ವಿಶ್ವದ ಎಂಟು ಅದ್ಭುತಗಳಲ್ಲಿ ಒಂದೆಂದು ಬಣ್ಣಿಸಲಾಗಿರುವ ಆಗ್ರಾದ ತಾಜ್ ಮಹಲ್‌ಗೆ ಬಾಂಬ್ ದಾಳಿಯ ಬೆದರಿಕೆ ಒಡ್ಡಲಾಗಿದೆ. ಆನಂತರದ ತನಿಖೆಯಲ್ಲಿ ಇದು ಹುಸಿ ಬೆದರಿಕೆಯೆಂದು ಗೊತ್ತಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ತಾಜ್ ಮಹಲ್‌ಅನ್ನು ಸ್ಫೋಟಕಗಳನ್ನಿಟ್ಟು ಉಡಾಯಿಸುವುದಾಗಿ ಉತ್ತರಪ್ರದೇಶ ಪ್ರವಾಸೋದ್ಯಮ ಇಲಾಖೆಯ ಪ್ರಾದೇಶಿಕ ಕಚೇರಿಗೆ ಮಂಗಳವಾರ ಈಮೇಲ್ ಬಂದಿತ್ತು. ಬಾಂಬ್ ನಿಷ್ಕ್ರಿಯ ತಂಡ ಮತ್ತಿತರೆ ಭದ್ರತಾ ತಂಡಗಳು ಶ್ವಾನದಳದೊಂದಿಗೆ ಕೂಡಲೆ ಕಾರ್ಯಪ್ರವೃತ್ತವಾದವು. ಆದರೆ, ಯಾವುದೇ ಶಂಕಾಸ್ಪದ ವಸ್ತುಗಳು ಕಂಡು ಬಂದಿಲ್ಲ ಎಂದು ತಾಜ್ ಮಹಲ್ ರಕ್ಷಣೆಯ ಉಸ್ತುವಾರಿ ನೋಡುತ್ತಿರುವ ಅಸಿಸ್ಟೆಂಟ್ ಕಮೀಷನರ್ ಆಫ್ ಪೊಲೀಸ್ ಸಯ್ಯದ್ ಆರೀಬ್ ಅಹ್ಮದ್ ತಿಳಿಸಿದ್ದಾರೆ.