ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಕೆಲಸಕ್ಕಾಗಿನ ಬೇಡಿಕೆಯಲ್ಲಿ ಗಮನಾರ್ಹ ಹೆಚ್ಚಳವಾಗುತ್ತಿದೆ. ಈ ಬೇಡಿಕೆಯು ಕೊರೊನಾ ಆಕ್ರಮಣದ ನಂತರದಲ್ಲಿ ಗಮನಾರ್ಹವಾಗಿ ಹೆಚ್ಚಾಗಿದೆ. ಈ ಹೆಚ್ಚಳವು ಗ್ರಾಮೀಣ ಪ್ರದೇಶದಲ್ಲಿ ಜನರು ಎದುರಿಸುತ್ತಿರುವ ಸಂಕಷ್ಟಗಳನ್ನು ಸೂಚಿಸುತ್ತದೆ ಎಂದು ಎಫ್ಎಂಸಿಜಿ ಹೇಳಿದೆ.
ಜೊತೆಗೆ, ಕಳೆದ ದಶಕದಲ್ಲಿ ಗ್ರಾಮೀಣ ಕೂಲಿ ದರಗಳು ಹಿಂದಿನ ದಶಕಕ್ಕೆ ಹೋಲಿಸಿದರೆ ಸತತವಾಗಿ ಕಡಿಮೆಯಾಗಿದೆ. ಆಹಾರ ಹಣದುಬ್ಬರವು 2023ರ ಡಿಸೆಂಬರ್ನಲ್ಲಿ ಸುಮಾರು 10%ರಷ್ಟು ದಾಖಲಾಗಿದೆ. ಇದು ಕಳೆದ ಕೆಲವು ವರ್ಷಗಳಿಂದ 5-6%ಕ್ಕಿಂತ ಕಡಿಮೆ ಆಗಿಯೇ ಇಲ್ಲ. ಅಲ್ಲದೆ, ಏರುತ್ತಿರುವ ಬೆಲೆಗಳಿಗೆ ಸರಿಹೊಂದುವಂತೆ ಗ್ರಾಮೀಣ ಭಾಗದಲ್ಲಿ ಕೂಲಿ ದರಗಳು ಹೆಚ್ಚುತ್ತಿಲ್ಲ ಎಂಬುದನ್ನೂ ಸೂಚಿಸಿದೆ.
ಮನರೇಗಾ ಕೆಲಸಕ್ಕೆ ಹೆಚ್ಚಿದ ಬೇಡಿಕೆ
ಮನರೇಗಾ ಯೋಜನೆಯು 2023-24ರಲ್ಲಿ 305.2 ಕೋಟಿ ವೈಯಕ್ತಿಕ ದಿನಗಳ ಉದ್ಯೋಗವನ್ನು ದಾಖಲಿಸಿದೆ. ಇದು 2022-23ರಲ್ಲಿ 293.7 ಕೋಟಿ ಇತ್ತು. ಈ ಹೆಚ್ಚಳವು ಗ್ರಾಮೀಣ ಭಾಗದಲ್ಲಿ ಮನರೇಗಾಯೇತರ ಉದ್ಯೋಗಗಳು ದೊರೆಯುತ್ತಿಲ್ಲ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳ ಕೊರತೆಯನ್ನು ಸೂಚಿಸುತ್ತದೆ ಎಂದು ‘ಟಿಒಐ’ ವರದಿ ಮಾಡಿದೆ.
ಭಾರತವು ಕೊರೊನಾ ಆಕ್ರಮಣವನ್ನು ಎದುರಿಸಿ, ಹೊರಬಂದ ಮೊದಲ ವರ್ಷ (2022-23) 293.7 ಕೋಟಿ ವೈಯಕ್ತಿಕ ಮಾನವ ದಿನಗಳಷ್ಟು ಮನರೇಗಾ ಅಡಿ ಉದ್ಯೋಗ ನೀಡಲಾಗಿದೆ. ಇದು, ಕೊರೊನಾ ಆಕ್ರಮಣದ ಹಿಂದಿನ ವರ್ಷ 2019-20ಕ್ಕೆ ಹೋಲಿಸದರೆ, 28.4 ಕೋಟಿ ದಿನಗಳು ಹೆಚ್ಚಾಗಿವೆ. ಇನ್ನು, 2022-23ಕ್ಕಿಂತ 2023-24ರಲ್ಲಿ ಸುಮಾರು 40 ಕೋಟಿಗಳಷ್ಟು ವೈಯಕ್ತಿಕ ಮಾನವ ಕೆಲಸದ ದಿನಗಳು ಹೆಚ್ಚಾಗಿವೆ.
ಮೊದಲ ಬಾರಿಗೆ ಕೊರೊನಾ ಆಕ್ರಮಿಸಿದ್ದ 2020-21ರ ವರ್ಷದಲ್ಲಿಯೂ ಮನರೇಗಾ ಅಡಿಯಲ್ಲಿ 389.9 ಕೋಟಿ ವೈಯಕ್ತಿಕ ಮಾನವ ದಿನಗಳಷ್ಟು ಕೆಲಸ ನೀಡಲಾಗಿದೆ. ಇದು, ಕೊರೊನಾ ಎರಡನೇ ಆಲೆಯ ಆಕ್ರಮಣವಿದ 2021-22ರಲ್ಲಿ ಕುಸಿತ ಕಂಡಿದ್ದು, ಆ ವರ್ಷ 363.2 ಕೋಟಿ ಮಾನವ ದಿನಗಳ ಉದ್ಯೋಗಗಳನ್ನು ನೀಡಲಾಗಿದೆ.
“ಮನರೇಗಾ ಯೋಜನೆಯಡಿ ಕೆಲಸದ ಬೇಡಿಕೆ ಮತ್ತು ಕೆಲಸದ ಒದಗಿಸುವಿಕೆ ಸಮಾನಾಂತರವಾಗಿರಬೇಕು. ಕೊರೊನಾ ಪೂರ್ವದ ವರ್ಷಗಳಿಗಿಂತ, ನಂತರದ ವರ್ಷಗಳಲ್ಲಿ ನಿರುದ್ಯೋಗವು ಹೆಚ್ಚಾಗಿದೆ. ಗ್ರಾಮೀಣ ಭಾಗದಲ್ಲಿ ಮನರೇಗಾ ಉದ್ಯೋಗದ ಬೇಡಿಕೆ ಹೆಚ್ಚಾಗಿದೆ. ಇದು ಆ ಪ್ರದೇಶದ ಸಂಕಷ್ಟಗಳನ್ನು ಸೂಚಿಸುವ ಚಿಹ್ನೆಯಾಗಿದೆ ಎಂಬುದನ್ನು ತಜ್ಞರು ಸರ್ವಾನುಮತದಿಂದ ಹೇಳುತ್ತಾರೆ” ಎಂದು ವರದಿ ಹೇಳುತ್ತದೆ.
ಮನರೇಗಾ ಕೆಲಸದ ಬೇಡಿಕೆಯ ಹೆಚ್ಚಳವು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಪರ್ಯಾಯ ಉದ್ಯೋಗಾವಕಾಶಗಳ ಕೊರತೆಯನ್ನು ಸೂಚಿಸುತ್ತದೆ.
ಪ್ರತ್ಯೇಕವಾಗಿ, ಹಣಕಾಸು ಸಚಿವಾಲಯವು ಮನರೇಗಾ ಯೋಜನೆಗಾಗಿ 3,400 ಕೋಟಿ ರೂ.ಗಳನ್ನು ತುರ್ತು ಪರಿಹಾರಕ್ಕೆ ಬಿಡುಗಡೆ ಮಾಡಿದೆ. 2023-24ರ ಪರಿಷ್ಕೃತ ಅಂದಾಜಿನ ಪ್ರಕಾರ, ಮನರೇಗಾ ಯೋಜನೆಯಡಿ ಕೆಲಸ ಬೇಡಿಕೆಯು 86,000 ಕೋಟಿ ರೂ.ಗಳ ಅಗತ್ಯವನ್ನು ಸೂಚಿಸುತ್ತದೆ ಎಂದು ಅಧಿಕಾರಿಗಳು ಹೇಳಿರುವುದಾಗಿ ‘ಎಕನಾಮಿಕ್ ಟೈಮ್ಸ್’ ವರದಿ ಮಾಡಿದೆ.