ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಜಾರಿಗೆ ಆಗ್ರಹಿಸಿ ಪಂಜಾಬ್‌ನ ರೈತ ನಾಯಕ ಜಗಜಿತ್ ಸಿಂಗ್ ದಲೈವಾಲ್ ಅವರು ಆಮರಣಾಂತ ಉಪವಾಸ ನಡೆಸುತ್ತಿದ್ದಾರೆ. ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಆದರೂ, ಕೇಂದ್ರ ಸರ್ಕಾರ ಅವರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲವೆಂದು ಆರೋಪಿಸಲಾಗಿದೆ. “ನಾನು ನನ್ನ ಹೋರಾಟದಲ್ಲಿ ಗೆಲ್ಲುತ್ತೇನೆ ಅಥವಾ ಸಾಯುತ್ತೇನೆ. ನನ್ನನ್ನು ಬಲವಂತವಾಗಿ ಮೇಲೆತ್ತಲು ಸರ್ಕಾರಕ್ಕೆ ಬಿಡಬೇಡಿ” ಎಂದು ಅವರು ಹೇಳಿದ್ದಾರೆ.
ಪಂಜಾಬ್‌ನ ಖಾನೌರಿ-ಶಂಭು ಗಡಿಯಲ್ಲಿ ರೈತರು ಹಲವಾರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತ ಹೋರಾಟದ ಸ್ಥಳದಲ್ಲಿಯೇ ದಲೈವಾಲ್ ಅವರು 29 ದಿನಗಳಿಂದ ಉಪವಾಸ ನಡೆಸುತ್ತಿದ್ದಾರೆ. “ನಾನು ಚೆನ್ನಾಗಿದ್ದೇನೆ. ಆದರೆ, ನಾವು ಈ ಹೋರಾಟದ ಯುದ್ಧವನ್ನು ಗೆಲ್ಲಬೇಕು. ಇಡೀ ದೇಶವು ಒಗ್ಗೂಡಿದರೆ ಮಾತ್ರ ಈ ಹೋರಾಟವನ್ನು ಗೆಲ್ಲಲು ಸಾಧ್ಯ. ರೈತರು 2021ರ ಪ್ರತಿಭಟನೆಯನ್ನು ಅಪೂರ್ಣಗೊಳಿಸಿದ್ದಾರೆ. ಅದನ್ನು ಪೂರ್ಣಗೊಳಿಸಬೇಕು. ಎಂಎಸ್‌ಪಿ ಪಡೆಯಬೇಕು. ನನ್ನನ್ನು ಬಲವಂತವಾಗಿ ಇಲ್ಲಿಂದ ತೆರವುಗೊಳಿಸಲು ಸರ್ಕಾರಕ್ಕೆ ಅವಕಾಶ ನೀಡಬೇಡಿ” ಎಂದು ಹೇಳಿದ್ದಾರೆ.
ಸುಮಾರು ಒಂದು ತಿಂಗಳಿನಿಂದ ಏನನ್ನೂ ತಿನ್ನದೇ ಪ್ರತಿಭಟನೆ ನಡೆಸುತ್ತಿರುವ ದಲೈವಾಲ್ ಅವರ ದೇಹದಲ್ಲಿ ಕೀಟೋನ್ ಮಟ್ಟ ಅಪಾಯಕಾರಿಯಾಗಿ ಹೆಚ್ಚಾಗಿವೆ. ಅವರು ಹೃದಯಸ್ತಂಭನ ಅಥವಾ ಅಂಗಾಂಗ ವೈಫಲ್ಯಕ್ಕೆ ಒಳಗಾಗುವ ಅಪಾಯದಲ್ಲಿದ್ದಾರೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಆದಾಗ್ಯೂ, ಉಪವಾಸವನ್ನು ನಿಲ್ಲಿಸದ ದಲೈವಾಲ್ ಪ್ರತಿಭಟನೆ ಮುಂದುವರೆಸಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಟ್ವೀಟ್‌ನಲ್ಲಿ ತಮ್ಮ ಹೋರಾಟವನ್ನು ಸ್ಥಗಿತಗೊಳಿಸುವಂತೆ ದಲೈವಾಲ್ ಅವರಲ್ಲಿ ಮನವಿ ಮಾಡಿದ್ದಾರೆ. “ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ-ಉಕ್ರೇನ್ ಯುದ್ಧವನ್ನು ನಿಲ್ಲಿಸಲು ಸಾಧ್ಯವಾದರೆ, ಕೇವಲ 200 ಕಿಮೀ ದೂರದಲ್ಲಿ ಕುಳಿತಿರುವ ಅನ್ನದಾತರೊಂದಿಗೆ ಏಕೆ ಮಾತುಕತೆ ನಡೆಸಲು ಸಾಧ್ಯವಿಲ್ಲ? ಸರ್ಕಾರದ ಪ್ರತಿಕ್ರಿಯೆ ಮತ್ತು ಕ್ರಮಕ್ಕಾಗಿ ಉಪವಾಸನಿರತ ರೈತರು ಕಾಯುತ್ತಿದ್ದಾರೆ” ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.