ಸುಮಾರು 6,000 ವರ್ಷಗಳಷ್ಟು ಹಳೆಯದಾದ ಶಿವಲಿಂಗವೊಂದು ದಕ್ಷಿಣ ಆಫ್ರಿಕಾದ ಸುದ್ವಾರ ಎಂಬ ಗುಹೆಯಲ್ಲಿ ಪತ್ತೆಯಾಗಿದೆ ಎಂಬ ಹೇಳಿಕೆಯ ಜೊತೆಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಶಿವಲಿಂಗವೊಂದರ ಚಿತ್ರವಿದ್ದು, ಹಲವರು ಹಂಚಿಕೊಳ್ಳುತ್ತಿದ್ದಾರೆ.
ವಿಡಿಯೋದಲ್ಲಿ ಶಿವಲಿಂಗದ ಚಿತ್ರದೊಂದಿದೆ ಇಂಗ್ಲಿಷ್‌ನಲ್ಲಿ, “ಹಿಂದು ಧಾರ್ಮಿಕ ಸಂಕೇತಗಳನ್ನು ನಾಶಪಡಿಸಲು ಪ್ರಯತ್ನಗಳು ನಡೆಯುತ್ತಿವೆ ಆದರೂ, ಧಾರ್ಮಿಕ ಪುರಾವೆಗಳು ಹೊರಬರುತ್ತಲೇ ಇವೆ. ದಕ್ಷಿಣ ಆಫ್ರಿಕಾದ ಸುದ್ವಾರ ಗುಹೆಯಲ್ಲಿ ಸುಮಾರು 6 ಸಾವಿರ ವರ್ಷಗಳಷ್ಟು ಹಳೆಯದಾದ ಶಿವಲಿಂಗ ಪತ್ತೆಯಾಗಿದೆ” ಎಂದು ಬರೆಯಲಾಗಿದೆ.
ಅದನ್ನು ಸತ್ಯವೆಂದು ನಂಬಿರುವ ಹಲವರು ಆ ವಿಡಿಯೋವನ್ನು ಫೇಸ್ಬುಕ್, ವಾಟ್ಸಾಪ್ ಹಾಗೂ ಎಕ್ಸ್ ಸೇರಿದಂತೆ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಆದರೆ, ಸತ್ಯವೇನು? ಪರಿಶೀಲಿಸೋಣ;
ವೈರಲ್ ಆದ ವಿಡಿಯೋ ಬಗ್ಗೆ ಟಿವಿ9 ಸತ್ಯಶೋಧ ನಡೆಸಿದೆ. ದಕ್ಷಿಣ ಆಫ್ರಿಕಾದ ಇಂಪುಮಲಂಗಾ ಪ್ರಾಂತ್ಯದಲ್ಲಿ ಸುದ್ವಾರ ಎಂಬ ಗುಹೆಗಳು ಇವೆ. ಆದರೆ, ಸುದ್ವಾರ ಗುಹೆಯೂ ಸೇರಿದಂತೆ ದಕ್ಷಿಣ ಆಫ್ರಿಕಾದಲ್ಲಿ ಯಾವುದೇ ಶಿವಲಿಂಗವೂ ಪತ್ತೆಯಾಗಿಲ್ಲ ಎಂದು ಕಂಡುಹಿಡಿದಿದೆ.
ಸುದ್ವಾರ ಗುಹೆಗಳಲ್ಲಿ 6,000 ವರ್ಷಗಳಷ್ಟು ಹಳೆಯ ಶಿವಲಿಂಗ ಪತ್ತೆಯಾಗಿರುವ ಬಗ್ಗೆ ಪುರಾತತ್ತ್ವಜ್ಞರು ತಿಳಿಸಿದ್ದಾರೆಯೇ, ಅಥವಾ ಪ್ರತಿಕ್ರಿಯಿಸಿದ್ದಾರೆಯೇ ಎಂದು ಹುಡುಕಲಾಗಿದೆ. ಆದರೆ, ಯಾವುದೇ ಪುರಾತತ್ತ್ವಜ್ಞರು ಶಿವಲಿಂಗ ಪತ್ತೆಯಾದ ಬಗ್ಗೆ ಮಾತನಾಡಿಲ್ಲ. ಸುದ್ವಾರದಲ್ಲಿ ಶಿವಲಿಂಗ ಪತ್ತೆಯಾಗಿರುವ ಬಗ್ಗೆ ಯಾವ ವಿಶ್ವಾಸಾರ್ಹ ಮೂಲಗಳೂ ಸುದ್ದಿ ಪ್ರಕಟಿಸಿಲ್ಲ. ವರದಿ ಮಾಡಿಲ್ಲ.
ಸುದ್ವಾರ ಗುಹೆಗಳಿಂದ ಸುಮಾರು 35-40 ಕಿ.ಮೀ ದೂರದಲ್ಲಿರುವ ನೆಲ್ಸ್‌ಪ್ರೂಟ್ ನೇಚರ್ ರಿಸರ್ವ್ ಪ್ರದೇಶದಲ್ಲಿ ಬಂಡೆಯ ರಚನೆಯನ್ನು ಶಿವಲಿಂಗವೆಂದು ಪರಿಗಣಿಸಲಾಗಿತ್ತು. ಇದನ್ನು, ನೂರಾರು ವರ್ಷಗಳ ಹಿಂದೆ ಆಫ್ರಿಕಾದಲ್ಲಿದ್ದ ಭಾರತೀಯರು ಪೂಜಿಸುತ್ತಿದ್ದರು ಎಂದು ನಂಬಲಾಗಿದೆ. ಆದರೆ, 6,000 ವರ್ಷಗಳಷ್ಟು ಹಳೆಯದಾದ ಯಾವುದೇ ಶಿವಲಿಂಗ ಪತ್ತೆಯಾಗಿಲ್ಲ ಎಂಬುದು ಖಚಿತವಾಗಿದೆ.