹಿಂದೂ ಕೋಡ್ ಬಿಲ್’ ಮಸೂದೆಯ ಕಟ್ಟರ್ ವಿರೋಧಿಗಳು ಬಲಪಂಥೀಯರಾಗಿದ್ದರು. ಕಾಂಗ್ರೆಸ್ಸಿನ ಒಂದು ವರ್ಗವೂ ಈ ವಿರೋಧದಲ್ಲಿ ತೊಡಗಿತ್ತು.
ಈ ವಿರೋಧ ಕುರಿತು ಅಂಬೇಡ್ಕರ್ ಹೇಳಿದ್ದೇನು?
“ಹಿಂದೂ ಸಮಾಜದ ವರ್ಗ ವರ್ಗದ ನಡುವೆ, ಹೆಣ್ಣು ಗಂಡಿನ ನಡುವಣ ಅಸಮಾನತೆಯನ್ನು ಕಡೆಗಣಿಸಿ, ಕೇವಲ ಆರ್ಥಿಕ ಸಮಸ್ಯೆಗಳ ಕುರಿತು ಕಾಯಿದೆ ಕಾನೂನುಗಳನ್ನು ಪಾಸು ಮಾಡುವುದು ನಮ್ಮ ಸಂವಿಧಾನದ ಅಣಕ. ಸೆಗಣಿ ರಾಶಿಯ ಮೇಲೆ ಅರಮನೆ ಕಟ್ಟಿದಂತೆ”.
‘ಹಿಂದು ಕೋಡ್ ಬಿಲ್ ಎಂಬುದು ಹಿಂದೂಗಳ ಶ್ರದ್ಧೆಯ ಮೇಲೆ ನಡೆಸಲಾಗಿರುವ ನೇರ ದಾಳಿ. ಹಿಂದು ಹೆಣ್ಣುಮಕ್ಕಳಿಗೆ ವಿವಾಹವಿಚ್ಛೇದನದ ಹಕ್ಕುಗಳನ್ನು ನೀಡಿರುವುದು ಹಿಂದು ಸಿದ್ಧಾಂತದ ವಿರುದ್ಧದ ವಿದ್ರೋಹವಾಗಿದೆ’ ಎಂದು ಆರೆಸ್ಸೆಸ್ ಮುಖವಾಣಿ ‘ಆರ್ಗನೈಸರ್’ 1949ರ ನವೆಂಬರ್ 2ರ ತನ್ನ ಸಂಚಿಕೆಯಲ್ಲಿ ವಿರೋಧಿಸಿತ್ತು. ತಿಂಗಳ ತರುವಾಯ 1949ರ ಡಿಸೆಂಬರ್ 7ರ ಸಂಚಿಕೆಯ ಸಂಪಾದಕೀಯದಲ್ಲಿ “ನಾವು ಹಿಂದೂ ಕೋಡ್ ಬಿಲ್ ನ್ನು ವಿರೋಧಿಸುತ್ತೇವೆ. ಇದು ಅನ್ಯದೇಶೀಯ ಮತ್ತು ಅನೈತಿಕ ತತ್ವಗಳನ್ನು ಆಧರಿಸಿದ ಅವಹೇಳನಕಾರಿ ಕ್ರಮ… ಋಷಿ ಅಂಬೇಡ್ಕರ್ ಮತ್ತು ಮಹರ್ಷಿ ನೆಹರೂ ಸಮಾಜವನ್ನು ಅಣು ಅಣುವಾಗಿ ಒಡೆದು ಪ್ರತಿಯೊಂದು ಕುಟುಂಬಕ್ಕೂ ಹಗರಣ, ಅನುಮಾನ ಹಾಗೂ ಕೇಡಿನ ಸೋಂಕನ್ನು ತಗುಲಿಸುತ್ತಾರೆ” ಎಂದು ಬರೆದಿದ್ದಾಗಿ ಗುಹ ಅವರು ಇಂಡಿಯನ್ ಎಕ್ಸ್ ಪ್ರೆಸ್ ಗೆ ಬರೆದ ಲೇಖನವೊಂದರಲ್ಲಿ ಉಲ್ಲೇಖಿಸಿದ್ದಾರೆ.
ಅಂದಿನ ಆರೆಸ್ಸೆಸ್ ಮುಖ್ಯಸ್ಥರಾಗಿದ್ದ ಎಂ.ಎಸ್.ಗೋಲ್ವಲ್ಕರ್ ಅವರೂ ಸೇರಿದಂತೆ ಬಲಪಂಥವು ಸಂವಿಧಾನ ಕುರಿತು ಅಸಮಾಧಾನ ಹೊಂದಿತ್ತು.
”ಹೊಸ ಸಂವಿಧಾನದ ಅತಿ ಕೇಡಿನ ಅಂಶವೆಂದರೆ ಅದರಲ್ಲಿ ಭಾರತೀಯ ಎಂಬುದು ಏನೇನೂ ಇಲ್ಲ….. ಪ್ರಾಚೀನ ಭಾರತದ ವಿಶಿಷ್ಟ ಸಾಂವಿಧಾನಿಕ ಬೆಳವಣಿಗೆಗಳ ಕುರಿತ ಪ್ರಸ್ತಾಪವೇ ಇಲ್ಲ….. ಮನು ರಚಿಸಿದ ಕಾನೂನುಗಳು ಇಂದಿಗೂ ಜಗತ್ತಿನ ಮೆಚ್ಚುಗೆಗೆ ಪಾತ್ರವಾಗಿದ್ದು, ಭಾರತದಲ್ಲಿ ಹಿಂದೂಗಳು ಅವುಗಳನ್ನು ಸ್ವಯಂಪ್ರೇರಣೆ ಮತ್ತು ವಿಧೇಯತೆಯಿಂದ ಪಾಲಿಸುತ್ತಾರೆ. ಆದರೆ ನಮ್ಮ ಸಂವಿಧಾನ ಪಂಡಿತರ ಪಾಲಿಗೆ ಈ ಕಾನೂನುಗಳು ಲೆಕ್ಕಕ್ಕೇ ಇಲ್ಲ” ಎಂದು ವಿ.ಡಿ.ಸಾವರ್ಕರ್ “ವಿಮೆನ್ ಇನ್ ಮನುಸ್ಮೃತಿ” ಎಂಬ ಬರೆಹದಲ್ಲಿ ಖಂಡಿಸಿದ್ದರು.
ಸೌಜನ್ಯ: ದಿ ಇಂಡಿಯನ್ ಎಕ್ಸ್‌ಪ್ರೆಸ್
ಆರ್ ಎಸ್ ಎಸ್ ನವರು ಅಂಬೇಡ್ಕರ್ ನ ಪ್ರತಿಕೃತಿಯನ್ನು ದಹಿಸಿದರು ಕಾಂಗ್ರೆಸ್ ನವರು ಅಂಬೇಡ್ಕರನ್ನೇ ದಹಿಸಿದರು