ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾಗಳಲ್ಲಿ ತಾಯಿಯೋರ್ವಳು ತನ್ನ ಮಗನಿಗೆ ನಿರ್ದಯವಾಗಿ ಹೊಡೆಯುತ್ತಿರುವ ದೃಶ್ಯ ವೈರಲಾಗುತ್ತಿದೆ.
ವೈರಲಾಗಿರುವ ಈ ವಿಡಿಯೋದಲ್ಲಿ ತಾಯಿಯೋರ್ವಳು ತನ್ನ ಮಗನ ಎದೆಯ ಮೇಲೆ ಕುಳಿತು ಹಲ್ಲೆ ಮುಖಕ್ಕೆ ಹಲ್ಲೆ ಮಾಡುತ್ತಿರುವುದಲ್ಲದೇ, ಎದೆಯ ಭಾಗಕ್ಕೆ ಕಚ್ಚುತ್ತಿರುವ ಸುಮಾರು ಒಂದು ನಿಮಿಷ ಮೂವತ್ತು ಸೆಕೆಂಡ್‌ನ ವಿಡಿಯೋದಲ್ಲಿ ದಾಖಲಾಗಿದೆ.
ಕೆಲವರು ಈ ವಿಡಿಯೋವನ್ನು ಹಂಚಿಕೊಳ್ಳುತ್ತಾ, “ಇದು ಕರ್ನಾಟಕದ್ದು ಎಂದು ಕಾಣುತ್ತದೆ. ಆ ಕ್ರೂರ ತಾಯಿಯನ್ನು ಪತ್ತೆ ಹಚ್ಚಬೇಕು, ಆಕೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೇ, ಈ ವಿಡಿಯೋ ಪೊಲೀಸರಿಗೆ ತಲುಪುವವರೆಗೆ ಶೇರ್ ಮಾಡಿ ಎಂದು ಸಂದೇಶ ಬರೆದು ಹಂಚಿಕೊಳ್ಳುತ್ತಿದ್ದಾರೆ.
ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿರುವ ವಿಡಿಯೋ
ವಿಡಿಯೋ ಕರ್ನಾಟಕದ್ದಲ್ಲ: ಏನಿದು ಘಟನೆ?
ಕೆಲವರು ಈ ವಿಡಿಯೋ ಕರ್ನಾಟಕದ್ದು ಎಂದು ಹಂಚಿಕೊಳ್ಳುತ್ತಿದ್ದಾರೆ. ಆದರೆ ಈ ವಿಡಿಯೋ ಬಗ್ಗೆ ಈ ದಿನ.ಕಾಮ್ ಪರಿಶೀಲನೆ ನಡೆಸಿದಾಗ ಕಂಡುಬಂದದ್ದು ಇದು ಕರ್ನಾಟಕದ್ದು ಅಲ್ಲ ಎಂಬುದು. ಇಂಥದ್ದೊಂದು ಘಟನೆ ನಡೆದಿರುವುದು ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ಜಬ್ರೆದಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ.
ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಖುದ್ದು ಮಾಹಿತಿ ನೀಡಿರುವ ಹರಿದ್ವಾರ ಪೊಲೀಸರು, “ಈ ವಿಡಿಯೋ ಸುಮಾರು 2 ತಿಂಗಳ ಹಳೆಯದಾಗಿದ್ದು, ಇತ್ತೀಚಿನ ದಿನಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ಹರಿದ್ವಾರ ಜಿಲ್ಲೆಯ ಜಬ್ರೆದಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ” ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಹರಿದ್ವಾರ ಪೊಲೀಸರು ತಿಳಿಸಿದ್ದೇನು?
ಈ ಘಟನೆ ಹರಿದ್ವಾರ ಜಿಲ್ಲೆಯ ಜಬ್ರೆದಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇದರಲ್ಲಿ ಮಹಿಳೆಯೊಬ್ಬರು ಮಗುವಿಗೆ ಥಳಿಸುವ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ಸುಮಾರು 2 ತಿಂಗಳ ಹಳೆಯದಾಗಿದ್ದು, ಇತ್ತೀಚಿನ ದಿನಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಮಗುವಿಗೆ ಹಲ್ಲೆ ನಡೆಸುತ್ತಿರುವಾಕೆ ಜಬ್ರೇದಾ ನಿವಾಸಿಯಾಗಿದ್ದಾರೆ. ತನ್ನ 1 ವರ್ಷದ ಮಗನನ್ನು 12 ವರ್ಷದ ಮಗ ಥಳಿಸುತ್ತಿರುವ ವಿಡಿಯೋವನ್ನು ಮಾಡಿಕೊಂಡಿದ್ದಾಳೆ. ಆ ಬಳಿಕ ಆ ವಿಡಿಯೋವನ್ನು ಉತ್ತರ ಪ್ರದೇಶದ ಸಹರಾನ್‌ಪುರದ ದೇವಬಂದ್‌ನಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ತನ್ನ ಪತಿ ಮನೋಜ್‌ಗೆ ಕಳುಹಿಸಿದ್ದಾರೆ. ಆ ಬಳಿಕ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೇಗವಾಗಿ ವೈರಲ್ ಆಗುತ್ತಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ, ಹರಿದ್ವಾರ ಪೊಲೀಸರು ಮಕ್ಕಳ ಆರೈಕೆ ಸಹಾಯವಾಣಿಗೆ ಮಾಹಿತಿ ನೀಡಿದ್ದಾರೆ. ಮಹಿಳೆಯ ವಿವರವನ್ನು ಕಲೆ ಹಾಕಿ, ಆಕೆಯನ್ನು ಹರಿದ್ವಾರದ ಸಿಡಬ್ಲ್ಯೂಸಿ (ಮಕ್ಕಳ ಕಲ್ಯಾಣ ಸಮಿತಿ) ಮುಂದೆ ಹಾಜರುಪಡಿಸಲಾಗಿತ್ತು. ಆ ಬಳಿಕ ಈ ರೀತಿ ನಡೆದುಕೊಂಡಿದ್ದು ಏಕೆ ಎಂದು ಮಕ್ಕಳ ಕಲ್ಯಾಣ ಸಮಿತಿಯ ಅಧಿಕಾರಿಗಳು ವಿಚಾರಣೆ ನಡೆಸಿದಾಗ ಎಲ್ಲ ವಿವರಗಳನ್ನು ತಿಳಿಸಿರುವುದಾಗಿ ಹರಿದ್ವಾರ ಪೊಲೀಸರು ಮಾಹಿತಿ ನೀಡಿದ್ದಾರೆ.
ಖರ್ಚಿಗೆ ಹಣ ನೀಡದ್ದಕ್ಕೆ ಗಂಡನನ್ನು ಹೆದರಿಸಲು ವಿಡಿಯೋ ಮಾಡಿದ್ದಂತೆ!
ಘಟನೆಯ ವಿಡಿಯೋ ವೈರಲಾದ ಬಳಿಕ ಮಕ್ಕಳ ಕಲ್ಯಾಣ ಸಮಿತಿಯವರು ಮಕ್ಕಳು ಮತ್ತು ತಾಯಿಯನ್ನು ಕೌನ್ಸೆಲಿಂಗ್ ನಡೆಸಿದ ಬಳಿಕ ಹಲವು ವಿಚಾರಗಳು ಬಯಲಿಗೆ ಬಂದಿದ್ದು, “ಖರ್ಚಿಗೆ ಹಣ ನೀಡದ್ದಕ್ಕೆ ಗಂಡನನ್ನು ಹೆದರಿಸಲು ವಿಡಿಯೋ ಮಾಡಿದ್ದೆ” ಎಂದು ಮಹಿಳೆ ತಿಳಿಸಿದ್ದಾರೆ.
“ಪತಿ ಮನೆಯ ಖರ್ಚಿಗೆ ಯಾವುದೇ ಹಣವನ್ನು ನೀಡುತ್ತಿಲ್ಲ. ಬಹಳ ಸಮಯದಿಂದ ಮನೆಗೂ ಬರುತ್ತಿಲ್ಲ ಮತ್ತು ಮಾದಕ ದ್ರವ್ಯ ಸೇವಿಸುತ್ತಿದ್ದಾನೆ” ಎಂದು ಮಹಿಳೆ ಕೌನ್ಸೆಲಿಂಗ್ ವೇಳೆ ಮಾಹಿತಿ ನೀಡಿದ್ದಾರೆ.
ಪತಿ ಖರ್ಚಿಗೆ ಹಣ ನೀಡದ್ದರಿಂದ ಜೀವನ ಸಾಗಿಸಲು ಸ್ಥಳೀಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಾ ತನ್ನ ಮನೆಯ ಖರ್ಚುಗಳನ್ನು ನಿರ್ವಹಿಸುತ್ತಿದ್ದೇನೆ. ತನ್ನ ಪತಿಯನ್ನು ಹೆದರಿಸಲು ಮತ್ತು ಮನೆಯ ಜವಾಬ್ದಾರಿಯನ್ನು ಅರಿತುಕೊಳ್ಳಲು ಮತ್ತು ಬುದ್ಧಿ ಕಲಿಸಲೆಂದು ಸುಮಾರು ಎರಡು ತಿಂಗಳ ಹಿಂದೆ ತನ್ನ ಹಿರಿಯ ಮಗನಿಗೆ ಹಲ್ಲೆ ಮಾಡುವಂತಹ ವಿಡಿಯೋ ಮಾಡಿಕೊಂಡು, ಗಂಡನಿಗೆ ಕಳಿಸಿದ್ದೆ. ಆತ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರಿಂದ ವೈರಲ್ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.
“ಥಳಿಸುವಂತೆ ತಾನು ನಟಿಸಲು ಮಗುವಿನ ಎದೆಯ ಮೇಲೆ ತಲೆ ಇಟ್ಟುಕೊಂಡಿದ್ದೆ. ಆದರೆ ಮಗನ ಎದೆಗೆ ಯಾವುದೇ ರೀತಿಯಲ್ಲಿ ಕಚ್ಚಿಲ್ಲ. ತಂದೆಗೆ ನಟನೆ ಎಂದು ಗೊತ್ತಾಗಬಾರದು ಎಂದು ಮಗನಿಗೂ ಕೂಡ ನೈಜವಾಗಿ ನಟಿಸುವಂತೆ ತಿಳಿಸಿದ್ದೆ ಎಂದು ಮಹಿಳೆ ಹೇಳಿದ್ದಾರೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆಯ ಬಳಿಕ ಜಬ್ರೇದಾ ಪೊಲೀಸ್ ಠಾಣೆಯ ಅಧಿಕಾರಿಗಳು, ನೆರೆಮನೆಗಳಲ್ಲಿ ಮಹಿಳೆಯ ವರ್ತನೆಯ ಬಗ್ಗೆ ಮಾಹಿತಿ ಕೂಡ ಕಲೆ ಹಾಕಿದ್ದಾರೆ.
“ಮಹಿಳೆಯು ನೆರೆಮನೆಯ ಜನರೊಂದಿಗೆ ಕಡಿಮೆ ಸಂವಹನ ನಡೆಸುತ್ತಿದ್ದಳು. ಆದರೆ ತನ್ನ ಮಕ್ಕಳೊಂದಿಗೆ ಆಕೆಯ ವರ್ತನೆಯು ಉತ್ತಮವಾಗಿದೆ. ಅಂತಹ ಯಾವುದೇ ಘಟನೆಯು ಮೊದಲು ನಡೆದಿಲ್ಲ” ಎಂದು ಸಾಕ್ಷಿ ನುಡಿದಿರುವುದಾಗಿ ಹರಿದ್ವಾರ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಕೊಪ್ಪಳ | ಗ್ರಾಹಕನಿಗೆ ದೋಸೆ ಬದಲು ‘ಹಣದ ಬಂಡಲ್’ ಅನ್ನೇ ಕೊಟ್ಟ ಹೋಟೆಲ್ ಮಾಲೀಕ!
ಸದ್ಯ ಈ ಪ್ರಕರಣವನ್ನು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಮಹಿಳೆಯ ಮಕ್ಕಳೊಂದಿಗೂ ಸಂಪೂರ್ಣ ಮಾಹಿತಿ ಕಲೆಹಾಕಿದೆ. ಮಕ್ಕಳೊಂದಿಗೆ ಕಾಲಕಾಲಕ್ಕೆ ಮೊಬೈಲ್ ಮೂಲಕ ಕೂಡ ಅಧಿಕಾರಿಗಳು ಸಂಪರ್ಕಿಸಿ ಮಾತನಾಡುತ್ತಿದ್ದಾರೆ. ಮತ್ತೊಂದೆಡೆ, ಜಬ್ರೆಡಾ ಠಾಣೆಯ ಪೊಲೀಸರು ಪ್ರಕರಣದಲ್ಲಿ ಮಹಿಳೆಯ ಪತಿಯ ಪಾತ್ರದ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ ಎಂದು ಹರಿದ್ವಾರ ಪೊಲೀಸರು ಸಂಪೂರ್ಣ ಮಾಹಿತಿ ಹಂಚಿಕೊಂಡಿದ್ದಾರೆ.
